ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿ.ಐ.ಎಸ್.ಎಲ್)

0
146

ಮೈಸೂರು ಒಡೆಯರ ಆಳ್ವಕೆಗೆ ಒಳಪಟ್ಟ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ನಿರ್ಮಾಣ ಮಾಡುವ ಮಹತ್ತರ ಜವಾಬ್ದಾರಿಯನ್ನು ಸಂಸ್ಥಾನದ ಅಂದಿನ ಇಂಜಿನಿಯರ್ ಆಗಿದ್ದ ಸರ್. ಎಂ. ವಿಶ್ವೇಶ್ವರಯ್ಯ ಅವರಿಗೆ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್.ಎಂ.ವಿ ಯವರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಾಪನೆ ಮಾಡಲು ಆಯ್ಕೆ ಮಾಡಿಕೊಂಡ ಸ್ಥಳವೆ ಬೆಂಕಿಪುರ. ಅದುವೇ ಈಗಿನ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು.

20ನೇ ಶತಮಾನದ ಆದಿಭಾಗದಲ್ಲಿ ಬೆಂಕಿಪುರದ ಭದ್ರಾನದಿಯ ದಂಡೆಯ ಮೇಲೆ ಸರ್.ಎಂ.ವಿ ಯವರು 1600 ಎಕರೆ ವಿಸ್ತೀರ್ಣದಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಾಪನೆ ಮಾಡಿದರು. ತದನಂತರ ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯಾರ್ ಆಳ್ವಕೆಯ ಕಾಲದಲ್ಲಿ ಬೆಂಕಿಪುರಕ್ಕೆ ಭದ್ರಾವತಿ ಎಂದು ಮರುನಾಮಕರಣ ಮಾಡಲಾಯಿತು.

ಬಾಬ ಬುಡನ್‌ಗಿರಿ ಬೆಟ್ಟಗಳಲ್ಲಿ ಮತ್ತು ಕೆಮ್ಮಣ್ಣುಗುಂಡಿ ಬಳಿ ಇರುವ ಶ್ರೀಮಂತ ಅದಿರು ನಿಕ್ಷೇಪಗಳನ್ನು ಸಮರ್ಥವಾಗಿ ಬಳಸಿಕೊಂಡು ಕಬ್ಬಿಣದ ಅದಿರು ಮತ್ತು ಇತರ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೈಗಾರಿಕೆಯನ್ನು ಸ್ಥಾಪನೆ ಮಾಡಲಾಯಿತು. ಭದ್ರಾವತಿಯಲ್ಲಿ ಕಾರ್ಖಾನೆಯನ್ನು ಸ್ಥಾಪನೆ ಮಾಡುವ ಉದ್ದೇಶದಿಂದ 1915-16 ರಲ್ಲಿ ಪ್ರಾಥಮಿಕ ತನಿಖೆಯನ್ನು ಮಾಡಲಾಯಿತು. ಈ ಸಂಶೋಧನೆಯು ನ್ಯೂಯಾರ್ಕ್ ಮೂಲದ ಸಂಸ್ಥೆಯಿಂದ ಮಾಡಲ್ಪಟ್ಟಿತು. ನಂತರ 1918 ರಿಂದ 1922ರ ಕಾಲಾವಧಿಯಲ್ಲಿ ಸುಮಾರು 1600 ಎಕರೆ ವಿಸ್ತೀರ್ಣದಲ್ಲಿ ಕಾರ್ಖಾನೆ ಸ್ಥಾಪನೆಗೊಂಡಿತು.

ಮದ್ರಾಸ್, ಅಹಮದಾಬಾದ್, ಕರಾಚಿ ಮತ್ತು ಬಾಂಬೆಯಲ್ಲಿ ಮಾರಾಟ ಕಛೇರಿಗಳನ್ನು ತೆರೆಯಲಾಯಿತು. ತದನಂತರ ಕಾರ್ಖಾನೆಯ ಹೆಸರನ್ನು ಮೈಸೂರು ಐರನ್ ಮತ್ತು ಸ್ಟೀಲ್‌ವರ್ಕ್ಸ್ ಎಂದು ಬದಲಾಯಿಸಲಾಯಿತು.

