ಜಿಲ್ಲಾ ಖನಿಜ ಪ್ರತಿಷ್ಠಾನ ಪ್ರಗತಿ ಪರಿಶೀಲನಾ ಸಭೆ, ಡಿಎಂಎಫ್ ದತ್ತಿ ನಿಧಿ ಅಡಿ ಕೋವಿಡ್‍ಗಾಗಿ 30 ಕೋಟಿ ರೂ. ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ: ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್

0
117

ಬಳ್ಳಾರಿ,ಸೆ.09: ಕೋವಿಡ್ ನಿಯಂತ್ರಣ ಕಾರ್ಯಗಳಿಗಾಗಿ 30 ಕೋಟಿ ರೂ. ಅವಶ್ಯಕತೆ ಇದ್ದು,ದತ್ತಿ ನಿಧಿ ಕಾಯ್ದರಿಸುವಿಕೆ ರೂಪದಲ್ಲಿ(ಸಂಗ್ರಹದ ಮೊತ್ತದಲ್ಲಿ ಶೇ.10ರಲ್ಲಿ ಕಾಯ್ದಿರಿಸುವಿಕೆ)ರುವ ಹಣದಲ್ಲಿ 30 ಕೋಟಿ ರೂ.ಗಳನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಪ್ರವಾಸೋದ್ಯಮ,ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬಳ್ಳಾರಿ/ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ(ಡಿಎಂಎಫ್) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2016-17ರಿಂದ 2021-22ರವರೆಗೆ ಅನುಮೋದನೆಯಾಗಿರುವ ಒಟ್ಟು 6 ಕ್ರಿಯಾಯೋಜನೆಯ 2677 ಕೋಟಿ ರೂ.ಗಳಲ್ಲಿ ಶೇ.10ರಷ್ಟು ದತ್ತಿ ನಿಧಿ ಅಂದರೇ 320 ಕೋಟಿ ರೂ.ಸರಕಾರದಲ್ಲಿ ಕಾಯ್ದಿರಿಸಲಾಗಿದ್ದು,ಅದರಲ್ಲಿನ ಹಣವನ್ನು ತುರ್ತು ಬಳಕೆಗಾಗಿ ಜಿಲ್ಲೆಯ ಆರೋಗ್ಯದ ಹಿತದೃಷ್ಟಿಯಿಂದ ಬಿಡುಗಡೆ ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿ ಈ ಕುರಿತು ಮುಖ್ಯ ಕಾರ್ಯದರ್ಶಿಗಳೊಂದಿಗೆ ನಾನು ಚರ್ಚಿಸುವೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರಕಾರಗಳ ನಿರ್ದೇಶನದಂತೆ ಅಗತ್ಯವಿರುವ ಕಾಮಗಾರಿಗಳನ್ನು ನಿರ್ವಹಿಸುವ ಹಾಗೂ ಅವಶ್ಯಕ ಸಾಮಗ್ರಿಗಳಾದ ವೆಂಟಿಲೇಟರ್‍ಗಳು,ಜನರೇಟರ್‍ಗಳನ್ನು, ಅವಶ್ಯಕ ಔಷಧಿಗಳನ್ನು ಖರೀದಿಸಲು ಹಾಗೂ ಆಕ್ಸಿಜನ್ ಸೌಲಭ್ಯ ಒದಗಿಸುವಿಕೆ, ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯಕೀಯ ಸಿಬ್ಬಂದಿ,ತಾಂತ್ರಿಕ-ತಾಂತ್ರಿಕೇತರ ಸಿಬ್ಬಂದಿಗಳನ್ನು ಹೊರಗುತ್ತಿಗೆ ಅಡಿ ನೇಮಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ವಿವರಿಸಿದರು.
