ಜಾನುವಾರು ಹತ್ಯೆ ನಿಶೇಧ ಕಾಯಿದೆಯನ್ನು ರೈತರು ಏಕೆ ವಿರೋಧಿಸಬೇಕು ? ರೈತ ಮುಖಂಡ ವೀರಸಂಗಯ್ಯ ಅವರ ತರ್ಕ.

0
134

ಮೊದಲನೆಯದಾಗಿ ಇದರಲ್ಲಿ ಕೆಲವು ವಿಷಯಗಳು ಅವೈಜ್ಞಾನಿಕವಾಗಿವೆ. ಕೃಷಿ ಜೊತೆಗೆ ಜಾನುವಾರು ಸಾಕಾಣೆ ಕೂಡಾ ಒಂದು. ರಾಜ್ಯದ ೨೭,೫೦೦ ಗ್ರಾಮಗಳಲ್ಲಿ ಜಾನುವಾರು ಇಲ್ಲದ ಗ್ರಾಮ ಇಲ್ಲವೇ ಇಲ್ಲ. ಇದೊಂದು ಉಪಕಸುಬು. ರೈತರ ಮನೆಗಳಲ್ಲಿ ಆಕಳು ಎಮ್ಮೆ ಎತ್ತು ಸಾಕಾಣೆ ಸಾಮಾನ್ಯ.

ಕೃಷಿಯಲ್ಲಿ ಟ್ರಾಕ್ಟರ್ ಬಳಕೆ ಹೆಚ್ಚಾದಾಗಿನಿಂದ ರಂಟೆ ಕುಂಟೆ ಹೊಡೆಯಲು ಎತ್ತುಗಳ ಬಳಕೆ ಕಡಿಮೆ ಆಗಿದೆ. ಹಾಗಾಗಿ ಮನೆಯಲ್ಲಿ ಗಂಡು ಕರ ಜನಿಸಿದರೆ ಅವುಗಳ ಬಗ್ಗೆ ರೈತರಿಗೆ ಸಹಜವಾಗಿ ನಿರ್ಲಕ್ಷ್ಯ ಬಂದಿದೆ. ಹೆಣ್ಣು ಕರು ಹಾಕಿದರೆ ಮುಂದೆ ಹಾಲು ಉತ್ಪಾದನೆ ಆಗುತ್ತೆ ಎಂದು ಎಲ್ಲರೂ ಕಾಳಜಿವಹಿಸುತ್ತಾರೆ.

ಗಂಡು ಕರುಗಳನ್ನು ಅಥವಾ ಕೋಣಗಳನ್ನು ನಾವು ರೈತರು ಮಾರ್ತಿದ್ವಿ. ಅಲ್ಲಿಂದ ಅವು ಸಹಜವಾಗಿ ಮಾಂಸೋಧ್ಯಮಕ್ಕೆ ಹೋಗ್ತಿದ್ವು. ಈಗ ಹೊಸ ಕಾನೂನಿನ ಪ್ರಕಾರ ೧೩ ವರ್ಷಗಳ ಕಾಲ ಸಾಕಾಣೆ ಮಾಡುವುದು ಕಡ್ಡಾಯ. ಇದರಿಂದ ಉತ್ಪಾದನೆ ಏನೂ ಇಲ್ಲವೆಂದ ಮೇಲೆ ರೈತರಿಗೆ ಆರ್ಥಿಕ ಹೊರೆಯಾಗಲ್ಲವೇ?

ಗಂಡು ಕರುಗಳನ್ನು ಮಾರಿ ಬರುತ್ತಿದ್ದ ನಾಲಕ್ಕು ಕಾಸಿಗೂ ಈ ಕಾನೂನು ಕುತ್ತು ತಂದಿದೆ. ಜೊತೆಗೆ ೧೩ ವರ್ಷಗಳ ಕಾಲ ಸಾಕಾಣೆ ಮಾಡುವ ಹೊರೆಯೂ ರೈತನ ಮೇಲೆ ಬಿದ್ದಂತಾಯ್ತು. ಇನ್ನು ಗೋಶಾಲೆಗಳಿಗೆ ಕಳಿಸೋಕೆ ಗೋಶಾಲೆಗಳೇ ಇಲ್ಲ.
ಇದೀಗ ಇವರದ್ದೇ ಕಾನೂನಿನ ಪ್ರಕಾರ ೧೩ ವರ್ಷ ದಾಟಿದ ರಾಸುಗಳು ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿವೆ. ಈಗ ಅವುಗಳನ್ನು ಏನು ಮಾಡಬೇಕೆಂಬ ಪ್ರಸ್ತಾವ ಈ ಕಾಯಿದೆಯಲ್ಲಿಲ್ಲ.

