ಪ್ರೇರಕ ಘಟನೆ

0
133

ವಿದೇಶದಲ್ಲಿ ಆ ರೈಲು ಅತೀ ವೇಗದಲ್ಲಿ ಚಲಿಸುತ್ತಿತ್ತು. ರೈಲಿನ ಕಂಪಾರ್ಟ್ಮೆಂಟಿನ ತುಂಬಾ ಬ್ರಿಟಿಷರೇ ತುಂಬಿದ್ದರು. ಅದೇ ರೈಲಿನ ಕಂಪಾರ್ಟ್ಮೆಂಟಿನ ಒಂದು ಸೀಟಿನಲ್ಲಿ ಭಾರತೀಯರೊಬ್ಬರೂ ಸಹ ಕುಳಿತಿದ್ದರು.
ಕಂಪಾರ್ಟ್ಮೆಂಟಿನಲ್ಲಿದ್ದ ‘ಆ ಬಿಳಿಯರ’ ಒಂದು ಗುಂಪು ಸೇರಿಕೊಂಡು ಆ ಭಾರತೀಯನನ್ನೇ ನೋಡುತ್ತಿದ್ದರು. ಅವರ ಭಾರತೀಯ ವೇಷಭೂಷಣಗಳನ್ನು ನೋಡಿ ಹಳ್ಳಿ ಮುಕ್ಕನೆಂದು ಅಪಹಾಸ್ಯ, ಗೇಲಿ ಮಾಡುತ್ತಿದ್ದರು. ಈ ಕಂಪಾರ್ಟ್ಮೆಂಟಿನಲ್ಲಿ ಯಾವುದೋ ವಿಚಿತ್ರ ಪ್ರಾಣಿ ಕೂತಿದೆ ಅದನ್ನು ಓಡುತ್ತಿರುವ ಈ ರೈಲಿನಿಂದಲೇ ಹೊರಗೆಸೆಯಿರಿ ಎಂದು ಕೆಲವರು ಹೇಳುತ್ತಿದ್ದರು.

ಗರಿಗರಿಯಾದ ಕಪ್ಪು ಕೋಟು, ಪ್ಯಾಂಟು, ತಲೆಗೆ ಪೇಟ ಧರಿಸಿದ್ದ ಆ ಶಿಸ್ತುಬದ್ಧ ಭಾರತೀಯ ವ್ಯಕ್ತಿಗೆ, ಆ ಬಿಳಿಯರು ಅಷ್ಟೆಲ್ಲಾ ಕುಚೋದ್ಯ ಮಾಡುತ್ತಿದ್ದರೂ, ಅವರ ಮೇಲೆ ಅದು ಯಾವ ಪರಿಣಾಮವನ್ನೂ ಬೀರಲಿಲ್ಲ. ಅವರು ತುಂಬಾ ಶಾಂತ ಗಂಭೀರ ಮನೋಭಾವದಿಂದ ತಮ್ಮ ಆಸನದಲ್ಲಿ ಕುಳಿತಿದ್ದರು.

ರೈಲು ಅತೀ ವೇಗದಲ್ಲಿ ಓಡುತ್ತಿತ್ತು ಮತ್ತು ಆ ಬಿಳಿಯರು ಆ ಭಾರತೀಯನನ್ನು ಅಪಹಾಸ್ಯ ಮಾಡುವುದು ಮತ್ತು ಅಪಮಾನಿಸುವುದು ಮುಂದುವರೆದಿತ್ತು. ಆಗ ಇದ್ದಕ್ಕಿದ್ದಂತೆ ಆ ವ್ಯಕ್ತಿ ತಾವು ಕುಳಿತಿದ್ದ ಸೀಟಿನಿಂದ ಒಮ್ಮೆಲೇ ಎದ್ದು “ರೈಲು ನಿಲ್ಲಿಸಿ” “ರೈಲು ನಿಲ್ಲಿಸಿ” ಎಂದು ಜೋರಾಗಿ ಕೂಗಿದರು. ಅವರು ಕೂಗಿದ್ದು ಅವರಾರಿಗೂ ಅರ್ಥವಾಗಲಿಲ್ಲ. ಕೂಡಲೇ ಅವರು ಮಾಡಿದ ಮೊದಲ ಕೆಲಸ ರೈಲು ನಿಲ್ಲಲು ರೈಲಿನಲ್ಲಿದ್ದ ಚೈನ್ ನ್ನು ಜೋರಾಗಿ ಎಳೆದರು. ಆಗ ರೈಲು ನಿಂತಿತು.
ಈಗ ಆ ಬಿಳಿಯರ ಕೋಪ ಭುಗಿಲೆದ್ದಿತು. ನಿಘಂಟಿನಲ್ಲಿದ್ದ ಪದಗಳೆನ್ನೆಲ್ಲ ಬಳಸಿ ಎಲ್ಲರೂ ಅವರನ್ನು ನಿಂದಿಸುತ್ತಿದ್ದರು. ಇದ್ಯಾವುದೂ ಅವರ ಮೇಲೆ ಏನೂ ಪರಿಣಾಮ ಬೀರುತ್ತಿರಲಿಲ್ಲ. ಅವರ ಆ ಮೌನವು ಬಿಳಿಯರ ಕೋಪವನ್ನು ಇನ್ನೂ ಹೆಚ್ಚಿಸಿತ್ತು.
ಅದೇ ಸಮಯಕ್ಕೆ ಅವರು ಕುಳಿತಿದ್ದ ರೈಲಿನ ಕಂಪಾರ್ಟ್ಮೆಂಟಿನ ಬಳಿ ರೈಲಿನ ಗಾರ್ಡ್ ಓಡಿ ಬಂದ. ಇಲ್ಲಿ “ರೈಲು ನಿಲ್ಲಿಸಿದವರು ಯಾರು” ಎಂದು ಕಟುವಾದ ಧ್ವನಿಯಲ್ಲಿ ಕೇಳಿದ.
ಅಲ್ಲಿದ್ದ ಬಿಳಿಯರು ಮಾತನಾಡುವ ಮೊದಲೇ, ಆ ವ್ಯಕ್ತಿ “ನಾನು ರೈಲನ್ನು ನಿಲ್ಲಿಸಿದೆ ಸಾರ್” ಎಂದು ಹೇಳಿದರು.

