ಶಿಕ್ಷಕ,ಸಾಹಿತಿ,ಸಮಾಜಸೇವಕ,ಚಿಂತಕ ಬೆಳಗೆರೆ ಕೃಷ್ಣಶಾಸ್ತ್ರಿ

0
144

ಬೆಳಗೆರೆ ಕೃಷ್ಣಶಾಸ್ತ್ರಿ ಅವರನ್ನು ಓದಿದರೆ ಕಳೆದ ಶತಮಾನ ಕಂಡ ಗ್ರಾಮೀಣ ಸರಳ – ಸುಂದರ – ನಿಷ್ಕಲ್ಮಶ ಜೀವಿಗಳ ಬದುಕು; ಶಾಲಾ ಮಟ್ಟದ ಶಿಕ್ಷಕ ವರ್ಗದಲ್ಲಿದ್ದ ಪಾಂಡಿತ್ಯ, ಪಾಠ ಎಂಬುದು ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುವುದಲ್ಲ, ಇಡೀ ಸಮಾಜವೇ ನನ್ನದು ಎಂಬ ವಿಶಾಲ ಮನೋಭಾವ; ಶ್ರೇಷ್ಟ ಸಾಹಿತಿಗಳು – ಸಮಾಜ ಸೇವಕರು ಅಂದರೆ ಯಾರು; ಆಧ್ಯಾತ್ಮ ಅಂದರೆ ಅಂಧ ತಪಸ್ಸಲ್ಲ; ಯೋಗಿಗಳು ಹೇಗಿರುತ್ತಾರೆ; ದೇವರ ಹೆಸರು ಹೇಳದೆ ಇದ್ದವರೂ ಬದುಕಿನ ರೀತಿಯಿಂದ ಹೇಗೆ ತಪಸ್ವಿಯಂತಿರಬಹುದು; ಜಾತಿ ಮತ ಧರ್ಮಗಳ ಮೀರಿ ಹೇಗೆ ಅಂತರಂಗದಿಂದ ಒಂದಾಗಿರಬಹುದು ಹೀಗೆ ಅನೇಕ ಅನೇಕ ಸಂಗತಿಗಳು ಆಪ್ತವಾಗಿ ಹೃದಯದ ಕದವನ್ನು ತಟ್ಟುತ್ತಾ ಹೋಗುತ್ತದೆ. ಹೀಗೆ ಬದುಕಿದ್ದರೆ ಚೆನ್ನ ಅಂತ ಅನಿಸಿದ ಮಹತ್ವದ ಬದುಕುಗಳಲ್ಲಿ ಒಂದು ಬದುಕು ಬೆಳಗೆರೆ ಕೃಷ್ಣಶಾಸ್ತ್ರಿ ಅವರದ್ದು.

ಬೆಳಗೆರೆ ಕೃಷ್ಣಶಾಸ್ತ್ರಿಗಳು 1916ರ ಮೇ 22 ರಂದು ಚಿತ್ರದುರ್ಗ ಜಿಲ್ಲೆಯ ಬೆಳಗೆರೆಯಲ್ಲಿ ಜನಿಸಿದರು. ತಂದೆ ಆಶುಕವಿ ಚಂದ್ರಶೇಖರ ಶಾಸ್ತ್ರಿಗಳು ಮತ್ತು ತಾಯಿ ಮೋಕ್ಷಗುಂಡಂ ಅನ್ನಪೂರ್ಣಮ್ಮ ಅವರು. ಅಣ್ಣ ಕ್ಷೀರಸಾಗರ ಅವರು ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಹಲವಾರು ನಾಟಕ ಮತ್ತು ಕಾದಂಬರಿಗಳಿಗೆ ಹೆಸರಾದವರು. ಅಕ್ಕ ಬೆಳಗೆರೆ ಜಾನಕಮ್ಮ ಕವಯಿತ್ರಿ. ತಂಗಿ ಬೆಳಗೆರೆ ಪಾರ್ವತಮ್ಮ ಸಂಗೀತ, ಗಮಕ ಕಲಾವಿದೆ.

