ಎನ್.ತಿಪ್ಪಣ್ಣ, ಹಿರೇಮಗಳೂರು ಕಣ್ಣನ್ ಸೇರಿ 3ಜನರಿಗೆ ಗೌಡಾ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವ ಏ.12ರಂದು:ಕುಲಪತಿ ಪ್ರೊ.ಸಿದ್ದು ಆಲಗೂರ

0
92

ಬಳ್ಳಾರಿ,ಏ.11: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2019-20ನೇ ಸಾಲಿನ 9ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವು ಏ.12ರಂದು ಬೆಳಗ್ಗೆ 11:30ಕ್ಕೆ ವಿವಿಯ ಬಯಲುರಂಗಮಂದಿರದ ಆವರಣದಲ್ಲಿ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂರು ಜನ ಮಹನೀಯರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಗುತ್ತಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಲು ನಡೆದಿವೆ ಎಂದು ವಿವಿ ಕುಲಪತಿ ಪ್ರೊ.ಸಿದ್ದು ಪಿ.ಆಲಗೂರ್ ಅವರು ತಿಳಿಸಿದರು.
ವಿವಿಯ ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರು ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಘಟಿಕೋತ್ಸವದ ಭಾಷಣವನ್ನು ಕುರುಕ್ಷೇತ್ರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೈಲಾಶ್ ಚಂದ್ರ ಶರ್ಮ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರು ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮ-ಕುಲಾಧಿಪತಿಗಳಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ವಾರ್ಷಿಕ ಘಟಿಕೋತ್ಸವದ ನೇತೃತ್ವವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸಿದ್ದು ಆಲಗೂರ ಅವರು ವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರುಗಳು, ಕುಲಸಚಿವರಾದ ಪ್ರೊ.ಎಸ್.ಸಿ.ಪಾಟೀಲ್, ಪ್ರೊ.ರಮೇಶ್ ಓಲೇಕಾರ ಅವರುಗಳು ಕುಲಪತಿಗಳಿಗೆ ಸಾಥ್ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
*ಘಟಿಕೋತ್ಸದ ವಿಶೇಷತೆಗಳಿವು: ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 51 ಚಿನ್ನದ ಪದಕಗಳ ಪೈಕಿ ಒಟ್ಟು 42 ವಿದ್ಯಾರ್ಥಿಗಳು ಚಿನ್ನದ ಪದಕ ಮುಡಿಗೇರಿಸಿಕೊಳ್ಳಲಿದ್ದಾರೆ. ವಿವಿಧ ವಿಭಾಗಗಳ ಒಟ್ಟು 26 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. ಎಲ್ಲ ವಿಭಾಗಗಳ ಸ್ನಾತಕ ಪದವಿಯ 61 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 57 ಒಟ್ಟು 118 ವಿದ್ಯಾರ್ಥಿಗಳು ರ್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ.
*03 ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳ ಪಟ್ಟಿ: ವಿಎಸ್‍ಕೆ ವಿವಿಯ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸುಪ್ರಿಯ, ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಖನಿಜ ಸಂಸ್ಕರಣ ವಿಭಾಗದ ಉಸ್ಥಲಮುರಿ ಸುರೇಂದ್ರ, ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಶ್ರೀನಾಗ್.ಎ.ಜಿ. ಅವರು ಪಡೆದಿದ್ದಾರೆ.
*02 ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳ ಪಟ್ಟಿ: ವಿಶ್ರೀಕೃ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ರೇಣುಕಾ.ಯು, ರಸಾಯನಶಾಸ್ತ್ರ ವಿಭಾಗದ ಅರ್ಚನ ಕೆ.ಎಮ್, ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಸಮಾಜಕಾರ್ಯ ವಿಭಾಗದ ಪ್ರಸನ್ನ ಕುಮಾರ್.ಎ ಇವರುಗಳು ಪಡೆದುಕೊಂಡಿದ್ದಾರೆ.
