“ಹೆಲ್ಮೆಟ್ ಇಲ್ಲದ ಸಂಚಾರ ಜೀವಕ್ಕೆ ಸಂಚಕಾರ” ; ಎಸ್ಪಿ ರಂಜಿತ್ ಕುಮಾರ್ ಬಂಡಾರು

0
93

ಬಳ್ಳಾರಿ ಜಿಲ್ಲಾ ಪೊಲೀಸ್,ಸಂಡೂರು ಪೊಲೀಸ್ ಠಾಣೆ ಹಾಗೂ ಲೋಹಗಿರಿ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಂಡೂರು ಇವರ ಸಹಯೋಗದೊಂದಿಗೆ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
“ಹೆಲ್ಮೆಟ್ ಧರಿಸಿ ಜೀವ ಉಳಿಸಿ” ಮತ್ತು ರಸ್ತೆ ಸಂಚಾರ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿ ಮೂಡಿಸುವ ಅಭಿಯಾನ ಸಂಡೂರು ಪಟ್ಟಣದಲ್ಲಿ ನಡೆಯಿತು.

ಸಂಡೂರು ಪೊಲೀಸ್ ಠಾಣೆಯ ಆವರಣದಿಂದ ಬಿಕೆಜಿ ಗ್ಲೋಬಲ್ ಶಾಲೆವರೆಗೆ ಹಮ್ಮಿಕೊಂಡಿದ್ದ ‘ಹೆಲ್ಮೆಟ್ ಧರಿಸಿ ಜೀವ ಉಳಿಸಿ’ ಅಭಿಯಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹಾಗೂ ಶಾಸಕ ತುಕಾರಾಮ್ ಅವರು ಚಾಲನೆ ನೀಡಿದರು.

ಸಂಡೂರು ವೃತ್ತದ ಸಿಪಿಐ ಮಹೇಶ್ ಗೌಡ
ಅವರ ನೇತೃತ್ವದಲ್ಲಿ ಅಭಿಯಾನ ನಡೆದಿದ್ದು, ಹೆಲ್ಮೆಟ್ ಧರಿಸದೇ ಸಂಚರಿಸುವುದರಿಂದ ಸಂಭವಿಸುವ ಜೀವ ಹಾನಿ ಮತ್ತು ಹೆಲ್ಮೆಟ್ ಧರಿಸುವುದರಿಂದ ಆಗುವ ಲಾಭ ಕುರಿತು ತಿಳಿಸಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿ, ಬೈಕ್ ಸವಾರರು ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್ ಧರಿಸಬೇಕು. ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಸವಾರರ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇದನ್ನು ತಡೆಯಲು ಎಲ್ಲರೂ ಸಂಚಾರ ನಿಯಮ ಪಾಲಿಸಬೇಕು ಎಂದು ಸಲಹೆ ನೀಡಿದರು.
ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಅನಿವಾರ್ಯ, ಇಲ್ಲವಾದರೆ ದಂಡ ಪಾವತಿಸುವುದು ಕೂಡ ಅನಿವಾರ್ಯ ಎಂಬುದು ತಿಳಿದುಕೊಳ್ಳಬೇಕು. ಬಿಸಿಲು ಇದೆ ಎಂದು ಯಾವುದೇ ಕುಂಟು ನೆಪಗಳು ಹೇಳುವ ಅವಶ್ಯಕತೆ ಇಲ್ಲ ಎಂಬುದನ್ನು ಮನವರಿಕೆ ಮಾಡಿಸಲಾಯಿತು.
ಹೆಲ್ಮೆಟ್ ಧರಿಸದ ಕಾರಣ ಅನೇಕರ ಜೀವಕ್ಕೆ ಹಾನಿಯಾಗುತ್ತಿದೆ. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಇಂತಹ ಅಭಿಯಾನ ಮಾಡಲಾಗುತ್ತಿದೆ ಎಂದರು.

ಇಂದಿನ ಯುವ ಜನಾಂಗ ಫ್ಯಾಶನ್ ಮತ್ತು ಮೋಜು ಮಸ್ತಿಯ ಹೆಸರಿನಲ್ಲಿ ಮಾದಕ ವಸ್ತುಗಳನ್ನು ಮತ್ತು ದ್ರವ್ಯಗಳನ್ನು ಸೇವಿಸಿ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಈ ಮಾದಕ ವಸ್ತುಗಳ ಸೇವನೆ ಮಾಡದೆ ಆರೋಗ್ಯವಂತ ಬದುಕು ರೂಪಿಸಿಕೊಳ್ಳಬೇಕು.ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಜನರು ಸಿಗರೇಟು, ಅಲ್ಕೋಹಾಲ್ ಮತ್ತು ಡ್ರಗ್ಸ್ ನಂತಹ ಮಾದಕ ವಸ್ತುಗಳ ಸೇವನೆಗೆ ಅಂಟಿಕೊಳ್ಳುತ್ತಿದ್ದಾರೆ. ಯುವಕರೇ ಎಚ್ಚರ ವಹಿಸಬೇಕು, ಮೊದಮೊದಲು ಈ ಮಾದಕ ವಸ್ತುಗಳು ನಿಮಗೆ ಒಂದು ರೀತಿ ಖುಷಿ ಕೊಡುತ್ತಿರಬಹುದು. ಆದರೆ ದಿನ ಕಳೆದಂತೆ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಸೇವನೆ ಮಾಡಿ ಬೈಕುಗಳನ್ನು ಮತ್ತು ವಾಹನಗಳನ್ನು ಓಡಿಸುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ.

