ಗಜಲ್

0
129

ಕೆಂಪು ಸೂರ್ಯ ಚರಮ ಗೀತೆ ಹಾಡುವ ಕಾಲ ದೂರವಿಲ್ಲ
ಆಕ್ರೋಶ ಸಾಮ್ರಾಜ್ಯ ನುಂಗುವ ದೈತ್ಯ ತೆರೆಯಾಗುವ ಕಾಲ ದೂರವಿಲ್ಲ

ತುಳಿವ ಹೆಜ್ಜೆ ಸೀಳಿ ಬರುವ ಮೊನಚು ಮೊಳೆ ಅವರು
ತುಕ್ಕು ಉದುರಿ ಸಾಣೆಗೊಂಡರೆ ತರಿದುಹಾಕುವ ಕಾಲ ದೂರವಿಲ್ಲ

ಸರಳುಗಳ ಬೆಸುಗೆ ಸಡಿಲುಗೊಂಡರೆ ದುರ್ದೈವಕೆ
ರೆಕ್ಕೆಮುರಿದ ಹಕ್ಕಿ ಡೇಗೆಯಾಗಿ ಕುಕ್ಕಿಹಾಕುವ ಕಾಲ ದೂರವಿಲ್ಲ

ಒಗ್ಗಟ್ಟಿನ ಹೂಂಕಾರ ಕಿವಿಗೆ ಕಾದ ಸೀಸ ಹೊಯ್ದಾವು
ಕಿಚ್ಚುಗಣ್ಣಲಿ ಡುರು ಡುರುಗರೆದುಬರುವ ಕಾಲ ದೂರವಿಲ್ಲ

ಕಾಲ್ ಸಪ್ಪಳಕೆ ಎದೆ ಝಲ್ಲೆಂದು ಮೈ ಬೆವರಿಬಿಟ್ಟಾತು
ಅಯ್ಯಾ ಎಂದವರು ಎಲವೋ ಎಂದು ಅಬ್ಬರಿಸಿಬರುವ ಕಾಲ ದೂರವಿಲ್ಲ

ಎದೆಗರ್ಭದ ಲಾವ ಆರಿಸಲು ಕೊಂಚ ತೇವ ಉಳಿಸಿಕೊಳ್ಳಿ
ಒಡೆದ ಗಾಜೆಲ್ಲ ವಜ್ರದ ಚೂರಾಗಿ ತಿವಿಯಬರುವ ಕಾಲ ದೂರವಿಲ್ಲ

ಅವರನು ಸುಡುವ ಬೆಂಕಿ ನಿಮಗೆ ಜ್ಯೋತಿಯಾಯ್ತಲ್ಲ
ತಾಯ್ನೆಲ ಮಾರುವ ದಲ್ಲಾಳಿಗಳ ಬೂದಿಮಾಡುವ ಕಾಲ ದೂರವಿಲ್ಲ

ಜ್ಯೋತಿ ಬಿ ದೇವಣಗಾವ.

LEAVE A REPLY

Please enter your comment!
Please enter your name here