ಸಾರ್ವಜನಿಕರ ನಿರ್ಲಕ್ಷದಿಂದ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಹೆಚ್ಚಳ ; ಜಿಲ್ಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

0
99

ಧಾರವಾಡ.ಮಾ.26: ಕೋವಿಡ್-19 ರ ಪ್ರಕರಣಗಳು ಕಳೆದ ವರ್ಷದಂತೆ ಪ್ರಸಕ್ತ ತಿಂಗಳಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಮಾಸ್ಕ್ ಧರಿಸದೆ ಸಂಚರಿಸುವುದು, ಸಾಮಾಜಿಕ ಅಂತರ ಕಾಪಾಡದಿರುವುದು ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಕಾರಣವಾಗಿದೆ. ಸಾರ್ವಜನಿಕರು ಸರ್ಕಾರ ಹಾಗೂ ಜಿಲ್ಲಾಡಳಿತ ನೀಡಿರುವ ಮುಂಜಾಗೃತ ಕ್ರಮಗಳನ್ನು ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.

ಅವರು ಇಂದು ಬೆಳಿಗ್ಗೆ ಕಚೇರಿ ಸಭಾಂಗಣದಲ್ಲಿ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿಗಳೊಂದಿಗೆ ಜರುಗಿದ ವಿಡಿಯೋ ಕಾನ್ಫರೆನ್ಸ್ ನಂತರ ಜಿಲ್ಲಾ ಆರೋಗ್ಯ ಪಡೆಯ ಹಾಗೂ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದರು.

ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಕಳೆದ ಕೋವಿಡ್ ಸಂದರ್ಭದಲ್ಲಿ ರಚಿಸಿದ್ದ ಎಲ್ಲ ತಂಡಗಳನ್ನು ಮರುಸ್ಥಾಪನೆ ಮಾಡಿ, ಕಾರ್ಯಗಳ ಹಂಚಿಕೆ ಮತ್ತು ಪರಿಶೀಲನೆ ಮಾಡುವಂತೆ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಾರ್ವಜನಿಕರು ಆರೋಗ್ಯ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಿದರೆ ಕೋವಿಡ್ ಪ್ರಕರಣಗಳ ಹೆಚ್ಚಳದಿಂದ ಮುಂದಿನ ಕೆಲವು ತಿಂಗಳು ಕಷ್ಟದ ದಿನಗಳಾಗಲಿವೆ. ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ ಆಸ್ಪತ್ರೆಗಳು ಅಗತ್ಯ ಹಾಸಿಗೆ ವ್ಯವಸ್ಥೆಯನ್ನು ಸಿದ್ಧಗೊಳಿಸಿಕೊಳ್ಳಬೇಕು. ಕೋವಿಡ್ ಕೇರ್ ಸೆಂಟರ್‍ಗಳನ್ನು ಜಿಲ್ಲಾ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಆರಂಭಿಸಲು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಶಿಫ್ಟಿಂಗ್ ತಂಡ, ಕಾಂಟ್ಯಾಕ್ಟ್ ಟ್ರೆಸಿಂಗ್ ತಂಡಗಳು ಕ್ರಿಯಾಶೀಲವಾಗಬೇಕು. ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ ಕಾರ್ಯನಿರತವಾಗಿದ್ದು, ಅದರ ಸೇವೆಯನ್ನು ಮುಂದುವರೆಸಲಾಗುವುದು. ಕೋವಿಡ್ ಪರೀಕ್ಷಿಸುವ ಪ್ರಯೋಗಾಲಯಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲದ ಬೇಡಿಕೆಯನ್ನು ತಕ್ಷಣ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸೂಚಿಸಿದರು.

ಕೋವಿಡ್ ಕರ್ತವ್ಯ ನಿರ್ಲಕ್ಷಿಸಿದರೆ ಸೇವೆಯಿಂದ ವಜಾ:

ಕೋವಿಡ್-19 ರ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿ ವಿವಿಧ ತಂಡಗಳನ್ನು ರಚಿಸಲಾಗಿದೆ. ಕೆಲವು ಅಧಿಕಾರಿ ಮತ್ತು ಸಿಬ್ಬಂದಿಗಳು ನೇಮಿಸಿದ ಕರ್ತವ್ಯಕ್ಕೆ ಹಾಜರಾಗದೇ ನಿರ್ಲಕ್ಷಿಸಿರುವ ಕುರಿತು ತಿಳಿದುಬಂದಿದೆ. ಸಂಬಂಧಿಸಿದ ತಂಡಗಳ ಮುಖ್ಯಸ್ಥರು ಕರ್ತವ್ಯಕ್ಕೆ ಹಾಜರಾಗದವರ ಕುರಿತು ವರದಿ ಸಲ್ಲಿಸಿದರೆ ತಕ್ಷಣವೇ ಅವರನ್ನು ಸೇವೆಯಿಂದ ವಜಾಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

ಆರೋಗ್ಯ ಇಲಾಖೆಯು ತಮ್ಮ ಸಿಬ್ಬಂದಿಗಳಿಗೆ ಮುಂದಿನ 2 ತಿಂಗಳು ಯಾವುದೇ ರಜೆಗಳನ್ನು ಪಡೆಯದೇ ಕೋವಿಡ್ ಸಂದರ್ಭದಲ್ಲಿ ನಿರಂತರವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಆದ್ದರಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಮೇಲಾಧಿಕಾರಿಗಳ ಹಾಗೂ ಜಿಲ್ಲಾಡಳಿತದ ಪೂರ್ವಾನುಮತಿ ಪಡೆಯದೇ ರಜೆ ಹೋಗುವ ಅಥವಾ ಕೇಂದ್ರಸ್ಥಾನ ಬಿಡದಂತೆ ಅವರು ಸೂಚಿಸಿದರು.

ಲಸಿಕಾಕರಣ ಹೆಚ್ಚಳಕ್ಕೆ ಒತ್ತು ನೀಡಿ :

ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮತ್ತು ಕೆಲವು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ರೂ.250/-ಗಳನ್ನು ಪಡೆದು ಕೋವಿಡ್ ನಿರೋಧಕ ಲಸಿಕೆಯನ್ನು ನೀಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತೆಯರು, ವೈದ್ಯರು ಮತ್ತು 2ನೇ ಹಂತದಲ್ಲಿ ಪೊಲೀಸ್, ಪಾಲಿಕೆ, ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಲಸಿಕಾಕರಣ ಮಾಡಲು ಸರ್ಕಾರ ನಿರ್ದೇಶನ ನೀಡಿದೆ. ಜಿಲ್ಲೆಯಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ದಾಸ್ತಾನು ಇದೆ. ಕೊರೊನಾ ಫ್ರೆಂಟ್‍ಲೈನ್ ವಾರಿಯರ್ಸ್, 60 ವರ್ಷ ಮೇಲ್ಪಟ್ಟವರು ಮತ್ತು ಕೋ ಮಾರ್ಬಿಟ್ ಹೊಂದಿರುವ 45 ವರ್ಷ ಮೇಲ್ಪಟ್ಟವರು ಉಚಿತವಾಗಿ ಲಸಿಕೆಯನ್ನು ಪಡೆಯಲು ಸರ್ಕಾರ ಸೌಲಭ್ಯ ಕಲ್ಪಿಸಿದೆ.

