ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ-ಉತ್ತಮ ಆರ್ಥಿಕ ಪ್ರಗತಿ,ಶಾಸಕರಿಗೆ ಹೆಚ್ಚುವರಿ ಹಾಗೂ ನಾಮನಿರ್ದೇಶಿತ ಸದಸ್ಯರಿಗೆ ಅನುದಾನ ಒದಗಿಸಲು ಸಭೆ ಒತ್ತಾಯ.

0
85

ಶಿವಮೊಗ್ಗ, ಸೆಪ್ಟೆಂಬರ್ 04 :ಮಲೆನಾಡಿನ ಸರ್ವಾಂಗೀಣ ಅಭಿವೃದ್ದಿಗಾಗಿ ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರಿಗೆ ಹೆಚ್ಚುವರಿ ಅನುದಾನ ಮತ್ತು ನಾಮನಿರ್ದೇಶಿತ ಸದಸ್ಯರಿಗೂ ಅನುದಾನ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಮಂಡಳಿಯ ಸರ್ವ ಸದಸ್ಯರ ಸಾಮಾನ್ಯ ಸಭೆ ತೀರ್ಮಾನಿಸಿತು.
ಇಂದು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ ಸಭಾಂಗಣದಲ್ಲಿ ಮಂಡಳಿ ಅಧ್ಯಕ್ಷರಾದ ಕೆ.ಎಸ್.ಗುರುಮೂರ್ತಿ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ 2021-22 ನೇ ಸಾಲಿನ ಪ್ರಥಮ ಸರ್ವ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸಭೆಯಲ್ಲಿ ಮಾತನಾಡಿ, ರಾಜ್ಯದ 13 ಜಿಲ್ಲೆಗಳು ಮಂಡಳಿ ವ್ಯಾಪ್ತಿಗೆ ಒಳಪಟ್ಟಿದ್ದು, 86 ಶಾಸಕರು, 12 ಸಂಸದರು, 13 ಜಿಲ್ಲಾ ಪಂಚಾಯತ್ ಸದಸ್ಯರು, 10 ನಾಮನಿರ್ದೇಶಿತ ಸದಸ್ಯರು, ಓರ್ವ ಕಾರ್ಯದರ್ಶಿ ಹಾಗೂ 13 ಜಿಲ್ಲಾಧಿಕಾರಿಗಳನ್ನೊಳಗೊಂಡ ದೊಡ್ಡ ಮಂಡಳಿ ಇದಾಗಿದೆ. ಮಲೆನಾಡಿನ ಅಭಿವೃದ್ದಿ ಕುರಿತು ಶಾಸಕರು ನೀಡಿದ ಕ್ರಿಯಾಯೋಜನೆಗಳನ್ನು ಸರ್ಕಾರ ಅನುಮೋದಿಸಿ, ಮಲೆನಾಡು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಇತರೆ ಅನುಷ್ಟಾನ ಇಲಾಖೆಗಳಿಂದ ಕಾರ್ಯಗತಗೊಳಿಸಲಾಗುತ್ತಿದೆ.
ಪ್ರತಿ ಶಾಸಕರಿಗೆ ತಲಾ ರೂ.1 ಕೋಟಿ ಅನುದಾನ ನಿಗದಿಯಾಗಿದ್ದರೂ ಹಲವು ವರ್ಷಗಳಿಂದ 30 ರಿಂದ 40 ಲಕ್ಷ ಬಿಡುಗಡೆಯಾಗುತ್ತಿದೆ. ಇಷ್ಟು ದೊಡ್ಡ ಮಂಡಳಿಗೆ ವಾರ್ಷಿಕ 25 ರಿಂದ 26 ಕೋಟಿ ಅನುದಾನ ಸಾಕಾಗುತ್ತಿಲ್ಲ. ಬಾಕಿ ಕಾಮಗಾರಿಗಳಿಗೆ ಇನ್ನೂ ರೂ.30 ಕೋಟಿ ಕೊರತೆ ಇದೆ. ಸದಸ್ಯರು ತಮಗೆ ನಿಗದಿಪಡಿಸಿದ ಅನುದಾನವನ್ನು ರೂ.1.5 ಕೋಟಿಗೆ ಹೆಚ್ಚಿಸುವಂತೆ ಹಾಗೂ ನಾಮ ನಿರ್ದೇಶಿತ ಸದಸ್ಯರು ತಮಗೂ ರೂ.1 ಕೋಟಿ ಅನುದಾನ ನೀಡುವಂತೆ ಒತ್ತಾಯಿಸಿದ್ದಾರೆ. ಸರ್ವ ಸದಸ್ಯರ ಸಭೆಯ ತೀರ್ಮಾನದಂತೆ ಮುಂದಿನ ಅಧಿವೇಶನದ ಒಳಗೆ ಸಭೆ ಕರೆದು ಸದಸ್ಯರಿಗೆ ಹೆಚ್ಚುವರಿ ಅನುದಾನ ಹಾಗೂ ಬಾಕಿ ಕಾಮಗಾರಿ ಪೂರ್ಣಕ್ಕೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಸದಸ್ಯರಾದ ರಾಜುಗೌಡ ಮಾತನಾಡಿ, ಹಲವು ಹಳೆಯ ಕಾಮಗಾರಿಗಳು ಬಾಕಿ ಇವೆ. ಸಾರ್ವಜನಿಕರ ಅಭಿವೃದ್ದಿ ಕೆಲಸ ಮಾಡಲು ಇನ್ನೂ ಹೆಚ್ಚುವರಿ ಅನುದಾನದ ಅವಶ್ಯಕತೆ ಇದ್ದು, ಪ್ರತಿ ಸದಸ್ಯರಿಗೆ ರೂ.1.5 ಕೋಟಿ ಅನುದಾನ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧ್ಯಕ್ಷರನ್ನು ಆಗ್ರಹಿಸಿದರು.