ಈ ಉದ್ದೇಶಗಳಿಗಾಗಿ 31.30ಕೋಟಿ ರೂ.ಕಾಯ್ದರಿಸಿಲಾಗಿತ್ತು. ಕೋವಿಡ್ ನಿಯಂತ್ರಣಕ್ಕಾಗಿ ಇಲ್ಲಿಯವರೆಗೆ ಡಿಎಂಎಫ್ ಅಡಿ 4.19 ಕೋಟಿ ರೂ. ಅನುದಾನ ವಿನಿಯೋಗಿಸಲಾಗಿದೆ. ಕಾಯ್ದರಿಸಿದ ಮೊತ್ತಕ್ಕಿಂತ 10.68ಲಕ್ಷ ರೂ.ಗಳ ಅಧಿಕ ವೆಚ್ಚವಾಗಿರುತ್ತದೆ. ಹೆಚ್ಚುವರಿಯಾಗಿ ವಿನಿಯೋಗಿಸಿದ ಮೊತ್ತಕ್ಕೆ ಅನುದಾನ ಕಾಯ್ದಿರಸಬೇಕಾಗಿರುತ್ತದೆ. ಈಗಾಗಲೇ ನೇಮಿಸಿಕೊಂಡಿರುವ ಸಿಬ್ಬಂದಿಗಳನ್ನು ಮುಂದುವರಿಸಲಾಗಿದ್ದು,ಅವರ ವೇತನಕ್ಕಾಗಿ ಪ್ರತಿ ಮಾಹೆ 2.30 ಕೋಟಿ ರೂ.ಅವಶ್ಯಕತೆ ಇರುವುದನ್ನು ಸಭೆಯ ಗಮನಕ್ಕೆ ತಂದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಮುಂದಿನ 9 ತಿಂಗಳಿಗೆ 20 ಕೋಟಿ ರೂ.ಅಗತ್ಯವಿದೆ. ಕೋವಿಡ್-3ನೇ ಅಲೆ ನಿಯಂತ್ರಣಕ್ಕಾಗಿ ಅವಶ್ಯಕ ಔಷಧಿಗಳ ಖರೀದಿಸಲು 5 ಕೋಟಿ ರೂ.ಅನುದಾನ ಕಾಯ್ದಿರಿಸಬೇಕಿದೆ. ಈ ಎಲ್ಲ ಉದ್ದೇಶಗಳಿಗಾಗಿ 30ಕೋಟಿ ರೂ. ಅವಶ್ಯಕತೆ ಇದೆ ಎಂದು ಅವರು ವಿವರಿಸಿದರು.
ದತ್ತಿ ನಿಧಿಯಿಂದ ಹಣ ಬಿಡುಗಡೆಯಾಗದಿದ್ದಲ್ಲಿ ಇಲ್ಲಿಯವರೆಗೆ ಪ್ರಾರಂಭವಾಗದೇ ಇರುವ ಕಾಮಗಾರಿಗಳಿಗಾಗಿ ಕಾಯ್ದಿರಿಸಿದ ಮೊತ್ತದಿಂದ ಹಣ ಒದಗಿಸಲು ತೀರ್ಮಾನಿಸಲಾಯಿತು.
ಡಿಎಂಎಫ್‍ಗಾಗಿ ಪ್ರತ್ಯೇಕ ಆಡಳಿತಾತ್ಮಕ ಮತ್ತು ತಾಂತ್ರಿಕ ವಿಂಗ್‍ಗಾಗಿ ಸರಕಾರಕ್ಕೆ ಪ್ರಸ್ತಾವನೆ: ಜಿಲ್ಲಾ ಖನಿಜ ನಿಧಿ ಅಡಿಯ ಕಾಮಗಾರಿಗಳು ನಿಗದಿಪಡಿಸಿದ ಅವಧಿಯಲ್ಲಿ ಪೂರ್ಣಗೊಳ್ಳಲು ಮತ್ತು ಅತ್ಯಂತ ಗುಣಮಟ್ಟದಿಂದ ಕೂಡಿರಲು ಡಿಎಂಎಫ್‍ಗಾಗಿಯೇ ನುರಿತ ಎಂಜನಿಯರ್‍ಗಳು ಒಳಗೊಂಡ ಪ್ರತ್ಯೇಕ ವಿಂಗ್ ಅಗತ್ಯವಿದೆ. ಇದರ ಜೊತೆಗೆ ಪರಿಣಾಮಕಾರಿ ಆಡಳಿತಕ್ಕಾಗಿಯೂ ವಿಂಗ್ ಅವಶ್ಯವಿದೆ. ಪ್ರತ್ಯೇಕ ವಿಂಗ್‍ಗಾಗಿ ಅನುಮತಿ ನೀಡುವಂತೆ ಕೋರಿ ಸರಕಾರಕ್ಕೆ ಪ್ರಸ್ತಾವನೆಯನ್ನು ವಾರದೊಳಗೆ ಸಲ್ಲಿಸುವಂತೆ ಸಚಿವ ಆನಂದಸಿಂಗ್ ಅವರು ಸೂಚನೆ ನೀಡಿದರು.
ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಅನುಮತಿ ಕೊಡಿಸಲಾಗುವುದು ಈ ಸಿಬ್ಬಂದಿಯ ಸಂಬಳವನ್ನು ಡಿಎಂಎಫ್‍ನಿಂದ ಭರಿಸಲಾಗುವುದು ಎಂದು ಹೇಳಿದ ಅವರು ಕೆಎಂಇಆರ್‍ಸಿ ಅನುದಾನ ಬಂದಲ್ಲಿ ಮತ್ತಷ್ಟು ಅನುಕೂಲವಾಗಲಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರಾದ ಕೆ.ಸಿ.ಕೊಂಡಯ್ಯ,ತುಕಾರಾಂ, ಅಲ್ಲಂವೀರಭದ್ರಪ್ಪ, ಸೋಮಶೇಖರರೆಡ್ಡಿ,ನಾಗೇಂದ್ರ,ಗಣೇಶ ಮತ್ತು ಸೋಮಲಿಂಗಪ್ಪ ಅವರು ಹೇಳಿದರು.
2677 ಕೋಟಿ ರೂ. ಕ್ರಿಯಾಯೋಜನೆ 2351 ಕಾಮಗಾರಿಗಳಿಗೆ ಅನುಮೋದನೆ: ಜಿಲ್ಲೆಯಲ್ಲಿನ ಪ್ರತ್ಯಕ್ಷ ಹಾಗೂ ಪರೋಕ್ಷ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಡಿಎಂಎಫ್ ಅಡಿ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
2016-17ರಿಂದ 2021-22ರವರೆಗೆ ಒಟ್ಟು 6 ಹಂತದ ಕ್ರಿಯಾಯೋಜನೆ ಮಂಜೂರಾಗಿದ್ದು, ಕ್ರಿಯಾಯೋಜನೆಗಾಗಿ 267794.76ಲಕ್ಷ ರೂ. ಪರಿಗಣಿಸಲಾಗಿದ್ದು, ದತ್ತಿ ನಿಧಿ ಶೇ.10 ಮತ್ತು ಆಡಳಿತಾತ್ಮಕ ವೆಚ್ಚಕ್ಕಾಗಿ ಶೇ.5ರಷ್ಟು ಕಾಯ್ದಿರಿಸಿ 2,222 ಕೋಟಿ ರೂ.ಗಳ ವೆಚ್ಚದಲ್ಲಿ 2351 ಕಾಮಗಾರಿಗಳಿಗೆ ಅನುಮೋದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಲಪಾಟಿ ವಿವರಿಸಿದರು.
605 ಕಾಮಗಾರಿಗಳು ಮುಕ್ತಾಯಗೊಂಡಿದ್ದು 604 ಕಾಮಗಾರಿಗಳು ಪ್ರಗತಿಯಲ್ಲಿವೆ. 243 ಕಾಮಗಾರಿಗಳು ಆಡಳಿತಾತ್ಮಕ ಮಂಜೂರಾಗಿದ್ದು ಟೆಂಡರ್ ಕರೆಯುವ ಹಂತದಲ್ಲಿವೆ. 124 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ವಿವರಿಸಿದ ಅವರು ಇದುವರೆಗೆ 52896.71ಲಕ್ಷ ರೂ.ಬಿಡುಗಡೆ ಮಾಡಲಾಗಿದೆ ಎಂದರು.
