ವಿಶ್ವ ಪರಿಸರ ದಿನ ಆಚರಣೆ:ಜೂ.05ರಂದು ಅವಿಭಜಿತ ಬಳ್ಳಾರಿ ಜಿಪಂನಿಂದ ಕೃಷಿ ಅರಣ್ಯ,ಬದುಬೇಸಾಯಕ್ಕೆ ಒತ್ತು

0
107

ಬಳ್ಳಾರಿ : ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅವಿಭಜಿತ ಬಳ್ಳಾರಿ ಜಿಪಂ ಕೃಷಿ ಅರಣ್ಯೀಕರಣಕ್ಕೆ ಮತ್ತು ಬದುಬೇಸಾಯಕ್ಕೆ ಒತ್ತು ನೀಡಿದೆ. ನರೇಗಾ ಅಡಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ವಿವಿಧ ರೀತಿಯ ಕೆಲಸಗಳನ್ನು ಸದ್ದಿಲ್ಲದೇ ಕೈಗೊಳ್ಳುವ ಮೂಲಕ ಗಮನಸೆಳೆದಿರುವುದು ವಿಶೇಷ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಮಣ್ಣು ಮತ್ತು ತೇವಾಂಶ ಸಂರಕ್ಷಣೆಯ ಕಾಮಗಾರಿಗಳು, ಬ್ಲಾಕ್ ನೆಡುತೋಪು ಕಾಮಗಾರಿಗಳು, ರಸ್ತೆ ಬದಿ ನೆಡುತೋಪು ಕಾಮಗಾರಿಗಳು, ಕೃಷಿ ಅರಣ್ಯೀಕರಣ, ಬದು ಬೇಸಾಯ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆ ಮತ್ತು ಅರಣ್ಯಕೀರಣ ಕಾರ್ಯವನ್ನು ಅವಿಭಜಿತ ಬಳ್ಳಾರಿ ಜಿಪಂ ಮಾಡುತ್ತಿದೆ.
ಬಳ್ಳಾರಿ ಮತ್ತು ವಿಯಯನಗರ ಅವಳಿ ಜಿಲ್ಲೆಗಳ ಸಾಮಾಜಿಕ ಅರಣ್ಯ ವಿಭಾಗ ವ್ಯಾಪ್ತಿಗೆ ಬರುವ ಸಾಮಾಜಿಕ ಅರಣ್ಯ ವಲಯಗಳಲ್ಲಿ 2021 ನೇ ಮಳೆಗಾಲಕ್ಕೆ ಕೃಷಿ ಅರಣ್ಯ ಮತ್ತು ಬದು ಬೇಸಾಯಕ್ಕಾಗಿ ಅನೇಕ ರೀತಿಯ ಸಸಿಯ ತಳಿಗಳನ್ನು ಬೆಳೆಸಲಾಗಿದೆ.
2021ನೇ ಮಳೆಗಾಲಕ್ಕೆ ಕೃಷಿ ಅರಣ್ಯ ಮತ್ತು ಬದು ಬೇಸಾಯಕ್ಕಾಗಿ ಬೆಳೆಸಿದ ಸಸಿಗಳ ವಿವರ: ಅವಳಿ ಜಿಲ್ಲೆಗೆ ಒಳಪಟ್ಟಂತೆ ಕೃಷಿ ಅರಣ್ಯೀಕರಣಕ್ಕೆ 2,27,050 ಸಸಿಗಳನ್ನು ಬೆಳೆಸಲಾಗಿದೆ.ಬದು ಬೇಸಾಯಕ್ಕಾಗಿ 4.30ಲಕ್ಷ ಸಸಿಗಳನ್ನು ಬೆಳೆಸಲಾಗಿದೆ.
