‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆದ ಸರಕಾರ,ಗ್ರಾಮಸ್ಥರ ಸಮಸ್ಯೆಗೆ ದನಿಯಾದ ಜಿಲ್ಲಾಧಿಕಾರಿ!

0
141

ತಿಮ್ಮಲಾಪುರ,ಫೆ.20 : ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ನಿಮಿತ್ತ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೊಸಪೇಟೆ ಸಮೀಪದ ತಿಮ್ಮಲಾಪುರ ಗ್ರಾಮದಲ್ಲಿ ಶನಿವಾರ ನಡೆಸಿದ ಗ್ರಾಮವಾಸ್ತವ್ಯವು ಗ್ರಾಮಸ್ಥರ ಸಮಸ್ಯೆಗೆ ದನಿಯಾಯಿತು.
ಅನೇಕ ವರ್ಷಗಳಿಂದ ಬಗೆಹರಿಯದೇ ಜಟೀಲಾಗಿಯೇ ಉಳಿದಿದ್ದ ಗ್ರಾಮದ ಅನೇಕ ಸಮಸ್ಯೆಗಳು ಒಂದೇ ದಿನದಲ್ಲಿ ಬಗೆಹರಿದ ಸಂತಸದ ಕ್ಷಣಕ್ಕೆ ಗ್ರಾಮದ ಜನರು ಸಾಕ್ಷಿಯಾದರು.
ಕ್ಷಿಪ್ರಗತಿಯಲ್ಲಿ ಜನರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿನ ಹಾಗೂ ಸ್ಥಳದಲ್ಲಿಯೇ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರಕಾರದ ಸೂಚನೆ ಅನ್ವಯ ಏರ್ಪಡಿಸಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿತ್ತು.
ಅನೇಕ ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ದಾಖಲೆಗಳು ಪಡೆಯಲು ಸರಕಾರಿ ಕಚೇರಿಗಳಿಗೆ ತಬರನಂತೆ ಅಲೆದು ಸುಸ್ತಾಗಿದ್ದ 11ಕುಟುಂಬಗಳಿಗೆ 94ಸಿ ಅಡಿ ಅಂದರೇ ಅಕ್ರಮ ಸಕ್ರಮ ಯೋಜನೆ ಅಡಿ ಪತ್ರಗಳನ್ನು ವಿತರಿಸಲಾಯಿತು.
ವಯೋವೃದ್ಧರು,ವಿಶೇಷಚೇತನ ಪಿಂಚಣಿಗೆ ಸಂಬಂದಿಸಿದಂತೆ 25ಅರ್ಜಿಗಳು ಸ್ವೀಕರಿಸಲಾಗಿತ್ತು. ಅರ್ಹರಾದ ಎಲ್ಲರಿಗೆ ಪಿಂಚಣಿ ಪ್ರಮಾಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಭಾಗ್ಯಲಕ್ಷ್ಮೀಬಾಂಡ್ ಗಳ ವಿತರಣೆ ಮತ್ತು ಜಮೀನಿನ ಖಾತೆ ಬದಲಾವಣೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ತಿಮ್ಮಲಾಪುರದ ಶಾಲೆಯು ಸರಕಾರಿ ಜಮೀನಿನಲ್ಲಿತ್ತು;ಹಕ್ಕುಪತ್ರ ಇರಲಿಲ್ಲ. ಈ ಶಾಲೆಗೆ ಜಿಲ್ಲಾಧಿಕಾರಿಗಳು 80ಸೆಂಟ್ಸ್ ಜಾಗವನ್ನು ಮಂಜೂರು ಮಾಡಿದ ಪ್ರಮಾಣಪತ್ರವನ್ನು ಶಾಲೆಯ ಮುಖ್ಯಗುರುಗಳು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ವಿತರಿಸಿದರು.
ವೈಯಕ್ತಿಕ ಸೌಲಭ್ಯದ ಪ್ರಮಾಣಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಮನೆ ಮನೆ ಭೇಟಿ ಸಂದರ್ಭದಲ್ಲಿ ವಿಕಲಚೇತನರೊಬ್ಬರ ಅಹವಾಲು ಆಲಿಸಿದ ಡಿಸಿ ಮಾಲಪಾಟಿ ಅವರು;ಅವರಿಗೆ ತಕ್ಷಣವೇ ಪಿಂಚಣಿ ಮಂಜೂರು ಮಾಡಿ ಪ್ರಮಾಣಪತ್ರ ವಿತರಿಸಿದ್ದು ವಿಶೇಷ.
ಗ್ರಾಮದಲ್ಲಿ 212ಅರ್ಜಿಗಳು ಸಲ್ಲಿಕೆಯಾಗಿದ್ದವು;ಅವುಗಳಲ್ಲಿ ಬಹುತೇಕವನ್ನು ಡಿಸಿ ಮಾಲಪಾಟಿ ಅವರು ಸ್ಥಳದಲ್ಲೇ ಈಡೇರಿಸಿ;ಉಳಿದವುಗಳನ್ನು ಅಧಿಕಾರಿಗಳಿಗೆ ನಿಯಮಾನುಸಾರ ಈಡೇರಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ತಾಪಂ ಸದಸ್ಯ ರಾಜಪ್ಪ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ,ಉಪಾಧ್ಯಕ್ಷೆ ಶಾರದಮ್ಮ,ತಹಸೀಲ್ದಾರ್ ವಿಶ್ವನಾಥ, ಜಿಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು.

LEAVE A REPLY

Please enter your comment!
Please enter your name here