1962ರಲ್ಲಿ ಕಂಪನಿಯ ಹೆಸರನ್ನು ದಿ ಮೈಸೂರು ಐರನ್ ಅಂಡ್ ಸ್ಟೀಲ್ ಲಿಮಿಟೆಡ್ ಎಂದು ಬದಲಾಯಸಲಾಯಿತು. ನಂತರ ಕಂಪನಿಯನ್ನು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಒಡೆತನ ಸರ್ಕಾರಿ ಕಂಪನಿಯಾಗಿ ಅನುಕ್ರಮ 40:60ರ ಷೇರು ಅನುಪಾತದೊಂದಿಗೆ ಪರಿವರ್ತಿಸಲಾಯಿತು.

1962ರಲ್ಲಿ ಹೊಸ ಮಾದರಿಯ ಉಕ್ಕಿನ ಸ್ಥಾವರಗಳನ್ನು ಸ್ಥಾಪಿಸಲಾಯಿತು. ಮತ್ತು ಹೊಸ ಎಲ್‌ಡಿ ಪ್ರಕ್ರಿಯೆಯನ್ನು ಬಳಸಿಕೊಂಡು ಉಕ್ಕನ್ನು ತಯಾರಿಸುವಲ್ಲಿ ಯಶಸ್ವಿಯಾಯಿತು. ಕಂಪನಿಯ ಏಳಿಗೆಗೆ ಶ್ರಮಿಸಿದ ಸಂಸ್ಥಾಪಕರನ್ನು ಗೌರವಿಸುವ ನಿಟ್ಟಿನಲ್ಲಿ 1988ರಲ್ಲಿ ಕಂಪನಿಯ ಹೆಸರನ್ನು ವಿಶ್ವೇಶ್ವರಯ್ಯ ಐರನ್ ಆಂಡ್ ಸ್ಟೀಲ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. 1989ರಲ್ಲಿ ಇದನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯು ತನ್ನ ಅಂಗಸಂಸ್ಥೆಯಾಗಿ ಸ್ವಾಧೀನಪಡಿಸಿಕೊಂಡಿತು. 1988ರಲ್ಲಿ ವಿಐಎಸ್‌ಎಲ್‌ಅನ್ನು ಎಸ್‌ಎಐಎಲ್‌ನಲ್ಲಿ ವಿಲೀನಗೊಳೀಸಲಾಯಿತು.

ನಂತರ ಕಾರ್ಖಾನೆಗೆ ಹೊಸಪೇಟೆಯಿಂದ ಸರಬರಾಜಾಗುವ ಕಬ್ಬಿಣದ ಮ್ಯಾಂಗನೀಸ್ ಅದಿರುಗಳನ್ನು ಕಚ್ಚಾವಸ್ತುಗಳಾಗಿ ಬಳಸಿಕೊಂಡು ಆಲಾಯ್ ಸ್ಟೀಲ್‌ನ್ನು ತಯಾರು ಮಾಡಲಾಗುತ್ತಿತ್ತು. ಇದು ದೇಶದ ಇತರೆ ರಾಜ್ಯಗಳಿಗೆ ಮತ್ತು ವಿದೇಶಗಳಿಗೂ ರಫ್ತಾಗುತ್ತದೆ. ಕಾರ್ಖಾನೆಯು ಭಾರತ ಸರ್ಕಾರದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನ ಆಡಳಿತಕ್ಕೆ ಒಳಪಟ್ಟಿದೆ.

ಹೀಗೆ ತನ್ನ ಕಾರ್ಯ ವೈಖರಿಯಿಂದ ಉತ್ತಮವಾಗಿ ನಡೆಯುತ್ತಿದ್ದ ಕಂಪನಿಯು ಹಲವಾರು ಕಾರಣಗಳಿಂದಾಗಿ ನಷ್ಟದ ಸುಳಿಗೆ ಸಿಕ್ಕಿ ಪ್ರಸ್ತುತ ಸಂಪೂರ್ಣವಾಗಿ ನಿಂತು ಹೋಗುವ ಹಂತವನ್ನು ತಲುಪಿದೆ.

ಇಲ್ಲಿಗೆ ಭೇಟಿ ನೀಡಲು ಪ್ರತಿ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ಮಾತ್ರ ಅವಕಾಶವನ್ನು ನೀಡಲಾಗಿದ್ದು ಆಸಕ್ತರು 01 ತಿಂಗಳ ಮುಂಚಿತ ಅನುಮತಿಯನ್ನು ಪಡೆಯಬೇಕು.

LEAVE A REPLY

Please enter your comment!
Please enter your name here