ಬದು ಬೇಸಾಯಕ್ಕಾಗಿ ಶ್ರೀಗಂಧ, ಸೀಮಾರೂಬ, ಮಹಾಗನಿ, ನಿಂಬೆ, ಕರಿಬೇವು, ನೆಲ್ಲಿ, ಪೇರಲ, ಹುಣಸೆ, ಸಾಗುವಾನಿ, ನುಗ್ಗೆ, ಗೊಬ್ಬರಗಿಡ, ಸಿಲ್ವರ್ ಓಕ್ ಬಿದಿರು, ಬೇವು, ಸೀತಾಫಲ, ಹಿಪ್ಪೆ, ಸಿಹಿಹುಣಸೆ, ನೆರಳೆ, ಹಲಸು, ನಾಯಿನೆರಳೆ, ಪಪ್ಪಾಯ ಸೇರಿದಂತೆ ವಿವಿಧ ರೀತಿಯ ಸಸಿಗಳನ್ನು ಬೆಳೆಸಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ತಿಳಿಸಿದ್ದಾರೆ.
ಕೃಷಿ ಅರಣ್ಯ ಮತ್ತು ಬದು ಬೇಸಾಯದಿಂದಾಗುವ ಪ್ರಯೋಜನಗಳಿವು: ಕೃಷಿ ಅರಣ್ಯ ಮತ್ತು ಬದು ಬೇಸಾಯಕ್ಕೆ ಸಸಿಗಳನ್ನು ನೆಡುವುದರಿಂದ ಅಸಾಧಾರಣ ಮಳೆ ಬಂದಾಗ ಬೆಳೆದ ಬೆಳೆಗೆ ಹೆಚ್ಚಿನ ರೀತಿಯ ತೊಂದರೆಯಾಗುವುದಿಲ್ಲ. ನೀರಿನ ಹರಿಯುವಿಕೆಯನ್ನು ಸಸಿಗಳು ತಡೆಯುವುದರಿಂದ ಸಂಪೂರ್ಣ ಬೆಳೆ ಹಾನಿಯ ಸಾಧ್ಯತೆ ಕಡಿಮೆಯಿರುತ್ತದೆ. ಬದುಗಳನ್ನು ನಿರ್ಮಾಣ ಮಾಡಿ, ಸಸಿಗಳನ್ನು ನೆಡುವುದರಿಂದ ಭೂಮಿಯ ಮಣ್ಣಿನ ಫಲವತ್ತತೆ ಹೆಚ್ಚಳವಾಗುವುದರ ಜೊತೆಗೆ ಕೀಟ ಮತ್ತು ರೋಗಗಳ ಬಾದೆ ನಿಯಂತ್ರಿಸಬಹುದಾಗಿದೆ.
ಬೆಳೆಗಳ ವೈವಿಧ್ಯತೆ ಹೆಚ್ಚಳದಿಂದ ಹೆಚ್ಚಿನ ಲಾಭವಾಗುತ್ತದೆ. ಪರಿಸರ ಸಂರಕ್ಷಣೆಗೆ ಅನುಕೂಲವಾಗುತ್ತದೆ. ಕೃಷಿ ಅರಣ್ಯಕ್ಕೆ ಸಸಿಗಳನ್ನು ನೆಡುವುದು ಮತ್ತು ಬದುಗಳ ನಿರ್ಮಾಣ ಕಾರ್ಯದಲ್ಲಿ ಕೈಗೊಳ್ಳುವುದು ಅನೇಕರಿಗೆ ಉದ್ಯೋಗ ಸೃಷ್ಟಿಸಿದಂತೆ ಆಗುತ್ತದೆ ಹಾಗೂ ಸಂಪನ್ಮೂಲಗಳ ಸಂಪೂರ್ಣ ಬಾಳಿಕೆ ಸಾಧ್ಯವಾಗುತ್ತದೆ. ವಿಭಿನ್ನ ರೀತಿಯ ಸಸಿಗಳ ಬೆಳವಣಿಗೆಯಿಂದಾಗಿ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣಕ್ಕೆ ಬರುತ್ತದೆ. ಒಂದೇ ಬೆಳೆಯ ಬದಲಿಗೆ ಬಹುಬೆಳೆ ಪದ್ದತಿಯನ್ನು ಅಳವಡಸಿಕೊಂಡರೆ ಒಂದೇ ಸೂರಿನಡಿಯಲ್ಲಿ ಇಡೀ ಕುಟುಂಬಕ್ಕೆ ಪೌಷ್ಠಿಕ ಆಹಾರ ಪೂರೈಸುವ ಮೂಲಕ ಕುಟುಂಬ ಸದಸ್ಯರ ಪೌಷ್ಠಿಕ ಆಹಾರ ಮಟ್ಟ ಮತ್ತು ಆರೋಗ್ಯ ಸುಧಾರಣೆಯಾಗುತ್ತದೆ. ಇವೆಲ್ಲವನ್ನು ಹೊರೆತುಪಡಿಸಿ ಜೇನು ಕೃಷಿ ಚಟುವಟಿಕೆ ಅಳವಡಿಸಿಕೊಳ್ಳಬಹುದಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ವಿವರಿಸುತ್ತಾರೆ.
