ರೂಪನಗುಡಿಯಲ್ಲಿ ವಿಶ್ವ ಕ್ಯಾನ್ಸರ್ ದಿನ ಆಚರಣೆ, ಪ್ರತಿ 3 ವರ್ಷಗಳಿಗೊಮ್ಮೆ ಅಂಗಾಂಗಳ ಪರೀಕ್ಷೆ ಅಗತ್ಯ:ಡಾ.ನಿಜಾಮುದ್ದೀನ್

0
133

ಬಳ್ಳಾರಿ,ಫೆ.9 : ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಎನ್ನುವ ಕಾಯಿಲೆ ಸಾಮಾನ್ಯವಾಗಿದ್ದು, ಇದು ಬಹಳಷ್ಟು ಜನರಿಗೆ ಈ ಕಾಯಿಲೆ ಬರುತ್ತಿದೆ, ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಬಹಳಷ್ಟು ಜನ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಕ್ಯಾನ್ಸರ್‍ನ್ನು ನಿರ್ಮೂಲನೆಗೆ ಪ್ರತಿ 3 ವರ್ಷಗಳಿಗೊಮ್ಮೆ ಅಂಗಾಂಗಳನ್ನು ಪರೀಕ್ಷೆ ಮಾಡುವುದು ಅವಶ್ಯಕತೆ ಇದೆ ಎಂದು ಅಸಾಂಕ್ರಾಮಿಕ ರೋಗಗಳ ವಿಭಾಗದ ಎನ್.ಸಿ.ಡಿ ಘಟಕ ವೈದ್ಯಾಧಿಕಾರಿ ಡಾ.ಹೆಚ್.ನಿಜಾಮುದ್ದೀನ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಪಂ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರೂಪನಗುಡಿ ಸಮುದಾಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರೂಪನಗುಡಿ ಸಮುದಾಯ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಮತ್ತು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಯಾನ್ಸರ್ ಎನ್ನುವ ಕಾಯಿಲೆ ದೇಹದಲ್ಲಿ ಯಾವುದೇ ಭಾಗಕ್ಕೂ ಬರಬಹುದು;ಆದರೆ ಅತಿ ಹೆಚ್ಚಾಗಿ ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್, ಗಂಡಸರಲ್ಲಿ ಬಾಯಿ ಮತ್ತು ಗಂಟಲು ದಂತ ಭಾಗಗಳಲ್ಲಿ ಬರುತ್ತದೆ. ಮುಖ್ಯವಾಗಿ 30 ವರ್ಷ ಮೇಲ್ಪಟ್ಟಿರುವ ಎಲ್ಲರೂ 3 ವರ್ಷಗಳಿಗೊಮ್ಮೆ ಈ ಅಂಗಾಂಗಳ ಪರೀಕ್ಷೆಯನ್ನು ಮಾಡಿಸಿಕೊಂಡಲ್ಲಿ ಕ್ಯಾನ್ಸರ್‍ನ್ನು ಮೊದಲನೆ ಹಂತದಲ್ಲಿ ಕಂಡು ಹಿಡಿಯಬಹುದು ಎಂದರು.
ಮೊದಲನೆ ಎರಡನೇ ಹಂತಗಳಲ್ಲಿ ಕ್ಯಾನ್ಸರ್‍ನ್ನು ಕಂಡು ಹಿಡಿದರೆ ಇದಕ್ಕೆ ಚಿಕಿತ್ಸೆಯನ್ನು ನೀಡಿ ಸುಲಭವಾಗಿ ಗುಣ ಪಡಿಸಬಹುದು. ಮೂರನೇ, ನಾಲ್ಕನೇ ಹಂತಗಳಲ್ಲಿ ಕಂಡು ಹಿಡಿದಲ್ಲಿ ಚಿಕಿತ್ಸೆ ತೀವ್ರವಾಗಿ ನೀಡಬೇಕಾಗುತ್ತದೆ ಹಾಗೂ ಗುಣ ಮಾಡುವುದು ಕಷ್ಟಕರವಾಗುತ್ತದೆ ಎಂದರು.