ಸದಸ್ಯರಾದ ಬೋಜೇಗೌಡ ಮಾತನಾಡಿ, ಮಂಡಳಿ ಕಾಮಗಾರಿ ಕೈಗೊಳ್ಳುವಾಗ ಜಿಎಸ್‍ಟಿ, ಲೇಬರ್ ಸೆಸ್, ರಾಯಲ್ಟಿ, ಸೇವಾ ತೆರಿಗೆ ಸೇರಿದಂತೆ ಅನುಷ್ಟಾನ ಸಂಸ್ಥೆಗಳಿಗೆ ಸುಮಾರು ಶೇ.25 ರಷ್ಟು ಖರ್ಚಾಗುತ್ತದೆ. ಉಳಿದ ಹಣದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಅನಿವಾರ್ಯತೆ ಇದೆ. ಆದ ಕಾರಣ ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ ಎಂದು ಒತ್ತಾಯಿಸಿದರು.
ನಾಮ ನಿರ್ದೇಶಿತ ಸದಸ್ಯರಾದ ಅಶೋಕ ಅಂಡಿಗೆ, ಮಹಾದೇವಪ್ಪ ಮಾತನಾಡಿ, ನಮಗೂ ಕೂಡ ಜನರು ಮಂಡಳಿ ವತಿಯಿಂದ ಅಭಿವೃದ್ದಿ ಕೆಲಸ ಮಾಡಿಸುವಂತೆ ಕೋರುತ್ತಾರೆ. ಆದ ಕಾರಣ ನಮಗೂ ತಲಾ ರೂ.1 ಕೋಟಿ ಅನುದಾನ ನೀಡುವಂತೆ ಒತ್ತಾಯಿಸಿದರು.
ಅಧ್ಯಕ್ಷರು ಪ್ರತಿಕ್ರಿಯಿಸಿ, ಶೀಘ್ರದಲ್ಲೇ ಸಭೆ ಕರೆದು ಸಭೆಯ ತೀರ್ಮಾನದಂತೆ ಸರ್ಕಾರಕ್ಕೆ ಹೆಚ್ಚುವರಿ ಅನುದಾನ ಮತ್ತು ನಾಮನಿರ್ದೇಶಿತ ಸದಸ್ಯರಿಗೂ ಅನುದಾನ ಒದಗಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮಂಡಳಿ ಕಳೆದ 10 ವರ್ಷಗಳಲ್ಲೇ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದೆ. ಯಾವುದೇ ಎಸ್ಟಿಮೇಟ್‍ಗಳನ್ನು ತ್ವರಿತವಾಗಿ ವಿಲೇ ಮಾಡಿ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮಾರ್ಚ್ ಒಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದರು.
2020-21 ನೇ ಸಾಲಿನಲ್ಲಿ (2012-13 ರಿಂದ 2019-20 ನೇ ಸಾಲಿನವರೆಗೆ) ಮುಂದುವರೆದ ಕಾಮಗಾರಿಗಳು ಸೇರಿ 1397 ಕಾಮಗಾರಿಗಳನ್ನು ಮಂಡಳಿ ವತಿಯಿಂದ ಕೈಗೆತ್ತಿಕೊಂಡಿದ್ದು ಇವರುಗಳಲ್ಲಿ 854 ಮುಂದುವರೆದ ಕಾಮಗಾರಿಗಳನ್ನು ಪ್ರಾರಂಭಿಸಲು ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತು ಜುಲೈ ಮಾಹೆಯಲ್ಲಿ ಎಲ್ಲ ಜಿಲ್ಲೆಗಳ ಅನುಷ್ಟಾನ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ತ್ವರಿತವಾಗಿ ಕಾಮಗಾರಿಗಳನ್ನು ಪ್ರಾರಂಭಿಸಿ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸೂಚಿಸಿದ್ದೇನೆ.
