ವಿಶ್ವ ವಿಕಲಚೇತನರ ದಿನಾಚರಣೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುವಂತಾಗಲಿ : ಡಾ.ಆನಂದ ಕೆ

0
207

ಗದಗ . ಡಿ.೩: ವಿಕಲಚೇತನವಿರುವ ಎಲ್ಲ ಫಲಾನುಭವಿಗಳಿಗೂ ಸಹ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ಯುನಿಕ್ ಗುರುತಿನ ಪತ್ರ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ ಅವರು ಹೇಳಿದರು.

ಗುರುವಾರ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗದಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮತ್ತು ವಿಕಲ ಚೇತನರ ಕ್ಷೇತ್ರದಲ್ಲಿ ಸೇವಾನಿರತ ಸಂಘ ಸಂಸ್ಥೆಗಳು ಇವರ ಸಂಯುಕ್ತ ಅಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನು ಒಂದು ತಿಂಗಳಲ್ಲಿ ಜಿಲ್ಲೆಯ ಎಲ್ಲ ವಿಕಲಚೇತನರಿಗೂ ಸಹ ಸರ್ಕಾರ ನೀಡುತ್ತಿರುವ ಕಾರ್ಡ ವಿತರಿಸಲಾಗುವುದು. ಈ ಕಾರ್ಡನಿಂದ ಸುಲಭವಾಗಿ ಅವರನ್ನು ಗುರುತಿಸಿ ಸೌಲಭ್ಯಗಳನ್ನು ನೀಡಲು ಸಹಕಾರಿಯಾಗಲಿದೆ ಎಂದರು. ಅಲ್ಲದೇ ೨೦೧೬ ರಲ್ಲಿ ವಿಕಲಚೇತನರ ಹಕ್ಕುಗಳ ಕುರಿತು ಸರ್ಕಾರ ಕಾಯ್ದೆ ರೂಪಿಸಿದೆ. ಇದರಲ್ಲಿ ಅವರಿಗೆ ಇರುವ ಹಕ್ಕುಗಳ ವಿವರ ನೀಡಲಾಗಿದ್ದು, ಇದರಿಂದ ಅರ್ಹರೆಲ್ಲರಿಗೂ ಸೌಲಭ್ಯಗಳು ದೊರಕುವಂತಾಗಲಿ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿರುವ ವಿಕಲಚೇತನರು ದುರ್ಬಲರಲ್ಲ ಸಬಲರು, ಅವರಿಗೆ ಕಾನೂನುಗಳಲ್ಲಿರುವ ಹಕ್ಕುಗಳ ಮತ್ತು ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸೌಲತ್ತುಗಳನ್ನು ತಲುಪಿಸಬೇಕು. ಸರ್ಕಾರದ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಇಲಾಖೆಗಳು ಶ್ರಮಿಸಿದಾಗ ಮಾತ್ರ ವಿಕಲಚೇತನರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ವಿಕಲಚೇತನರು ಆತ್ಮ ವಿಶ್ವಾಸದಿಂದ ಮುನ್ನಡೆದು ಸಮಾಜದ ಮುಖ್ಯವಾಹಿನಿಗೆ ತಲುಪುವಂತಾಗಲಿ ಎಂದು ಹೇಳಿದರು.

