ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಸಾರ್ವಕಾಲಿಕ: ಡಾ.ಬಿ.ಸಿ.ಸತೀಶ

0
144

ಮಡಿಕೇರಿ ಜ.12 :-ಜಗತ್ತನ್ನು ಜಾಗೃತಗೊಳಿಸಿದ ಸ್ವಾಮಿ ವಿವೇಕಾನಂದರ ನಿಲುವು ಸಾರ್ವಕಾಲಿಕವಾಗಿದ್ದು, ವಿವೇಕಾನಂದರ ವಿಚಾರಧಾರೆಗಳನ್ನು ಯುವಜನರು ತಿಳಿದುಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕರೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲ್ಲೂಕು ಯುವ ಒಕ್ಕೂಟ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ನಗರದ ಎಫ್‍ಎಂಕೆಎಂಸಿ ಕಾಲೇಜು ಸಭಾಂಗಣದಲ್ಲಿ ಬುಧವಾರ ‘ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ’ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ನಿಲುವುಗಳು ಸಾರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಅವರ ಆಧ್ಯಾತ್ಮಿಕ ಹಾಗೂ ದೂರದೃಷ್ಟಿ ಚಿಂತನೆಗಳು, ಪ್ರಕಾಂಡ ಪಾಂಡಿತ್ಯವನ್ನು ಹೊಂದಿದ್ದವು ಎಂದು ಜಿಲ್ಲಾಧಿಕಾರಿ ಅವರು ನುಡಿದರು.
ಸ್ವಾಮಿ ವಿವೇಕಾನಂದರು ಯುವ ಜನರಿಗೆ ಒಂದು ರೀತಿ ‘ಶಕ್ತಿ’ ಇದ್ದಂತೆ, ಕೇವಲ 39 ವರ್ಷ ಬಾಳಿ, ಬದುಕಿದ ಸ್ವಾಮಿ ವಿವೇಕಾನಂದರು, ಎಷ್ಟೊಂದು ಪ್ರಖ್ಯಾತಿ ಹೊಂದಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹೇಳಿದರು.

ದೇಶ, ವಿದೇಶಗಳನ್ನು ಸುತ್ತಿ ಯುವ ಜನರ ಶಕ್ತಿಯ ಮಹತ್ವದ ಬಗ್ಗೆ ಸಂದೇಶ ಸಾರಿದರು. ತಮ್ಮ ಆಳವಾದ ಅಧ್ಯಯನದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಪಾಂಡಿತ್ಯ ಸಂಪಾದಿಸಿದ್ದರು ಎಂದು ವಿವರಿಸಿದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ‘ಭವ್ಯ ಭಾರತದ ಶಿಲ್ಪಿ’ ಎಂದು ಬಣ್ಣಿಸಿದರು.
ಸ್ವಾಮಿ ವಿವೇಕಾನಂದರು ಮುಂದಿನ ಪೀಳಿಗೆಗೆ ರಾಷ್ಟ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದರು. ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ್ದ ಭಾಷಣ ಇಡೀ ವಿಶ್ವದಲ್ಲಿಯೇ ಜನಮನ್ನಣೆ ಗಳಿಸಿತು ಎಂದು ಅವರು ನುಡಿದರು.

