ಕೊವಿಡ್ ಲಸಿಕೆ ಪಡೆದ ಡಿಸಿ, ಜಿಪಂ ಸಿಇಒ, ಎಸ್ಪಿ,ಕಡ್ಡಾಯವಾಗಿ ಎಲ್ಲರೂ ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ: ಡಿಸಿ ಮಾಲಪಾಟಿ

0
107

ಬಳ್ಳಾರಿ,ಫೆ.08 : ಎರಡನೇ ಹಂತದ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಯ ಜಿಲ್ಲೆಯಲ್ಲಿ ಸೋಮವಾರ ಆರಂಭವಾಗಿದ್ದು,ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಬಳ್ಳಾರಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ.ಕೆ.ಆರ್. ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥ್, ಸಹಾಯಕ ಆಯುಕ್ತರಾದ ರಮೇಶ್ ಕೊನರೆಡ್ಡಿ ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗಿರುವ ಲಸಿಕಾ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡರು.
ಎರಡನೇ ಹಂತದ ಲಸಿಕಾ ಪ್ರಕ್ರಿಯೆಗೆ ಡಿಸಿ ಪವನಕುಮಾರ್ ಮಾಲಪಾಟಿ ಅವರು ಚಾಲನೆ ನೀಡಿ ಸ್ವತಃ ತಾವೇ ಲಸಿಕೆ ಹಾಕಿಸಿಕೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿ ಮಾಲಪಾಟಿ ಅವರು ಕೊವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಭಯ ಮತ್ತು ಆತಂಕವನ್ನು ಬಿಟ್ಟು ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಎಂದರು.
ಜಿಲ್ಲೆಯಲ್ಲಿ ಜ.16ರಿಂದ ಲಸಿಕೆ ಹಾಕುವ ಪ್ರಕ್ರಿಯೆ ಶುರುವಾಗಿದ್ದು, ಈಗಾಗಲೇ ಶೆ.60 ರಷ್ಟು ಲಸಿಕೆ ಹಾಕಲಾಗಿದೆ. 15 ಸಾವಿರ ಜನ ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ಹಾಕುವ ಗುರಿ ಇದೆ. ಬಾಕಿ ಉಳಿದ ಎಲ್ಲಾ ಸಿಬ್ಬಂದಿಗೆ ಮುಂದಿನ ಹಂತದಲ್ಲಿ ಲಸಿಕೆ ಹಾಕಲಾಗುತ್ತದೆ ಎಂದು ಅವರು ತಿಳಿಸಿದರು.
ಕಂದಾಯ ಇಲಾಖೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಮತ್ತು ಪೊಲೀಸ್ ಇಲಾಖೆ ಒಳಗೊಂಡಂತೆ ನಾಲ್ಕು ಇಲಾಖೆಗೆ ಸೇರಿದ 9200 ಜನ ಸಿಬ್ಬಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇಂದು 4000 ಜನಕ್ಕೆ ಲಸಿಕೆ ಹಾಕಲಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ, ಎಲ್ಲಾ ಸಿಬ್ಬಂದಿ ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತನಾಡಿ, ಲಸಿಕೆ ಈಗಾಗಲೇ ಯಶಸ್ವಿಯಾಗಿದೆ. ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಪೊಲೀಸ್ ಇಲಾಖೆಯ 2800 ಜನ ಸಿಬ್ಬಂದಿಗೆ ಲಸಿಕೆ ನೀಡುವ ಗುರಿ ಇದೆ, ಇದರಲ್ಲಿ 1500 ಜನ ಸಿಬ್ಬಂದಿ ಇಂದು ಲಸಿಕೆಯನ್ನು ಪಡೆಯಲಿದ್ದಾರೆ. ಉಳಿದ ಸಿಬ್ಬಂದಿಗೆ ಮುಂದಿನ ಮೂರು ದಿನಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಂದಿನಿ ಕೆ.ಆರ್. ಅವರು ಮಾತನಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 3800 ಜನ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು, ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಎಲ್ಲ ಸಿಬ್ಬಂದಿ ತಪ್ಪದೆ ಲಸಿಕೆ ಪಡೆಯಿರಿ, ತಾಲೂಕುವಾರು ಆಯಾ ತಾಲೂಕಿನ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಆರ್.ಅನಿಲಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪ ಹಾಗೂ ಆಸ್ಪತ್ರೆಯ ಸಿಬ್ಬಂದಿ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here