ಜಿಲ್ಲೆಯ ವಿಕಲಚೇತನರಿಗೆ ವಿಷೇಶ ಯೋಜನೆಗಳನ್ನು ರೂಪಿಸಿ, ಎಲ್ಲರಿಗೂ ಸೌಲಭ್ಯಗಳು ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಇಲಾಖೆಯು ಕಾರ್ಯನಿರ್ವಹಿಸಬೇಕು. ಜಗತ್ತಿನಲ್ಲಿ ಅನೇಕ ವಿಕಲಚೇತನರು ಅಸಾಮಾನ್ಯ ಸಾಧನೆಗಳನ್ನು ಮಾಡಿರುವ ಉದಾಹರಣೆಗಳಿವೆ. ವಿಕಲಚೇತನರು ಸಹ ಯಾರಿಗೂ ಕಡಿಮೇ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಎಲ್ಲರಂತೆ ಅವರು ಸಮಾಜದಲ್ಲಿ ಸಮಾನವಾಗಿ ಸಹಬಾಳ್ವೆ ನಡೆಸುವಂತಾಗಲಿ. ಇದಕ್ಕೆ ಸರ್ಕಾರದ ಯೋಜನೆಗಳ ಸದ್ಬಳಕೆ ಅಗತ್ಯವಾಗಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ವಿಕಲಚೇತನರು ನಿರ್ಲಕ್ಷಕ್ಕೆ ಒಳಗಾದವರು ಅವರನ್ನು ಸಮಾನವಾಗಿ ಕಂಡಾಗ ಮಾತ್ರ ಸಮಾನತೆ ಸಾಧ್ಯ. ವಿಕಲಚೇತನರಿಗೆ ಕಾನೂನು-ಕಾಯ್ದೆಗಳ ಕುರಿತು ಮಾಹಿತಿ ಇರುವುದು ಅನಿವಾರ್ಯ ಮತ್ತು ಅವಶ್ಯವಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕಾನೂನುಗಳ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಮಾಡುತ್ತಿದೆ ಅವುಗಳ ಸದುಪಯೋಗ ಪಡೆದು ಎಲ್ಲರೂ ಜಾಗೃತರಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣ ಅಧಿಕಾರಿ ಕೆ ಮಹಾಂತೇಶ್ ಮಾತನಾಡಿ, ೨೦೧೧ ರ ಜನಗಣತಿಯಂತೆ ಗದಗ ಜಿಲ್ಲೆಯಲ್ಲಿ ೨೮೩೫೦ ವಿಕಲಚೇತನರಿದ್ದಾರೆ. ವಿಕಲಚೇತನರು ಖಿನ್ನತೆಯಿಂದ ಹೊರಬಂದು ಶೈಕ್ಷಣಿಕವಾಗಿ ಜ್ಞಾನ ಹೊಂದಿ, ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರವು ವಿಕಲಚೇತನರಿಗೆ ಸ್ವಯಂ ಉದ್ಯೋಗಕ್ಕಾಗಿ ೫೦,೦೦೦ ರೂ ಗಳ ಸಹಾಯಧನ ನೀಡುತ್ತಿದೆ, ಅದರಂತೆ ವಿಕಲಚೇತನರನ್ನು ವಿವಾಹವಾದ ವ್ಯಕ್ತಿಗಳಿಗೆ ೫೦,೦೦೦ ರೂ ಪ್ರೋತ್ಸಾಹಧನ ನೀಡುವ ಮೂಲಕ ಅವರು ಸ್ವಾವಲಂಬಿ ಜೀವನಕ್ಕೆ ನೆಲೆ ಕಲ್ಪಿಸುತ್ತಿದೆ. ಹಾಗೂ ಇನ್ನು ಹತ್ತು ಹಲವು ಯೋಜನೆಗಳನ್ನು ವಿಕಲಚೇತನರ ಕಲ್ಯಾಣಕ್ಕಾಗಿ ರೂಪಿಸಿದೆ ಅವುಗಳನ್ನು ಬಳಸಿಕೊಂಡು ಸಮಾಜದಲ್ಲಿ ಸ್ವಾವಲಂಭಿಗಳಾಗಿ ಜೀವಿಸಿ ಎಂದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಸರ್ಕಾರ ನೀಡುತ್ತಿರುವ ಗುರುತಿನ ಪತ್ರ (ಕಾರ್ಡ) ಗಳನ್ನು ಅತಿಥಿಗಳು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ ಸೇರಿದಂತೆ ಜಿಲ್ಲೆಯ ಸೇವಾ ನಿರತ ಸಂಘ-ಸಂಸ್ಥೆಗಳ ಸದಸ್ಯರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಿಬ್ಬಂದಿ ಇತರರು ಇದ್ದರು.

LEAVE A REPLY

Please enter your comment!
Please enter your name here