ಸ್ವಾಮಿ ವಿವೇಕಾನಂದ ಅವರಲ್ಲಿ ಗುರಿ ಇತ್ತು, ಕನಸನ್ನು ನನಸು ಮಾಡುವ ಇಚ್ಚಾಶಕ್ತಿ ಮತ್ತು ಪರಿಶ್ರಮ ಹೊಂದಿದ್ದರು. ಆ ನಿಟ್ಟಿನಲ್ಲಿ ಯುವಜನರಲ್ಲಿ ಇಚ್ಚಾಶಕ್ತಿ ಮತ್ತು ಪರಿಶ್ರಮ ಇರಬೇಕು ಎಂದರು.
ಯುವ ಜನರು ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಇದರಿಂದ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಮಾತನಾಡಿ ಯುವಜನರು ಗುರಿ ತಲುಪುವ ತನಕ ಪ್ರಯತ್ನಿಸಬೇಕು. ಆತ್ಮವಿಶ್ವಾಸ ಇದ್ದಲ್ಲಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರು ಮಾತನಾಡಿ ಯುವ ಜನರು ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು. ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಅಧ್ಯಯನ ಮಾಡಬೇಕು ಎಂದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೆ.ಸಿ.ದಯಾನಂದ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ಬಹುಮುಖ ಪ್ರತಿಭೆಯನ್ನು ಹೊಂದಿದ್ದರು. ಅವರು ತಮ್ಮ ಅಮೋಘ ಮಾತುಗಳಿಂದ ಜನರನ್ನು ಜಾಗೃತಿಗೊಳಿಸುವ ಕೆಲಸ ಕಾರ್ಯ ಮಾಡಿದ್ದರು ಎಂದರು.
ಯುವ ಜನರಲ್ಲಿ ಸ್ವಾಮಿ ವಿವೇಕಾನಂದರಂತೆ ಛಲ ಇರಬೇಕು. ಸಿಕ್ಕಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಛಲ, ಗುರಿ ಇದ್ದಲ್ಲಿ, ಯಶಸ್ಸು ಸಾಧಿಸಬಹುದು ಎಂಬುದನ್ನು ಸ್ವಾಮಿ ವಿವೇಕಾನಂದರು ತೋರಿಸಿದ್ದಾರೆ ಎಂದರು.
ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಶಿಕ್ಷಣ, ವಾಣಿಜ್ಯ, ವ್ಯಾಪಾರ, ಹೀಗೆ ಹಲವು ಕ್ಷೇತ್ರಗಳಲ್ಲಿ ಹಲವು ಅವಕಾಶಗಳನ್ನು ಪಡೆಯಬಹುದು ಎಂದು ಡಾ.ಕೆ.ಸಿ. ದಯಾನಂದ ಅವರು ಹೇಳಿದರು.

ಎದ್ದೇಳಿ! ಎಚ್ಚರಗೊಳ್ಳಿ! ಗುರಿ ತಲುಪುವವರೆಗೆ ಮುನ್ನಡೆಯಿರಿ ಎಂಬ ಸಂದೇಶವನ್ನು ಸಾರಿದ್ದರು, ವಿಕಾಸವೇ ಜೀವನ, ಸಂಕೋಚವೇ ಮರಣ ಎಂಬಂತೆ ಎಲ್ಲಾ ಕಾಲದ ಪ್ರತಿಯೊಬ್ಬರಿಗೂ ಪ್ರಿಯವಾದ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರದ್ದಾಗಿದೆ ಎಂದು ಅವರು ನುಡಿದರು.
ವಿವೇಕಾನಂದರು ಕಿರಿಯ ವಯಸ್ಸಿನಲ್ಲಿಯೇ ಉದಾರ ಮತ್ತು ಧಾನ ಮಾಡುವ ಗುಣವನ್ನು ಹೊಂದಿದ್ದು, ತಾಯಿಯ ಆಧ್ಯಾತ್ಮಿಕ ಒಲವಿನಿಂದ ಮಹಾ ಗ್ರಂಥಗಳ ಪಠಣದಿಂದ ಮುಂದೆ ಆಧ್ಯಾತ್ಮಿಕತೆಯ ಕಡೆಯ ಅವರನ್ನು ಪ್ರೇರೆಪಿಸುವಂತೆ ಮಾಡಿತು ಎಂದರು.

