ಎಲ್ಲಾ ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಜ್ವರ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಎಸ್.ಅಶ್ವತಿ.

0
112

ಮಂಡ್ಯ.ನ 04 :-ಕಾಲು ಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕುವುದೊಂದೆ ಮಾರ್ಗವಾಗಿದ್ದು ಪ್ರತಿ 6 ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಎಲ್ಲಾ ಜಾನು ವಾರುಗಳಿಗೆ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಇಲಾಖಾ ವತಿಯಿಂದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಸಂಬಂಧ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಲುಬಾಯಿ ರೋಗ ನಿಯಂತ್ರಣ ಹಾಗೂ ರೋಗ ನಿರ್ಮೂಲನೆ ಮಾಡುವುದು ಬಹಳ ಮುಖ್ಯ. ಕೇಂದ್ರ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಇದಕ್ಕಾಗಿ ಹಮ್ಮಿಕೊಂಡಿದ್ದು ಜಿಲ್ಲೆಯಲ್ಲಿ ನವೆಂಬರ್ 08 ರಿಂದ ಡಿಸೆಂಬರ್ 05 ರ ವರೆಗೆ ಜಿಲ್ಲೆಯಾದ್ಯಂತ 1729 ಹಳ್ಳಿಗಳಲ್ಲಿ ಉಚಿತವಾಗಿ ಸಾಮೂಹಿಕವಾಗಿ 2 ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಎಂದರು.

ಕಾಲು ಮತ್ತು ಬಾಯಿ ಜ್ವರವು ಗೊರಸುಳ್ಳ ಸಾಕು ಪ್ರಾಣಿಗಳಲ್ಲಿ ಕಂಡು ಬರುವ ರೋಗವಾಗಿದೆ. ದನ, ಎಮ್ಮೆ, ಕುರಿ, ಮೇಕೆ, ಹಂದಿಗಳಲ್ಲಿ ವೈರಸ್‍ನಿಂದ ಉಂಟಾಗುವ ಸಾಂಕ್ರಾಮಿಕ ರೋಗವಿದು. ಸಕಾಲದಲ್ಲಿ ಲಸಿಕೆ ಹಾಕಿಸಿ ರೋಗವನ್ನು ನಿಯಂತ್ರಿಸದಿದ್ದರೆ, ಜಾನುವಾರುಗಳು ಸಾವನ್ನಪ್ಪಲಿದ್ದು, ರೈತರಿಗೆ ನಷ್ಟ ಉಂಟಾಗಲಿದೆ ಎಂದು ಹೇಳಿದರು.

ಈ ಜ್ವರ ಕಂಡುಬಂದಂತಹ ಜಾನುವಾರುಗಳಲ್ಲಿ ಹಾಲಿನ ಉತ್ಪತ್ತಿ ಕುಂಠಿತವಾಗುತ್ತದೆ. ಸಂತಾನೋತ್ಪತ್ತಿ ಕುಂಠಿತವಾಗುವ ಸಂಭವವೂ ಇರುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಣಿ ಜನ್ಯ ಉತ್ಪನ್ನಗಳನ್ನು (ಹಾಲು, ಮಾಂಸ ಇತರೆ) ರಪ್ತು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ರೈತರು ಎಚ್ಚರಿಕೆ ವಹಿಸಬೇಕು ಎಂದರು.

ಕಾಲು ಮತ್ತು ಬಾಯಿ ಜ್ವರ ರೋಗದಿಂದ ವಯಸ್ಕ ಜಾನುವಾರುಗಳ ಸಾವು ಸಂಭವಿಸುವುದು ಕಡಿಮೆ. ಆದರೆ, ಕರುಗಳು ಯಾವುದೇ ರೋಗದ ಚಿಹ್ನೆಗಳು ಇಲ್ಲದೆ ಮರಣ ಹೊಂದುತ್ತವೆ. ವಯಸ್ಕ ಜಾನುವಾರುಗಳಲ್ಲಿ ಕಾಲು ಮತ್ತು ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳ್ಳುತ್ತವೆ. ಇದರಿಂದ ಜಾನುವಾರುಗಳು ಮೇವು, ನೀರು ಸೇವಿಸದೇ ಸೊರಗುತ್ತವೆ ಎಂದರು.

ಜಿಲ್ಲೆಯಲ್ಲಿ 4,79,450 ಲಕ್ಷ ಡೋಸ್ ಲಸಿಕೆಯನ್ನು ಪಶು ಆಸ್ಪತ್ರೆ ಮಂಡ್ಯ ಹಾಗೂ ನಾಗಮಂಗಲ ಪಶು ಆಸ್ಪತ್ರೆ ಇಲ್ಲಿರುವ ವಾಕ್ ಇನ್ ಕೂಲರ್ ಗಳಲ್ಲಿ ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿ 4.79.429 ಜಾನುವಾರುಗಳಿದ್ದು ,ಲಸಿಕೆ ಹಾಕಲು 279 ಲಸಿಕೆದಾರರನ್ನು ನಿಯೋಜಿಸಿ, ಇಬ್ಬರು ಲಸಿಕಾದಾರರನ್ನೊಳಗೊಂಡ ತಂಡವನ್ನು ರಚಿಸಿ, ಪ್ರತಿ ತಂಡಕ್ಕೆ ಒಬ್ಬ ಪಶುವೈದ್ಯಾಧಿಕಾರಿಯನ್ನು ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಕರು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ.ಮಂಜುನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜುಮೂರ್ತಿ ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here