ಬಳ್ಳಾರಿ ಐತಿಹಾಸಿಕ ಬೆಟ್ಟ ಹತ್ತುವ ಮೂಲಕ ಸಂವಿಧಾನ ಜಾಗೃತಿ ಸಂವಿಧಾನದ ಮೌಲ್ಯ, ಆಶಯಗಳ ಜಾಗೃತಿಗೆ ಎಲ್ಲರೂ ಕೈಜೋಡಿಸಲು ಕರೆ: ರಾಹುಲ್ ಶರಣಪ್ಪ ಸಂಕನೂರ

0
17

ಬಳ್ಳಾರಿ,ಫೆ.09: ಸಂವಿಧಾನದ ಮೌಲ್ಯ, ಆಶಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಅಂಗೀಕಾರಗೊಂಡು 75ನೇ ವರ್ಷ ಪ್ರಯುಕ್ತ ‘ಸಂವಿಧಾನ ಜಾಗೃತಿ ಜಾಥಾ’ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಐತಿಹಾಸಿಕ ಬಳ್ಳಾರಿ ಬೆಟ್ಟ ಹತ್ತುವ ಸಂವಿಧಾನ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಈ ಸಂವಿಧಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಸಂವಿಧಾನದ ತತ್ವಾದರ್ಶಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂವಿಧಾನ ಕುರಿತ ಅರಿವು ಹೊಂದಬೇಕು. ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಸಲುವಾಗಿ ಅಧಿಕಾರಿಗಳು, ವಿದ್ಯಾರ್ಥಿಗಳೊಂದಿಗೆ ನಗರದ ಐತಿಹಾಸಿಕ ಪ್ರಸಿದ್ಧ ಏಕಶಿಲಾ ಬೆಟ್ಟ ಹತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಸುರಕ್ಷಿತವಾಗಿ ಬೆಟ್ಟ ಹತ್ತಿ, ಇಳಿಯಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಅವರು ಮಾತನಾಡಿ, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಂವಿಧಾನ ಮೌಲ್ಯ ಮತ್ತು ಆದರ್ಶಗಳನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಪಸರಿಸುವ ಕಾರ್ಯವಾಗಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು. ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ನಡಿಗೆಯು ಬೆಟ್ಟದ ತುತ್ತ ತುದಿ ತಲುಪಿ, ಬಲೂನ್‍ಗಳನ್ನು ಹಾರಿಸಿ ಸಂಭ್ರಮಿಸುವ ಮೂಲಕ ಸಂವಿಧಾನ ಜಾಗೃತಿ ನಡಿಗೆಗೆ ಮೆರಗು ತಂದರು.

ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಸಂವಿಧಾನ ಪ್ರಸ್ತಾವನೆ ಭೋಧಿಸಿದರು. ನಂತರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್ ಕೆ.ಹೆಚ್ ಅವರು ಸಂವಿಧಾನ ಜಾಗೃತಿ ಕುರಿತ ಗೀತೆಗಳನ್ನು ಹೇಳಿದರು.

ಸಂವಿಧಾನ ನಡಿಗೆ ಅಂಗವಾಗಿ ಬೆಟ್ಟ ಹತ್ತುವ ಕೆಳ ತುದಿಯಲ್ಲಿ ರಂಗೋಲಿಯಲ್ಲಿ ಅರಳಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ರೂಪ, ಸಂವಿಧಾನ ಪೀಠಿಕೆ, ಅಶೋಕ ಚಕ್ರ, ಸಂಸತ್ ಭವನ ಹಾಗೂ ನಮ್ಮ ಸಂವಿಧಾನ ಎಂದು ಬಿಡಿಸಿದ ರಂಗೋಲಿಯು ಆಕರ್ಷಣೆಯಾಗಿತ್ತು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸತೀಶ್.ಕೆ.ಹೆಚ್., ಅಬಕಾರಿ ಉಪ ಆಯುಕ್ತ ಮಂಜುನಾಥ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಮತಾ.ಪಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ರೆಡ್‍ಕ್ರಾಸ್ ಸ್ವಯಂ ಸೇವಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here