ಸಸಿಗಳನ್ನು ಪಡೆಯಲು ಸಂಪರ್ಕಿಸಬೇಕಾದವರ ವಿವರ: ಕೃಷಿ ಅರಣ್ಯ ಮತ್ತು ಬದು ಬೇಸಾಯಕ್ಕಾಗಿ ಬೇಕಾದ ಸಸಿಗಳನ್ನು ಪಡೆಯಲು ಬಳ್ಳಾರಿ ವ್ಯಾಪ್ತಿಯ ಶಿವಪುರ ಸಸ್ಯಕ್ಷೇತ್ರ 9448567952, 9964048059, ಕುರುಗೋಡು 9448567952, 9964048059, ಹಡಗಲಿಯ ಕೊಮಾರನಹಳ್ಳಿ ತಾಂಡ ಸಸ್ಯಕ್ಷೇತ್ರ 7899638144 7619461705, ಹಗರಿಬೊಮ್ಮನಹಳ್ಳಿಯ ಮಾಲವಿ ಸಸ್ಯಕ್ಷೇತ್ರ 9902794977, 7026976711, ಹೊಸಪೇಟೆ ಮತ್ತು ಕಂಪ್ಲಿಯ ಗುಂಡಾ ಸಸ್ಯಕ್ಷೇತ್ರ 9902794977, 9740515242, ಹರಪನಹಳ್ಳಿಯ ದ್ಯಾಪನಾಯಕನಹಳ್ಳಿ ಸಸ್ಯಕ್ಷೇತ್ರ 8762606007 7760974131, ಕೂಡ್ಲಿಗಿ ಮತ್ತು ಕೊಟ್ಟೂರು ಲೊಟ್ಟನಕೆರೆ ಸಸ್ಯಕ್ಷೇತ್ರ 9663578364, 9901978830 ಮತ್ತು ನಾಣ್ಯಾಪುರ ಸಸ್ಯಕ್ಷೇತ್ರ 9663578364, 9148493925 ಸಂಡೂರಿನ ಸೋವೇನಹಳ್ಳಿ ಸಸ್ಯಕ್ಷೇತ್ರ 9845677378, 9008890801, ಸಿರುಗುಪ್ಪ ತಾಲೂಕಿನ ಶಾನವಾಸಪುರ ಸಸ್ಯಕ್ಷೇತ್ರ 7975179404, 9663543102 ಗೆ ಸಂಪರ್ಕಿಸಿ ಬೇಕಾದ ಸಸಿಗಳನ್ನು ಪಡೆಯಬಹುದಾಗಿದೆ.