ಬೆಳಗೆರೆ ಕೃಷ್ಣಶಾಸ್ತ್ರಿಗಳ ಪ್ರಾಥಮಿಕ ವಿದ್ಯಾಭ್ಯಾಸ ಹಳ್ಳಿಯಲ್ಲಿ ನೆರವೇರಿತು. ಎಸ್.ಎಸ್.ಎಲ್.ಸಿ. ಪಾಸಾದ ನಂತರ ಕೆಲಕಾಲ ಶಾನುಭೋಗರಾಗಿದ್ದು ಅಧ್ಯಾಪಕ ವೃತ್ತಿಗೆ ಸೇರಿದರು. ಚಳ್ಳಕೆರೆಯಲ್ಲಿ ಬದಲಿ ಶಿಕ್ಷಕರಾಗಿ ನೌಕರಿ ಹಿಡಿದದ್ದು ಇವರ ಜೀವನದ ಗತಿಯನ್ನೇ ಬದಲಿಸಿತು.

ಇದ್ದಕ್ಕಿದ್ದಂತೆ ಒಂದೇ ದಿನ ಇಬ್ಬರು ಮಕ್ಕಳು, ಹೆಂಡತಿಯನ್ನು ಕಳೆದುಕೊಂಡ ಮನೆಯಲ್ಲಿ ಸ್ಮಶಾನ ಮೌನ. ಸ್ಕೂಲಿಗೆ ರಜೆ ಹಾಕದೆ, ಮನೆಗೆ ಬೀಗ ಹಾಕದೆ ಹಿಮಾಲಯದತ್ತ ಹೊರಟುಬಿಟ್ಟರು. ಉತ್ತರ ಭಾರತ, ದಕ್ಷಿಣೇಶ್ವರ, ತಿರುವಣ್ಣಾಮಲೈ ಹೀಗೆ ಸುತ್ತಿ ಕಡೆಗೆ ಗಾಂಧೀಜಿಯವರ ಭೇಟಿಯಾದರು.
“ಅಧ್ಯಾಪನ ಮಾಡಿ ಮಕ್ಕಳಿಗೆ ನಾಲ್ಕಕ್ಷರ ಕಲಿಸು, ಜೀವನ ಸಾರ್ಥಕ ಮಾಡಿಕೋ” ಎಂದಾಗ ಮತ್ತೆ ಹಳ್ಳಿಗೆ ಬಂದರು.

ಬೆಳಗೆರೆ ಕೃಷ್ಣಶಾಸ್ತ್ರಿಗಳು ಮೀರಾಸಾಬಿ ಹಳ್ಳಿ, ಹೆಗ್ಗೆರೆ ಮುಂತಾದ ಹಳ್ಳಿಗಳಲ್ಲಿ, ಜನರನ್ನು ಪ್ರಚೋದಿಸಿ ಪಾಠಶಾಲೆ, ಆಸ್ಪತ್ರೆ ತೆರೆದರು. ಹೊದೆಡೆಯಲ್ಲೆಲ್ಲ ವ್ಯವಸ್ಥಿತ ಶಾಲೆ, ಆಸ್ಪತ್ರೆ ಮುಂತಾದ ಕಟ್ಟಡಗಳ ವ್ಯವಸ್ಥೆಗಳು ರೂಪುಗೊಳ್ಳುವಂತೆ ಮಾಡಿದರು. ಇದಕ್ಕಾಗಿ ಅವರು ಹಳ್ಳಿಗಳಲ್ಲಿ ಜನರ ಮನಸ್ಸುಗಳನ್ನು ಒಂದು ಮಾಡಿ ಉತ್ತಮ ಉದ್ದೇಶಗಳಲ್ಲಿ ಪಾಲ್ಗೊಳ್ಳಲು ಹಳ್ಳಿಗರನ್ನು, ನಾ ಮೊದಲು ತಾ ಮೊದಲು ಎಂದು ಬರುವಂತೆ ಮಾಡಿದ್ದು ಒಂದು ಅಪೂರ್ವ ಸೊಗಸಿನದು. ಅಣ್ಣ ಕ್ಷೀರಸಾಗರರ ಹೆಸರಿನಲ್ಲಿ ಬೆಳಗೆರೆಯಲ್ಲಿ ಶಾಲೆ ಕಟ್ಟಿದರು. ಹಲವು ನೂರು ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ಇರುವ ಶಾಲೆ ನಿರ್ಮಿಸಿದರು. ತಾವು ಮಾತ್ರಾ ಜಮೀನಿನ ಮಧ್ಯೆ ಗುಡಿಸಲಲ್ಲಿ ಜೀವಿಸಿದರು.