ಪೊಲೀಸ್ ಇಲಾಖೆಯಿಂದ 4,148 ಜನ ಲಸಿಕೆ ಪಡೆದಿದ್ದು, ಶೇ.99.25 ರಷ್ಟು ಸಾಧನೆಯಾಗಿದೆ. ಕಂದಾಯ ಇಲಖೆಯಿಂದ 274 ಜನ ಲಸಿಕೆ ಪಡೆದಿದ್ದು, ಶೇ.67.32 ರಷ್ಟು ಸಾಧನೆಯಾಗಿದೆ. ಪಂಚಾಯತ್ ರಾಜ್ ಇಲಾಖೆಯ 762 ಜನ ಲಸಿಕೆ ಪಡೆದಿದ್ದು, ಶೇ.48.38 ರಷ್ಟು ಸಾಧನೆಯಾಗಿದೆ. ಆದರೆ ಮಹಾನಗರಪಾಲಿಕೆಯ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಸೇರಿ ಕೇವಲ 980 ಜನ ಮಾತ್ರ ಲಸಿಕೆ ಪಡೆದಿದ್ದು, ಶೇ.39.10 ರಷ್ಟು ಗುರಿ ಸಾಧನೆಯಾಗಿದೆ. ಮುಂದಿನ ದಿನಗಳಲ್ಲಿ ಪಾಲಿಕೆಯ ಎಲ್ಲ ಸಿಬ್ಬಂದಿ, ಪೌರಕಾರ್ಮಿಕರು ಮತ್ತು ಮಹಾನಗರದಲ್ಲಿರುವ 60 ವರ್ಷ ಮೇಲ್ಪಟ್ಟವರು ಮತ್ತು ಕೋ ಮಾರ್ಬಿಟ್ ಹೊಂದಿರುವ 45 ವರ್ಷ ಮೇಲ್ಪಟ್ಟವರು ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆಯನ್ನು ಪಡೆಯುವಂತೆ ಕ್ರಮ ಜರುಗಿಸಲು ಪಾಲಿಕೆಯ ಜಂಟಿ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಸಿಬ್ಬಂದಿಗಳು ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಉಚಿತವಾಗಿ ಕೋವಿಡ್ ನಿರೋಧಕ ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ ಲಸಿಕೆಯನ್ನು ಪಡೆಯಬೇಕು. ಈ ಕುರಿತು ಸಂಸ್ಥೆಯು ಸುತ್ತೋಲೆ ಹೊರಡಿಸಿದ್ದು, ಎಲ್ಲರೂ ಪಾಲಿಸಬೇಕೆಂದು ಅವರು ತಿಳಿಸಿದರು.

ಲಸಿಕಾಕರಣ ಯಶಸ್ವಿಗೊಳಿಸಲು ತಹಶೀಲ್ದಾರ, ಇಓ, ಪಿಡಿಓ ಮತ್ತು ಪುರಸಭೆ ಹಾಗೂ ಪಟ್ಟಣಪಂಚಾಯತ್ ಮುಖ್ಯಾಧಿಕಾರಿಗಳ ಸಮನ್ವಯದಲ್ಲಿ ಗ್ರಾಮವಾರು ಹಾಗೂ ವಾರ್ಡ್ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಕ್ರಿಯಾ ಯೋಜನೆಯನ್ನು ರೂಪಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನಿಯಮ ಪಾಲಿಸದ ಪಿಜಿ, ಕೋಚಿಂಗ್ ಸೆಂಟರ್, 24×7 ಗ್ರಂಥಾಲಯಗಳು ಸೀಜ್ :

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರು ಶಿಕ್ಷಿತರು ನಡೆಸುತ್ತಿರುವ ಪಿಜಿ ಕೇಂದ್ರಗಳಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್‍ಗಳಲ್ಲಿ ಮತ್ತು ದಿನದ 24 ಗಂಟೆ (24×7) ನಡೆಯುತ್ತಿರುವ ಗ್ರಂಥಾಲಯಗಳಲ್ಲಿ ರಾಜ್ಯಸರ್ಕಾರ ಹಾಗೂ ಜಿಲ್ಲಾಡಳಿತ ನೀಡಿರುವ ಕೋವಿಡ್ ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಕಂಡು ಬರುತ್ತಿದೆ.

ಮಹಾನಗರ ಪಾಲಿಕೆಯ ಅಧಿಕಾರಿಗಳು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಇಂತಹ ಕೇಂದ್ರಗಳ ಮೇಲೆ ಕಾರ್ಯಾಚರಣೆ ಮಾಡಿ ಮಾಸ್ಕ್ ಧರಿಸದೇ ಬರುವ ಮತ್ತು ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಸದಿರುವ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಸ್ಥಳದಲ್ಲಿಯೇ ದಂಡ ವಿಧಿಸಬೇಕು. ಮತ್ತು ಸಂಪೂರ್ಣವಾಗಿ ಆ ಕೇಂದ್ರದ ವಿಡಿಯೋ ಚಿತ್ರೀಕರಣ ಮತ್ತು ಫೋಟೋಗ್ರಾಫಿ ಮಾಡಬೇಕು. ಪ್ರತಿ ಕೇಂದ್ರದಲ್ಲಿ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಸ್ಥಳದಲ್ಲಿಯೇ ಆರ್‍ಟಿಪಿಸಿಆರ್ ಮೂಲಕ ಕೋವಿಡ್ ಟೆಸ್ಟಿಂಗ್ ಮಾಡಬೇಕು ಎಂದು ಹೇಳಿದರು.

