ಮಕ್ಕಳಲ್ಲಿ ಪೌಷ್ಟಿಕಾಂಶ ಬೆಳವಣಿಗೆಗೆ ರಾಗಿ ಮಾಲ್ಟ್ ಸಹಕಾರಿ: ಮೇಯರ್ ಬಿ.ಶ್ವೇತ

0
53

ಬಳ್ಳಾರಿ,ಫೆ.22: ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಮತ್ತು ಅವರ ಆರೋಗ್ಯವು ಪೌಷ್ಟಿಕಾಂಶಯುತವಾಗಿ ಬೆಳೆಯಲು ರಾಗಿ ಮಾಲ್ಟ್ ಸಹಕಾರಿಯಾಗಿದೆ ಎಂದು ಮಹಾನಗರ ಪಾಲಿಕೆಯ ಮಹಾ ಪೌರರಾದ ಬಿ.ಶ್ವೇತ ಅವರು ಹೇಳಿದರು.
ಇಂದು, ನಗರದ ಹವಂಭಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಪಿ.ಎಂ.ಪೋಷಣ್ ಯೋಜನೆ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಹಮ್ಮಿಕೊಂಡಿದ್ದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1 ರಿಂದ 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಗಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ಮಕ್ಕಳ ದೇಹದ ತೂಕವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಮುಖ್ಯವಾಗಿ ಬಡ ಮಕ್ಕಳಲ್ಲಿ ರಕ್ತಹೀನತೆ, ಮೂಳೆ ಗಟ್ಟಿಗೊಳಿಸುವಿಕೆ, ಅಪೌಷ್ಟಿಕತೆ ನಿವಾರಣೆಗೆ ಅನುಕೂಲವಾಗಲಿದೆ ಎಂದರು.
ಮಕ್ಕಳ ಆರೋಗ್ಯ ಬೆಳವಣಿಗೆಗೆ ಪೂರಕವಾಗಿ ರಾಜ್ಯ ಸರ್ಕಾರವು 1 ರಿಂದ 10 ನೇ ತರಗತಿಯ ಎಲ್ಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಹೆಲ್ತ್ ಮಿಕ್ಸ್ ವಿತರಣೆ ಮಾಡಲು ನಿರ್ಧರಿಸಿದ್ದು, ಇದರಿಂದ ಮಕ್ಕಳಲ್ಲಿ ಇನ್ನಷ್ಟು ಪೌಷ್ಟಿಕತೆ ಹೆಚ್ಚುತ್ತದೆ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಉಮಾದೇವಿ ಅವರು ಮಾತನಾಡಿ, ಆರೋಗ್ಯವಂತ ಮಗು, ದೇಶದ ಆಸ್ತಿಯಾಗಿ ಬೆಳೆಯುತ್ತಾನೆ. ಹೀಗಾಗಿ ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ರಾಜ್ಯ ಸರ್ಕಾರವು ನೂತನ ಕಾರ್ಯಕ್ರಮ ಜಾರಿಗೊಳಿಸಿರುವುದು ಖುಷಿಯ ಸಂಗತಿಯಾಗಿದೆ ಎಂದರು.

ಡಯಟ್‍ನ ಪ್ರಾಂಶುಪಾಲರಾದ ಹನುಮಕ್ಕ ಅವರು ಮಾತನಾಡಿ, ನಾವು ಅಭ್ಯಾಸ ಮಾಡುವ ಸಮಯದಲ್ಲಿ ಯಾವುದೇ ರೀತಿಯ ಸೌಲಭ್ಯ ಇರುತ್ತಿದ್ದಿಲ್ಲ. ಈಗಿನ ಸಮಯದಲ್ಲಿ ಮಕ್ಕಳ ಆರೋಗ್ಯ ಪೂರಕವಾಗಿ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
ಮಕ್ಕಳ ತೂಕ ಬೆಳವಣಿಗೆಗೆ ಹಾಗೂ ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ಉಪಯುಕ್ತವಾಗಿದೆ. ಉತ್ತಮ ಪೌಷ್ಠಿಕಾಂಶ ಆರೋಗ್ಯದಿಂದ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರು ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸಿದರು. ಮಕ್ಕಳೂ ಖುಷಿಯಿಂದಲೇ ರಾಗಿ ಮಾಲ್ಟ್ ಸವಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಕಲ್ಪನಾ, ಜಿಪಂ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ, ಹವಂಭಾವಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ನಿಂಗಪ್ಪ, ಎಸ್‍ಡಿಎಂಸಿ ಅಧ್ಯಕ್ಷರಾದ ನಾಗಪ್ಪ, ಉಪಾಧ್ಯಕ್ಷರಾದ ನೇತಿ ರಘುರಾಮ್ ಸೇರಿದಂತೆ ಶಾಲಾ ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here