ನೀನೇ ಸಾಕಿದಾ ಗಿಣಿ,ನಿನ್ನಾ ಮುದ್ದಿನಾ ಗಿಣಿ ಎಂಬ ಅದ್ಭುತ ಗೀತೆ ಹುಟ್ಟಿದ ಕತೆ

0
73

“ಅವತ್ತು ನಾನು ಅವಾಕ್ಕಾಗಿ ನಿಂತು ಬಿಟ್ಟೆ ವಿಠ್ಠಲಮೂರ್ತಿ. ನಾಡು ಮೆಚ್ಚಿದ ವ್ಯಕ್ತಿಯೊಬ್ಬರು ಅಷ್ಟೊಂದು ದಯನೀಯ ಸ್ಥಿತಿಯಲ್ಲಿದ್ದುದನ್ನು ನನ್ನ ಮನಸ್ಸು ಸಹಿಸಿಕೊಳ್ಳಲಿಲ್ಲ.ಯಾಕೆಂದರೆ ಅವತ್ತು ನಾನು ನೋಡಿದಾಗ ಆ ಜೀವ ಇಟ್ಟಿಗೆಯ ಮೇಲೆ ತಲೆ ಇಟ್ಟು ಮಲಗಿತ್ತು.ಒಂದೇ ಸಮನೆ ಕಣ್ಣೀರು ಸುರಿಸುತ್ತಿತ್ತು.ನಾನೂ ಜೋರಾಗಿ ಅತ್ತೆ” ಎಂದವರು ಹೇಳಿದರು.
ಅಷ್ಟೊತ್ತಿಗಾಗಲೇ ಸಂಕಟದ ಜತೆ,ಕತ್ತಲು ಕೂಡಾ ವಾತಾವರಣವನ್ನು ರಮ್ಮೋ ಅಂತ ಆವರಿಸಿಕೊಳ್ಳುತ್ತಿತ್ತು.ನಾನು ಕುಳಿತಲ್ಲೇ ಚಡಪಡಿಸಿ ಸರಿಯಾಗಿ ಕುಳಿತೆ.ಅವರು ನಿರ್ಲಿಪ್ತರೆಂಬಂತೆ ಹೇಳುತ್ತಾ ಹೋದರು.ಅವರ ಹೆಸರು-
ವಿಜಯ ನಾರಸಿಂಹ!
ಕನ್ನಡ ಚಿತ್ರರಂಗದಲ್ಲಿ ಅಜರಾಮರವಾಗಿ ಉಳಿದ ಮಾನಸ ಸರೋವರ ಚಿತ್ರದ ನೀನೇ ಸಾಕಿದಾ ಗಿಣಿ,ನಿನ್ನಾ ಮುದ್ದಿನಾ ಗಿಣಿ.ಹದ್ದಾಗಿ ಕುಕ್ಕಿತಲ್ಲೋ?ನಿನ್ನ ಹದ್ದಾಗಿ ಕುಕ್ಕಿತಲ್ಲೋ?ಎಂಬ ಹಾಡನ್ನು ನಿಮ್ಮಲ್ಲಿ ಬಹುತೇಕರು ಕೇಳಿರುತ್ತೀರಿ.ಕಣ್ಣೀರಾಗಿರುತ್ತೀರಿ.ನನ್ನ ಪ್ರಕಾರ ಬದುಕಿನಲ್ಲಿ ಯಾವುದೇ ವ್ಯಕ್ತಿ,ತಾನು ನಂಬಿದ ವ್ಯಕ್ತಿಯಿಂದ ಘಾಸಿಗೊಳಗಾದರೂ ಈ ಹಾಡು ಅವರನ್ನು ಇಂಚಿಂಚಾಗಿ ಕಾಡುತ್ತಾ ಹೋಗುತ್ತದೆ.