ಪಿಜಿ, ಕೋಚಿಂಗ್ ಸೆಂಟರ್, 24×7 ಗ್ರಂಥಾಲಯಗಳಲ್ಲಿ ಟೆಸ್ಟಿಂಗ್ ಮಾಡಿದಾಗ ಯಾವುದೇ ಕೇಂದ್ರದಲ್ಲಿ ಪಾಸಿಟಿವ್ ಕಂಡುಬಂದರೆ ಆ ಕೇಂದ್ರದ ಮಾಲೀಕ ಹಾಗೂ ಮುಖ್ಯಸ್ಥನನ್ನು ಜವಾಬ್ದಾರಿಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ತಕ್ಷಣ ಆ ಕೇಂದ್ರವನ್ನು ಸೀಜ್ ಮಾಡಿ ಅದನ್ನು ಕಂಟೈನ್‍ಮೆಂಟ್ ಝೋನ್ ಎಂದು ಆದೇಶಿಸಿ ಕಠಿಣ ಭದ್ರತಾ ಕ್ರಮಗಳನ್ನು ಪಾಲಿಕೆಯ ಅಧಿಕಾರಿಗಳು ಕೈಗೊಳ್ಳಬೇಕು. ಮತ್ತು ಶೀಘ್ರದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿರುವ ಪಿಜಿ, ಕೋಚಿಂಗ್ ಸೆಂಟರ್, 24×7 ಗ್ರಂಥಾಲಯಗಳ ಮುಖ್ಯಸ್ಥರ ಸಭೆ ಜರುಗಿಸಿ ಈ ಕುರಿತು ಸಂಪೂರ್ಣ ಮಾಹಿತಿ ನೀಡಿ, ಪಾಲಿಕೆ ಅಧಿಕಾರಿಗಳು ಕೇಂದ್ರಗಳ ಮೇಲೆ ಅನಿರೀಕ್ಷಿತವಾದ ವಿಶೇಷ ಕಾರ್ಯಾಚರಣೆ (ಸ್ಪೆಷಲ್ ಡ್ರೈವ್) ಆರಂಭಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದರು.

ಹೆದ್ದಾರಿ ಪಕ್ಕದ ಮಾವು ಮಾರಾಟ ಕೇಂದ್ರಗಳ ಮೇಲೆ ನಿಗಾವಹಿಸಿ :

ಜಿಲ್ಲೆಯಲ್ಲಿ ಮಾವು ಮಾರಾಟ ಆರಂಭವಾಗುತ್ತಿದ್ದು, ವಿಶೇಷವಾಗಿ ಹೊರ ರಾಜ್ಯಗಳಿಂದ ಆಗಮಿಸುವ ಏಜೆಂಟರು, ದಲಾಲರು ಮತ್ತು ವ್ಯಾಪಾರಿಗಳಿಗೆ ಸ್ಥಳದಲ್ಲಿಯೇ ಆರ್‍ಟಿಪಿಸಿಆರ್ ಟೆಸ್ಟಿಂಗ್ ಮಾಡಬೇಕು. ಮತ್ತು ಜಿಲ್ಲೆಗೆ ಆಗಮಿಸುವ ಪೂರ್ವದಲ್ಲಿಯೇ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದನ್ನು ಕಡ್ಡಾಯವಾಗಿ ತಿಳಿಸಬೇಕು. ಒಂದುವೇಳೆ ಅವರು ನೆಗೆಟಿವ್ ವರದಿ ಹೊಂದಿರದಿದ್ದಲ್ಲಿ ತಕ್ಷಣ ಅವರ ರಾಜ್ಯಕ್ಕೆ ಮರಳಿ ಕಳುಹಿಸಬೇಕು ಅಥವಾ ಸ್ಥಳದಲ್ಲಿಯೇ ಕೋವಿಡ್ ಟೆಸ್ಟ್ ಮಾಡಬೇಕು ಎಂದರು. ಜಿಲ್ಲೆಯ ಹೆದ್ದಾರಿ ಪಕ್ಕದಲ್ಲಿರುವ ನರೇಂದ್ರ, ಯರಿಕೊಪ್ಪ, ಬೈಪಾಸ್ ರಸ್ತೆ, ಟೋಲ್‍ಗೇಟ್ ಹತ್ತಿರ ಹಾಗೂ ನವಲೂರ ಬಳಿ ಮಾವು ಮಾರಾಟದ ಕೇಂದ್ರಗಳನ್ನು ತಾತ್ಕಾಲಿಕವಾಗಿ ರೈತರು ಹಾಗೂ ವ್ಯಾಪಾರಿಗಳು ಆರಂಭಿಸಿರುತ್ತಾರೆ. ಇಲ್ಲಿಗೆ ಹೊರರಾಜ್ಯ ವಿಶೇಷವಾಗಿ ಮಹಾರಾಷ್ಟ್ರದಿಂದ ಹೆಚ್ಚು ಜನ ಮಾವು ಖರೀದಿಗಾಗಿ ಬರುವುದರಿಂದ ಆರೋಗ್ಯ ಇಲಾಖೆ ಹಾಗೂ ಪಾಲಿಕೆಯ ಅಧಿಕಾರಿಗಳು ಮುಂಜಾಗೃತೆ ವಹಿಸಬೇಕೆಂದು ಅವರು ಹೇಳಿದರು.

