ಕೋವಿಡ್ ಲಸಿಕಾ ಅಭಿಯಾನ ಆರೋಗ್ಯ ಇಲಾಖೆಗೆ ನಮ್ಮ ಕ್ಲಿನಿಕ್ ಮೆಡಿಕಲ್ ತಂಡ ಸಾಥ್

0
93

ಬಳ್ಳಾರಿ,ಜೂ.28 : ಕೋವಿಡ್ ಲಸಿಕಾ ಅಭಿಯಾನದ ಪ್ರಯುಕ್ತ ಬಳ್ಳಾರಿ ನಗರದ ಗುಗ್ಗರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 18 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ಭಾನುವಾರ ನಡೆಯಿತು.
ಬೆಂಗಳೂರಿನ ಯುನೈಟೆಡ್ ವೇಸ್ ಅಸೋಸಿಯೇಷನ್‍ನ ನಮ್ಮ ಕ್ಲಿನಿಕ್ ಮೆಡಿಕಲ್ ಟೀಮ್‍ನ ಡಾ.ಋತ್ವಿಕ್ ಅವರ ನೇತೃತ್ವದಲ್ಲಿ 9 ಜನರ ತಂಡವು ಜಿಲ್ಲಾಡಳಿತದ ಸಲಹೆಯಂತೆ ಲಸಿಕಾ ಕಾರ್ಯಕ್ರಮ ಆಯೋಜಿಸುವ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಹಕಾರ ನೀಡಿದರು.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಮಾಜ ಸೇವೆ ಹಿನ್ನಲೆಯ ಸ್ವಯಂ ಸೇವಾ ಸಂಸ್ಥೆಗಳು ಸರಕಾರದ ಮಾರ್ಗಸೂಚಿಯಂತೆ ನೇರವಾಗಿ ಕೋವಿಡ್ ಲಸಿಕೆಯನ್ನು ಖರೀದಿಸಿ ನಮ್ಮ ಕ್ಲೀನಿಕ್ ಮೆಡಿಕಲ್ ಟೀಮ್ ಮೂಲಕ ಆಯಾ ಜಿಲ್ಲಾಡಳಿತದ ಜೊತೆ ಚರ್ಚಿಸಿ ತದನಂತರ ಆಯ್ದ ಸ್ಥಳಗಳಲ್ಲಿ ಅದರಲ್ಲೂ ನಗರಗಳ ಸ್ಲಮ್ ಪ್ರದೇಶ, ಗ್ರಾಮೀಣ ಭಾಗದಲ್ಲಿ ಬುಡಕಟ್ಟು ಜನವಸತಿ ಪ್ರದೇಶಗಳಲ್ಲಿ ಈ ತಂಡವು ಲಸಿಕೆ ಹಾಕುವ ಉದ್ದೇಶ ಹೊಂದಿದ್ದು, ಪ್ರಸ್ತುತ ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿ ಕೋವಿಡ್ ಲಸಿಕಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚಿನ ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 493 ಜನರಿಗೆ ನಮ್ಮ ಕ್ಲೀನಿಕ್ ಮೆಡಿಕಲ್ ತಂಡದವರು ನೀಡಿದ್ದು, ಇನ್ನುಳಿದ 100 ಜನರಿಗೆ ಆರೋಗ್ಯ ಇಲಾಖೆಯಿಂದ ಲಸಿಕೆ ನೀಡಲಾಯಿತು.

ಆಟೊದಲ್ಲಿ ಲಸಿಕೆ ನೀಡಿಕೆ:
ಲಸಿಕಾ ಕಾರ್ಯಕ್ರಮದ ವೇಳೆ ಮೂಳೆ, ಕ್ಷಯರೋಗದಿಂದ ಬಳಲುತ್ತಿದ್ದ ಗುಗ್ಗರಹಟ್ಟಿಯ ನಿವಾಸಿ ವಿರೇಶ ಅವರು ತಮಗೆ ನಡೆಯಲು ಸಾಧ್ಯವಿಲ್ಲವೆನ್ನುವ ಪರಸ್ಥಿತಿ ಇದ್ದರೂ ಸಹ ಆಟೋದಲ್ಲಿ ತಮ್ಮ ಪತ್ನಿಯೊಂದಿಗೆ ಆಗಮಿಸಿದರು. ಅವರ ನೊಂದಣಿ ಪ್ರಕಿಯೆಯನ್ನು ಪೂರ್ಣಗೊಳಿಸಿ ಆಟೊದಲ್ಲಿಯೇ ಅವರಿಗೆ ಲಸಿಕೆ ನೀಡಿ ವಾಪಾಸ್ ಕಳುಹಿಸಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಸದಸ್ಯರಾದ ತ್ರಿವೇಣಿ, ವೈದ್ಯಾಧಿಕಾರಿ ಡಾ.ಶಗುಫ್ತಾ ಶಾಹೀನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಮುಖಂಡರಾದ ಸೂರಿ, ಕೆ ಶ್ರೀಕಾಂತ, ಕೆ ಹೊನ್ನೂರಸ್ವಾಮಿ, ತಿಪ್ಪೇಸ್ವಾಮಿ, ಕೆ ಪ್ರಹ್ಲಾದ ಮತ್ತು ಯುವ ಪದಾಧಿಕಾರಿಗಳು ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಯಶೋದಾ, ಜಿಲಾನ್, ಸರಳಾಕುಮಾರಿ, ಉಮಾಮಹೇಶ್ವರಿ, ಅರುಣಾ ನಿರಂಜನ, ಎರ್ರಿಸ್ವಾಮಿ, ದೇವರಾಜ, ನಾಗವೇಣಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here