ಬಳ್ಳಾರಿ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ

0
22

ಬಳ್ಳಾರಿ,ನ.11: ಬಳ್ಳಾರಿ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ತಾಳೂರು ರಸ್ತೆಯ ನೂತನವಾಗಿ ನಿರ್ಮಿಸಲಾಗಿರುವ ಬಳ್ಳಾರಿ ವಕೀಲರ ಸಂಘದ ಕಟ್ಟಡದ ಉದ್ಘಾಟನೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರು ಶನಿವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ವ್ಯಾಜ್ಯಗಳನ್ನು ತುರ್ತಾಗಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ. ಬಳ್ಳಾರಿಯಲ್ಲಿ ನಿರ್ಮಿಸಿರುವ ನ್ಯಾಯಾಲಯದ ಸಂಕೀರ್ಣ ಒಂದೇ ಸೂರಿನಡಿಯಲ್ಲಿ ಎಲ್ಲ ಸೌಲಭ್ಯವನ್ನು ಒಳಗೊಂಡಿದೆ. ಸಾಮಾನ್ಯ ಜನರಿಗೆ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ವಕೀಲರು ಕೆಲಸ ಮಾಡಬೇಕು ಎಂದರು.
ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘದ ರೀತಿಯಲ್ಲಿ ಬಳ್ಳಾರಿಯಲ್ಲಿಯೂ ವಕೀಲರ ಸಂಘ ಕೆಲಸ ಮಾಡಬೇಕು. ಅದಕ್ಕೆ ಬೇಕಾದ ಸೌಲಭ್ಯವನ್ನು ಒದಗಿಸಲು ಕ್ರಮ ವಹಿಸಲಾಗುವುದು. ಗುಣಮಟ್ಟದ ತರಬೇತಿ ಪಡೆದು ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡ್ಯೊಯ್ಯುವ ಕೆಲಸ ಆಗಬೇಕು ಎಂದು ತಿಳಿಸಿದರು.
ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ್ ಅವರು ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮ ಚಳುವಳಿ ಮತ್ತು ಕರ್ನಾಟಕ ಏಕೀಕರಣದಲ್ಲಿ ಬಳ್ಳಾರಿಯ ವಕೀಲರ ಪಾತ್ರ ಮಹತ್ವದ್ದಾಗಿತ್ತು. ನ್ಯಾಯದಾನ ಮಾಡುವುದಲ್ಲಿ ಕೀರ್ತಿ ತಂದಿದ್ದಾರೆ ಎಂದು ಪ್ರಶಂಸಿದರು.

ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಚಿಂತನೆ:
ಸಮಾಜ ಅಭಿವೃದ್ಧಿಯತ್ತ ಸಾಗುತ್ತದೆ. ಆದರೆ ವ್ಯಾಜ್ಯಗಳು ಇರುವ ಕಡೆ ಅಭಿವೃದ್ಧಿ ಕುಂಠಿತ ಹಾಗೂ ಅಸಾಧ್ಯವಾಗುತ್ತದೆ. ಆದ್ದರಿಂದ ನಮ್ಮ ಸರ್ಕಾರವು ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಆದರೆ ವಕೀಲರು ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ವ್ಯಾಜ್ಯ ಪರಿಹಾರಕ್ಕಾಗಿ ಬರುವ ನ್ಯಾಯಾಲಯಗಳಲ್ಲಿ ಸಾಮಾನ್ಯ ಜನರಿಗೂ ಸಂವಿಧಾನತ್ಮಾಕವಾಗಿ ಗೌರವ ಸಿಗಬೇಕಿದೆ. ಆದರೆ ಇಂದಿನ ದಿನಮಾನಗಳಲ್ಲಿ ಅದರ ಕೊರತೆ ಕಾಡುತ್ತಿದೆ. ಕಕ್ಷಿದಾರರ ಗೌರವ ಕಾಪಾಡಲು ಕಾನೂನು ಹಾಗೂ ನೀತಿ ಜಾರಿಗೊಳಸಲು ಚಿಂತನೆಗಳು ನಡೆದಿದೆ ಎಂದು ತಿಳಿಸಿದರು.

ಗ್ರಾಮ ನ್ಯಾಯಾಲಯ ನಿರ್ಮಾಣಕ್ಕೆ ಕ್ರಮ:
ಜನರ ಮನೆ ಬಾಗಿಲಿಗೆ ನ್ಯಾಯದಾನ ಒದಗಿಸುವ ನಿಟ್ಟಿನಲ್ಲಿ ಗ್ರಾಮ ನ್ಯಾಯಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. 2008 ರಲ್ಲಿ ಕಾನೂನು ಜಾರಿಗೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರವು ಆಸಕ್ತಿ ವಹಿಸಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಸದುಪಯೋಗಿಸಿಕೊಂಡು ವ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಕರ್ನಾಟಕ ಮರುನಾಮಕರಣಗೊಂಡು 50 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ನ್ಯಾಯಾಲಯಗಳಲ್ಲಿ ಮಾತೃಭಾಷೆಯಲ್ಲಿ ಜಡ್ಜ್ ಮೆಂಟ್ ಬರಬೇಕು. ಸಾಮಾನ್ಯ ಭಾಷೆಯಲ್ಲಿ ಜನರಿಗೆ ತಿಳಿಯುವಂತಹ ಮಾಹಿತಿ ಒದಗಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆಗಿರುವ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, 58 ಎಕರೆ ಪ್ರದೇಶದಲ್ಲಿ ವಿಶಾಲವಾಗಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣವೂ ಅನೇಕ ಸೌಲಭ್ಯವನ್ನು ಹೊಂದಿದೆ. ಈಗಾಗಲೇ ಇನ್ನುಳಿದ ಕಾಮಗಾರಿಗಳನ್ನು ಪೂರೈಸಲು ಸರ್ಕಾರದಿಂದ ಹೆಚ್ಚುವರಿಯಾಗಿ 21 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎರ್ರಿಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಕೆ.ಎಸ್.ಭರತ್‍ಕುಮಾರ್, ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಜೆ.ಎಂ.ಅನಿಲ್‍ಕುಮಾರ್, ವಕೀಲರ ಪರಿಷತ್ ಸದಸ್ಯ ಕೆ.ಕೋಟೇಶ್ವರರಾವ್, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಎಸ್.ಎಚ್.ಪುಷ್ಪಾಂಜಲಿದೇವಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ರವೀಂದ್ರನಾಥ್, ಲೋಕೋಪಯೋಗಿ ಇಲಾಖೆ ಈಶಾನ್ಯ ವಲಯದ ಮುಖ್ಯ ಅಭಿಯಂತರ ಜಗನ್ನಾಥ್ ಹಲಿಂಗೆ ಸೇರಿದಂತೆ ಇತರೆ ನ್ಯಾಯಾಧೀಶರು ಹಾಗೂ ವಕೀಲರು ಮತ್ತಿತರರಿದ್ದರು.

LEAVE A REPLY

Please enter your comment!
Please enter your name here