ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆಯನ್ನು ಮುಂದೂಡಲು ಸೂಚನೆ ನೀಡಿರುವುದು ಯಾರ ಲಾಭಕ್ಕಾಗಿ.?

0
115

ಬಳ್ಳಾರಿ.ಆಗಸ್ಟ್ :05.ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಪ್ರಕಾರ, ಪದವಿ ಪ್ರವೇಶಾತಿಯನ್ನು ಕೇವಲ ಖಾಸಗಿ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸಿ, ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಸಂಸ್ಥೆಗಳು ತಮ್ಮ ಪ್ರವೇಶಾತಿಯನ್ನು ಮುಂದೂಡುವಂತೆ ಸೂಚಿಸಲಾಗಿದೆ. ಇಲಾಖೆಯ ಈ ನಿರ್ಧಾರವು ಅತ್ಯಂತ ಅಪ್ರಜಾತಂತ್ರಿಕ ಅಷ್ಟೇ ಅಲ್ಲದೆ ಇದು ಬಡವಿದ್ಯಾರ್ಥಿ ವಿರೋಧಿ ಹಾಗೂ ಶಿಕ್ಷಣ ವಿರೋಧಿಯಾಗಿದೆ.

ಯಾವುದೇ ಸೂಕ್ತ ಅಥವಾ ನಿರ್ದಿಷ್ಟ ಕಾರಣಗಳನ್ನು ನೀಡದೆ, ಏಕಾಏಕಿ ಹಠಾತ್ತನೆ ಈ ನಿರ್ಧಾರಕ್ಕೆ ಬಂದಿರುವ ಉದ್ದೇಶ ಏನು ಎಂಬ ಪ್ರಶ್ನೆ ಕಾಡುತ್ತದೆ. ಕಳೆದ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದಾಗ, ಈ ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ. 50 ರಷ್ಟು ಏರಿಕೆ ಆಗಿದೆ. ಅಂದರೆ, ಕಳೆದ ವರ್ಷಕ್ಕಿಂತ 2.3 ಲಕ್ಷದಷ್ಟು ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಉತ್ತೀರ್ಣಗೊಂಡಿದ್ದಾರೆ. ಅಂದರೆ, ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆಯು ಹೆಚ್ಚುವರಿಯಾಗಿ ತೇರ್ಗಡೆ ಆಗಿರುವ 50% ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕಾಲೇಜುಗಳು, ದಾಖಲಾತಿ, ತರಗತಿಗಳು, ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವಲ್ಲಿ ಒಂದು ಮಹತ್ತರ ನಿರ್ಧಾರ ಮಾಡಬೇಕಿತ್ತು. ಬದಲಿಗೆ, ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ ದಾಖಲಾತಿಗೆ ಅಂಕುಶವಿಟ್ಟು, ಖಾಸಗಿ ಕಾಲೇಜುಗಳ ದಾಖಲಾತಿಗೆ ಕೆಂಪುಹಾಸಿನ ಸ್ವಾಗತ ನೀಡಿರುವುದು ಲಾಭದ ಮತ್ತು ಖಾಸಗಿ ಮ್ಯಾನೇಜ್ಮೆಂಟ್ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಎಂಬುದು ಸ್ಪಷ್ಟವಾಗುತ್ತದೆ.

ಸರ್ಕಾರದ ಅಂಕಿ ಅಂಶದ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗೆ ದಾಖಲಾತಿ ಪ್ರಮಾಣ ಏರಿಕೆಯಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ 16ಲಕ್ಷ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗೆ ದಾಖಲಾತಿ ಮಾಡಿಕೊಂಡಿದ್ದಾರೆ. ಅಂದರೆ, ಪೋಷಕರ ಆದಾಯ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಖಾಸಗಿ ಶಿಕ್ಷಣಸಂಸ್ಥೆಯ ವೆಚ್ಚಭರಿಸಲು ಸಹ ಸಾಧ್ಯವಾಗುತ್ತಿಲ್ಲ. ಒಂದೆಡೆ ಕೊರೋನ ತಂದೊಡ್ಡಿರುವ ಆರ್ಥಿಕ ಸವಾಲುಗಳು, ಪರೀಕ್ಷಾ ವಿಷಯದಲ್ಲಿ ಅತಂತ್ರ ಪರಿಸ್ಥಿತಿ ಉಂಟು ಮಾಡಿರುವ ವಿಶ್ವವಿದ್ಯಾಲಯಗಳು – ತಾಂತ್ರಿಕ ಶಿಕ್ಷಣ ಮಂಡಳಿಗಳು. ಇದರೊಂದಿಗೆ, ಪ್ರವಾಹದಲ್ಲಿ ನಲುಗಿಹೋಗಿರುವ ರಾಜ್ಯದ ಹಲವು ಜಿಲ್ಲೆಗಳು. ಈ ಎಲ್ಲದರ ನಡುವೆ, ಅತೀವವಾದ ಆತಂಕದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದಾರೆ. ಹೀಗಿರುವಾಗ, ಈ ರೀತಿಯ ಸುತ್ತೋಲೆ ಹೊರಡಿಸಿ, ಆಮೂಲಕ ಲಕ್ಷಾಂತರ ಬಡಪ್ರತಿಭಾವಂತ ವಿದ್ಯಾರ್ಥಿಗಳು – ಪೋಷಕರನ್ನು ಬಲವಂತವಾಗಿ ಖಾಸಗಿ ಮ್ಯಾನೇಜ್ಮೆಂಟ್ ಮಡಿಲಿಗೆ ತಳ್ಳುತ್ತಿರುವ ಹುನ್ನಾರ ಇದರಲ್ಲಿ ಅಡಗಿದೆ.

ಈ ಎಲ್ಲ ಕಾರಣಗಳಿಂದ, ಕಾಲೇಜು ಶಿಕ್ಷಣ ಇಲಾಖೆಯು ಪದವಿ ಕೋರ್ಸ್ಬ ಬಗೆಗಿನ ತನ್ನ ಸುತ್ತೋಲೆಯನ್ನು ಈ ಕೂಡಲೇ ಹಿಂಪಡೆಯಬೇಕು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ ಸರ್ಕಾರಿ ಅಥವಾ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಆಗಲು ಅನುವು ಮಾಡಿಕೊಡಬೇಕು ಎಂದು AIDSO ರಾಜ್ಯ ಸಮಿತಿ ಮನವಿ ಮಾಡುತ್ತೇವೆ.
ಗುರಳ್ಳಿ ರಾಜ,ಜಿಲ್ಲಾ ಅಧ್ಯಕ್ಷರು, AIDSO.ರವಿಕಿರಣ್.ಜೆ.ಪಿ
ಜಿಲ್ಲಾ ಕಾರ್ಯದರ್ಶಿ, AIDSO ಅವರುಗಳು ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ

LEAVE A REPLY

Please enter your comment!
Please enter your name here