‘ಬೇಸಿಗೆಯಲ್ಲಿ ಪಕ್ಷಿಗಳಿಗೆ ಜಲ-ಆಹಾರ ಅಭಿಯಾನ’ ವಿಎಸ್‍ಕೆ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಿಂದ ಮಾದರಿ ಕಾರ್ಯ

0
16

ಬಳ್ಳಾರಿ,ಮಾ.13:ಜಿಲ್ಲೆಯಲ್ಲಿ ಬಿಸಿಲಿನ ತಾಪ ಮನುಷ್ಯನ ನೆತ್ತಿ ಸುಡುತ್ತಿದೆ. ಇನ್ನೂ ಪ್ರಾಣಿ-ಪಕ್ಷಿಗಳ ಪಾಡು ಊಹಿಸುವುದು ಕಷ್ಟ. ಇಂತಹ ಕಷ್ಟಕರ ಸ್ಥಿತಿಯಲ್ಲಿ ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಪಕ್ಷಿ ಸಂಕುಲಕ್ಕೆ ಆಹಾರ, ಜಲ [ಜಲ-ಆಹಾರ ಅಭಿಯಾನ] ವಿತರಿಸುವ ಮಾದರಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಬಳಸಿ ಬಿಸಾಡಿರುವ ಪ್ಲಾಸ್ಟಿಕ್ ಬಾಟಲಿಗಳು, ಬುಟ್ಟಿ, ತೆಂಗಿನ ಚಿಪ್ಪು, ಬೊಂಬಿನ ತುಂಡುಗಳನ್ನು ಬಳಸಿಕೊಂಡು ವಿಶ್ವವಿದ್ಯಾಲಯದ ಜೀವ ವಿಜ್ಞಾನ ಕಟ್ಟಡದ ಆವರಣದಲ್ಲಿರುವ ಮರಗಿಡಗಳಿಗೆ ನೇತು ಹಾಕಿದ್ದಾರೆ. ಇದರಲ್ಲಿ ನೀರು, ಸಿರಿಧಾನ್ಯಗಳನ್ನು ಇರಿಸಿ ಪಕ್ಷಿಗಳಿಗೆ, ಅಳಿಲುಗಳಿಗೆ ಜೀವಸೆಲೆ ಕಲ್ಪಿಸುವ ವಿನೂತನ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಂ.ಮೇತ್ರಿ ಅವರು ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಜೀವ ಸಂಕುಲದ ಅತ್ಯಂತ ಕೆಟ್ಟ ಪ್ರಾಣಿ ಎಂದರೆ ಮನುಷ್ಯ. ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡಿ ಹವಾಮಾನ ವೈಪರಿತ್ಯಕ್ಕೆ ಕಾರಣವಾಗಿದ್ದಾನೆ. ಜೀವ ವೈವಿಧ್ಯತೆಗಳನ್ನು ಕಾಪಾಡಲು ಬೇಸಿಗೆಯಲ್ಲಿ ಅನ್ನಾಹಾರ ಪೂರೈಸುವ ಇಂತಹ ಮಾನವೀಯ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಕರೆ ನೀಡಿದರು.
ಪ್ರಾಣಿಶಾಸ್ತ್ರ ವಿಭಾಗದ ಪ್ರಾಯೋಗಿಕ ಅಧ್ಯಯನಕ್ಕೆ ಈ ಭಾಗದಲ್ಲಿ ಸ್ಥಾಪನೆಯಾಗಿರುವ ಹಂಪಿ ಬಳಿಯ ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರೀಯ ಉದ್ಯಾನವನ ಮತ್ತು ದರೋಜಿ ಕರಡಿ ಧಾಮಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವುದು ಒಳಿತು ಎಂದು ಕಿವಿಮಾತು ಹೇಳಿದರು.

ಬಿಸಿಲ ನಾಡಿನಲ್ಲಿ ಪ್ರಾಣಿ-ಪಕ್ಷಿ ಸಂಕುಲದ ರಕ್ಷಣೆಗೆ ಮುಂದಾಗಿರುವ ವಿಭಾಗದ ಕೆಲಸಕ್ಕೆ ಹರ್ಷ ವ್ಯಕ್ತಪಡಿಸಿದರು.
ವಿವಿಯ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವಿಜಯಕುಮಾರ್ ಮಲಶೆಟ್ಟಿ ಮಾತನಾಡಿ, ಆಹ್ಲಾದಕರ ದಿನಚರಿ, ಸಂತೋಷ ಮತ್ತು ಮಾನಸಿಕ ನೆಮ್ಮದಿ ನಮ್ಮಲ್ಲಿ ಕಂಡುಕೊಳ್ಳಲು ಪರಿಸರ ಕಾಳಜಿಯಂತಹ ಸೇವೆಗಳಿಂದ ಸಾಧ್ಯವಾಗುತ್ತದೆ. ಲವಲವಿಕೆಯ ಜೀವನಶೈಲಿಯು ಸ್ವಚ್ಛಂದ ಪರಿಸರದಿಂದ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷಿಗಳಿಗೆ ‘ಜಲ-ಆಹಾರ ಅಭಿಯಾನ’ ವನ್ನು ವಿಶ್ವವಿದ್ಯಾಲಯದ ಆವರಣದಾದ್ಯಂತ ವಿಸ್ತರಿಸುವ ಕಾರ್ಯವನ್ನು ಶೀಘ್ರವೇ ಆರಂಭಿಸುತ್ತೇವೆ ಎಂದರು.

ವಿದ್ಯಾರ್ಥಿಗಳು ಮರಗಿಡಗಳಲ್ಲಿ ನೇತು ಹಾಕಿದ್ದ ಬುಟ್ಟಿಗಳಿಗೆ ಆಹಾರ ಧಾನ್ಯಗಳನ್ನು ಮತ್ತು ನೀರನ್ನು ತುಂಬಿಸಿದರು.
ಈ ವೇಳೆ ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ್.ಎಸ್.ಎನ್., ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ.ಸದ್ಯೋಜಾತಪ್ಪ, ಸಿಂಡಿಕೇಟ್ ಸದಸ್ಯರುಗಳಾದ ರಮೇಶ್ ಸವದಿ, ಡಾ.ರಾಜಶೇಖರ್, ಡಾ.ರಾಮಕೃಷ್ಣ, ಡಾ.ಅನ್ನಪೂರ್ಣ, ಶೇಖ್ ಸಲೀಂ ಭಾಷಾ, ಪ್ರಾಣಿಶಾಸ್ತ್ರ ವಿಭಾಗದ ಪ್ರೊ.ಶಶಿಕಾಂತ್ ಮಜಿಗಿ, ಡಾ.ನಾಗಭೂಷಣ್ ಸಿ., ಸ್ನೇಹಾ ಸುಮಾ ಹೆಗಡೆ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here