ಸಿಎಂ ಹುದ್ದೆಗೆ ಮನಿಪವರ್ ಮಾನದಂಡವಾದ ಕತೆ

0
200

ಅವತ್ತು ವೀರೇಂದ್ರ ಪಾಟೀಲರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವುದು ನಿಶ್ಚಿತವಾಗಿತ್ತು.
ಅವರು ಕೆಳಗಿಳಿಯುವುದು ನಿಶ್ಚಿತವಾಗುತ್ತಿದ್ದಂತೆಯೇ ಹಲ ನಾಯಕರು ಆ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಂಡರು.
ಆದರೆ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಂಡವರ ಪೈಕಿ ಹುಲಕೋಟಿಯ ಹುಲಿ ಕೆ.ಹೆಚ್.ಪಾಟೀಲ್ ತುಂಬ ಮುಂದಿದ್ದರು.
ಅವತ್ತು ಕಾಂಗ್ರೆಸ್ ಶಾಸಕಾಂಗ ಬಲದ ಅರ್ಧಕ್ಕೂ ಹೆಚ್ಚು ಮಂದಿ ಶಾಸಕರು ಕೆ.ಹೆಚ್.ಪಾಟೀಲರ ಬೆನ್ನ ಹಿಂದಿದ್ದರು.
ಹೀಗಾಗಿ ಸ್ಪರ್ಧೆ ನಡೆದು ಫಲಿತಾಂಶ ಹೊರಬಂದರೆ ಅವರು ಸಿಎಂ ಆಗುವುದು ನಿಕ್ಕಿಯಾಗಿತ್ತು.
ಯಾವಾಗ ಇದು ಕನ್ ಫರ್ಮ್ ಆಯಿತೋ?ಆಗ ಹೈಕಮಾಂಡ್ ವತಿಯಿಂದ ಪರಿಸ್ಥಿತಿಯನ್ನು ಅವಲೋಕಿಸಲು ನೇಮಕಗೊಂಡಿದ್ದ ತಮಿಳ್ನಾಡಿನ ಜಿ.ಕೆ.ಮೂಪನಾರ್,ಆಂಧ್ರದ ವಿಜಯ ಭಾಸ್ಕರ ರೆಡ್ಡಿ ಚಿಂತಿತರಾದರು.
ಯಾಕೆಂದರೆ ಕೆ.ಹೆಚ್.ಪಾಟೀಲ್ ಮುಖ್ಯಮಂತ್ರಿಯಾದರೆ ವೀರೇಂದ್ರ ಪಾಟೀಲರಂತೆಯೇ ಟಫ್ ಕ್ಯಾಂಡಿಡೇಟ್ ಆಗಬಹುದು ಎಂಬುದು ಅವರ ಆತಂಕವಾಗಿತ್ತು.
ಅಂದ ಹಾಗೆ 1989 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐತಿಹಾಸಿಕ ಜಯ ಸಾಧಿಸಿತ್ತು.
ಹಾಗೆಯೇ ಈ ಗೆಲುವಿನ ಕ್ರೆಡಿಟ್ ಪಡೆದ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಹುದ್ದೆಯ ಮೇಲೆ ಬಂದು ಕುಳಿತರು.
ಆದರೆ ಅಧಿಕಾರ ಹಿಡಿದ ವೀರೇಂದ್ರ ಪಾಟೀಲರು‌ಹೈಕಮಾಂಡ್ ಫ್ರೆಂಡ್ಲಿ ಲೀಡರ್ ಅಲ್ಲ ಅಂತ ಬಹುಬೇಗ ಗೊತ್ತಾಯಿತು.
ಯಾಕೆಂದರೆ ಆ ಸಂದರ್ಭದಲ್ಲಿ ಎಐಸಿಸಿ ಅಧಿವೇಶನ ನಡೆಸಲು ಫಂಡ್ ಸಂಗ್ರಹಿಸಿಕೊಡಿ ಎಂದು ವರಿಷ್ಟರಿಂದ ಸಿಗ್ನಲ್ ಬಂದರೆ ವೀರೇಂದ್ರ ಪಾಟೀಲರು ನೋ,ನೋ,ಅದೆಲ್ಲ ಆಗಲ್ಲ ಎಂದು ಬಿಟ್ಟರು.
ಯಾವಾಗ ಅವರಿಂದ ಈ‌ ಉತ್ತರ ಬಂತೋ?ಆಗ ಸಹಜವಾಗಿಯೇ ಕಾಂಗ್ರೆಸ್ ವರಿಷ್ಟರು ಕನಲಿದರು.