ಅರವತ್ತರ ದಶಕದಿಂದ ಎಂಭತ್ತರ ದಶಕದವರೆಗೆ ಕನ್ನಡ ಚಿತ್ರರಂಗವನ್ನು ತಮ್ಮ ಅಪೂರ್ವ ಗೀತರಚನೆಯ ಮೂಲಕ ( ನಾಲ್ಕು ಸಾವಿರಕ್ಕೂ ಹೆಚ್ಚು ಗೀತೆಗಳು) ಶ್ರೀಮಂತಗೊಳಿಸಿದವರು ವಿಜಯ ನಾರಸಿಂಹ.ಈ ಗೀತೆಯನ್ನು ಬರೆದವರೂ ಅವರೇ.ಹೆಚ್ಚು ಕಡಿಮೆ ಹತ್ತೊಂಭತ್ತು ವರ್ಷಗಳ (೧೯೯೯) ಹಿಂದೆ,ಇಲ್ಲೇ ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಹತ್ತಿರದ ಮನೆಯಲ್ಲಿ ನಾನವವರನ್ನು ಭೇಟಿ ಮಾಡಿದ್ದೆ.
ಆಗ ಕನ್ನಡ ಚಿತ್ರರಂಗದ ಖ್ಯಾತ ತಾರೆಯೊಬ್ಬರ ಜೀವನ ಚರಿತ್ರೆಯ ಕುರಿತು ನಾನು ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಸೀರಿಯಲ್ ಬರೆಯುತ್ತಿದ್ದೆ.ಯಾವುದೇ ಬರಹಗಾರ ಬದುಕಿನಲ್ಲಿ ಒಬ್ಬರದಾದರೂ ಜೀವನ ಚರಿತ್ರೆಯನ್ನು ಬರೆಯಬೇಕು. ಯಾಕೆಂದರೆ,ಒಬ್ಬ ವ್ಯಕ್ತಿ ಸಂದರ್ಭಕ್ಕನುಸಾರವಾಗಿ ತೆಗೆದುಕೊಳ್ಳುವ ನಿರ್ಣಯ,ಇಡುವ ಹೆಜ್ಜೆ,ಆಡುವ ಮಾತು,ಆ ಮಾತಿಗೆ ಪೂರಕವಾಗಿಯೋ, ಮಾರಕವಾಗಿಯೋ ನಡೆದುಕೊಳ್ಳುವ ರೀತಿ.ಹೀಗೆ ಎಲ್ಲವೂ ಹೂವಿನ ಪಕಳೆಗಳಂತೆ ಕೈಗೆ ದಕ್ಕುತ್ತಾ ಒಂದು ಸುಂದರ ಗುಲಾಬಿ ಸೃಷ್ಟಿಯಾಗುತ್ತದೆ.ಅದರ ಜತೆಗೆ ಮುಳ್ಳುಗಳೂ ಇರುತ್ತವೆ.ಅದನ್ನು ಗ್ರಹಿಸುವುದು ನನಗಿಷ್ಟ.
ಹೀಗೆ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದೆಯೊಬ್ಬರ ಬದುಕಿನ ಬಗ್ಗೆ ಬರೆಯಲು ಹೊರಟಾಗ ನನಗೆ ಸಿಕ್ಕವರಾದರೂ ಎಂತೆಂತಹ ಅತಿರಥ ಮಹಾರಥರು?ವಿಜಯ ನಾರಸಿಂಹ ಅವರಿಂದ ಹಿಡಿದು ಕೆ.ಎಸ್.ಎಲ್.ಸ್ವಾಮಿ(ರವಿ)ಅವರಂತಹ ಹಿರಿಯರು.ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅವರಿಂದ ಹಿಡಿದು ಒಂದು ಕಾಲಕ್ಕೆ ಖ್ಯಾತ ರಾಜಕಾರಣಿಯಾಗಿದ್ದ ರಘುಪತಿ ಅವರ ತನಕ.
ಹೀಗೆ ಒಬ್ಬೊಬ್ಬರನ್ನೇ ಮಾತನಾಡಿಸುತ್ತಾ,ಒಂದು ಬದುಕು ಎಂಬ ಗಿಡವನ್ನು ಅಲುಗಾಡಿಸುವ ಪ್ರಯತ್ನ ಮಾಡಿದೆ ನೋಡಿ.ಇವತ್ತಿಗೂ ಅದು ನೀಡಿದ ಅದ್ಭುತ ಅನುಭವ ಹಾಗೇ ಹಸಿ ಹಸಿಯಾಗಿ ನೆನಪಿನಲ್ಲುಳಿದಿದೆ.