ಖಾಸಗಿ ಬಸ್ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ:

ಜಿಲ್ಲೆಗೆ ಪ್ರತಿದಿನ ವಿವಿಧ ಖಾಸಗಿ ಹಾಗೂ ಸರ್ಕಾರಿ ಬಸ್ ಮೂಲಕ ಹೊರರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ವರದಿ ಹೊಂದಿರದಿದ್ದಲ್ಲಿ ಪ್ರತಿ ಪ್ರಯಾಣಿಕರಿಗೆ ಆರ್‍ಟಿಪಿಸಿಆರ್ ಮೂಲಕ ಸ್ಥಳದಲ್ಲಿಯೇ ಕೋವಿಡ್ ಟೆಸ್ಟ್ ಮಾಡಬೇಕು. ಇದು ಪ್ರತಿ ದಿನ ಪುನರಾವರ್ತನೆಯಾದರೆ ಅಂತಹ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿ ಅಂತಹ ಬಸ್‍ನ್ನು ಪ್ರಯಾಣಿಕರ ಸಮೇತ ಮರಳಿ ಕಳುಹಿಸಬೇಕು ಅಥವಾ ಸೀಜ್ ಮಾಡಬೇಕೆಂದು ಪಾಲಿಕೆಯ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ., ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ., ಕಿಮ್ಸ್ ನಿರ್ದೇಶಕ ಡಾ.ರಾಮಚಂದ್ರ ಅಂಟರಠಾಣಿ, ಲಕ್ಷ್ಮೀಕಾಂತ ಲೋಕರೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ್ ಮಾನಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಆರ್‍ಸಿಎಚ್‍ಓ ಡಾ. ಎಸ್.ಎಂ. ಹೊನಕೇರಿ, ಡಿವೈಎಸ್‍ಪಿ ಎಂ.ಬಿ. ಸಂಕದ, ಡಿಮ್ಯಾನ್ಸ್‍ದ ಅಧಿಕಾರಿ ಮಂಜುನಾಥ ನಾಯಕ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್, ಪಾಲಿಕೆಯ ಜಂಟಿ ಆಯುಕ್ತ ಅಜೀಜ್ ದೇಸಾಯಿ, ತಹಶೀಲ್ದಾರಗಳಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ನವೀನ ಹುಲ್ಲೂರ, ಅಶೋಕ ಶಿಗ್ಗಾಂವಿ, ಕೊಟ್ರೇಶ್ ಗಾಳಿ, ಅಮರೇಶ್ ಪಮ್ಮಾರ ಮತ್ತು ತಾ.ಪಂ. ಇಓ ಎಸ್.ಎಸ್. ಕಾದ್ರೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸದ್ದರು.

LEAVE A REPLY

Please enter your comment!
Please enter your name here