ಪರೀಕ್ಷಾ ಫಲಿತಾಂಶ: ಪದವಿ ಮಟ್ಟದ ವಿಶ್ವವಿದ್ಯಾಲಯದಲ್ಲಿ ಒಟ್ಟು 11,828 ಪದವಿ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ಬರೆದು ತಮ್ಮ ಕೋರ್ಸ್‍ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಹಾಗೂ ಸ್ನಾತಕೋತ್ತರ ಮಟ್ಟದಲ್ಲಿ ಸ್ನಾತಕೋತ್ತರ ಪದವಿ ಪ್ರಮಾಣದಲ್ಲಿ 2060 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ.
*3 ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎನ್.ತಿಪ್ಪಣ್ಣ, ಹಿರೇಮಗಳೂರು ಕಣ್ಣನ್, ನರೇಂದ್ರಕುಮಾರ ಬಲ್ದೋಟ ಮಹನೀಯರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಕುಲಪತಿ ಪ್ರೊ.ಸಿದ್ದು ಆಲಗೂರು ಅವರು ತಿಳಿಸಿದರು.
ಗೌರವ ಡಾಕ್ಟರೆಟ್ ಪಡೆದ ಮೂರು ಜನರ ಪರಿಚಯ ಇಂತಿದೆ:
ಎನ್.ತಿಪ್ಪಣ್ಣ: ಮೂಲತಃ ಚಿತ್ರದುರ್ಗ ಜಿಲ್ಲೆ ತುರುವನೂರಿನವರಾದ ಇವರು 23 ನವಂಬರ್ 1928ರಲ್ಲಿ ಜನಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದ ಧೀಮಂತರು. ಶಿಕ್ಷಣ, ಸಮಾಜಸೇವೆ ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ವಿಧಾನಪರಿಷತ್ತಿನ ಮಾಜಿ ಸಭಾಪತಿಗಳಾಗಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾಗಿ, ಬಳ್ಳಾರಿಯ ವಿವಿ ಸಂಘದ ಅಧ್ಯಕ್ಷರಾಗಿ ಅವಿರತ ಸೇವೆ ಸಲ್ಲಿಸಿದ್ದಾರೆ.
*ಹಿರೇಮಗಳೂರು ಕಣ್ಣನ್: 1949ರಲ್ಲಿ ಜನಿಸಿದ ಕಣ್ಣನ್ ಅವರು ಕನ್ನಡಿಗರಿಗೆ ಚಿರಪರಿಚಿತ ಮುಖ. ದೃಶ್ಯ ಮಾಧ್ಯಮಗಳಲ್ಲಿ ಸಕ್ರೀಯವಾಗಿರುವ ಕಣ್ಣನ್ ಅವರು ‘ಕನ್ನಡ ಪೂಜಾರಿ’ ಎಂದೇ ಬಿರುದಾಂಕಿತರಾಗಿದ್ದಾರೆ. ಹಿರೇಮಗಳೂರಿನ ಕೋದಂಡರಾಮಚಂದ್ರಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಭಾಷಾ ಪ್ರವೀಣರು ಮತ್ತು ಹಲವು ದೂರದರ್ಶನ ಕಾರ್ಯಕ್ರಮಗಳ ನಿರೂಪಕರಾಗಿ ಜನಜನಿತರಾಗಿದ್ದಾರೆ. ಇವರಿಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ರಾಜ್ಯ ಸರ್ಕಾರವು ಗೌರವಿಸಿದೆ.
*ನರೇಂದ್ರ ಕುಮಾರ್ ಬಲ್ಡೋಟ: 1940ರಲ್ಲಿ ಹೊಸಪೇಟೆಯಲ್ಲಿ ಜನಿಸಿದ ಬಲ್ಡೋಟ ಅವರು ಉದ್ಯಮ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಸಮಾಜಸೇವೆಯಲ್ಲಿ ಅವಿರತ ಸೇವೆಯಲ್ಲಿದ್ದಾರೆ. ಇವರ ಪರಿಸರ ಕಾಳಜಿಗಾಗಿ ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸುಸ್ಥಿರ ಅಭಿವೃದ್ಧಿ ಮತ್ತು ಉದ್ಯಮ ಕ್ಷೇತ್ರದಲ್ಲಿ ವಿನೂತನ ಆಲೋಚನೆಗಳಿಂದ ಹೆಸರುವಾಸಿಯಾಗಿರುವ ಬಲ್ಡೋಟ ಅವರಿಗೆ ಭಾರತ ಸರ್ಕಾರವು ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ ನೀಡಿ ಗೌರವಿಸಿದೆ.
ಘಟಿಕೋತ್ಸವದಲ್ಲಿ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು, ಎಲ್ಲ ನಿಕಾಯದ ಡೀನರು, ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಘಟಿಕೋತ್ಸವವನ್ನು ಏರ್ಪಡಿಲಾಗಿದೆ ಎಂದು ಕುಲಪತಿಗಳಾದ ಪ್ರೊ.ಸಿದ್ದು ಪಿ ಆಲಗೂರ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕುಲಸಚಿವರಾದ ಕುಲಸಚಿವರಾದ ಪ್ರೊ.ಎಸ್.ಸಿ.ಪಾಟೀಲ್, ಪ್ರೊ.ರಮೇಶ್ ಓಲೇಕಾರ ಇದ್ದರು.

LEAVE A REPLY

Please enter your comment!
Please enter your name here