ಇರಲಿ, ನಾನು ವಿಜಯನಾರಸಿಂಹ ಅವರ ಬಗ್ಗೆ ಹೇಳುತ್ತಿದ್ದೆ.ಅಂದ ಹಾಗೆ ಕನ್ನಡ ಚಿತ್ರರಂಗದ ಈ ಖ್ಯಾತ ತಾರೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ,ತಮ್ಮ ಬದುಕೆಂಬ ಮನೆಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿದ್ದ ಅಪೂರ್ವ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಆನಂತರದ ದಿನಗಳಲ್ಲಿ ಆಕೆಯಿಂದ ದೂರವಾಗಬೇಕಾಯಿತು.
ಕನ್ನಡ ಚಿತ್ರರಂಗಕ್ಕೆ ನಾಗರಹಾವು,ಎಡಕಲ್ಲು ಗುಡ್ಡದ ಮೇಲೆ,ಶರಪಂಜರ,ಮಾನಸ ಸರೋವರ..ಹೀಗೆ ಹೇಳುತ್ತಾ ಹೋದರೆ ತಮ್ಮ ಚಿತ್ರಗಳ ಮೂಲಕ ನಾಡಿನ ಮನಸ್ಸುಗಳು ಜಿನುಗುವಂತೆ, ತಲ್ಲಣಿಸುವಂತೆ,ಚಿಂತಿಸುವಂತೆ ಮಾಡಿದವರು ಪುಟ್ಟಣ್ಣ ಕಣಗಾಲ್.
ಅಂತಹ ಬದುಕಿನಲ್ಲೇ ಬಿರುಗಾಳಿ ಎದ್ದಿತ್ತು.ಈ ಬಿರುಗಾಳಿಯ ಹಿಂದಿನ ಕಾರಣಗಳ ವಿವರಕ್ಕೆ ಹೋಗುವುದು ನನಗಿಷ್ಟವಿಲ್ಲ.ಆದರೆ ಮಾನಸ ಸರೋವರ ಚಿತ್ರದ ನೀನೇ ಸಾಕಿದಾ ಗಿಣಿ ಎಂಬ ಹಾಡು ನನ್ನ ಮನಸ್ಸನ್ನು ಇನ್ನಿಲ್ಲದಂತೆ ಕಾಡಿತ್ತು.ಹೀಗಾಗಿ ಆ ಹಾಡು ಬರೆದ ವಿಜಯ ನಾರಸಿಂಹ ಅವರ ಜತೆ ಮಾತನಾಡದೆ ಆ ಜೀವನಚರಿತ್ರೆಗೆ ಒಂದು ಅಪೂರ್ವ ಒಳನೋಟ ದಕ್ಕುತ್ತಿರಲಿಲ್ಲ.
ಹಾಗಂತಲೇ ಅವರ ಮನೆಗೆ ಹೋದೆ.ವಿಜಯ ನಾರಸಿಂಹ ತುಂಬ ಸಂಕೋಚದ ಮನ: ಸ್ಥಿತಿಯ ಹಿರಿಯ.ನಾನು,ಪುಟ್ಟಣ್ಣ ಕಣಗಾಲ್ ಹಾಗೂ ಅವರ ಪ್ರೀತಿಯ ಬದುಕಿನ ಬಗ್ಗೆ ಕೇಳಿದಾಗ ಶುರುವಿನಲ್ಲಿ ಅವರು ಮಾತನಾಡಲೇ ಇಲ್ಲ.ಹೀಗಾಗಿ ನನ್ನ ಮೆಚ್ಚಿನ ಹಾಡನ್ನೇ ಮುಂದಿಟ್ಟುಕೊಂಡು ಕೇಳಿದೆ.
