ರಾಯಚೂರು ಬಹುಭಾಷಿಕ ಪರಿಸರವಾಗಿದೆ: ಸಂಶೋಧನಾರ್ಥಿ ಶ್ರೀದೇವಿ

0
33

ಹೊಸಪೇಟೆ (ವಿಜಯನಗರ) ಕ್ರಿಯಾಪದಗಳ ಬಳಕೆಯು ಆಧುನಿಕತೆಗೆ ತೆರೆದುಕೊಂಡು ಅವು ಪ್ರಮಾಣಬದ್ಧವಾಗಿ ಬಳಕೆಗೊಳ್ಳುತ್ತಿವೆ ಎಂದು ಸಂಶೋಧನಾರ್ಥಿ ಶ್ರೀದೇವಿ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾರದ ಮಾತು 243ನೇ ಆನ್‌ಲೈನ್ ಕಾರ್ಯಕ್ರಮದಲ್ಲಿ ‘ರಾಯಚೂರು ಪರಿಸರದಲ್ಲಿನ ಕ್ರಿಯಾಪದಗಳ ರಚನೆ ಮತ್ತು ಬಳಕೆ’ ಕುರಿತು ಅವರು ಮಾತನಾಡಿದರು.

ರಾಯಚೂರು ಪರಿಸರವು ಭೌಗೋಳಿಕವಾಗಿ, ಪ್ರಾದೇಶಿಕವಾಗಿ ಅಷ್ಟೆ ಅಲ್ಲದೇ ಭಾಷೆ, ಸಮಾಜ ಮತ್ತು ಸಂಸ್ಕೃತಿಯ ದೃಷ್ಟಿಯಿಂದಲೂ ವಿಭಿನ್ನತೆಯಿಂದ ಕೂಡಿರುವುದನ್ನು ಕಾಣಬಹುದು. ಇಲ್ಲಿನ ಜನರ ಭಾಷಾ ಬಳಕೆಯಲ್ಲಿ ಕ್ರಿಯಾಪದಗಳು ವಿಶೇಷವಾಗಿ ಬಳಕೆಗೊಳ್ಳುತ್ತವೆ. ರಾಯಚೂರು ಪರಿಸರವು ಬಹುಭಾಷಿಕ ಪರಿಸರವಾದ್ದರಿಂದ ಇತರೆ ಭಾಷೆಗಳ ಕ್ರಿಯಾಪದಗಳು ಕೂಡ ಕನ್ನಡ ಭಾಷಿಕರಲ್ಲಿ ಬಳಕೆಯಲ್ಲಿರುವುದನ್ನು ಕುಚ್ಚು (ತೆಲುಗು), ಪುಕಾರು (ಹಿಂದಿ), ಕಟ್(ಇಂಗ್ಲಿಶ್) ಮಾಡು ಎಂಬ ಉದಾಹರಣೆಗಳೊಂದಿಗೆ ವಿವರಿಸಿದರು. ಹಾಗೆಯೇ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗುವಾಗ ಕ್ರಿಯಾಪದಗಳ ಬಳಕೆಯು ವ್ಯತ್ಯಾಸಗೊಂಡಿರುವುದನ್ನು ಮೊದಲ ಮತ್ತು ಎರಡನೆ ತಲೆಮಾರಿನ ಜನರಲ್ಲಿ ‘ಯ’ ಕಾರ ಹಾಗೂ ‘ಚ’ ಕಾರದ ಬದಲು ‘ಸ’ ಕಾರದ ಬಳಕೆ, ‘ತ’ ಕಾರದ ಬದಲಿಗೆ ‘ಚ’ ಕಾರ ಬಳಕೆಯಲ್ಲಿರುವುದನ್ನು ಹಾಕ್ಯಾರ(ಹಾಕಿದ್ದಾರೆ), ಸುಚ್ಚು(ಚುಚ್ಚು), ಚಿನು(ತಿನ್ನು) ಎಂಬ ಉದಾಹರಣೆಗಳ ಸಹಿತ ವಿವರಿಸಿದರು.

ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಪಿ ಮಹಾದೇವಯ್ಯ, ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಡಿ. ಪಾಂಡುರಂಗ ಬಾಬು, ಪ್ರಾಧ್ಯಾಪಕರಾದ ಡಾ. ಅಶೋಕ ಕುಮಾರ ರಂಜೇರೆ ಹಾಗೂ ಸಂಶೋಧನಾ ವಿದ್ಯಾರ್ಥಿ ಸಂಗಪ್ಪ ಪಟ್ಟೇದ ಪ್ರತಿಕ್ರಿಯೆ ನೀಡಿದರು. ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಚಾಲಕರಾದ ಚೌಡಪ್ಪ ಪಿ., ಶಿಲ್ಪಾ ಹೆಚ್.ವಿ., ಅಂಬಿಕಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here