ಆ ಭಾರತೀಯನನ್ನು ನೋಡಿದ ರೈಲಿನ ಗಾರ್ಡ್ ಕಟುವಾದ ಧ್ವನಿಯಲ್ಲಿ ನೀನೇನು ಹುಚ್ಚನೇ ? ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿರುವೆಯಾ? ನಿನಗೆ ಗೊತ್ತಾ… ವಿನಾಕಾರಣ ರೈಲನ್ನು ನಿಲ್ಲಿಸುವುದು ಅಪರಾಧ ಎಂದು ಕೋಪದಿಂದ ಹೇಳಿದ”
ಅದಕ್ಕೆ ಅವರು, ಹೌದು ಮಹನಿಯರೇ – ಅದು ನನಗೆ ಗೊತ್ತಿದೆ. ಈಗ ನಾನು ರೈಲನ್ನು ನಿಲ್ಲಿಸದೇ ಹೋಗಿದ್ದರೆ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದರು.
ಆ ವ್ಯಕ್ತಿಯ ಮಾತು ಕೇಳಿ ಕಂಪಾರ್ಟ್ಮೆಂಟಿನಲ್ಲಿದ್ದ ಎಲ್ಲರೂ ಜೋರಾಗಿ ನಗತೊಡಗಿದರು. ಆದರೆ ಅವರು ವಿಚಲಿತರಾಗದೆ ಸಂಪೂರ್ಣ ಆತ್ಮವಿಶ್ವಾಸದಿಂದ ಹೇಳಿದರು – ಇಲ್ಲಿಂದ ಸುಮಾರು ಒಂದು ಫರ್ಲಾಂಗ್ ದೂರದಲ್ಲಿ ರೈಲು ಹಳಿಗಳು ಮುರಿದುಹೋಗಿವೆ, ನೀವು ಬೇಕಾದರೆ ನಡೆದು ಹೋಗಿ ನೋಡಬಹುದು ಎಂದರು.