ಸಾರ್.ಎಂತಹ ಮನಸ್ಸುಗಳೂ ಆರ್ದ್ರವಾಗುವಂತೆ ಮಾಡುವ ನೀನೇ ಸಾಕಿದಾ ಗಿಣಿ ಹಾಡನ್ನು ಹೇಗೆ ಬರೆಯಲು ನಿಮಗೆ ಸಾಧ್ಯವಾಯಿತು?ಯಾವ ಘಟನೆ ನಿಮಗೆ ಅದನ್ನು ಬರೆಯಲು ಪ್ರೇರೇಪಿಸಿತು?ಅಂತ ಪ್ರಶ್ನಿಸಿದೆ. ಆಗ ಬಿಗಿಯಾಗಿ ಅವುಚಿಕೊಂಡು ಕುಳಿತಿದ್ದ ಅವರ ಮನಸ್ಸು ಸಡಿಲವಾಗತೊಡಗಿತು.ವಿಠ್ಠಲಮೂರ್ತಿ.ಹೇಳಿದರೆ ಅದೊಂದು ದೊಡ್ಡ ಕತೆ ಎಂದರು.
ನಾನು ಮೌನವಾಗಿ ಕೇಳುತ್ತಾ ಹೋದೆ. ವಿಠ್ಠಲಮೂರ್ತಿ.ಒಂದು ದಿನ ಎಂದಿನಂತೆ ಮನೆಯಲ್ಲಿದ್ದೆ.ಅವತ್ತೇಕೋ ಮನಸ್ಸಿನಲ್ಲಿ ವಿನಾಕಾರಣದ ತಲ್ಲಣ.ಬೇಕಿದ್ದರೆ ನೀವು ನೋಡಿ.ನಿಮ್ಮ ಬದುಕಿನಲ್ಲಿ ಯಾವುದೇ ಸಂಕಟಗಳಿಲ್ಲದಿದ್ದರೂ ವಿನಾ ಕಾರಣ ನೀವು ತಲ್ಲಣಗೊಳ್ಳುತ್ತೀರಿ.ಹೀಗೆ ವಿನಾಕಾರಣ ತಲ್ಲಣಗೊಳ್ಳುವುದು,ಮನಸ್ಸು ನೋವಿನ ಹುತ್ತಕ್ಕೆ ನುಗ್ಗುವುದು ಏಕೆ?ಅಂತ ಹಲವು ಬಾರಿ ಅನ್ನಿಸುತ್ತದೆ.
ಅವತ್ತೂ ಹಾಗೇ ಆಯಿತು.ನೋಡಲು ಹೋದರೆ ಅದು ಸಾಧಾರಣ ದಿನ.ಯಾವ ಲಟ್ಟಂ ಪಟ್ಟ ವಿಶೇಷವೂ ಇರದ,ನೀರವ ಮೌನದ ದಿನ.ಹೀಗಾಗಿ ಸುಮ್ಮನೆ ಮುದುಡಿಕೊಂಡು ಮಲಗಿದ್ದೆ.ಆಗ ಬಂತು ಒಂದು ದೂರವಾಣಿ ಕರೆ.ಅದು ಪುಟ್ಟಣ್ಣ ಕಣಗಾಲ್ ಅವರದು.
ಅವರಿಗೆ ನಾನೆಂದರೆ ವಿಶೇಷ ಪ್ರೀತಿ.ತಮ್ಮ ಚಿತ್ರಗಳ ಬಹುತೇಕ ಗೀತೆಗಳನ್ನು ಅವರು ನನ್ನ ಕೈಲಿ ಬರೆಸಿದ್ದರು.ಸಂದರ್ಭಕ್ಕೆ ಅನುಗುಣವಾದ ಗೀತೆಗಳನ್ನು ಎಷ್ಟು ಚೆಂದಗೆ ಬರೆಯುತ್ತೀರಿ?ಅಂತ ಆಗಾಗ ತಾರೀಪು ಮಾಡುತ್ತಿದ್ದರು.ಸರಿ.ಅವರಿಂದ ಫೋನು ಬಂತು:ಜಯನಗರದಲ್ಲಿದ್ದೇನೆ.ನಿಮ್ಮನ್ನು ನೋಡಬೇಕು.ಮಾತನಾಡಬೇಕು ಅನ್ನಿಸಿದೆ ಬನ್ನಿ ಎಂದರು.