ಪೊಲೀಸ್ ಇಲಾಖೆಯಿಂದ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ತಿಳುವಳಿಕೆ ನೀಡಿದರು ಕೂಡ ಅನೇಕ ಬೈಕ್ ಸವಾರರು ಮತ್ತು ವಾಹನ ಚಾಲಕರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಿಲ್ಲ. ಸರಾಯಿ ಕುಡಿದು ವಾಹನ ಚಲಾಯಿಸುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ವಾಹನ ಚಾಲಕರು, ಯುವಕರು, ಕಾಲೇಜಿನ ವಿದ್ಯಾರ್ಥಿಗಳು ಈ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಮಾದಕ ದ್ರವ್ಯಗಳನ್ನು ಮತ್ತು ವಸ್ತುಗಳ ಸೇವನೆಯಿಂದ ಅಮಲೇರುವ ಕಾರಣ ಒತ್ತಡ, ಖಿನ್ನತೆ, ತಲೆನೋವು ಅಥವಾ ಮೈಗ್ರೇನ್‍ನಂತಹ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚಿನ ವೈದ್ಯಕೀಯ ವರದಿಗಳ ಪ್ರಕಾರ ಕ್ಯಾನ್ಸರ್ ನಂತಹ ಭಯಾನಕ ರೋಗಗಳು ಈ ಮಾದಕ ವಸ್ತುಗಳಿಂದಲೇ ಹೆಚ್ಚಾಗುತ್ತಿದೆ. ಆದ್ದರಿಂದ ಯುವಜನರು ಎಚ್ಚರಿಕೆ ವಹಿಸಬೇಕು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕರೆ ನೀಡಿದರು.
ಹಾಗೇ ಸೈಬರ್ ಕ್ರೈಂ, ಎನ್ ಡಿ ಪಿ ಎಸ್, ಪೋಕ್ಸೋ, ಬಾಲ್ಯವಿವಾಹ, ಬಾಲ ಕಾರ್ಮಿಕರು, ಮತ್ತು ಇತ್ತೀಚೆಗೆ ಅತೀ ಹೆಚ್ಚಾಗಿ ಎಸ್ ಸಿ/ಎಸ್ ಟಿ,(ಜಾತಿ ನಿಂದನೆ) ದಾಖಲಾಗುತ್ತಿರುವ ಪ್ರಕರಣಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು

ಈ ವೇಳೆ ಶಾಸಕರಾದ ತುಕಾರಾಮ್, ಸ್ಮಯೋರ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಬಹಿರ್ಜಿ ಘೋರ್ಪಡೆ ಮಾತನಾಡಿದರು. ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ, ಹಾಗೂ ಬೈಕ್ ಸವಾರರಿಗೆ 2000 ಹೆಲ್ಮೆಟ್ ಗಳನ್ನು ವಿತರಿಸಲಾಯಿತು. ಸ್ವಾಗತ ಬಾಷಣವನ್ನು ಶ್ರೀ ಪ್ರಸಾದ್ ಗೋಖಲೆ ಡಿ ವೈ ಎಸ್ ಪಿ ಉಪ-ವಿಭಾಗ ತೋರಣಗಲ್ಲು ಇವರು ನಡೆಸಿಕೊಟ್ಟರು

ಈ ಸಂಧರ್ಭದಲ್ಲಿ ಶಾಸಕರಾದ ಈ ತುಕಾರಾಮ್, ಸ್ಮಯೋರ್ ಕಂಪನಿಯ ಎಂ ಡಿ ಬಹಿರ್ಜಿ ಘೋರ್ಪಡೆ, ಸ್ಮಯೋರ್ ಕಂಪನಿಯ ನಿರ್ದೇಶಕರಾದ ಮೋಹಮ್ಮದ್ ಅಬ್ದುಲ್ ಸಲಿಂ,ತಹಶೀಲ್ದಾರ್ ಅನಿಲ್ ಕುಮಾರ್, ತಾಪಂ ಇಓ, ಪುರಸಭೆಯ ಸದಸ್ಯರು ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here