ಯಾಕೆಂದರೆ ಅಷ್ಟೊತ್ತಿಗಾಗಲೇ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ಅಧಿಕಾರ ಕಳೆದುಕೊಂಡಿತ್ತು.ಇದರ ಪರಿಣಾಮವಾಗಿ ಅದರ ಆದಾಯ ಮೂಲಗಳು‌ ಕುಸಿದಿದ್ದವು.
ದೆಹಲಿ ಕೈ ಬಿಟ್ಟು ಹೋದಾಗ ರಾಜ್ಯಗಳಲ್ಲಿರುವ ಕಾಂಗ್ರೆಸ್ ಸರ್ಕಾರಗಳು ನೆರವು ನೀಡಬೇಕು ಎಂದು ಕಾಂಗ್ರೆಸ್ ವರಿಷ್ಟರು ಬಯಸಿದ್ದರು.
ಆದರೆ ವರಿಷ್ಟರು ಬಯಸಿದ ಸಂಪನ್ಮೂಲ ಸಂಗ್ರಹಿಸಬೇಕು ಎಂದರೆ ಉದ್ಯಮಿಗಳಿಂದ ನೆರವು ಪಡೆಯಬೇಕು.ಹೀಗೆ ನೆರವು ಪಡೆದರೆ ಅವರಿಗೆ ಬೇಕಾದಂತೆ ನಡೆದುಕೊಳ್ಳಬೇಕು.ಹಾಗೆ ಮಾಡುವುದು ಎಂದರೆ ಸರ್ಕಾರದ ಮುಖಕ್ಕೆ ಭ್ರಷ್ಟಾಚಾರದ ಮಸಿ ತಗಲುತ್ತದೆ ಎಂಬುದು ವೀರೇಂದ್ರ ಪಾಟೀಲರ ಆತಂಕವಾಗಿತ್ತು.
ಹೀಗಾಗಿಯೇ ಕಾಂಗ್ರೆಸ್ ವರಿಷ್ಟರ ಬೇಡಿಕೆಯನ್ನು ತಳ್ಳಿಹಾಕಿದ ವೀರೇಂದ್ರ ಪಾಟೀಲರು ತಮ್ಮ ಪಾಡಿಗೆ ತಾವಿದ್ದು ಬಿಟ್ಟರು.
ಅದೇ ಕಾಲಕ್ಕೆ ಸರ್ಕಾರದ ಬೊಕ್ಕಸವನ್ನು ಭರ್ತಿ ಮಾಡಲು ಮಧ್ಯದ ಉದ್ಯಮಿಗಳ ವಿರುದ್ಧ ಮುಗಿಬಿದ್ದರು.
ಅವರ ಈ ಕ್ರಮದಿಂದ ಸೆಕೆಂಡ್ಸ್,ಥರ್ಡ್ಸ್ ಮಧ್ಯಕ್ಕೆ ಕಡಿವಾಣ ಬಿದ್ದು ಸರ್ಕಾರದ ಬೊಕ್ಕಸ ತುಂಬಿ ತುಳುಕತೊಡಗಿತು.
ಅವತ್ತಿನ ಸಂದರ್ಭದಲ್ಲಿ ಸರ್ಕಾರದ ಖಜಾನೆಯಲ್ಲಿ‌ ಹತ್ತತ್ತಿರ ಆರುನೂರು ಕೋಟಿ ರೂಪಾಯಿಗಳಷ್ಟು ಹಣ ಸ್ಟಾಕ್ ಇತ್ತು. ಪಾಟೀಲರ ಸರ್ಕಾರ ಎಷ್ಟು ಪವರ್ ಫುಲ್ ಆಗಿತ್ತು ಎಂಬುದಕ್ಕೆ ಇದು ಸಾಕ್ಷಿ.
ವೀರೇಂದ್ರಪಾಟೀಲ್ ಹಾಗೂ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ರಾಜಶೇಖರ ಮೂರ್ತಿ ಜೋಡಿ ಮಧ್ಯದ ಉದ್ಯಮಿಗಳ ಮೇಲೆ ಮುಗಿಬಿದ್ದ ರೀತಿ ರಾಜ್ಯದ ಹಿತಕ್ಕೆ ಪೂರಕವಾಗಿತ್ತು ಎಂಬುದು ಸ್ಪಷ್ಟ.
ಆದರೆ ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಕೆಲ ಸ್ಥಳೀಯ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿತು.
ಯಾಕೆಂದರೆ 1989 ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯದ ದೊರೆಯೊಬ್ಬರು ಬಹುತೇಕ ಕಾಂಗ್ರೆಸ್ ಕ್ಯಾಂಡಿಡೇಟುಗಳಿಗೆ ನೆರವು ನೀಡಿದ್ದರು.
ಹೀಗೆ ನೆರವು ನೀಡಿದವರಿಗೆ ಶಕ್ತಿ ತುಂಬುವ ಬದಲು ಎಗಾದಿಗಾ ಬಾರಿಸಿದರೆ ಹೇಗೆ?ಎಂಬುದು ಈ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.