ರೈತರ ಮನೆಗಳಲ್ಲಿ ಆಕಳು ಗೊಡ್ಡ ಬಿದ್ದಗ್ಲೂ ಮಾರಾಟ ಮಾಡುವುದು ರೂಢಿ. ಅವುಗಳನ್ನು ಮಾರಿದ ನಂತರ ಹಾಲು ಕೊಡುವ ಅಥವಾ ಗಬ್ಬ ಆಗಿರುವ ರಾಸುಗಳನ್ನು ಕೊಳ್ಳುತ್ತೇವೆ. ಈಗಿನ ಕಾನೂನಿನ ಪ್ರಕಾರ ಮಾರುವವ ಮತ್ತು ಕೊಳ್ಳುವವ ಪಶುಸಂಗೋಪನೆ ಇಲಾಖೆಯ ಅನುಮತಿ ಪಡೆಯಬೇಕು. ಆ ಕೆಲಸ ಮಾಡಲು ರೈತರು ಊರಿಂದೂರಿಗೆ ಅಲೆಯಬೇಕಾಗುತ್ತೆ. ಇದು ಪ್ರಾಕ್ಟಿಕಲ್ ಪ್ರಾಬ್ಲಮ್ ಅಲ್ಲವೇ? ಎಂದು ಪ್ರಶ್ನಿಸುತ್ತಾರೆ ಜಿ.ಎಂ.ವೀರಸಂಗಯ್ಯ.

ರೈತರ ಆರ್ಥಿಕ ಸ್ಥಿತಿ ಮೊದಲೇ ಕುಸಿದು ಬಿದ್ದಿರುವಾಗ ಈ ಕಾನೂನು ರೈತರನ್ನು ಇನ್ನಷ್ಟು ಸಮಸ್ಯೆಗಳಿಗೆ ದೂಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಕರ್ನಾಟಕದಲ್ಲಿ ೮,೨೦,೦೦೦ ರೈತರು ಹಾಲು ಉತ್ಪಾದಕರ ಸಂಘಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಒಟ್ಟು ೧೪ ಕೇಂದ್ರಗಳ ಮೂಲಕ ಪ್ರತಿ ದಿನ ೭೯ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗ್ತಿದೆ. ಕೆ.ಎಂ.ಎಫ್ ನ ಒಂದು ವರ್ಷದ ವಹಿವಾಟು ೨೦ ಸಾವಿರ ಕೋಟಿ ರೂಗಳಿದೆ. ಇಷ್ಟೆಲ್ಲಾ ವಹಿವಾಟು ನಡೆಯುತ್ತಿರುವುದು ಸಣ್ಣ ರೈತರಿಂದಲೇ ಎಂಬುದು ತಿಳಿಯಬೇಕಿದೆ. ಈಗ ಇಷ್ಟೂ ರೈತ ಕುಟುಂಬಗಳ ಮೇಲೆ ಅನುತ್ಪಾದಕವಾದ ರಾಸುಗಳನ್ನು ಸಾಕುವ ಹೊರೆ ಬೀಳುತ್ತದೆ.
ಈ ಕಾನೂನಿನಲ್ಲಿ ೧೩ ವರ್ಷ ಮೇಲ್ಪಟ್ಟ ಹಸುಗಳನ್ನು ಏನು ಮಾಡಬೇಕೆಂಬ ಸ್ಪಷ್ಟ ಸೂಚನೆ ಇಲ್ಲ. ಗೋಶಾಲೆ ಕೊಡಿ ಎನ್ನುತ್ತೀರಿ. ಎಲ್ಲಿವೆ ಗೋಶಾಲೆ. ? ಗೋಶಾಲೆಗೆ ಕೊಡುವುದಾದರೆ ಉಚಿತವಾಗಿ ಕೊಡಬೇಕೆ? ಮುದಿ ದನವಾದರೂ ಅದು ಅರ್ಧ ಬೆಲೆಗಾದರೂ ಮಾರಾಟವಾಗುತ್ತವೆ. ಆ ಹಣ ನಮಗೆ ಕೊಡುವವರಾರು? ಸರ್ಕಾರ ಆ ಬಗ್ಗೆ ಚಿಂತನೆ ನಡೆಸಿದೆಯೇ?

ಹಸು, ರಾಸು, ಆಕಳು, ಗೋವು ನಿಮಗೆ ಆಪ್ಯಾಯಮಾನವಾದ ಯಾವುದೇ ಹೆಸರಿನಿಂದ ಭಾವನಾತ್ಮಕವಾಗಿ ಸಂಬೋಧಿಸಿ, ಅವುಗಳನ್ನು ಪೂಜಿಸಿ ನಿಮಗೆ ಬೇಕಾದ್ದು ಮಾಡಿ. ಭಾವನೆಗಳೊಂದಿಗೆ ಆಟವಾಡಬೇಡಿ. ರೈತ ಸಮುದಾಯವನ್ನು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ತಂದೊಡ್ಡುವ ಈ ಕಾನೂನನ್ನು ಹಿಂಪಡೆಯಿರಿ. ಮರುಪರಿಶೀಲಿಸಿ. ಇಲ್ಲವೇ ಮುಂಬರುವ ದಿನಗಳಲ್ಲಿ ಜಾನುವಾರು ಸಾಕಾಣೆ ಮಾಡುವವರ ಹೋರಾಟವೂ ಹುಟ್ಟಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಕಾಯಿದೆಯನ್ನು ಪುನರ್ ಪರಿಶೀಲಿಸಿ. ನ್ಯಾಯಸಮ್ಮತವಾದ ಕಾನೂನು ರಚಿಸಿ.

LEAVE A REPLY

Please enter your comment!
Please enter your name here