ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ, ನಗರ-ಪಟ್ಟಣಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಡಿಸಿ ಅನಿರುದ್ಧ ಶ್ರವಣ್ ಸೂಚನೆ

0
314

ವಿಜಯನಗರ(ಹೊಸಪೇಟೆ),ನ.18 : ಜಿಲ್ಲೆಯಲ್ಲಿರುವ ಎಲ್ಲ ನಗರ-ಪಟ್ಟಣಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಮತ್ತು ವೈಜ್ಞಾನಿಕ ಘನತ್ಯಾಜ ನಿರ್ವಹಣೆ ಪರಿಣಾಮಕಾರಿ ಅನುಷ್ಠಾನ ಮಾಡುವುದರ ಜೊತೆಗೆ ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸುವ ಕೆಲಸ ಮಾಡುವಂತೆ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಮಲಾಪುರ ಸಮೀಪದ ದರೋಜಿ ಪ್ರಕೃತಿ ನಿರೂಪಣಾ ಕೇಂದ್ರ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಜಯನಗರ ಜಿಲ್ಲೆಯಲ್ಲಿ 08 ನಗರ ಸ್ಥಳೀಯ ಸಂಸ್ಥೆಗಳು ಬರಲಿದ್ದು, ಈ ಯುಎಲ್‍ಬಿಗಳಲ್ಲಿ ಸಮರ್ಪಕ ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ಕೊಡಬೇಕು.
ಸಾರ್ವಜನಿಕರು ಮನೆಯಲ್ಲಿ ಹಸಿ ಕಸ-ಒಣ ಕಸ ಅಂತ ವಿಂಗಡಿಸಬೇಕು ಮತ್ತು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ನಗರ ಸ್ಥಳೀಯ ಸಂಸ್ಥೆಗಳ ಕಸದ ವಾಹನಗಳಲ್ಲಿಯೇ ಹಾಕಬೇಕು; ಸ್ವಚ್ಛತೆ ಕುರಿತು ಕರಪತ್ರಗಳು,ಪೋಸ್ಟರ್,ಭಿತ್ತಿಪತ್ರಗಳ ಮೂಲಕ,ಜಾಗೃತಿ ಜಾಥಾ,ಡಂಗೂರು ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಹೆಚ್ಚಿನ ಅರಿವು ಮೂಡಿಸುವ ಕೆಲಸವನ್ನು ನಗರ ಸ್ಥಳೀಯ ಸಂಸ್ಥೆಗಳು ಮಾಡಬೇಕು ಎಂದು ಹೇಳಿದ ಡಿಸಿ ಅನಿರುದ್ಧ ಶ್ರವಣ್ ಅವರು ನಿಯಮ ಉಲ್ಲಂಘಿಸಿದ್ದಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅನ್ವಯ ಸಾರ್ವಜನಿಕರಿಗೆ ದಂಡ ವಿಧಿಸುವಂತೆ ಸೂಚನೆ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳ ನಗರೋತ್ಥಾನ ಯೋಜನೆ, ಘನತ್ಯಾಜ್ಯ ನಿರ್ವಹಣೆ, 24*7 ಕುಡಿಯುವ ನೀರು ಸರಬರಾಜು, ಯುಜಿಡಿ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಜಿಲ್ಲಾಧಿಕಾರಿಗಳ ಪ್ರಸ್ತುತ ಸ್ಥಿತಿಗತಿಯ ವರದಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು ಮತ್ತು ಅನೇಕ ಸಲಹೆ-ಸೂಚನೆಗಳನ್ನು ಇದೇ ಸಂದರ್ಭದಲ್ಲಿ ಅವರು ನೀಡಿದರು.
ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯಲ್ಲಿ ಪರಿಣತರಾದ ಬೆಂಗಳೂರಿನ ವಾಸುಕಿ ಅಯ್ಯಾಂಗರ, ಡಾ.ಶಾಂತಿ, ನಳಿನಿ ಶೇಖರ್ ಅವರು ಘನತ್ಯಾಜ್ಯ ಸಮರ್ಪಕ ವಿಲೇವಾರಿ, ಮನೆಯಲ್ಲಿಯೇ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವುದರ ಬಗೆ, ವೈಜ್ಞಾನಿಕ ನಿರ್ವಹಣೆ ಕುರಿತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಿದರು.
ಇದಕ್ಕೂ ಮುಂಚೆ ಪರಿಣಿತರು ಹೊಸಪೇಟೆಯ ವಿವಿಧೆಡೆ ಭೇಟಿ ನೀಡಿ ಸಾರ್ವಜನಿಕರಿಗೆ ಘನತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ಕರ್ನಾಟಕ ನಗರ ನೀರು ಸರಬರಾಜು ಕಾರ್ಯನಿರ್ವಾಹಕ ಎಂಜನಿಯರ್ ಯೂನಿಸ್ ಖಾನ್ ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು,ಮುಖ್ಯಾಧಿಕಾರಿಗಳು ಮತ್ತು ಎಂಜನಿಯರ್‍ಗಳು ಹಾಗೂ ಸಿಬ್ಬಂದಿ ಇದ್ದರು.

LEAVE A REPLY

Please enter your comment!
Please enter your name here