ಹೆಣ್ಣಿನ ಸ್ವಾತಂತ್ರ ಸಾಧನೆಯ ಪ್ರತೀಕವಾದ ಅಕ್ಕಮಹಾದೇವಿ ಸ್ತ್ರೀ ಕುಲದ ಮಾದರಿ; ಜಿ.ಎಂ.ಪ್ರದೀಪ್ ಕುಮಾರ್

0
109

ಪ್ರಾಪಂಚಿಕ ಬದುಕಿನ ಅಹಂಕಾರ ಮಮಕಾರ ಮತ್ತು ವಿಕಾರಗಳನ್ನ ತನ್ನ ಆತ್ಮಶಕ್ತಿಯಿಂದ ಜಯಿಸಿ ನೀರ ತಾವರೆಯಂತೆ ನಿರ್ಲಿಪ್ತವಾಗಿ ಬದುಕಿ ಹೆಣ್ಣಿನ ಗೌರವ ಸಾಧನೆಯ, ಸ್ವಾತಂತ್ರ ಸಾಧನೆಯ ಮತ್ತು ಪಾರಮಾರ್ಥ ಸಾಧನೆಯ ಒಂದು ಮಹಾಪ್ರಕರಣವಾಗಿ ಬೆಳೆದು ನಿಂತ ಮಹಾನ್ ಚೇತನ, ವ್ಯೆರಾಗ್ಯ ನಿಧಿ ಅಕ್ಕಮಹಾದೇವಿ ಆಧ್ಯಾತ್ಮ, ಆತ್ಮ ಚಿಂತನೆ, ಸಮಾನತೆ ಮತ್ತು ಸ್ವತಂತ್ರವಾಗಿ ವಿಚಾರ ಮಾಡುವ ಅಭಿವ್ಯಕ್ತಿಗೆ ನಾಂದಿ ಹಾಡಿ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದಾಳೆ ಎಂದು ಬನ್ನಿಹಟ್ಟಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ
ಜಿ.ಎಂ. ಪ್ರದೀಪ್ ಕುಮಾರ್ ಅಭಿಪ್ರಾಯ ಪಟ್ಟರು.

ಶ್ರೀಶೈಲೇಶ್ವರ ವಿದ್ಯಾ ಕೇಂದ್ರ ಸಂಡೂರಿನಲ್ಲಿ ಶನಿವಾರ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಸಂಡೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಲಾಗಿದ್ದ ಮಹಾಮನೆ ಕಾರ್ಯಕ್ರಮ ಹಾಗೂ ಬಳ್ಳಾರಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ವೈರಾಗ್ಯ ನಿಧಿ ಅಕ್ಕಮಹಾದೇವಿಯ ಅನುಭಾವ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಇವರು ಹೆಣ್ಣಾಗಿ ಹುಟ್ಟಿ ವಿರಕ್ತಯಾಗಿ ಅನುಭವಿಯಾಗಿ ಬಾಳಿದ ಅಕ್ಕನ ಬದುಕೆ ಒಂದು ಅಚ್ಚರಿಯ ಲೀಲೆಯಾಗಿದ್ದು, ಲೋಕದೊಳಗಿದ್ದು ಲೋಕತ್ತರವಾಗಿ ಬೆಳೆದ ಅಕ್ಕಮಹಾದೇವಿಯ ವ್ಯಕ್ತಿತ್ವ ಸಿದ್ಧಿಯ ದಿವ್ಯ ಪ್ರಭೆ ಹಾಗೂ ಅಸದೃಶ್ಯತೆಯನ್ನು ನಾವು ಆಕೆಯ ವಚನಗಳಲ್ಲಿ ಗ್ರಹಿಸಬಹುದು ಎಂದರು.

