ಬೌದ್ಧ ಧರ್ಮ ನಮ್ಮೆಲ್ಲರ ನೆಲದ ಧರ್ಮ: ಸೋಮಶೇಖರ್ ಬಣ್ಣದ ಮನೆ

0
69

ಹೊಸಪೇಟೆ:ವಿಜಯನಗರ ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ನೇತೃತ್ವದಲ್ಲಿ 2568 ನೇ ಭಗವಾನ್ ಬುದ್ಧರ ಜಯಂತಿಯನ್ನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ. ಎನ್ ಚಿನ್ನಸ್ವಾಮಿ ಸೋಸಲೆ ಇವರು ಕಾರ್ಯಕ್ರಮ ಕುರಿತು ಮಾತನಾಡಿ ” 2500 ವರ್ಷಗಳ ಹಿಂದೆ ಗೌತಮ ಬುದ್ಧರು ಈ ನೆಲದಲ್ಲಿ ಜೀವಂತವಾಗಿದ್ದ ಅಸಮಾನತೆ , ಜಾತೀಯತೆ, ಅಸ್ಪೃಶ್ಯತೆ ಕುರಿತು ಮಾತನಾಡಿ ಅದನ್ನು ಖಂಡಿಸಿದರು ಎಂದರೆ ಇಂದಿಗೂ ಜೀವಂತವಿರುವ ಈ ಎಲ್ಲವುಗಳ ಸೃಷ್ಟಿ ಹಾಗೂ ಇದರ ಸೃಷ್ಟಿಕರ್ತರು ಯಾರು ಹಾಗೂ ಎಂತಹ ಅಧರ್ಮ ಪ್ರತಿಪಾದಕರು ಎಂಬುದನ್ನು ಹೇಳುವುದರ ಜೊತೆಗೆ ಇದೆಲ್ಲದರ ವಾರಸುದಾರರು ಯಾರು ಎಂಬುದನ್ನು ಬೌದ್ಧಿಕವಾಗಿ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಎಂದು ಚಾರಿತ್ರಿಕ ವಿಶ್ಲೇಷಣೆಯ ಮೂಲಕ ಹೇಳಿದರು.

ನಾವೆಲ್ಲರೂ ಇನ್ನೂ ಸಹ ಸಿದ್ದಾರ್ಥರಾಗುತ್ತಿದ್ದೇವೆ. ಹೊರತು (ಸ್ಥಾವರ – ದೇವಾಲಯಗಳು) ಗೌತಮ ಬುದ್ಧರಾಗುತ್ತಿಲ್ಲ (ಜಂಗಮ- ಜ್ಞಾನವಂತರು) ಏಕೆಂದರೆ ಸ್ಥಾವರವಾಗಿ ನಾವು ಅನಾವರಣಗೊಳ್ಳುವುದು ಬಹು ಸುಲಭ, ಆದರೆ ಸಿದ್ದಾರ್ಥ ಜ್ಞಾನವಂತರಾಗಿ ಗೌತಮನಾಗಿ ಪರಿವರ್ತನೆ ಆದ ಮಾದರಿಯಲ್ಲಿ ನಾವೆಲ್ಲರೂ ಜಂಗಮರಾಗಿ ಅನಾವರಣ ಕೊಳ್ಳುವುದು ಬಹುಕಠಿಣ ಎಂಬ ಅಂಶವನ್ನು ವಿಸ್ತೃತವಾಗಿ ಹೇಳಿದರು.ನಾವು ಬುದ್ಧ- ಬಸವ -ಅಂಬೇಡ್ಕರ್ ಅವರನ್ನಾಗಲಿ ಕೇವಲ ಬಾಯಿ ಚಪಲಕ್ಕೆ ಮಾತ್ರ ಬಳಸಿಕೊಂಡು ಹಾಗೆ ಬಾಯಿಯಲ್ಲಿಯೇ ನಮ್ಮ ಸ್ವಾರ್ಥಕ್ಕಾಗಿ ಉಳಿಸಿಕೊಳ್ಳುತ್ತಿದ್ದೇವೆ ಹೊರತು,ಅವರ ತತ್ವ ಸಿದ್ಧಾಂತವನ್ನು ನುಂಗಿ ಜ್ಞಾನಾರ್ಜನೆಯ ಮೂಲಕ ಜೀರ್ಣಿಸಿಕೊಂಡು ಮತ್ತೊಬ್ಬರಿಗೆ ಸಹಾಯಮಾಡುವ ರೀತಿಯಲ್ಲಿ ಪ್ರಭುದ್ಧರಾಗುತ್ತಿಲ್ಲ ಎಂದು ಹೇಳಿದರು.

