ಸಾಹಿತಿ,ಡಾ.ಮಲ್ಲಿಕಾ ಘಂಟಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

0
149

ಡಾ.ಮಲ್ಲಿಕಾ ಘಂಟಿ ಸಾಹಿತಿಗಳಾಗಿ, ಪ್ರಾಧ್ಯಾಪಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಮತ್ತು ಸ್ತ್ರೀಪರ ಹೋರಾಟಗಾರ್ತಿಯಾಗಿ ಹೆಸರಾಗಿದ್ದಾರೆ.

ಮಲ್ಲಿಕಾ ಘಂಟಿ ಅವರು 1959ರ ಏಪ್ರಿಲ್ 17ರಂದು ವಿಜಯಪುರಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಅಗಸಬಾಳು ಎಂಬಲ್ಲಿ ಜನಿಸಿದರು. ತಂದೆ ಶಂಕರಪ್ಪ, ತಾಯಿ ಪಾರ್ವತಿಬಾಯಿ. ಮಲ್ಲಿಕಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಹಂಗರಗಿ ಗ್ರಾಮ ಮತ್ತು ಬಾದಾಮಿಯಲ್ಲಿ ನಡೆಯಿತು. ಮುಂದೆ ಬಾಗಲಕೋಟೆ, ಜಮಖಂಡಿಗಳಲ್ಲಿ ಓದಿ ಧಾರವಾಡ ವಿಶ್ವವಿದ್ಯಾಲಯದಿಂದ ಬಿ. ಎ. ಮತ್ತು ಎಂ.ಎ ಪದವಿ ಪಡೆದರು. ಜೊತೆಗೆ “ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ” ಕುರಿತು ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಗಳಿಸಿದರು.

ಮಲ್ಲಿಕಾ ಘಂಟಿ ಅವರಿಗೆ ಓದಿನ ಜೊತೆಗೆ ಸಾಹಿತ್ಯ ರಚನೆಯ ಹವ್ಯಾಸವೂ ಜೊತೆಗೂಡಿತ್ತು. ವಿದ್ಯಾರ್ಥಿನಿಯಾಗಿದ್ದಾಗಲೇ ಅವರ ಕವನಗಳು ಪ್ರಕಟಗೊಂಡವು. ಪದವಿ ಪಡೆದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಕೆರೂರು ಎಂ.ಎಚ್.ಎಂ. ಕಿರಿಯ ಮಹಾ ವಿದ್ಯಾಲಯದಲ್ಲಿ. 1983ರಿಂದ 1987ರವರೆಗೆ ಉಪನ್ಯಾಸಕಿಯಾಗಿ, 1987ರಿಂದ 1994ರವರೆಗೆ ಗುಲಬರ್ಗಾದ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, 1994ರಿಂದ ಸ್ನಾತಕೋತ್ತರ ಕೇಂದ್ರ ಸಂಡೂರಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಗಳಲ್ಲಿ ಪ್ರಾಧ್ಯಾಪಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಇವರು ಡೀನ್ ಆಗಿ, ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಆಡಳಿತಾನುಭವವನ್ನು ಗಳಿಸಿದರು. ಕನ್ನಡ ವಿಶ್ವವಿದ್ಯಾನಿಲಯ, ಹಂಪಿಯ ಕುಲಪತಿಗಳಾಗಿ 2015ರಲ್ಲಿ ಅಧಿಕಾರ ವಹಿಸಿಕೊಂಡ ಇವರು ಮುಂದೆ ಎರಡನೆಯ ಅವಧಿಗೆ ಕುಲಪತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.

ಮಲ್ಲಿಕಾ ಘಂಟಿ ಅವರ ಬರಹಗಳಲ್ಲಿ ತುಳಿಯದಿರಿ ನನ್ನ, ಈ ಹೆಣ್ಣುಗಳೇ ಹೀಗೆ, ರೊಟ್ಟಿ ಮತ್ತು ಹುಡುಗಿ, ಬೆಲ್ಲದಚ್ಚು ಮತ್ತು ಇರುವೆ ದಂಡು ಕವನ ಸಂಕಲನಗಳು. ‘ಚಾಜ’, ಮತ್ತು ‘ಒಂದು ಬಾವಿಯ ಸುತ್ತ’ಗಳೆಂಬ ನಾಟಕಗಳು. ’ಅಹಲ್ಯಾ ಬಾಯಿ ಹೋಳ್ಕರ್’, ‘ಇಟಗಿ ಭೀಮಾಂಬಿಕೆ’, ‘ಸಂಗೊಳ್ಳಿ ರಾಯಣ್ಣ’ ಜೀವನ ಚರಿತ್ರೆಗಳು. ‘ಕನ್ನಡಕಥೆಗಾರ್ತಿಯರು’, ‘ತನುಕರಗದವರಲ್ಲಿ’, ‘ಧರಣಿಯ ಮೇಲೊಂದು’, ‘ಭುವನಕ್ಕೆ ಬೆಲೆಯಿಲ್ಲ’, ‘ಒಳಗೆ ಸತ್ತುಹೊರಗೆ’ ಮುಂತಾದವು ವಿಮರ್ಶಾ ಸಂಕಲನಗಳು. ಹಲವು ಕೃತಿಗಳನ್ನು ಸಂಪಾದಿಸಿದ ಇವರು ಸ್ತ್ರೀನಿಷ್ಠ ವಿಮರ್ಶಕಿಯಾಗಿಯೂ ಪ್ರಸಿದ್ಧರಾಗಿದ್ದಾರೆ.

ಡಾ. ಮಲ್ಲಿಕಾ ಘಂಟಿ ಅವರಿಗೆ ಮಾಣಿಕಬಾಯಿ ಪ್ರಶಸ್ತಿ, ತನುಕರಗದವರಲ್ಲಿ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿ ನಿಧಿ ಪ್ರಶಸ್ತಿ, ‘ರೊಟ್ಟಿ ಮತ್ತು ಹುಡುಗಿ’ ಕೃತಿಗೆ ಲಿಂಗರಾಜ ಪ್ರಶಸ್ತಿ, ‘ಈ ಹೆಣ್ಣುಗಳೇ ಹೀಗೆ’ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸ್ತಿ, ಕೆ. ಎಸ್. ನರಸಿಂಹಸ್ವಾಮಿ ಕಾವ್ಯ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಸಮ್ಮೇಳನದ ಸರ್ವಾಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿವೆ.

LEAVE A REPLY

Please enter your comment!
Please enter your name here