ಬೆಳಗೆರೆ ಕೃಷ್ಣಶಾಸ್ತ್ರಿಗಳು ನಾಟಕ, ಪ್ರವಚನ, ಕನ್ನಡದ ಪ್ರಾಚೀನ ಕವಿಗಳ ಸಾಹಿತ್ಯೋತ್ಸವ, ಜಾನಪದ ಉತ್ಸವ, ಸಾಹಿತಿಗಳ ಉಪನ್ಯಾಸ, ಗ್ರಾಮೀಣ ಸಾಂಸ್ಕೃತಿಕ ಉತ್ಸವಗಳನ್ನು ಏರ್ಪಡಿಸಿ ಹಳ್ಳಿಗಳಲ್ಲಿ ಸಾಂಸ್ಕೃತಿಕ ಸಾಮರಸ್ಯಗಳ ಜಾಗೃತಿಯನ್ನುಂಟು ಮಾಡುವಲ್ಲಿ ಮಹತ್ವದ ಪಾತ್ರವಹಿಸಿದರು. ಜೊತೆಗೆ ಅಲ್ಲಿನ ಜನಸಮುದಾಯದಲ್ಲಿ ಬದುಕನ್ನು ಉನ್ನತ ಧ್ಯೇಯ ಸಾಧನೆಗಳತ್ತ ಹೊರಳುವಂತೆ ಮಾಡಿಕೊಳ್ಳಲು ಸಂಚಲನವನ್ನು ತಂದರು.