ಬಾಲ್ಯದಿಂದಲೇ ತಾರ್ಕಿಕ ಮನೋಭಾವವನ್ನು ಹೊಂದಿದ್ದ ಅವರು ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರಿಂದ ಎಲ್ಲಾ ಸಂದೇಹಗಳಿಗೆ ಮುಕ್ತಿ ಪಡೆದಿದ್ದರು, ದೇಶದಲ್ಲಿ ಬಡತನ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಿದರು ಎಂದು ಪ್ರಾಧ್ಯಾಪಕರು ಸ್ಮರಿಸಿದರು.
ಧರ್ಮವೇ ಭಾರತದ ಶಕ್ತಿಯಾಗಿದೆ ಎಂದು ನಂಬಿದ್ದ ಅವರು ಭಾರತೀಯ ಧರ್ಮವನ್ನು ಪ್ರಪಂಚದಾದ್ಯಂತ ಪಸರಿಸಲು ಪಣ ತೊಟ್ಟವರು, ಸರ್ವ ಧರ್ಮ ಸಮನ್ವಯತೆಯನ್ನು ಸಾರಿದ ಕಲಿಪುರುಷ, ಭಾರತೀಯ ಧರ್ಮದ ಪ್ರ್ರಾಮುಖ್ಯತೆಯನ್ನು ವಿಶ್ವಕ್ಕೆ ಪರಿಚಯಿಸಿದರು ಎಂದರು.
ಸ್ವಾಮಿ ವಿವೇಕಾನಂದರು ಯುವಕರ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದವರು, ಯುವಕರಿಂದ ಬಲಿಷ್ಠ ರಾಷ್ಟ್ರ ನಿರ್ಮಾಣದ ಕನಸು ಕಂಡಿದ್ದರು ಎಂದು ಕೆ.ಸಿದಯಾನಂದ ಅವರು ಹೇಳಿದರು.
ಫೀಲ್ಡ್ ಮಾರ್ಷಲ್ ಕೆಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಜಗತ್ ತಿಮ್ಮಯ್ಯ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ಶಕ್ತಿ, ಸಾಮಥ್ರ್ಯ, ಮನ:ಸ್ಥೈರ್ಯದ ಬಗ್ಗೆ ಅಪಾರವಾದ ಒಲವನ್ನು ಹೊಂದಿದ್ದವರು ಎಂದು ಹೇಳಿದರು.
ಜ್ಞಾನದ ಸಂಪತ್ತು ಎಲ್ಲಾ ಸಂಪತ್ತಿಗಿಂತ ಮಿಗಿಲಾಗಿದ್ದು, ಅದನ್ನು ಪಡೆಯಬೇಕು. ಸ್ವಪರಿಶ್ರಮದ ಹೊರತಾಗಿ, ಪರರ ಮೇಲಿನ ಅವಲಂಬನೆಯಿಂದ ಸ್ವತಂತ್ರರಾಗಲು ಸಾಧ್ಯವಿಲ್ಲ. ತಮ್ಮನ್ನು ತಾವು ಬಿಂಭಿಸುವ ರೀತಿಯೇ ತಮ್ಮ ಮುಂದಿನ ಜೀವನ ನಿರ್ಧಾರವಾಗಲಿದೆ ಎಂದರು.
ಮತ್ತೊಬ್ಬರ ಮೇಲೆ ಉದಾರ ಮನೋಭಾವ, ಸಹಿಸುವ ಮತ್ತು ಕ್ಷಮಿಸುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಇದು ಯುವಜನರಿಗೆ ಸ್ವಾಮಿ ವಿವೇಕಾನಂದರು ನೀಡಿದ ಸಂದೇಶವಾಗಿದೆ ಎಂದರು.
ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಪಿ.ಪಿ.ಸುಕುಮಾರ್ ಅವರು ಮಾತನಾಡಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಯುವ ಸಪ್ತಾಹ ಅಂಗವಾಗಿ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ವಿವಿಧ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಇತರರು ಇದ್ದರು. ಪಿ.ಪಿ.ಸುಕುಮಾರ್ ಸ್ವಾಗತಿಸಿದರು. ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ ನಿರೂಪಿಸಿದರು. ಜಿಲ್ಲಾ ಯುವ ಒಕ್ಕೂಟದ ಕಾರ್ಯದರ್ಶಿ ಗಣೇಶ್ ವಂದಿಸಿದರು.

LEAVE A REPLY

Please enter your comment!
Please enter your name here