ಸರಿ,ನಾನು ಸೀದಾ ಜಯನಗರದಲ್ಲಿ ಅವರು ಉಳಿದುಕೊಂಡಿದ್ದ ಕಡೆ ಹೋದೆ.ಹೋಗಿ ನೋಡುತ್ತೇನೆ.ಅವಾಕ್ಕಾಗಿ ಬಿಟ್ಟೆ ವಿಠ್ಠಲಮೂರ್ತಿ.ಕನ್ನಡ ಚಿತ್ರರಂಗವನ್ನು ತಮ್ಮ ಅಪೂರ್ವ ಚಿತ್ರಗಳ ಮೂಲಕ ಶ್ರೀಮಂತಗೊಳಿಸಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇಟ್ಟಿಗೆಯ ಮೇಲೆ ತಲೆ ಇಟ್ಟು ಮಲಗಿದ್ದಾರೆ.ಅವರ ಕಣ್ಣುಗಳಿಂದ ಒಂದೇ ಸಮನೆ ನೀರು ಸುರಿಯುತ್ತಿದೆ.
ಅವರ ದಯನೀಯ ಸ್ಥಿತಿಯನ್ನು ನೋಡಿ ನನಗೂ ಜೋರಾಗಿ ಅಳು ಬಂತು.ಹೀಗಾಗಿ ನಾನೂ ಅಳುತ್ತಲೇ:ಅರೇ,ಇದೇನಾಯಿತು?ಯಾಕೆ ಇಟ್ಟಿಗೆಯ ಮೇಲೆ ತಲೆ ಇಟ್ಟು ಮಲಗಿದ್ದೀರಿ?ಯಾಕೆ ಕಣ್ಣೀರು ಹಾಕುತ್ತಿದ್ದೀರಿ?ಎಂದೆ.
ಅದಕ್ಕವರು, ನಾನು ನಂಬಿದ ಪ್ರೀತಿ ನನ್ನನ್ನು ತೊರೆದು ಹೋಯಿತು.ನಿಮಗೆ ಅದು ಗೊತ್ತು.ಇವತ್ತಿನ ನನ್ನ ಸ್ಥಿತಿಯನ್ನು ನೀವು ಕಣ್ಣಾರೆ ನೋಡುತ್ತಿದ್ದೀರಿ.ಇದರ ಬಗ್ಗೆಯೇ ಒಂದು ಹಾಡು ಬರೆಯಿತು.ನನ್ನ ಮುಂದಿನ ಚಿತ್ರಕ್ಕೆ ಅದು ಸೆಂಟರ್ ಪಾಯಿಂಟ್ ತರ ಆಗಬೇಕು.ಬದುಕಿನಲ್ಲಿ ಪ್ರೀತಿಯನ್ನು ಕಳೆದುಕೊಂಡ ಯಾರಿಗೂ ನನ್ನ ಸ್ಥಿತಿ ಬರಬಾರದು ವಿಜಯ ಎಂದರು.