ಬೆಳಗೆರೆ ಕೃಷ್ಣಶಾಸ್ತ್ರಿಗಳು ದೊಡ್ಡವರಲ್ಲಿ ಕಾಣುವ ‘ಸರಳತೆ’ ಒಂದು ವೈಶಿಷ್ಟ್ಯದ್ದದ್ದಾರೆ, ಅವರು ಸರಳ ಜನ ಸಾಮಾನ್ಯರಲ್ಲಿ ಕಾಣುವ ‘ದೊಡ್ಡತನ’ ಇನ್ನೂ ಮೇರುಮಟ್ಟದ್ದು. ಈ ನಿಟ್ಟಿನಲ್ಲಿ ಅವರ ‘ಮರೆಯಲಾದೀತೆ?’ ಕೃತಿ ಅಮೂಲ್ಯವಾದದ್ದು. ಸಿರಿಯಜ್ಜಿ ಅಂತಹ ಅನನ್ಯ ಜಾನಪದ ಗಾಯಕಿಯೇ ಅಲ್ಲದೆ ಗ್ರಾಮೀಣ ಬದುಕಿನಲ್ಲಿನ ಸಾಂಸ್ಕೃತಿಕ ಮತ್ತು ಕಲಾತ್ಮಕ ಬದುಕನ್ನು ಮೈಗೂಡಿಸಿಕೊಂಡ ಅನೇಕರನ್ನು ಶಾಸ್ತ್ರಿಗಳು ಭಾರತೀಯ ಶ್ರೇಷ್ಠ ವಿದ್ವಾಂಸರಿಗೆ ಮಾತ್ರವಲ್ಲದೆ ವಿದೇಶಿ ವಿದ್ವಾಂಸರಿಗೆ ಸಹಾ ಪರಿಚಯ ಮಾಡಿಕೊಟ್ಟಿದ್ದಾರೆ. ಇಲ್ಲಿ ಕಳ್ಳನಾದ ಕಳ್ನಿಂಗ ಎಂಬುವನಲ್ಲೂ ಮೈತುಂಬ ಒಡವೆ ಧರಿಸಿದ ಹೆಣ್ಣು ಮಗುವನ್ನು ಮನೆಗೆ ಬಿಟ್ಟು ಜಾಗರೂಕವಾಗಿರುವಂತೆ ಸೂಚಿಸುವ ಸಾಚಾತನವಿದೆ. ಮರಳ ಮೇಲೆ ಅಕ್ಷರ ಕಲಿತ ಸಿದ್ಧಯ್ಯ ಶಾಲೆಯ ಸಾಮಾನ್ಯ ಉಪಾಧ್ಯಾಯರೇ ಆಗಿದ್ದರೂ ಅವರು ತೆರೆದು ತೋರುವ ವಿದ್ವತ್ತು, ಪ್ರಾಮಾಣಿಕತೆ, ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ, ಶಿಕ್ಷಕರನ್ನೂ ಬೆಳೆಸಿದ ರೀತಿ ಮನಮುಟ್ಟುತ್ತದೆ. ರಾಜ್ ಕುಮಾರ್ ಅವರಿಗೂ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿ, ಗುರುಸ್ಥಾನ ಪಡೆದಿದ್ದ ಚಿನ್ನಪ್ಪನಂತ ಕಲಾವಿದ ಇಲ್ಲಿ ಬೆಳಗಿದ್ದಾರೆ. ಬಡತನದಲ್ಲಿದ್ದರೂ ಮಕ್ಕಳಿಗೆ ಅರ್ಥವಾಗಲಿಲ್ಲ ಎಂದು ಆ ಹುಡುಗನ ಮನೆಗೆ ಹೋಗಿ ಬೋಧಿಸಿದ ಹುಸೇನ್ ಸಾಬಿ, ಆತ ಮರಣವನ್ನಪ್ಪಿದ್ದಾಗ ಆತನಿಗೆ ಯಾರು ಯಾರು ಸಹಾಯ ಮಾಡಿದ್ದರೋ ಅವರನ್ನೆಲ್ಲಾ ಆತನ ಡೈರಿಯಲ್ಲಿ ಗುರುತಿಸಿ ಅವರನ್ನು ಹುಡುಕಿ ತನ್ನ ಕಷ್ಟದ ಸಂಪಾದನೆಯಲ್ಲಿ ಸಾಲ ತೀರಿಸಿದ ಆತನ ಪತ್ನಿ ಹುಸೇನಮ್ಮ ಅಂತಹ ವ್ಯಕ್ತಿಗಳ ಬಗ್ಗೆ ಏನು ತಾನೇ ಹೇಳುವುದು. 1940ರ ದಶಕದಲ್ಲೇ ಕೈ ಬರಹದಲ್ಲಿ ಏಕಾಕಿಯಾಗಿ ನಿಘಂಟು ಸಿದ್ಧಪಡಿಸಿದ ಅಲಿ ಸಾಬ್, ಪ್ರಾಣ ಒತ್ತೆಯಿಟ್ಟು ಹೋರಾಡಿ ಬ್ರಿಟಿಷರಿಂದ ಶಿಕ್ಷೆ ಅನುಭವಿಸಿದ್ದರೂ ತನ್ನ ಕಷ್ಟಕಾಲದಲ್ಲಿಯೂ ಸರಕಾರದ ಮಾಸಾಶಾಸನಕ್ಕೆ ಕೈಯೊಡ್ಡಲು ನಿರಾಕರಿಸಿದ ಪಾರವ್ವ, ಆದರ್ಶ ಶಿಕ್ಷಕ ಸಣ್ಣ ತಿಮ್ಮಯ್ಯ, ಶಾಲೆಯ ಕಟ್ಟಡಕ್ಕಾಗಿ ತಮ್ಮ ಮೌಲ್ಯಯುತ ಭೂಮಿಯನ್ನು ಕೊಟ್ಟ ಹನುಮಣ್ಣಗಳು, ತಮ್ಮ ಬಳಿ ಶಾಲೆ ಕಟ್ಟಡಕ್ಕೆ ದುಡ್ಡು ಕೇಳಲಿಲ್ಲ ಎಂದು ಕೋಪಿಸಿ ಹಣಕೊಟ್ಟ ತಿಮ್ಮಪ್ಪಯ್ಯ – ಸಣ್ಣಪ್ಪಯ್ಯ, ಊರಿಗಾಗಿ ದುಡಿದ ಉಪದ್ರವದಿಂದ ಊರೇ ಖಾಲಿಯಾದರೂ ಊರಿಗೆ ಕಾವಲಾಗಿ ನಿಂತ ಮಹಮದ್ ಹಯಾತ್ ಸಾಬ್, ಒರಟನಾದರೂ ಶಾಲೆಯ ಕೈಂಕರ್ಯಕ್ಕೆ ಹಗಲಿರುಳೂ ದುಡಿದು ಸಂತಸಪಟ್ಟ ಹೆಗ್ಗೆರೆಯ ಗಗ್ಗರಂಗಪ್ಪ, ತನಗೆ ಹಾದಿಯಲ್ಲಿ ಸಿಕ್ಕ ಬಹುಮೊತ್ತವನ್ನು ಯಾವುದೇ ಮೋಹವಿಲ್ಲದೆ ತಂದುಕೊಟ್ಟ ಎಮ್ಮೆ ತಮ್ಮಗ, ಹೃದಯವಂತೆ ವೈದ್ಯೆ ಗಿರಿಜಮ್ಮ, ಪ್ರಾಣ ಉಳಿಸಿದರೂ ತಾನು ನೀಡಿದ ಚಹಾಗೆ ಮಾತ್ರಾ ಕಾಸು ಪಡೆದ ಗಂಗಾರಾಮ್ ಹೀಗೆ ಅನೇಕ ವಿಶಿಷ್ಟ ವ್ಯಕ್ತಿಗಳು ಒಂದಾದ ನಂತರ ಒಂದರಂತೆ ಈ ಕೃತಿಯಲ್ಲಿ ನಮಗೆ ಸಂತಸದ ದಿಗ್ಭ್ರಮೆ ಮೂಡಿಸುತ್ತಾರೆ.