ಸಂಖ್ಯೆ ಮತ್ತು ಸತ್ವಗಳ ದೃಷ್ಟಿಯಿಂದ ಕೂಡ ಮೌಲ್ಯವಾಗಿರುವಂತಹ ಅಕ್ಕನ ವಚನಗಳಲ್ಲಿ ಜೀವನ ಮೌಲ್ಯಗಳು ತುಂಬಿದ್ದು ಒಂದೊಂದು ವಚನವು ಇಂದಿನ ಕಲುಷಿತ ಸಮಾಜಕ್ಕೆ ದಾರಿದೀಪಗಳಾಗಿದ್ದು ಅಕ್ಕನ ಹೆದ್ದಾರಿಯಲ್ಲಿ ಅವಳ ಅನುಭವ ಪಥದ ಬೆಳಕಿನೊಂದಿಗೆ ನಾವು ನೀವೆಲ್ಲರೂ ಸಾಗಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಸಂಡೂರು ವಿರಕ್ತ ಮಠದ ಪ್ರಭುಸ್ವಾಮಿಗಳು ಬಳ್ಳಾರಿ ಜಿಲ್ಲೆಯು ಸಾಹಿತ್ಯ ಮತ್ತು ಸಂಸ್ಕೃತಿಯ ಸೃಷ್ಟಿ ಭೂಮಿಯಾಗಿದ್ದು ವಚನ ಸಾಹಿತ್ಯದ ಕರ್ಮಭೂಮಿಯು ಆಗಿದೆ. ಶರಣ ಸಾಹಿತ್ಯ ಪರಿಷತ್ತು ಶರಣರ ಚಿಂತನೆಗಳನ್ನು ಮತ್ತು ಆದರ್ಶಗಳನ್ನು ಸಮಾಜದಲ್ಲಿ ಹರಡುವಂತಹ ಕಾಯಕದಲ್ಲಿ ನಿರತವಾಗಿದ್ದು ಈ ಪರಿಷತ್ತಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕದಳಿ ಮಹಿಳಾ ವೇದಿಕೆಯು ಉದ್ಘಾಟನೆ ಗೊಂಡಿದ್ದು ಈ ವೇದಿಕೆಯು ಮುಂದಿನ ದಿನಗಳಲ್ಲಿ ವಚನಗಳ ಮಹತ್ವವನ್ನು ಹಾಗೂ ಶರಣ ಶರಣೆಯರ ಜೀವನ ತತ್ವಗಳನ್ನು ಸಮಾಜದಲ್ಲಿ ಪಸರಿಸುವಂತಹ ಬಹುದೊಡ್ಡ ಹೊಣೆಗಾರಿಕೆಯನ್ನು ಹೊಂದಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆಬಿ ಸಿದ್ದಲಿಂಗಪ್ಪ ಇವರು ಮೈಸೂರಿನ ಸುತ್ತೂರು ಶ್ರೀಗಳ ಒತ್ತಾಸೆಯಂತೆ ರಾಜ್ಯದ ವಿವಿದೆಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕದಳಿ ಮಹಿಳಾ ವೇದಿಕೆಗಳು ಸಂಕುಚಿತ ಮನೋಭಾವಗಳಿಂದ ಹೊರತಾಗಿದ್ದು ಉನ್ನತ ಮೌಲ್ಯಗಳನ್ನ ಹೊಂದಿದ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದ್ದು ಸಮಾಜವೇ ಒಂದು ಕುಟುಂಬವಾಗಿ ಕಾಣುವಂತಹ ವಾತಾವರಣವನ್ನು ನಿರ್ಮಿಸುವಂತಹ ಕಾರ್ಯಕ್ಕೆ ಮುಂದಾಗ ಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಆಡಳಿತಾಧಿಕಾರಿ ಕುಮಾರ್ ನಾನಾವಟೆ ಅವರು ಧಾರ್ಮಿಕ ಹಾಗೂ ಶರಣ ಶ್ರೇಷ್ಠರ ವಿಚಾರಧಾರೆಗಳು ನಮ್ಮ ಜೀವನದ ಔನ್ನತ್ಯಕ್ಕೆ ಪ್ರೇರಣೆಯಾಗಿದ್ದು ಅವುಗಳ ಮಹಾ ಬೆಳಕಿನಲ್ಲಿ ನಮ್ಮ ಜೀವನದ ಪಾವನತೆಯನ್ನು ಕಂಡುಕೊಳ್ಳಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಡೂರು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ನಾಗನಗೌಡ ಇವರು ವಚನ ಪರಂಪರೆಯಲ್ಲಿ ಶ್ರೇಷ್ಠ ವಚನಕಾರ್ತಿಯಾಗಿ ಗುರುತಿಸಿಕೊಂಡಿರುವ ಅಕ್ಕಮಹಾದೇವಿಯ ವಚನಗಳು ಪ್ರತಿಯೊಬ್ಬರ ಮನೆಮನೆಗಳನ್ನ ಮುಟ್ಟುವಂತಾಗಬೇಕು ತನ್ಮೂಲಕ ಮೌಲ್ಯಯುತ ಜೀವನ ಪಥ ನಮ್ಮದಾಗಬೇಕು ಎಂದರು. ಕಾರ್ಯಕ್ರಮದ ಅತಿಥಿಗಳಾಗಿ ನಾಡೋಜ ಪ್ರಶಸ್ತಿ ಪುರಸ್ಕೃತ ಸಂಡೂರಿನ ಹೆಸರಾಂತ ಚಿತ್ರ ಕಲಾವಿದರಾದ ವಿ ಟಿ ಕಾಳೆ, ವಿಜಯನಗರ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸವಿತಾ ಆನಂದ್ ಅವರು ಉಪಸ್ಥಿತರಿದ್ದರು. ಬಳ್ಳಾರಿ ಸಿರುಗುಪ್ಪ ಹಗರಿಬೊಮ್ಮನಹಳ್ಳಿ ಕುರುಗೋಡು ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ವಿವಿಧ ಮಹಿಳಾ ಸಂಘಗಳ ಪದಾಧಿಕಾರಿಗಳು, ಶ್ರೀಶೈಲ ಶ್ವರ ವಿದ್ಯಾ ಕೇಂದ್ರದ ಬೋಧಕ ಸಿಬ್ಬಂದಿ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

ಈ ಸಂದರ್ಭದಲ್ಲಿ ಶಿಕ್ಷಕಿ ನೀಲಾಂಬಿಕೆ ಇವರು ಬಳ್ಳಾರಿ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷತೆಯನ್ನು ಸ್ವೀಕರಿಸಿದರು..ಸಂಗೀತ ಕಲಾವಿದರಾದ ತಾಯಪ್ಪ, ಭರತ್ ರೆಡ್ಡಿ ಹಾಗೂ ಕುಮಾರಸ್ವಾಮಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಶೈಲ ವಿದ್ಯಾ ಕೇಂದ್ರದ ಕನ್ನಡ ಉಪನ್ಯಾಸಕಿ ಸುನಂದ ಇವರು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಎ ಎಂ ಶಿವ ಮೂರ್ತಿ ಸ್ವಾಮಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here