ಅಲ್ಲಿಗೆ ಇಲ್ಲಿನ ಮತ್ತು ದಿಲ್ಲಿಯ ನಾಯಕರ ಆಕ್ರೋಶ ಸಂಧಿಸಿದವು.ವೀರೇಂದ್ರ ಪಾಟೀಲರ ಪದಚ್ಯುತಿಗೆ ಖೆಡ್ಡಾ ರೆಡಿಯಾಗತೊಡಗಿದ್ದು ಹೀಗೆ.
ಮುಂದೆ ವೀರೇಂದ್ರ ಪಾಟೀಲರ ಅನಾರೋಗ್ಯ ನೆಪವಾಯಿತು.ಎಐಸಿಸಿ ಅಧ್ಯಕ್ಷ ರಾಜೀವ್ ಗಾಂಧಿ ಕರ್ನಾಟಕಕ್ಕೆ ಬಂದವರೇ ಕಾಂಗ್ರೆಸ್ ಶಾಸಕಾಂಗ ಪಕ್ಷ ತನ್ನ ಹೊಸ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂದು ಘೋಷಿಸಿದರು.

ಯಾವಾಗ ರಾಜೀವ್ ಗಾಂಧಿ ಬಂದು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ನಾಯಕತ್ವ ಬದಲಾವಣೆಯ ಮಾತು ಆಡಿದರೋ?ಇದಾದ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಪರ್ಯಾಯ ನಾಯಕತ್ವದ ಪ್ರಶ್ನೆ ಅಟ್ಟ ಹತ್ತಿ‌ ಕುಳಿತುಕೊಂಡಿತು.
ಈ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಶಾಸಕರ ಬೆಂಬಲ ಹೊಂದಿದ್ದ ಕೆ.ಹೆಚ್.ಪಾಟೀಲರು ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿತ್ತು.
ಆದರೆ ಪರಿಸ್ಥಿತಿಯನ್ನು ಅವಲೋಕಿಸಲು ನೇಮಕಗೊಂಡ ಹಿರಿಯ ನಾಯಕರಾದ ಜಿ.ಕೆ.ಮೂಪನಾರ್,ವಿಜಯಭಾಸ್ಕರ ರೆಡ್ಡಿ ಆಟ. ಬದಲಿಸಲು ನಿರ್ಧರಿಸಿದರು.
ಒಂದು ವೇಳೆ ಶಾಸಕಾಂಗ ಬಲವೇ ನಿರ್ಣಾಯಕವಾದರೆ ಕೆ.ಹೆಚ್.ಪಾಟೀಲ್ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ.ಆದರೆ ಅವರು ಕೂಡಾ ವೀರೇಂದ್ರ ಪಾಟೀಲರಂತೆ ಟಫ್ ನಾಯಕ.
ಅಂದ ಹಾಗೆ ಮೊದಲೇ ಕಾಂಗ್ರೆಸ್ ಪಕ್ಷ ಸಂಕಷ್ಟ ಸ್ಥಿತಿಯಲ್ಲಿದೆ.ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉರುಳಿದರೆ ಸಂಸತ್ತಿಗೆ ಮಧ್ಯಂತರ ಚುನಾವಣೆ ನಿಶ್ಚಿತ.
ಹಾಗೇನಾದರೂ ಚುನಾವಣೆ ನಡೆದರೆ ಪಕ್ಷಕ್ಕೆ ಫಂಡು ಸಂಗ್ರಹಿಸಿಕೊಡುವ ನಾಯಕರು ಬೇಕೇ ವಿನ: ಎಲ್ಲದಕ್ಕೂ ಟಫ್ ಆಗಿರುವವರಲ್ಲ ಎಂದು ಮೂಪನಾರ್,ವಿಜಯಭಾಸ್ಕರರೆಡ್ಡಿ ಲೆಕ್ಕ ಹಾಕಿದರು.
ಅಷ್ಟೇ ಅಲ್ಲ,ರಾಜೀವ್ ಗಾಂಧಿಯವರಿಗೆ ಈ ಸೂಕ್ಷ್ಮದ ಬಗ್ಗೆ ಮಾಹಿತಿ ನೀಡಿದರು.ಆದರೆ ಇಲ್ಲೊಂದು ಎಚ್ಚರಿಕೆಯ ಅಗತ್ಯವಿತ್ತು.
ಅದೆಂದರೆ,ಕೆ.ಹೆಚ್.ಪಾಟೀಲರಿಗಿದ್ದ ಶಾಸಕರ ಬೆಂಬಲ.ಅವತ್ತಿನ ಸ್ಥಿತಿಯಲ್ಲಿ ಏನಾದರೂ ಹೆಚ್ಚು ಕಡಿಮೆಯಾಗಿ ಅವರು ಬಂಡಾಯವೆದ್ದು ಬಿಟ್ಟರೇ?