ಮಹಾತ್ಮಾ ಗಾಂಧೀಜಿ, ರಮಣ ಮಹರ್ಷಿ, ಜೆ. ಕೃಷ್ಣಮೂರ್ತಿ, ರಾನಡೆ, ರಾಮದಾಸರು, ವಿದ್ಯಾನಂದ ತ್ರಿಪಾಠಿ, ಜನಾರ್ದನ ಮಿಶ್ರ, ಇಚ್ಛಾಮರಣಿ ಗುಂಜ್ಜಪ್ಪ, ರಾಮೇಗೌಡ, ಕಣ್ಣಮ್ಮ, ಕರಡಿಗವಿ ಅಜ್ಜಯ್ಯ, ಸೇವಾಶ್ರಮದ ಲಿಂಗಣ್ಣ, ಮುಕುಂದೂರು ಸ್ವಾಮಿಗಳು, ಸಂಗಯ್ಯ ಸ್ವಾಮಿಗಳು ಮುಂತಾದ ವ್ಯಕ್ತಿಗಳ ಕುರಿತಾದ ಬೆಳಗೆರೆ ಕೃಷ್ಣಶಾಸ್ತ್ರಿಗಳ ಜ್ಞಾನ ಅರ್ಥೈಕೆಗಳು ಇನ್ನೊಂದು ತೆರನಾದದ್ದು. ಅವರು ಆಧ್ಯಾತ್ಮವೆಂಬ ಪದವನ್ನು ಬಳಸದೆಯೇ, ತಮ್ಮನ್ನು ಯಾವುದೇ ಗುಂಪಿಗೆ ಸೀಮಿತಗೊಳಿಸಿಕೊಳ್ಳದೆಯೇ, ವಿಶಾಲ ಮನಸ್ಸಿನಿಂದ ಎಲ್ಲ ತತ್ವಗಳಾಚೆ ನಿಂತು ತಮ್ಮ ಬದುಕಿನ ಪ್ರತಿ ನಡೆಯಲ್ಲೂ ಆಧ್ಯಾತ್ಮದಂತಹ ಶ್ರೇಷ್ಠ ಬಾಳನ್ನೇ ಬಾಳಿದ ವ್ಯಕ್ತಿತ್ವದ ವಿಶಿಷ್ಟ ಮಜಲು ನಮ್ಮ ಅನುಭವಕ್ಕೆ ಕಾಣಸಿಗುತ್ತದೆ.

ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಗಣ್ಯರಾದ ಡಿವಿಜಿ, ಶ್ರೀನಿವಾಸಮೂರ್ತಿ, ವಿಸೀ, ಶಿವರಾಮ ಕಾರಂತರು, ಮಾಸ್ತಿ, ನಿಟ್ಟೂರು ಶ್ರೀನಿವಾಸ ರಾಯರು, ಎ. ಕೆ. ರಾಮಾನುಜನ್, ಭೈರಪ್ಪ, ಕಾಳಿಂಗ ಕೃಷ್ಣ, ಹಾ ಮಾ ನಾಯಕ, ವೆಂಕಟರಾಮಪ್ಪ, ಗಡಿಯಾರಂ ರಾಮಕೃಷ್ಣ ಶರ್ಮ ಹೀಗೆ ಅನೇಕಾನೇಕ ಹಿರಿಯರ ಜೊತೆಗೆ ಅವರಿಗೆ ದೊರಕಿದ ವಿಶಿಷ್ಟ ಒಡನಾಟಗಳು ಎಲ್ಲರೂ ದಕ್ಕಿಸಿಕೊಂಡು ಅಸ್ವಾದಿಸಿರಬಹುದಾದಂತದ್ದಲ್ಲ. ಅದು ಬೆಳಗೆರೆ ಕೃಷ್ಣಶಾಸ್ತ್ರಿಗಳಂತ ಶುಭ್ರ ಹೃದಯಗಳಿಗಷ್ಟೇ ಸಾಧ್ಯ.

ತುಂಬಿ (ಕವನ ಸಂಕಲನ), ಯೇಗ್ದಾಗೆಲ್ಲಾ ಐತೆ (ಶ್ರೀ ಮುಕುಂದೂರು ಸ್ವಾಮಿಗಳನ್ನು ಕುರಿತ ನೆನಪು), ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಪದ್ಮಿನಿ, ಪಾಶುಪತಾಸ್ತ್ರ, ಏಕಲವ್ಯ, ಸೋಹ್ರಾಬ್ ರುಸ್ತುಂ (ನಾಟಕಗಳು), ಸಾಹಿತಿಗಳ ಸ್ಮೃತಿ, ಮರೆಯಲಾದೀತೆ, ಎಲೆಯಮರೆಯ ಆಲರು (ನೆನಪುಗಳು) ಮುಂತಾದವು ಬೆಳಗೆರೆ ಕೃಷ್ಣಶಾಸ್ತ್ರಿಗಳ ಪ್ರಕಟಿತ ಕೃತಿಗಳು.
ಚಿನ್ಮಯ ಎಂಬುದು ಅವರಿಗೆ ಅರ್ಪಿತವಾದ ಸಂಭಾವನಾ ಗ್ರಂಥ.

ಬೆಳಗೆರೆ ಕೃಷ್ಞಶಾಸ್ತ್ರಿಗಳಿಗೆ ರಾಜ್ಯ ಮತ್ತು ಕೇಂದ್ರದ ಅತ್ಯುತ್ತಮ ಅಧ್ಯಾಪಕ ಪ್ರಶಸ್ತಿ, ಹಳ್ಳಿ ಚಿತ್ರ ನಾಟಕಕ್ಕೆ ಕೇಂದ್ರ ನಾಟಕ ಅಕಾಡಮಿ ಪ್ರಶಸ್ತಿ, ಆಕಾಶವಾಣಿ ಪುರಸ್ಕಾರ, ಅಳಸಿಂಗಾಚಾರ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಅರಸಿ ಬಂದಿದ್ದವು.

ಬೆಳಗೆರೆ ಕೃಷ್ಣಶಾಸ್ತ್ರಿಗಳು 2013ರ ಮಾರ್ಚ್ 23ರಂದು ತಮ್ಮ 97 ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು.

LEAVE A REPLY

Please enter your comment!
Please enter your name here