ವಿಧಾನ ಪರಿಷತ್ ಚುನಾವಣೆ:ಚುನಾವಣಾ ವೀಕ್ಷಕರ ಸಭೆ, ಲೋಪದೋಷ ರಹಿತ ಚುನಾವಣೆ ಮಾಡಿ;ಅಭಿಮಾನ ತೋರಿದ್ರೇ ಅಮಾನತು:ಎಚ್ಚರಿಕೆ

0
69

ಬಳ್ಳಾರಿ,ನ.26 :ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಮತದಾನ ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸುವಂತೆ ಬಳ್ಳಾರಿ ಜಿಲ್ಲೆಯ ವಿಧಾನ ಪರಿಷತ್ ಚುನಾವಣಾ ವೀಕ್ಷಕರಾದ ಹಿರಿಯ ಐ.ಎ.ಎಸ್. ಅಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ನ.26) ನಡೆದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ ಚುನಾವಣಾ ವೀಕ್ಷಕ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಪರಿಷತ್ ಚುನಾವಣೆಯಲ್ಲಿ ಪ್ರಾಶಸ್ತ್ಯ ಮತಗಳಿರುವುದರಿಂದ ಮತ ಎಣಿಕೆ ವಿಭಿನ್ನವಾಗಿರುತ್ತದೆ. ಆದ್ದರಿಂದ ಮತ ಎಣಿಕೆಗೆ ಅನುಭವಿ ಅಧಿಕಾರಿಗಳನ್ನು ನಿಯೋಜಿಸುವಂತೆ ಸೂಚಿಸಿದರು.
ಚುನಾವಣೆ ಎಂದರೇ ಸಣ್ಣದು;ದೊಡ್ಡದು ಅಂತ ಇರುವುದಿಲ್ಲ;ಎಲ್ಲವನ್ನು ಸಮಾನವಾಗಿ ಪರಿಗಣಿಸಿ ಚುನಾವಣಾ ಆಯೋಗದ ನಿಯಮಾವಳಿಗಳ ಅನುಸಾರವೇ ಯಾವುದೇ ರೀತಿಯ ತಪ್ಪುಗಳಿಗೆ ಅವಕಾಶ ನೀಡದಂತೆ ಅತ್ಯಂತ ಪಾರದರ್ಶಕ ಮತ್ತು ನಿಷ್ಪಕ್ಷಪಾತದಿಂದ ಕೆಲಸ ನಿರ್ವಹಿಸಬೇಕಿದೆ;ಈ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡಿ ಎಂದರು.
ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಷ್ಪಕ್ಷಪಾತದಿಂದ ಅತ್ಯಂತ ತಟಸ್ಥವಾಗಿ ಕರ್ತವ್ಯ ನಿರ್ವಹಿಸಬೇಕು;ಅದನ್ನು ಬಿಟ್ಟು ಚುನಾವಣಾ ಸಂದರ್ಭದಲ್ಲಿ ಪಕ್ಷಗಳ ಮತ್ತು ಅಭ್ಯರ್ಥಿಗಳ ಅಭಿಮಾನ ತೋರಿಸುವಲ್ಲಿ ಮುಂದಾದರೇ ಅಮಾನತುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯಾವುದೇ ರೀತಿಯ ದೂರುಗಳು ಬಂದ್ರೇ ತಕ್ಷಣ ಕ್ರಮವಹಿಸುವಂತೆ ಸೂಚನೆ ನೀಡಿದ ಚುನಾವಣಾ ವೀಕ್ಷಕ ಡಾ.ರಾಮ್ ಪ್ರಸಾತ್ ಮನೋಹರ್ ಅವರು ತಾಲೂಕುಗಳಲ್ಲಿ ತಹಸೀಲ್ದಾರರು ಮತ್ತು ತಾಪಂ ಇಒಗಳನ್ನು ಎಂಸಿಸಿ ಮತ್ತು ಚುನಾವಣಾ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವಂತೆ ತಿಳಿಸಿದರು.
ಸಭೆ-ಸಮಾರಂಭಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ನಿಯಮಾನುಸಾರ ಕ್ರಮವಹಿಸಿ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರುಗಳು ಕಂಡುಬಂದ್ರೇ ನಿಯಮಾನುಸಾರ ಪ್ರಕರಣ ದಾಖಲಿಸಿ ಎಂದು ಸೂಚಿಸಿದರು.
ಮಾದರಿ ನೀತಿ ಸಂಹಿತೆ, ತರಬೇತಿ, ಮೈಕ್ರೋ ಅಬ್ಸರ್ವರ್ ನಿಯೋಜನೆ, ಭದ್ರತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಬಂಧಿಸಿದ ನೋಡಲ್ ಅಧಿಕಾರಿಗಳಿಂದ ಮಾಹಿತಿಯನ್ನು ಅವರು ಪಡೆದುಕೊಂಡರು.
ಅವಳಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಚುನಾವಣಾ ಸಿದ್ಧತೆಗಳ ಕುರಿತು ಮಾಹಿತಿಯನ್ನು ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪವನಕುಮಾರ ಮಾಲಪಾಟಿ ಅವರು, ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿರುವ ಮತಗಟ್ಟೆಗಳು ಮತ್ತು ಮಾರ್ಗಸೂಚಿ ಪ್ರಕಾರ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುತ್ತಿರುವುದನ್ನು ಖಚಿತಪಡಿಸಿದರು.
ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿವಿಧ ಹಂತಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಪಿ ಸೈದುಲು ಅಡಾವತ್,ಜಿಪಂ ಸಿಇಒ ಕೆ.ಆರ್.ನಂದಿನಿ,ಎಡಿಸಿ ಪಿ.ಎಸ್.ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್,ಎಸಿ ಡಾ.ಆಕಾಶ ಶಂಕರ್ ಸೇರಿದಂತೆ ನೋಡಲ್ ಅಧಿಕಾರಿಗಳು ಮತ್ತು ಚುನಾವಣೆಗೆ ನಿಯೋಜಿತರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

LEAVE A REPLY

Please enter your comment!
Please enter your name here