ಸಂವಿಧಾನ ಜಾಗೃತಿಗೆ ‘ಚಿತ್ರಕಲಾ ಪ್ರದರ್ಶನ’ ಮೆರಗು, ರಾಷ್ಟ್ರ ನಿರ್ಮಾಣದಲ್ಲಿ ಸಂವಿಧಾನ ಭದ್ರ ಬುನಾದಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

0
40

ಬಳ್ಳಾರಿ,ಫೆ.16: ಸ್ವಾತಂತ್ಯ್ರ ನಂತರ ನಮ್ಮ ದೇಶದ ನಿರ್ಮಾಣದಲ್ಲಿ ಸಂವಿಧಾನವು ಭದ್ರ ಬುನಾದಿಯಾಗಿ ನಿಂತಿದೆ. ಭಾರತ ಸಂವಿಧಾನಕ್ಕೆ ನಾವೆಲ್ಲರೂ ಆಭಾರಿಯಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂವಿಧಾನವು 1947 ಕ್ಕಿಂತ 100 ವರ್ಷಗಳ ಮೊದಲು ವಿದೇಶಿ ಆಡಳಿತದ ವಿರುದ್ಧ ವಿವಿಧ ರೂಪಗಳಲ್ಲಿ ಲಕ್ಷಾಂತರ ಜನರು ಮಾಡಿದ ತ್ಯಾಗದ ಪ್ರತಿಫಲವಾಗಿದೆ. ಅನೇಕ ದೇಶಗಳ ಸಂವಿಧಾನ ಅಭ್ಯಸಿಸಿ, ನಮ್ಮ ದೇಶದ ಸಂವಿಧಾನ ರಚನೆ ಮಾಡಲಾಯಿತು ಎಂದು ತಿಳಿಸಿದರು.

ಸಂವಿಧಾನವನ್ನು ರಚಿಸುವ ಕಾರ್ಯವು ಡಿಸೆಂಬರ್ 1946 ರಿಂದ ಡಿಸೆಂಬರ್ 1949 ರವರೆಗೆ ನಡೆಯಿತು. ಈ ಕಾರ್ಯವು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಯಕತ್ವದ ಕರಡು ರಚನಾ ಸಮಿತಿಗೆ ಹೆಚ್ಚಿನ ಶ್ರೇಯ ಸಿಗುತ್ತದೆ ಎಂದು ಮನನ ಮಾಡಿದರು.

ಸಂವಿಧಾನವು ಸಮಾನತೆ, ಭ್ರಾತೃತ್ವ, ರಾಷ್ಟ್ರೀಯ ಏಕತೆ ತರುವಲ್ಲಿ ತನ್ನದೇ ಆದ ಪಾತ್ರವಹಿಸಿದೆ. ಸಂವಿಧಾನದ ಮಹತ್ವವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಜಾಗೃತಿ ಜಾಥಾ ಮೂಲಕ ಮಾಡುತ್ತಿದೆ. ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾವು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಾಮಾನ್ಯನೂ ಈ ದೇಶದಲ್ಲಿ ಉನ್ನತ ಹುದ್ದೆ ಅಲಂಕರಿಸಲು ಅವಕಾಶ ಕಲ್ಪಿಸಿರುವುದು ಸಂವಿಧಾನವಾಗಿದೆ. ಇಂದಿನ ಯುವ ಪೀಳಿಗೆಯು ಸಮರ್ಥರಾಗಿ ವಿದ್ಯಾಭ್ಯಾಸ ನಡೆಸಬೇಕು. ನವ ರಾಷ್ಟ್ರ ನಿರ್ಮಾಣಕ್ಕೆ ಯುವ ಪೀಳಿಗೆಯ ಪಾತ್ರ ಪ್ರಮುಖವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಪ್ರತಿಯೊಬ್ಬರೂ ಸಂವಿಧಾನ ಹಕ್ಕುಗಳನ್ನು ಹೊಂದಬೇಕು. ಅದೇರೀತಿಯಾಗಿ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಸೊಗಸಾಗಿ ಮೂಡಿಬಂದ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಚಿತ್ರಪಟ:
ಜಿಲ್ಲೆಯ ವಿವಿಧ ವಸತಿ ಶಾಲೆಗಳ ವಿದ್ಯಾರ್ಥಿಗಳ ಕೈಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ, ಸಂವಿಧಾನ ರಚನಾಕಾರರ ಮತ್ತು ಸಂವಿಧಾನ ಪೀಠಿಕೆ, ಸಂಸತ್ ಭವನ, ಅದರಲ್ಲಿ ಪ್ರಮುಖವಾಗಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಭಾವಚಿತ್ರಗಳ ಪಟಗಳು ಸೊಗಸಾಗಿ ಮೂಡಿಬಂದಿದ್ದವು. ಜಿಲ್ಲಾಧಿಕಾರಿಗಳು ಶ್ಲಾಘಿಸಿದರು.

ಎತ್ತ ನೋಡಿದರೂ ಚಿತ್ರಪಟಗಳು:
ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ವಿವಿಧ ಶಾಲಾ-ಕಾಲೇಜು ವಿಭಾಗದಲ್ಲಿ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಿದ್ದ ವಾಲ್ಮೀಕಿ ಭವನದಲ್ಲಿ ಎತ್ತ ನೋಡಿದರೂ ಚಿತ್ರಪಟಗಳು ನೋಡುಗರನ್ನು ಆಕರ್ಷಿಸುವಂತೆ ಕಾಣುತ್ತಿದ್ದವು. ಚಿತ್ರಕಲಾ ಪ್ರದರ್ಶನದಲ್ಲಿ ಸುಮಾರು 1,000 ಕ್ಕೂ ಹೆಚ್ಚು ಚಿತ್ರಪಟಗಳನ್ನು ಅಳವಡಿಸಲಾಗಿತ್ತು.

ಗ್ಯಾರಂಟಿ ಯೋಜನೆಗಳ ಚಿತ್ರಪಟ ಪ್ರಮುಖ ಆಕರ್ಷಣೆ:
ಚಿತ್ರಕಲಾ ಪ್ರದರ್ಶನದಲ್ಲಿ ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಗೃಹಲಕ್ಷ್ಮಿ, ಶಕ್ತಿಯೋಜನೆಗಳ ಕುರಿತ ಚಿತ್ರಪಟಗಳು ಪ್ರಮುಖ ಆಕರ್ಷಣೆಯಾಗಿದ್ದವು.
ನಂತರದಲ್ಲಿ ವಸತಿ ಶಾಲೆಯ ಶಾಲಾ ಮಕ್ಕಳಿಂದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸತೀಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ವಸತಿ ಶಾಲೆಗಳ ಪ್ರಾಂಶುಪಾಲರು, ನಿಲಯಪಾಲಕರು, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here