ಸ್ವಲ್ಪ ಹೊತ್ತು ಸುಮ್ಮನೆ ಕುಳಿತು ಮೇಲೆದ್ದು ಮನೆಗೆ ಬಂದೆ.ಅವತ್ತು ಪುಟ್ಟಣ್ಣ ಕಣಗಾಲ್ ಅನುಭವಿಸುತ್ತಿದ್ದ ನೋವನ್ನು ಕಂಡು,ಮನಸ್ಸೆಂಬ ಮನಸ್ಸಿನಲ್ಲಿ ಧಾರಾಕಾರ ಅಳುವಿನ ಮಳೆ.ಆ ಷಾಕ್ ನಿಂದ ನಾನೇ ಒಂದೆರಡು ದಿನ ಸುಧಾರಿಸಿಕೊಳ್ಳಲು ಸಾಧ್ಯವಾಗಲಿಲ್ಲ.ನಿಜ ಹೇಳುತ್ತೇನೆ.ಎರಡು ದಿನ ಒಂದಕ್ಷರ ಬರೆಯಲು ಸಾಧ್ಯವಾಗಲಿಲ್ಲ ವಿಠ್ಠಲಮೂರ್ತಿ.ಆದರೆ ಆ ವಿಷಯದ ಮಧ್ಯೆ ಮನಸ್ಸೆಂಬ ಕಡೆಗೋಲು ರವುಂಡಾಗಿ ಸುತ್ತುತ್ತಲೇ ಇತ್ತು.ಇಟ್ಟಿಗೆಯ ಮೇಲೆ ಒಬ್ಬ ವ್ಯಕ್ತಿ ತಲೆ ಇಟ್ಟುಕೊಂಡು ಅಳುತ್ತಿದ್ದಾರೆ ಎಂದರೆ ಏನರ್ಥ?ಯಾವ ಪ್ರೀತಿ ತನಗೆ ಮೆತ್ತನೆಯ ದಿಂಬಾಗಿ ಆಸರೆಯಾಗಬೇಕಿತ್ತೋ?ಅದು ಇನ್ನಿಲ್ಲ.ಹೀಗಾಗಿ ಉಳಿದಿದ್ದು ಒರಟಾದ ಇಟ್ಟಿಗೆ ಮಾತ್ರ. ಹೀಗಾಗಿ ಈ ಅರ್ಥ ಬರುವ ಹಾಡೆಂಬ ಬೆಣ್ಣೆಯನ್ನು ಹೊರತೆಗೆಯಲು ಯತ್ನಿಸುತ್ತಿತ್ತು.
ಹೀಗೆ ಯೋಚಿಸುತ್ತಾ,ಯೋಚಿಸುತ್ತಾ ಮೂರನೆಯ ದಿನ ರಾತ್ರಿ ಮಲಗಿದ್ದೇನೆ.ಅರೆ ಮರೆ ನಿದ್ರೆ.ಆ ಅರೆ ಮರೆ ನಿದ್ರೆಯಲ್ಲೂ ರಪ್ಪಂತ ಒಂದು ಸಾಲು ಲೈಟಿನಂತೆ ಫಕ್ಕಂತ ಬೆಳಗಿತು.ನೀನೇ ಸಾಕಿದಾ ಗಿಣಿ.ನಿನ್ನಾ ಮುದ್ದಿನಾ ಗಿಣಿ.ಹದ್ದಾಗಿ ಕುಕ್ಕಿತಲ್ಲೋ?ನಿನ್ನ ಹದ್ದಾಗಿ ಕುಕ್ಕಿತಲ್ಲೋ?ಅಂತ.
ತಡೆಯಲಾಗದೆ ಮೇಲೆದ್ದು ಕುಳಿತೆ.ನೀವು ಬರಹಗಾರರಾಗಿದ್ದರೆ ಒಂದು ವಿಷಯ ಮನದಟ್ಟಾಗಿರುತ್ತದೆ.ಅದೆಂದರೆ,ಒಂದು ಸಲ ನೀವೇನು ಬರೆಯಬೇಕು ಅಂತ ಮನಸ್ಸು ಬಂದು ಕೈಗೆ ಅಂಟಿಕೊಂಡು ಕಾಡುತ್ತದೋ?ಆ ಕಾಡುವಿಕೆಯನ್ನು ನೀವು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ.
ಹಾಗಂತಲೇ ಎದ್ದು ಕುಳಿತವನೇ ಬರೆಯಲು ಕುಳಿತೆ.ಮೊದಲ ಈ ಸಾಲುಗಳನ್ನು ನಾನು ಬರೆದೆ.ಆನಂತರದ ಸಾಲುಗಳು ತನ್ನಿಂತಾನೇ ಮೂಡುತ್ತಾ ಹೋದವು.ಹೀಗೆ ಬರೆದಿದ್ದನ್ನು ಮತ್ತೆ,ಮತ್ತೆ ಓದಿ ಆನಂತರ ಪುಟ್ಟಣ್ಣ ಕಣಗಾಲ್ ಅವರಿಗೆ ಅದನ್ನೊಯ್ದು ಕೊಟ್ಟೆ.ಓದಿದ ಅವರು ಮತ್ತೊಮ್ಮೆ ತಡೆಯಲಾಗದೆ ಕಣ್ಣೀರಿಟ್ಟರು.ನನ್ನ ನೋವೇ ಈ ಹಾಡಿನ ಆತ್ಮವಾಗಿದೆ ಎಂದು ಹೇಳಿ ತಬ್ಬಿಕೊಂಡರು.