ಹಾಗಂತ ಯೋಚಿಸಿದ ಮೂಪನಾರ್,ವಿಜಯಭಾಸ್ಕರರೆಡ್ಡಿ ಅವರು ರಾಜೀವ್ ಗಾಂಧಿಗೆ ಪರಿಸ್ಥಿತಿಯನ್ನು ವಿವರಿಸಿದರು.
ಇದನ್ನರ್ಥ ಮಾಡಿಕೊಂಡ ರಾಜೀವ್ ಗಾಂಧಿ ಅವರು ಕೆ.ಹೆಚ್.ಪಾಟೀಲರಿಗೆ ಫೋನು ಮಾಡಿದರು.
ಪಾಟೀಲ್ ಜೀ‌ ನೀವು ಹಿರಿಯರು,ಪಕ್ಷ ನಿಷ್ಟರು.ನಮ್ಮ ತಾಯಿ ಇಂದಿರಾಗಾಂಧಿ ಅವರಿಗೆ ನಿಮ್ಮ ಬಗ್ಗೆ ತುಂಬ ವಿಶ್ವಾಸವಿತ್ತು.ಹೀಗಾಗಿ ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಬಳಿ ಸಹಕಾರ ಕೇಳಲು ನಿರ್ಧರಿಸಿದ್ದೇನೆ ಎಂದರು.
ಅದೇನು ಅಂತ ಹೇಳಿ ಸಾರ್ ಎಂದು ಪಾಟೀಲರು ಕೇಳಿದರೆ;ನೀವು ಒಂದು ತ್ಯಾಗ‌ಮಾಡಬೇಕು ಎಂದರು ರಾಜೀವ್ ಗಾಂಧಿ.
ಅವರ ಮಾತು‌‌ ಮುಂದುವರಿದು,ಕರ್ನಾಟಕದಲ್ಲಿ ಮುಂದಿನ‌ ಮುಖ್ಯಮಂತ್ರಿಯಾಗಿ ಬಂಗಾರಪ್ಪ ಅವರನ್ನು ನೇಮಕ‌ ಮಾಡಲು ನಿರ್ಧರಿಸಿದ್ದೇವೆ.ಆದರೆ ಇದು ಸಾಧ್ಯವಾಗಲು ನಿಮ್ಮ ಸಹಕಾರ ಬೇಕು ಎಂಬಲ್ಲಿಗೆ ತಲುಪಿತು.
ರಾಜೀವ್ ಗಾಂಧಿಯವರ ಈ ಮಾತು ಕೇಳಿದ ಪಾಟೀಲರು‌ ಅರೆಕ್ಷಣವೂ ಯೋಚಿಸದೆ,ಇದರಲ್ಲಿ ತ್ಯಾಗ ಏನು ಬಂತು ಸಾರ್?ನಿಮ್ಮ ಆದೇಶ.ಯಾವ ಕ್ಷಣದಲ್ಲೂ ನಿಮಗೆ ಮುಜುಗರವಾಗದಂತೆ ನಡೆದುಕೊಳ್ಳಬೇಕಾದ್ದು ನನ್ನ ಕರ್ತವ್ಯ ಎಂದರು.
ಅಷ್ಟೇ ಅಲ್ಲ,ತಾವೇ ಬೆಂಬಲಿಗ ಶಾಸಕರ ಜತೆ ಮಾತನಾಡಿ ಬಂಗಾರಪ್ಪ ಅವರ ಬೆಂಬಲಕ್ಕೆ ನಿಂತರು.ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದು ಹೀಗೆ.
ಮುಂದೆ 1991 ರ ಲೋಕಸಭಾ ಚುನಾವಣೆಯಲ್ಲಿ ಬಂಗಾರಪ್ಪ ತಮಗಿದ್ದ ಮನಿಪವರ್ ತೋರಿಸಿದ್ದು ಈಗ ಇತಿಹಾಸ.

ಅಂದ ಹಾಗೆ ಬಂಗಾರಪ್ಪ ಮುಖ್ಯಮಂತ್ರಿಯಾದ ಈ ಬೆಳವಣಿಗೆಯನ್ನು,ಈಗಿನ ಬೆಳವಣಿಗೆಗಳಿಗೆ ಹೋಲಿಸಿ ನೋಡಿದರೆ ಫಂಡ್ ಪಾಲಿಟಿಕ್ಸ್ ಎಂಬುದು ಎಲ್ಲಿಂದ ಎಲ್ಲಿಗೆ ಬಂದು ತಲುಪಿದೆ ಎಂಬುದು ಅರ್ಥವಾಗುತ್ತದೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here