ಕೊರೊನಾ ಮಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆ: ವಿವರ ಒದಗಿಸಲು ಡಿಸಿ ಮಾಲಪಾಟಿ ಸೂಚನೆ

0
88

ಬಳ್ಳಾರಿ,ಮೇ 25 : ಕೊರೊನಾ ಮಂಚೂಣಿ ಕಾರ್ಯಕರ್ತರಿಗೆ ಆಂದೋಲನದ ರೂಪದಲ್ಲಿ ಲಸಿಕೆ ನೀಡಲು ಜಿಲ್ಲಾಡಳಿತ ಉದ್ದೇಶಿಸಿದೆ. ಒಬ್ಬರೂ ಕೂಡ ಈ ಲಸಿಕೆಯಿಂದ ವಂಚಿತರಾಗದಂತೆ ಸಮಗ್ರ ವಿವರಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ನಾಳೆ ಮಧ್ಯಾಹ್ನದೊಳಗೆ ನೀಡುವಂತೆ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಕೊರೊನಾ ಮಂಚೂಣಿ ಕಾರ್ಯಕರ್ತರಿಗೆ ಲಸಿಕೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಮಂಚೂಣಿ ಕಾರ್ಯಕರ್ತರು ಎಂದು ಗುರುತಿಸಲಾಗಿರುವ ವಿವಿಧ ಸಮೂಹಗಳ 18ರಿಂದ 44 ವರ್ಷದ ವಯೋಮಾನದ ಸಿಬ್ಬಂದಿಗಳಿಗೆ ಆದ್ಯತೆಯ ಮೇರೆಗೆ ಕೋವಿಡ್ ಲಸಿಕಾಕರಣ ಆಯೋಜಿಸುವಂತೆ ರಾಜ್ಯಮಟ್ಟದ ಕಾರ್ಯಪಡೆ ಸಭೆಯ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು,ವಿವಿಧ ಸಮೂಹಗಳಿಗೆ ಸಂಬಂಧಿಸಿದಂತೆ ನೇಮಿಸಲಾದ ನೋಡಲ್ ಅಧಿಕಾರಿಗಳು ಕೂಡಲೇ ತಮ್ಮ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ನೀಡಬೇಕು. ಸದರಿ ಸಮೂಹದ ಫಲಾನುಭವಿಗಳಿಗೆ ಒಂದೊಂದು ದಿನಾಂಕ ನಿಗದಿಪಡಿಸಿ ಅವರಿಗೆ ಲಸಿಕೆ ಹಾಕಿಸಲು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.
ಅಂಗವೈಕಲ್ಯ ಹೊಂದಿರುವ(ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಆರೈಕೆದಾರರು,ಖೈದಿಗಳು,ಚಿತಗಾರ/ಸ್ಮಶಾನ/ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಹಾಗೂ ಸ್ವ ಸಹಾಯಕರು, ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು, ಸರಕಾರಿ ಸಾರಿಗೆ ಸಿಬ್ಬಂದಿ,ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್,ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆ,ನ್ಯಾಯಾಂಗ ಇಲಾಖೆ ಸಿಬ್ಬಂದಿಗಳು, ಬೀದಿ ಬದಿಯ ವ್ಯಾಪಾರಿಯಗಳು, ಭದ್ರತೆ ಮತ್ತು ಕಚೇರಿಗಳ ಹೌಸ್‍ಕೀಪಿಂಗ್, ಮಕ್ಕಳ ಸಂರಕ್ಷಣಾಧಿಕಾರಿಗಳು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಧ್ಯಮದವರು, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು, ಆಯಿಲ್ ಇಂಡಸ್ಟ್ರೀ ಮತ್ತು ಗ್ಯಾಸ್ ಸರಬರಾಜು ಮಾಡುವವರು(ಪೆಟ್ರೋಲ್ ಬಂಕ್,ಕರ್ಮಚಾರಿ ಒಳಗೊಂಡಂತೆ),ಔಷಧ ತಯಾರಿಸುವ ಕಂಪನಿಯ ಸಿಬ್ಬಂದಿಗಳು, ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿಗಳು, ಅಧಿಕೃತ ಗುರುತಿನ ಚೀಟಿ ಹೊಂದಿರದ ಫಲಾನುಭವಿಗಳು-ವೃದ್ಧಾಶ್ರಮ ವಾಸಿಗಳು ಮತ್ತು ವಯೋವೃದ್ಧರ ಆರೈಕೆದಾರರು, ನಿರ್ಗತಿಕರು, ಭಾರತೀಯ ಆಹಾರ ನಿಗಮ ಸಿಬ್ಬಂದಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಿಬ್ಬಂದಿಗಳ ಸಮೂಹವನ್ನು ಮಂಚೂಣಿ ಕಾರ್ಯಕರ್ತರೆಂದು ಗುರುತಿಸಿ ಅವರಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.
ವಿವಿಧ ಇಲಾಖೆಗಳ ವ್ಯಾಪ್ತಿಗೊಳಪಡುವ ಸಮೂಹಗಳಿಗೆ ಇದುವರೆಗೆ ಎಷ್ಟು ಜನರು ಲಸಿಕೆ ಪಡೆದುಕೊಂಡಿದ್ದಾರೆ;ಇನ್ನೇಷ್ಟು ಜನರು ಪಡೆದುಕೊಳ್ಳಬೇಕು ಎಂಬುದರ ವಿವರವನ್ನು ಡಿಸಿ ಮಾಲಪಾಟಿ ಅವರು ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಮೂಹದ ಫಲಾನುಭವಿಗಳಿಗೆ ಕೊರೊನಾ ಸೊಂಕು ತಗುಲಿದ್ದಲ್ಲಿ ಮೂರು ತಿಂಗಳವರೆಗೆ ಲಸಿಕೆ ಪಡೆದುಕೊಳ್ಳದಂತೆ ಅವರಿಗೆ ತಿಳಿಸಬೇಕು ಎಂದು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here