ಲಾಕ್‍ಡೌನ್ ಸಮಯದಲ್ಲಿ ಹಳ್ಳಿಗರಿಗೆ ನರೇಗಾ ಸಾಥ್: ಕೊರೊನಾ ಸಮಯದಲ್ಲೂ ಸಹ ಅತೀ ಕ್ರೀಯಾಶೀಲವಾಗಿ ಕೆಲಸ ಮಾಡಿದ ಕೀರ್ತಿ ಗ್ರಾಮಾಣಾಭಿವೃದ್ಧಿ ಮತ್ತು ಫಂಚಾಯತ್ ರಾಜ್ ಇಲಾಖೆಗೆ ಸಲ್ಲುತ್ತದೆ. ನಗರಗಳಿಂದ ಉದ್ಯೋಗ ಕಳೆದುಕೊಂಡು ಹಳ್ಳಿಯ ಕಡೆಗೆ ತೆರಳಿದವರಗೆ ದಿನದೂಡಲು ಕಷ್ಟವಾದ ಸಮಯದಲ್ಲಿ ನರೇಗಾ ಮೂಲಕ ಅವರಿಗೆ ಕೆಲಸ ಕೊಟ್ಟು ತಮ್ಮ ತಮ್ಮ ಊರುಗಳಲ್ಲಿಯೇ ನೆಮ್ಮದಿಯ ಜೀವನ ನಡೆಸಲು ನೆರವಾಗಿದೆ.
ಪ್ರತಿ ಕುಟುಂಬಕ್ಕೆ 100 ದಿವಸ ಕೆಲಸದ ಖಾತರಿ ಮಾಡಿ ದಿನಕ್ಕೆ ರೂ.289 ಕೂಲಿ ನೀಡಲಾಗುತ್ತದೆ. ಕೋವಿಡ್ ಸಮಯದಲ್ಲಿ ಕೂಡ ಕೆಲಸ ಬೇಡುವ ಕೈಗಳಿಗೆ ಕೆಲಸ ಕೊಡಲಾಗುತ್ತದೆ. ಕೆಲಸ ಮತ್ತು ಕಾಮಗಾರಿ ಬೇಡಿಕೆ ಸಲ್ಲಿಸಲು ಹತ್ತಿರದ ಗ್ರಾಮ ಪಂಚಾಯತಿಯನ್ನುಸಂಪರ್ಕಿಸಬಹುದು. ಅಥವಾ ಕಾಯಕ ಮಿತ್ರ ಮೊಬೈಲ್ ಆ್ಯಪ್ ಮೂಲಕ ಸಲ್ಲಿಸಿ, ಇಲ್ಲವೆ ಉಚಿತ ಸಹಾಯವಾಣಿ ಸಂಖ್ಯೆ: 1800 425 666ಗೆ ಸಂಪರ್ಕಿಸಬಹುದು.
ಕೊರೊನಾ ಸೋಂಕು ತಡೆಯುವ ಮುಂಜಾಗ್ರಾತಾ ಕ್ರಮಗಳ ಅನ್ವಯ ಉದ್ಯೋಗ ಖಾತರಿ ಕಾಮಗಾರಿ ಸ್ಥಳದಲ್ಲಿ 2 ಮೀಟರ್ ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ದರಿಸುವುದು, ಕೈಗಳನ್ನು ಆಗಾಗ್ಗೆ ಸೋಪು/ಸ್ಯಾನಿಟೈಸ್ ಮಾಡುವ ಮೂಲಕ ಕೆಲಸ ಮಾಡಲಾಗುತ್ತದೆ.
‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಇದು ಕೇವಲ ಬಾಯಿಮಾತಿಗೆ ಸೀಮಿತವಾಗದೆ ಪ್ರತಿಯೊಬ್ಬರು ಗಿಡಗಳನ್ನು ಬೆಳೆಸುವುದರ ಜೊತೆಗೆ ಪರಿಸರ ಉಳಿಸುವ ಕೆಲಸಕ್ಕೆ ಮುಂದಾಗೋಣ’ ಪರಿಸರದ ದಿನದಂದು ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ಒಂದೊಂದು ಗಿಡವನ್ನು ನೆಡುವ ಮೂಲಕ ಇತರರು ಇದನ್ನು ಪಾಲಿಸುವಂತೆ ಮಾಡಿ, ಮುಂದಿನ ಪೀಳಿಗೆಗೆ ಸಮೃದ್ಧವಾದ, ಸ್ವಚ್ಛವಾದ ಪರಿಸರವನ್ನು ನೀಡೋಣ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here