ಮುಂದೆ ಮಾನಸ ಸರೋವರ ಚಿತ್ರದಲ್ಲಿ ಆ ಹಾಡಿಗೆ ನಾಯಕ ನಟ ಶ್ರೀನಾಥ್ ಎಷ್ಟು ಅದ್ಭುತವಾಗಿ ನಟಿಸಿದರು ಎಂದರೆ,ಪ್ರೀತಿ ಕಳೆದುಕೊಂಡ ಯಾವುದೇ ಜೀವಗಳು ಈ ಹಾಡು ನೋಡಿದರೆ ಶ್ರೀನಾಥ್ ಅವರನ್ನು ಮರೆಯಲಾರವು.ಮತ್ತು ಪುಟ್ಟಣ್ಣ ಕಣಗಾಲ್ ಅವರನ್ನು ಮರೆಯಲಾರವು.
ಇವೆಲ್ಲ ನಡೆದು ವರ್ಷಗಳೇ ಕಳೆದು ಹೋದವು.ಇಷ್ಟು ಕಾಲ ಸವೆದು ಹೋಗಿದ್ದರೂ ಇವತ್ತಿಗೂ ನಾನವರ ಬದುಕಿನ ಬಗ್ಗೆ ಯಾವುದೇ ಒಂದು ನಿರ್ಣಯಕ್ಕೆ ಬರಲಾರೆ ವಿಠ್ಠಲಮೂರ್ತಿ.ಯಾಕೆಂದರೆ ಬದುಕು ಎಂಬ ನದಿ ಹೀಗೇ ಹರಿಯಬೇಕಿತ್ತು ಅಂತ ಇವತ್ತು ನಮಗನ್ನಿಸಬಹುದು.ಆದರೆ ಅದಕ್ಕೆ ದೇವರೇ ಒಂದು ಪಾತ್ರವನ್ನು ಸೃಷ್ಟಿಸಿರುತ್ತಾನೆ.ಆ ಪಾತ್ರದಲ್ಲೇ ಅದು ಸಾಗಿ ಸಮುದ್ರ ಸೇರುತ್ತದೆ.
ಆದರೆ ಒಂದು ಮಾತು ನಿಜ.ಆ ಹಾಡನ್ನು ಬರೆದು ತುಂಬ ಕಾಲದ ನಂತರವೂ ನನ್ನನ್ನದು ಕಾಡುತ್ತಲೇ ಇತ್ತು.ಒಬ್ಬ ವ್ಯಕ್ತಿ ತನ್ನ ಪ್ರೀತಿ ಸೋತಾಗ ಅದನ್ನು ಮರೆತು ಮೇಲೆದ್ದು ನಿಲ್ಲಲು ಸಾಧ್ಯವಾಗಬೇಕು ಅನ್ನಿಸುತ್ತಿತ್ತು. ಆದರೆ ಅದನ್ನು ಅನ್ನಿಸಿಕೆ ಎಂದೇ ಪರಿಗಣಿಸಿ ವಿಠ್ಠಲಮೂರ್ತಿ ಎಂದರು ವಿಜಯನಾರಸಿಂಹ. ನಾನು ಮೂಕನಾಗಿ ಅವರನ್ನೇ ದಿಟ್ಟಿಸಿದೆ.
ಅವರ ಕಣ್ಣುಗಳು ತೇವವಾಗಿದ್ದವು.

ಆರ್ ಟಿ ವಿಠ್ಠಲ್ ಮೂರ್ತಿ

LEAVE A REPLY

Please enter your comment!
Please enter your name here