ಸರ್ಕಾರದೊಂದಿಗೆ ಪತ್ರ ವ್ಯವಹರಿಸಿ ಉಳಿದ 506 ಮುಂದುವರೆದ ಕಾಮಗಾರಿಗಳಿಗೆ ಅಕ್ಟೋಬರ್ ಕೊನೆಯಲ್ಲಿ ಕಾಮಗಾರಿ ಪ್ರಾರಂಭಿಸಲು ಅನುಮೋದನೆ ಪಡೆಯಲಾಗಿದ್ದು, ಎಲ್ಲಾ ಮುಂದುವರೆದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
ಉತ್ತಮ ಆರ್ಥಿಕ ಪ್ರಗತಿ : 2020-21 ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಬಳಕೆಯಾಗದ ರೂ.310.50 ಲಕ್ಷದ ಒಟ್ಟು 46 ಕಾಮಗಾರಿಗಳನ್ನು ಹೊರತು ಯಾವುದೇ ಹೊಸ ಕಾಮಗಾರಿ ಕೈಗೆತ್ತಿಕೊಂಡಿರುವುದಿಲ್ಲ. ಆದಾಗ್ಯೂ ಮುಂದುವರೆದ ಕಾಮಗಾರಿಗಳು ಹಾಗೂ 46 ಹೊಸ ಕಾಮಗಾರಿಗಳು ಸೇರಿ ಒಟ್ಟಾರೆ 516.04 ಲಕ್ಷ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿಯೂ ಸಹ ಈ ಪ್ರಗತಿ ಕಳೆದ ವರ್ಷಗಳಲ್ಲಿಯೇ ಅತಿ ಹೆಚ್ಚಿನ ಪ್ರಗತಿಯಾಗಿದೆ ಹಾಗೂ ಆಡಳಿತ ವೆಚ್ಚದಲ್ಲಿ ಮಿತವ್ಯಯ ಕೂಡ ಸಾಧಿಸಲಾಗಿದೆ ಎಂದರು.
ಪಕ್ಕದ ಬಯಲುಸೀಮೆ ಪ್ರದೇಶಾಭಿವೃದ್ದಿ ಮಂಡಳಿಯೊಂದಿಗೆ ಹೋಲಿಸಿದರೆ ಕಳೆದ 2020-21 ರಲ್ಲಿ ಬಯಲುಸೀಂಎ ಪ್ರದೇಶಾಭಿವೃದ್ದಿ ಮಂಡಳಿಯಲ್ಲಿ ಒಟ್ಟು 1748 ಕಾಮಗಾರಿಗಳಿಗೆ ಕೇವಲ 184 ಕಾಮಗಾರಿ ಪೂರ್ಣಗೊಳಿಸಿ ಶೇ.1023 ಪ್ರಗತಿ ಸಾಧಿಸಿದರೆ ನಾವು ಶೇ.53.54 ಯಷ್ಟು ಗರಿಷ್ಟ ಸಾಧನೆ ಮಾಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಅನುದಾನದ ಲಭ್ಯತೆ ಇಲ್ಲದಿರುವುದರಿಂದ ಸರ್ಕಾರದಿಂದ ಹೆಚ್ಚುವರಿ ಅನುದಾನವನ್ನು ಪಡೆದು ಹೊಸ ಕಾರ್ಯಕ್ರಮಗಳ ಕ್ರಿಯಾ ಯೋಜನೆ ರೂಪಿಸಬೇಕಿದೆ. ಕಳೆದ ಸಾಲಿನಲ್ಲಿ ಸಹ ಮುಖ್ಯಮಂತ್ರಿಯವರು ರೂ.10 ಕೋಟಿ ವಿಶೇಷ ಅನುದಾನ ಪಡೆದು ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ.
2021-22 ನೇ ಸಾಲಿನಲ್ಲಿ 652 ಮುಂದುವರೆದ ಕಾಮಗಾರಿಗಳನ್ನು ಮುಂದುವರೆಸಲು ಸರ್ಕಾರ ಅನುಮೋದನೆ ನೀಡಿದ್ದು, ಆಗಸ್ಟ್ ಅಂತ್ಯಕ್ಕೆ 112 ಕಾಮಗಾರಿ ಪೂರ್ಣಗೊಳಿಸಿ ರೂ.747.52 ಲಕ್ಷ ವೆಚ್ಚ ಭರಿಸಲಾಗಿದೆ. ಬಾಕಿ 540 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು ಎಲ್ಲಾ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪುರ್ಣಗೊಳಿಸುವಂತೆ ಗಡುವು ನೀಡಲಾಗಿದೆ ಎಂದರು.
ಸಭೆಯಲ್ಲಿ ಮಾಯಕೊಂಡ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಪ್ರೊ.ಲಿಂಗಣ್ಣ, ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್, ಶಾಸಕರು, ನಾಮನಿರ್ದೇಶಿತ ಸದಸ್ಯರು, ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಇತರೆ ಜಿಲ್ಲೆಯ ಜಿಲ್ಲಾಧಿಕಾರಿಗಳು, ಮಂಡಳಿಯ ಕಾರ್ಯದರ್ಶಿ ಕೆ.ಎಸ್.ಮಣಿ, ಇತರೆ ಅಧಿಕಾರಿಗಳು, ಇದ್ದರು.

LEAVE A REPLY

Please enter your comment!
Please enter your name here