ಕಾಮಗಾರಿ ವಿಳಂಬವಾಗಿ ಮುಗಿಸಿದಕ್ಕೆ ಗುತ್ತಿಗೆದಾರರಿಗೆ ದಂಡ: ಡಿಎಂಎಫ್ ಅಡಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಮುಗಿಸದ ಗುತ್ತಿಗೆದಾರರಿಗೆ ಪ್ರತಿದಿನಕ್ಕೆ ಗುತ್ತಿಗೆದಾರರ ಮೊತ್ತಕ್ಕೆ ಶೇ.0.1ರಷ್ಟು ಅಥವಾ ಗುತ್ತಿಗೆ ಮೊತ್ತಕ್ಕೆ ಶೇ.10ರಷ್ಟು ಈ ಎರಡರಲ್ಲಿ ಯಾವುದು ಕಡಿಮೆಯೋ ಅಷ್ಟು ದಂಡ ವಿಧಿಸಲಾಗಿದೆ. ಈ ರೀತಿ 09 ಕಾಮಗಾರಿಗಳಲ್ಲಿ ದಂಡ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ವಿವರಿಸಿದರು.
ಕ್ರಿಯಾಯೋಜನೆಯಲ್ಲಿ ಕಾಮಗಾರಿಗಾಗಿ ಕಾಯ್ದಿರಿಸಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ಟೆಂಡರ್ ಅವಾರ್ಡ್ ಮಾಡಲಾಗಿದೆ ಈ ಕುರಿತು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದ 2 ಪ್ರಕರಣಗಳಿದ್ದು,ಅವರಿಗೆ ಕಾಯ್ದಿರಿಸಿದ ಮೊತ್ತವನ್ನಷ್ಟೇ ಅಂತಿಮ ಬಿಲ್ ಪಾವತಿಸುವ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು.
ಈ ರೀತಿಯಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡು ಮಾಡುವಂತೆ ಕಟ್ಟುನಿಟ್ಟಾಗಿ ಎಂಜನಿಯರ್‍ಗಳಿಗೆ ಸೂಚಿಸಲು ಸಚಿವ ಆನಂದಸಿಂಗ್ ನಿರ್ದೇಶನ ನೀಡಿದರು.
ಜನಪ್ರತಿನಿಧಿಗಳಿಂದ ಹಾಗೂ ಅನುಷ್ಠಾನಾಧಿಕಾರಿಗಳಿಂದ ಹೊಸ ಕಾಮಗಾರಿಗಳನ್ನು ಪ್ರಸ್ತಾಪಿಸಿ ಅನುದಾನ ಕಾಯ್ದಿರಿಸುವಂತೆ ಕೋರಿ ಪ್ರಸ್ತಾವನೆಗಳು ಸಲ್ಲಿಕೆಯಾಗಿರುವುದನ್ನು ಗಮನಿಸಲಾಗಿದೆ, ಆದರೇ 06 ಕ್ರಿಯಾಯೋಜನೆಗಳ ಅವಧಿ 2023ರವರೆಗಿರುವುದರಿಂದ ಮುಂದಿನ 2 ವರ್ಷಗಳವರೆಗೆ ಡಿಎಂಎಫ್ ಅಡಿ ಹೊಸ ಕಾಮಗಾರಿಗಳನ್ನ ಪ್ರಸ್ತಾಪಿಸಲು ಮತ್ತು ಅನುದಾನ ಕಾಯ್ದಿರಿಸಲು ಯಾವುದೇ ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.
ಸಂಡೂರು ಶಾಸಕ ಈ.ತುಕಾರಾಂ ಅವರು ಮಾತನಾಡಿ, ಸಂಡೂರು ಪ್ರತ್ಯಕ್ಷ ಗಣಿಬಾಧೀತ ತಾಲೂಕಾಗಿದ್ದು,ಇಲ್ಲಿನ ಜನರು ಬಹಳಷ್ಟು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಡಿಎಂಎಫ್ ನಿಯಮಾವಳಿ ಅನುಸಾರ ಅನುದಾನ ನೀಡಿಕೆ ಮತ್ತು ಕಾಮಗಾರಿಗಳು ಒದಗಿಸುವಿಕೆಯಲ್ಲಿ ವಿಶೇಷ ಒತ್ತು ನೀಡುವಂತೆ ಪ್ರಸ್ತಾಪಿಸಿದರು.
ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂವೀರಭದ್ರಪ್ಪ, ಸೋಮಶೇಖರರೆಡ್ಡಿ, ನಾಗೇಂದ್ರ, ಗಣೇಶ ಮತ್ತು ಸೋಮಲಿಂಗಪ್ಪ ಅವರು ಮಾತನಾಡಿ ಅನೇಕ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಅನುಷ್ಠಾನಾಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here