ಮಕ್ಕಳಿಗೆ ಕಾನೂನು ಅರಿವು ಅಗತ್ಯ

0
134

ಗದಗ ನ.7 : ಮಕ್ಕಳು ತಮ್ಮ ಹಕ್ಕು ಕರ್ತವ್ಯಗಳನ್ನು ಅರ್ಥಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಮಕ್ಕಳಿಗಾಗಿ ಇರುವಂತಹ ಕಾನೂನುಗಳ ಜ್ಞಾನವನ್ನು ಅವರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‍ಜಿ. ಸಲಗರೆ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ಸರಕಾರಿ ಬಾಲಕರ/ಬಾಲಕಿಯರ ಬಾಲ ಮಂದಿರ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿ.6 ರಂದು ಗದಗ ಸರಕಾರಿ ಬಾಲಕರ ಬಾಲ ಮಂದಿರದಲ್ಲಿ ಜರುಗಿದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಿರ್ಣರಾದ ಬಾಲಕಿಯರಿಗೆ ಬಹುಮಾನ ವಿತರಣೆ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ಬಾಲನ್ಯಾಯ ಮಂಡಳಿ ಅಧ್ಯಕ್ಷ ಎ.ಎಸ್. ಬಡಿಗೇರ ಮಾತನಾಡಿ, ಮಕ್ಕಳು ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ತಾವೆಲ್ಲರೂ ಹೊಸ ಹೊಸ ವಿಚಾರಗಳಿಂದ ಮುನ್ನುಗ್ಗಿ ಉನ್ನತ ವ್ಯಾಸಂಗ ಪಡೆದು ಬೆಳೆಯಬೇಕು. ಮಕ್ಕಳನ್ನು ಪ್ರೇರಿಪಿಸುವುದಕ್ಕಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ ಮಾತನಾಡುತ್ತಾ ಮಕ್ಕಳೆಲ್ಲರು ಓದಿ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಬಾಲಮಂದಿರದ ಮಕ್ಕಳು ಪ್ರತಿವರ್ಷ 10 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ 500 ರೂ ಹಾಗೂ ವಿಶೇಷವಾಗಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ತಮ್ಮ ತಂದೆಯ ಹೆಸರಿನಲ್ಲಿ 500 ರೂ ಪ್ರೋತ್ಸಾಹದಾಯಕ ನಗದು ಪುರಸ್ಕಾರ ನೀಡುವುದಾಗಿ ಘೋಷಣೆ ಮಾಡಿದರು. ಬಾಲನ್ಯಾಯ ಮಂಡಳಿಯ ಸದಸ್ಯ ಜಿ.ಸಿ. ರೇಷ್ಮಿ ಮಾತನಾಡುತ್ತ ಬಾಲನ್ಯಾಯ ಕಾಯ್ದೆ ಅಧಿನಿಯಮದಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ತಮ್ಮ ಹಕ್ಕು ಕರ್ತವ್ಯಗಳನ್ನು ಮನವರಿಕೆ ಮಾಡಿಕೊಂಡು ಉನ್ನತ ವ್ಯಾಸಂಗ ಪಡೆದು ಮಕ್ಕಳೆಲ್ಲರೂ ಮುಖ್ಯವಾಹಿನಿಯಲ್ಲಿರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಎಸ್. ಗೋಟಖಿಂಡಿ ಮಾತನಾಡಿ, ಬಾಲಮಂದಿರದಲ್ಲಿ ಇರುವ ಮೂಲಭೂತ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು, ಕರಕುಶಲತೆಯನ್ನು ಹೊರತಂದು ಉನ್ನತ ಬೆಳವಣಿಗೆಗೆ ಎಲ್ಲರೂ ಕಾರ್ಯನಿರ್ವಹಿಸಲು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯರುಗಳಾದ ಅನ್ನಪೂರ್ಣ ಗಾಣಿಗೇರ, ಸಿ.ಎಸ್. ಬೊಮ್ಮನಹಳ್ಳಿ, ಬಾಲನ್ಯಾಯ ಮಂಡಳಿ ಸದಸ್ಯರಾದ ಜಿ.ಸಿ.ರೇಷ್ಮಿ, ಭಾರತಿ ಶಲವಡಿ, ಸವಿತಾ ಎ. ಬಡಿಗೇರ, ವಕೀಲರಾದ ಶ್ರೀಮತಿ ಅಕ್ಕಿ, ಹಾಗೂ ಬಾಲಮಂದಿರದ ಅಧೀಕ್ಷಕರುಗಳು, ಸಿಬ್ಬಂದಿ ವರ್ಗದವರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವರ್ಗದವರು, ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳು, ಮಕ್ಕಳು, ಪಾಲಕರು/ ಪೋಷಕರು ಉಪಸ್ಥಿತರಿದ್ದರು. ಬಾಲಮಂದಿರದ ಮಕ್ಕಳು ಪ್ರಾರ್ಥಿಸಿದರು, ಲಕ್ಷ್ಮೀ ಬಾಗೇವಾಡಿ ಸ್ವಾಗತಿಸಿದರು, ಮಲ್ಲಪ್ಪ ಹೊಸಳ್ಳಿ ನಿರೂಪಿಸಿ, ಆಯ್. ಕೆ. ಮಣಕವಾಡ ವಂದಿಸಿದರು.

LEAVE A REPLY

Please enter your comment!
Please enter your name here