ಮುಂದುವರೆದು ಬುದ್ಧ ಬಸವ ಅಂಬೇಡ್ಕರ್ ಅವರು ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಿ ‘ಸರ್ವರಿಗೂ ಸಮಪಾಲು- ಸರ್ವರಿಗೂ ಸಮ ಬಾಳು’ ಎಂಬ ತತ್ವ ಸಿದ್ಧಾಂತದ ಅಡಿಯಲ್ಲಿ ಸಮ ಸಮಾಜದ ಧರ್ಮ ಪ್ರತಿಪಾದನೆ ಮಾಡಿದರು. ಇಂತಹ ಧರ್ಮ ಪ್ರತಿಪಾದಕರಿಗೆ ಈ ನೆಲದಲ್ಲಿ ಉಳಿಗಾಲವೇ ಇರಲಿಲ್ಲ.ಆದರೆ, ಜಾತಿಯ ಆಧಾರದ ಮೇಲೆಯೇ ಧರ್ಮವನ್ನು ಸಂರಕ್ಷಣೆ ಮಾಡಿಕೊಳ್ಳಲು ಮುಂದಾದಂತ ಅಧರ್ಮ ಪ್ರತಿಪಾದಕರಿಗೆ ಇಲ್ಲಿ ಭದ್ರವಾದ ನೆಲೆ ದೊರಕಿತು ಎಂದು ವಿಷಾದ ವ್ಯಕ್ತಪಡಿಸಿದರು. ಏಕೆಂದರೆ ಬುದ್ಧ ಬಸವ ಅಂಬೇಡ್ಕರ್ ಅವರು ಪ್ರತಿಪಾದನೆ ಮಾಡಿದ ಕಾಯಕ ಸಿದ್ಧಾಂತದ ದೇವರುಗಳಿಗೆ ಬಣ್ಣ ಬಣ್ಣದ ಬದುಕಿಲ್ಲ ಆದರೆ ಜಾತಿಯ ಆಧಾರದ ಮೇಲೆ ಸೃಷ್ಟಿಯಾಗಿರುವ ಧರ್ಮ ಪ್ರತಿಪಾದಕರ ದೇವರುಗಳು ವರ್ಣರಂಜಿತವಾಗಿ ಕಂಗೊಳಿಸುತ್ತಿವೆ.
ಈ ಕಂಗೊಳಿವಿಕೆ ಜನರನ್ನು ಆಕರ್ಷಿಸಿದಷ್ಟು ವಾಸ್ತವದ ಹಿನ್ನೆಲೆಯ ಧರ್ಮ ಪ್ರತಿಪಾದಕರ ಸತ್ಯದ ನುಡಿಗಳು ಇಷ್ಟವೇ ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಇಂದು ಬೌದ್ಧ ಧರ್ಮದ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಿರುವವರು ದ್ವಿ-ತತ್ವ ಆಧಾರದಲ್ಲಿ ಸಾಗುತ್ತಿದ್ದಾರೆ ( ಎರಡು ದೋಣಿಯ ಪ್ರಯಾಣ)ಎಂದು ಹೇಳಿ ಈ ತತ್ವದ ರೀತಿಯಲ್ಲಿ ಮುಂದುವರಿದರೆ ಖಂಡಿತವಾಗಿ ಯಾವುದೇ ಧರ್ಮದ ಗುರಿಯನ್ನು ತಲುಪಲು ಸಾಧ್ಯವಿಲ್ಲ,ಅದಕ್ಕಾಗಿ ಇಂದು ಬೌದ್ಧ ಧರ್ಮ ಭಾರತದಲ್ಲಿ ಬೌದ್ಧಿಕ ಪುನರ್ಜನ್ಮ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ಬರಹಗಾರ ಪೀರ್ ಪಾಷಾ ಅವರು ಗೌತಮ ಬುದ್ಧರು ಈ ನೆಲಕ್ಕೆ ಪ್ರೀತಿಯ ಸಂದೇಶವನ್ನು ಅನಾವರಣಗೊಳಿಸಿದರು, ಪ್ರೀತಿಯ ಮೂಲಕ ಜಗತ್ತನ್ನೇ ಗೆಲ್ಲಬಹುದು ಎಂಬ ವಿಶ್ವಾಸವನ್ನು ಬುದ್ಧನ ತತ್ವ ಸಾರುತ್ತದೆ ಎಂದು ಹೇಳಿದರು.
ವಿಜಯನಗರ ಬುದ್ದ ವಿಹಾರ ನಿರ್ಮಾಣ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀ ಸೋಮಶೇಖರ್ ಬಣ್ಣದ ಮನೆಯವರು ಪ್ರಾಸ್ತಾವಿಕವಾಗಿ ಬೌದ್ಧ ಧರ್ಮ ನಮ್ಮೆಲ್ಲರ ನೆಲದ ಧರ್ಮ, ನಾವು ಮತ್ತೆ ನಮ್ಮ ಮನೆಗೆ ಮರಳಿ ಯಾವುದೇ ಆಕಾಂಕ್ಷೆಯನ್ನು ಬಯಸದೆ ಒಗ್ಗಟ್ಟಾಗಿ ಹೋಗಬೇಕಾಗಿದೆ. ನಾವ್ಯಾರು ಧರ್ಮ ದ್ರೋಹಿಗಳಲ್ಲ ನಮ್ಮ ಧರ್ಮಕ್ಕೆ ದ್ರೋಹ ಬಗೆದವರ ವಿರುದ್ಧ ನಾವು ಬೌದ್ಧಿಕ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೋಮಶೇಖರ್ ಬಣ್ಣದಮನೆ,ಕಾರಿಗನೂರು ಯರಿಸ್ವಾಮಿ, ಸಣ್ಣ ಮಾರೆಪ್ಪ, ಜೆ.ಸಿ ಈರಣ್ಣ, ಜಯಪ್ಪ ಪಟ್ಟಿ, ಜೆ ಶಿವಕುಮಾರ್, ಹೆಚ್ ಎಸ್ ಯಂಕಪ್ಪ, ಓಬಳೇಶ್, ಕೊಟ್ರೇಶ್, ಮುದುಕಪ್ಪ,ಸುನಿಲ್ ಕುಮಾರ್, ಡಮಾಣಿ ಅಂಬರೀಶ್,ಮರಡಿ ಮಂಜುನಾಥ, ಸಿ ನೀಲಕಂಠ, ಸೊಂಪುರ್ ಪ್ರಕಾಶ್, ಗಿರೀಶ್, ಯಲ್ಲಪ್ಪ, ಯೊಹಾನ್, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

LEAVE A REPLY

Please enter your comment!
Please enter your name here