ಆ ವ್ಯಕ್ತಿಯೂ ಆ ಕಂಪಾರ್ಟ್ಮೆಂಟಿನಿಂದ ಕೆಳಗಿಳಿದರು ಮತ್ತು ಕೆಲವು ಬಿಳಿಯರೂ ಸಹ ಗಾರ್ಡ್ ಜೊತೆಯಲ್ಲಿ ಆ ದಿಕ್ಕಿನತ್ತ ಹೆಜ್ಜೆ ಹಾಕಿದರು. ದಾರಿಯಲ್ಲಿಯೂ ಸಹ, ಆ ಬಿಳಿಯರು ಅವರತ್ತ ಮಾತಿನ ಬಾಣಗಳನ್ನು ಬಿಡುತ್ತಿದ್ದರು. ಇದ್ಯಾವುದೂ ಅವರ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಅವರು ಮೌನವಾಗಿ ಹೆಜ್ಜೆ ಹಾಕುತ್ತಿದ್ದರು.
ಸ್ವಲ್ಪ ದೂರ ಕ್ರಮಿಸಿದ ಮೇಲೆ , ಅಲ್ಲಿಗೆ ಸ್ವಲ್ಪ ದೂರದಲ್ಲೇ ರೈಲು ಹಳಿಯ ಸುತ್ತಲೂ ಟ್ರ್ಯಾಕ್ ಮುರಿದುಹೋಗಿರುವುದನ್ನು ಎಲ್ಲರ ಕಣ್ಣುಗಳು ನೋಡಿದವು. ರೈಲು ಹಳಿಯ ನಟ್-ಬೋಲ್ಟ್‌ಗಳು ಸಂಪೂರ್ಣವಾಗಿ ಬಿಚ್ಚಿಕೊಂಡಿದ್ದವು. ಈಗ ಆ ಭಾರತೀಯನನ್ನು ಮೂರ್ಖ, ಅಜ್ಞಾನಿ, ಹುಚ್ಚು ಎಂದು ಕರೆಯುತ್ತಿದ್ದ ಗಾರ್ಡ್ ಸೇರಿದಂತೆ ಎಲ್ಲಾ ಬಿಳಿಯರ ಮುಖಗಳು ಆ ಭಾರತೀಯನನ್ನೇ ನೋಡಲಾರಂಭಿಸಿದವು. ಎಲ್ಲರಿಗೂ ಕುತೂಹಲ! ನಮ್ಮ ಜೊತೆಯಲ್ಲೇ ಪ್ರಯಾಣಿಸುತ್ತಿದ್ದ ಇವರಿಗೆ ಇಷ್ಟೇ ದೂರದಲ್ಲಿ ರೈಲು ಹಳಿ ಮುರಿದುಹೋಗಿರುವುದೆಲ್ಲಾ ಹೇಗೆ ತಿಳಿಯಿತು..?? ಎಂದು ಎಲ್ಲರೂ ಆಶ್ಚರ್ಯಪಟ್ಟರು.
ಆಗ ರೈಲಿನ ಗಾರ್ಡ್ ಕೇಳಿದ – ಮಹನೀಯರೇ , ಇಲ್ಲಿ ಟ್ರ್ಯಾಕ್ಸ್ ಮುರಿದುಹೋಗಿದೆ ಎಂದು ನಿಮಗೆ ಹೇಗೆ ಗೊತ್ತಾಯಿತು??
ಅವರು ಹೇಳಿದರು – ಸರ್, ಜನರು ರೈಲಿನಲ್ಲಿ ತಮ್ಮ ತಮ್ಮಲ್ಲೆ ಮಾತನಾಡಿಕೊಳ್ಳುವುದರಲ್ಲಿ ನಿರತರಾಗಿದ್ದರು. ಆ ಸಮಯದಲ್ಲಿ ನನ್ನ ಗಮನವು ಓಡುತ್ತಿದ್ದ ರೈಲಿನ ವೇಗದ ಮೇಲೆ ಕೇಂದ್ರೀಕೃತವಾಗಿತ್ತು. ರೈಲು ಸಾಮಾನ್ಯ ವೇಗದಲ್ಲಿ ಚಲಿಸುತ್ತಿತ್ತು. ಆದರೆ ಹಠಾತ್ ಕಂಪನದಿಂದ ರೈಲಿನ ವೇಗದಲ್ಲಿ ಬದಲಾವಣೆಯಾಗಿದ್ದು ನನ್ನ ಅರಿವಿಗೆ ಬಂದಿತು. ಇದು ಸ್ವಲ್ಪ ದೂರದಲ್ಲಿ ಟ್ರ್ಯಾಕ್ ಮುರಿದಾಗ ಸಂಭವಿಸುವ ಶಬ್ದವಾದ್ದರಿಂದ ನಾನು ಒಂದು ಕ್ಷಣವನ್ನೂ ವ್ಯರ್ಥಮಾಡದೇ ರೈಲನ್ನು ನಿಲ್ಲಿಸಲು ಸರಪಳಿಯನ್ನು ಎಳೆದಿದ್ದೇನೆ ಎಂದರು.

ಅವರಾಡಿದ ಮಾತುಗಳನ್ನು ಅಲ್ಲಿ ನಿಂತಿದ್ದ ಕಾವಲುಗಾರರು ಮತ್ತು ಅವರನ್ನು ಅಪಹಾಸ್ಯ ಮಾಡಿದ್ದ ಬಿಳಿಯರು ಕೇಳಿ ದಿಗ್ಭ್ರಮೆಗೊಂಡರು. ಆ ಗಾರ್ಡ್ ಮತ್ತೆ ಕೇಳಿದ -ಎಂತಹ ಉತ್ತಮ ತಾಂತ್ರಿಕ ಜ್ಞಾನ ನಿಮ್ಮದು! ನೀವು ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತಿಲ್ಲ. ದಯವಿಟ್ಟು ನಿಮ್ಮ ಪರಿಚಯ ಮಾಡಿಕೊಡಿ ಎಂದು ವಿನಯವಾಗಿ ಕೇಳಿದನು.

ಆ ವ್ಯಕ್ತಿ ತುಂಬಾ ನಯವಾಗಿ ಉತ್ತರಿಸಿದರು – ಸರ್ ನಾನು ಭಾರತೀಯ ಇಂಜಿನಿಯರ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಂದರು.
ಹೌದು ! ಆ ಅಸಾಧಾರಣ ವ್ಯಕ್ತಿ ಬೇರೆ ಯಾರೂ ಅಲ್ಲ, ನಮ್ಮ ಹೆಮ್ಮೆಯ ಭಾರತರತ್ನ ಮೋಕ್ಷಗುಂಡಂ ಡಾ.ವಿಶ್ವೇಶ್ವರಯ್ಯನವರು.

LEAVE A REPLY

Please enter your comment!
Please enter your name here