ದಂತ ತಜ್ಞ ವೈದ್ಯರಾದ ಡಾ.ಪ್ರಿಯಾಂಕ ರೆಡ್ಡಿ ಅವರು ಮಾತನಾಡಿ, ಬಾಯಿ, ಗಂಟಲು ಮತ್ತು ದಂತಗಳ ಕ್ಯಾನ್ಸರ್ ಹಾಗೂ ಇತರೆ ಕಾಯಿಲೆಗಳ ಬಗ್ಗೆ ವಿವರಿಸಿದರು. ಬೀಡಿ ಸಿಗರೇಟು ತಂಬಾಕು ಸೇವನೆಯಿಂದ ಚೂಪಿರುವ ದಂತಗಳಿಂದ ಬಾಯಲ್ಲಿ ಹುಣ್ಣುಗಳಾಗಿ ಅವು ಕ್ಯಾನ್ಸರ್ ಆಗಬಹುದು ಎಂದು ವಿವರಿಸಿ ಪ್ರತಿಯೊಬ್ಬರು ವರ್ಷಕ್ಕೊಮ್ಮೆ ತಮ್ಮ ದಂತಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಸ್ತ್ರೀ ರೋಗ ತಜ್ಞರಾದ ಡಾ.ಚಿತ್ರಾ ವರ್ಣೆಕರ್ ಅವರು ಮಾತನಾಡಿದರು.
ಆಯುಷ್ ವೈದ್ಯಾಧಿಕಾರಿಗಳಾದ ಡಾ.ನಾರಾಯಣ ಬಾಬು ಹಾಗೂ ಡಾ.ಉಮ್ಮೆಅಸ್ಮ ಇವರು ಕ್ಯಾನ್ಸರ್ ಬಾರದಂತೆ ನಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಮತ್ತು ತೆಗೆದುಕೊಳ್ಳಬೇಕಾದ ಆಹಾರದ ಬಗ್ಗೆ ವಿವರಿಸಿದರು.
ಶಿಬಿರಕ್ಕೆ ಆಗಮಿಸಿದ ಎಲ್ಲಾ ಪುರುಷರು ಹಾಗೂ ಮಹಿಳೆಯರು ಇಂದಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ ಶಿಬಿರದಲ್ಲಿ ತಪಾಸಣೆ ನಡೆಸಲಾಯಿತು.
ಗರ್ಭ ಕಂಠದ ಕ್ಯಾನ್ಸರ್ ಅನ್ನು ಪರೀಕ್ಷೆ ಮಾಡಲು ಪ್ರತ್ಯೇಕವಾಗಿ ಬಳ್ಳಾರಿ ಈ.P.ಂ.I ಸಿಬ್ಬಂದಿಯಾದ ಸುಶೀಲಾ, ನಾಗವೇಣಿ, ವಿಜಯಲಕ್ಷ್ಮೀ ಮತ್ತು ಜರಿನಾ ರವರು ತಪಾಸಣೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಕುರುಗೋಡಿನ ಪ್ರೌಢಶಾಲಾ ಮಕ್ಕಳಿಂದ ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜಾಥಾ ವನ್ನು ಏರ್ಪಡಿಸಲಾಗಿತ್ತು ; ಈ ಜಾಥಾವು ಕುರುಗೋಡಿನ ವಿವಿಧ ಬೀದಿಗಳಲ್ಲಿ ಸಂಚರಿಸಿತು.
ಈ ಸಂದರ್ಭದಲ್ಲಿ ಅರವಳಿಕೆ ತಜ್ಞರಾದ ಡಾ. ನಾಗಲಕ್ಷ್ಮೀ ಸೇರಿದಂತೆ ಎಲ್ಲಾ ವೈದ್ಯರು, ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

LEAVE A REPLY

Please enter your comment!
Please enter your name here