ಕೇವಲ ಕಾನೂನು ಬದ್ಧ ದತ್ತು ಪ್ರಕ್ರಿಯೆ ಪ್ರೋತ್ಸಾಹಿಸಿ: ಉಷಾ ಜೆ.

0
129

ಹಾಸನ ನ.18 :- ಮಕ್ಕಳನ್ನು ಅನಧೀಕೃತ ದತ್ತು ನೀಡುವುದು ಅಪರಾಧ, ಕಾನೂನು ಬದ್ಧ ದತ್ತು ಪ್ರೋತ್ಸಾಹಿಸಿ, ಕಾನುನು ಬಾಹಿರ ದತ್ತು ನಿಷೇದಕ್ಕೆ ಸಹಕರಿಸಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಷಾ ಜೆ. ಕರೆ ನೀಡಿದ್ದಾರೆ.

ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ನಮ್ಮ ಸಮಾಜದ ಆಸ್ತಿ, ನಮ್ಮ ದೇಶದಲ್ಲಿ ಒಟ್ಟು ಶೇ.40 ರಷ್ಟು ಮಕ್ಕಳಿದ್ದಾರೆ. ಈ ಮಕ್ಕಳಲ್ಲಿ ಕೆಲವು ಮಕ್ಕಳು ಅನಾಥರಾಗುವುದು, ನಿರ್ಲಕ್ಷತೆಗೆ ಒಳಗಾಗುವುದು ಕಂಡು ಬರುತ್ತಿದೆ ಎಂದರು.

ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲು ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, 1098 ಮಕ್ಕಳ ಸಹಾಯವಾಣಿ, ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದೆ. ಅನಾಥ, ಪರಿತ್ಯಕ್ತ ಹಾಗೂ ಒಪ್ಪಿಸಲ್ಪಟ್ಟ ಮಕ್ಕಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ ಮಗುವಿನ ಘನತೆಯುತ ಜೀವನ ರೂಪಿಸಲು ಈ ಮಕ್ಕಳ ರಕ್ಷಣಾ ವ್ಯವಸ್ಥೆ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.

ಆದರೆ ಕೆಲವು ಕಡೆ ಅನಾಥ ಮಕ್ಕಳನ್ನು ರಕ್ಷಿಸುವ ನೆಪದಲ್ಲಿ ಅನಧೀಕೃತವಾಗಿ ಸಾಗಿಸುವುದು, ಮಾರಾಟ ಮಾಡುವುದು ಕಂಡು ಬರುತ್ತಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಎಲ್ಲರೂ ಇದನ್ನು ತಡೆಯಬೇಕಿದೆ ಎಂದು

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಾಂತರಾಜು ಅವರು ಮಾತನಾಡಿ ಬೇಡವಾದ ಮಕ್ಕಳನ್ನು ಎಲ್ಲೆಂದರಲ್ಲಿ ಬಿಸಾಡದೇ, ಮಮತೆಯ ತೊಟ್ಟಿಲಲ್ಲಿ ಹಾಕಿ, ಮಗುವಿನ ಜೀವ ಉಳಿಸಲು ಸಹಕರಿಸಿ ಎಂದರು.

ಯಾವುದೇ ಮಗುವನ್ನು ಅನಧೀಕೃತವಾಗಿ ಪಡೆಯುವಂತಿಲ್ಲ ಹಾಗೂ ಮಾರಾಟ ಮಾಡುವಂತಿಲ್ಲ ಮಕ್ಕಳ ನ್ಯಾಯ ಕಾಯ್ದೆ-2015 ರನ್ವಯ ಮಕ್ಕಳ ಮಾರಾಟ ಮಾಡಿದವರಿಗೆ ಹಾಗೂ ಕೊಂಡುಕೊಂಡವರಿಗೆ 5 ವರ್ಷ ಕಠಿಣ ಸಜೆ ವಿಧಿಸಲಾಗುತ್ತದೆ. ಆಸ್ಪತ್ರೆ ಸಿಬ್ಬಂದಿ ಅಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ 7 ವರ್ಷಗಳವರೆಗೆ ಸಜೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಮಕ್ಕಳನ್ನು ದತ್ತು ಪಡೆಯಲು ಆಸಕ್ತಿ ಇರುವ ದಂಪತಿಗಳು ಹತ್ತಿರದ ಮಕ್ಕಳ ಕಲ್ಯಾಣ ಸಮಿತಿ, ದತ್ತು ಕೇಂದ್ರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದಾಗಿದೆ ಅಥವಾ ಅಂತರರ್ಜಾಲ ತಾಣ WWW.cara.nic.in ಗೆ ಸಂಪರ್ಕಿಸಬಹುದಾಗಿದೆ ಎಂದು ಕಾಂತರಾಜ್ ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜಿನ ಹಿರಿಯ ಉಪನ್ಯಾಸಕರಾದ ಸಿ.ಟಿ ರತ್ನಮ್ಮ , ಸಮಾಜ ಕಾರ್ಯಕರ್ತರಾದ ಸವಿತಾ ಬಿ.ಜೆ, ಸಂತೋಷ್ ಲೋಹಿತ್ ಆರ್.ಡಿ ಮತ್ತಿತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here