ಶೈಕ್ಷಣಿಕ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ,ಶಿಕ್ಷಣದಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ:ನ್ಯಾ.ಅರ್ಜುನ್ ಮಲ್ಲೂರ್

0
90

ಬಳ್ಳಾರಿ,ಫೆ.08 : ಶಿಕ್ಷಣ ಇಲ್ಲದ ಬದುಕು ಊಹಿಸಲೂ ಅಸಾಧ್ಯ, ಶಿಕ್ಷಣ ಪಡೆಯುವುದರ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಅರ್ಜುನ್ ಎಸ್ ಮಲ್ಲೂರು ಹೇಳಿದರು.
ನಗರದ ಬಿ.ಡಿ.ಡಿ.ಎಸ್ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಮತ್ತು ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಇವರ ಸಹಯೋಗದೊಂದಿಗೆ ಸೋಮವಾರ ನಡೆದ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆ ಅಡಿಯಲ್ಲಿ 2010-21 ನೇ ಸಾಲಿನ ಬಾಲ ಕಾರ್ಮಿಕರ ವಿಶೇಷ ತರಬೇತಿ ಕೇಂದ್ರಗಳಿಂದ ಮುಖ್ಯವಾಹಿನಿ ಶಾಲೆಗಳಿಗೆ ದಾಖಲಾಗುವ ಮಕ್ಕಳಿಗೆ ಶೈಕ್ಷಣಿಕ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಕಾರ್ಮಿಕ ಜೀವನದಿಂದ ಶೈಕ್ಷಣಿಕ ಜೀವನಕ್ಕೆ ಕರೆತರುವ ಮೂಲಕ ಉತ್ತಮ ವಿದ್ಯಾಭ್ಯಾಸ ನೀಡಲು ಸರ್ಕಾರದ ವತಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಪೂರಕ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ. ಮಕ್ಕಳು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವ ಮುಖಾಂತರ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ಪ್ರಯತ್ನಿಸಿ. ಅತ್ಯಂತ ಶಿಸ್ತು ಮತ್ತು ಸಂಯಮದಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ವಿಭಾಗ 2 ರ ಕಾರ್ಮಿಕ ಅಧಿಕಾರಿಗಳಾದ ಚಂದ್ರಶೇಖರ್ ಎನ್ ಐಲಿ ಅವರು ಮಾತನಾಡಿ ಮಕ್ಕಳು ಜೀವನದಲ್ಲಿ ಸಾಧನೆ ಮಾಡಬೇಕಾದರೆ ಮೊದಲು ಗುರಿಯನ್ನು ಹೊಂದುವುದು ಅವಶ್ಯಕ. ಗುರಿ ಇಲ್ಲದ ಪಯಣ ನಾವಿಕ ಇಲ್ಲದ ದೋಣಿಯಂತೆ. ಉತ್ತಮ ಗುರಿಯೊಂದಿಗೆ ಜೀವನದಲ್ಲಿ ಮುಂದೆ ಸಾಗಿ ಆಗ ಮಾತ್ರ ಉನ್ನತ ಮಟ್ಟಕ್ಕೆ ಸಾಗುತ್ತೀರಿ ಎಂದು ಮಕ್ಕಳಿಗೆ ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ನಿರ್ದೇಶಕರಾದ ಎ. ಮೌನೇಶ್ ಮಾತನಾಡಿದರು. ಕಾರ್ಮಿಕ ಅಧಿಕಾರಿಗಳಾದ ಕಮಲ್ ಅಲ್ತಾಫ್, ಯಾಗಪ್ಪ ಬಿ.ಡಿ.ಡಿ.ಎಸ್ ಸಂಸ್ಥೆ ನಿರ್ದೇಶಕರಾದ ಪಿ.ಎಂ.ಈಶ್ವರಯ್ಯ ಮತ್ತು ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here