ವಿಜಯನಗರ ಜಿಪಂ ತ್ರೈಮಾಸಿಕ ಕೆಡಿಪಿ ಸಭೆ;
ಮೈಗಳ್ಳತನ ತೋರದೇ ನಿಷ್ಠೆಯಿಂದ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಖಡಕ್ ಸೂಚನೆ

0
228

ಹೊಸಪೇಟೆ(ವಿಜಯನಗರ ಜಿಲ್ಲೆ),ಮಾ.03: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಮತ್ತು ವಿಶ್ವಾಸದಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿದ್ದು,ಇದನ್ನು ಅರಿತುಕೊಂಡು ಅಧಿಕಾರಿಗಳು ಕರ್ತವ್ಯನಿರ್ವಹಿಸುವಂತೆ ಮುಜರಾಯಿ,ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಜಯನಗರ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೂತನ ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮವಾಗಿ ಸ್ಪಂದಿಸುವ ಅಗತ್ಯವಿದೆ. ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಸಲಹೆ ಮತ್ತು ಸಹಕಾರವನ್ನ ಜಿಲ್ಲೆಯ ಜನಪ್ರತಿನಿಧಿಗಳು, ಸಚಿವ ಆನಂದ್‍ಸಿಂಗ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡುತ್ತಿದ್ದಾರೆ. ಆದರೆ ಜಿಲ್ಲೆಯ ಅಧಿಕಾರಿಗಳ ಸಹಕಾರ ಹಾಗೂ ಒತ್ತಾಸೆ ಇಲ್ಲದೆ ಹೆಚ್ಚಿನದ್ದನ್ನು ಸಾಧಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಇಬ್ಬರು ಸಹಕಾರದಿಂದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಹೇಳಿದರು.
ಅಧಿಕಾರಿಗಳು ತಮ್ಮ ಕೆಲಸದ ವಿಷಯದಲ್ಲಿ ಮೈಗಳ್ಳತನ ತೋರದೇ ಸರಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ತಮಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಹೇಳಿದ ಸಚಿವೆ ಜೊಲ್ಲೆ ಅವರು ಪ್ರತಿಯೊಂದು ತಾಲೂಕಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಕೆಲಸ ಮಾಡಿ ಎಂದರು.
*ಸರಕಾರದ ಯೋಜನೆಗಳ ವ್ಯಾಪಕ ಪ್ರಚಾರ;ತಳಮಟ್ಟದವರೆಗೆ ತಲುಪಲು ಸಾಧ್ಯ: ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಜನಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದು,ಅವುಗಳನ್ನು ತಾವೆಲ್ಲರೂ ಅನುಷ್ಠಾನಗೊಳಿಸುತ್ತಿದ್ದೀರಿ;ಆದರೇ ಅವುಗಳ ಕುರಿತು ತಿಳಿಸುವ ಮತ್ತು ಪ್ರಚಾರ ಮಾಡುವ ಕೆಲಸಕ್ಕೆ ಮುಂದಾಗುತ್ತಿಲ್ಲ ಎಂದು ಹೇಳಿದ ಸಚಿವೆ ಜೊಲ್ಲೆ ಅವರು ತಮ್ಮ ತಮ್ಮ ಇಲಾಖೆಗಳ ಯೋಜನೆಗಳ ಕುರಿತು ಶಾಸಕರು,ಸಂಸದರು,ಜನಪ್ರತಿನಿಧಿಗಳಿಗೆ ತಿಳಿಸುವ ಹಾಗೂ ಅವರನ್ನು ಯೋಜನೆಗಳ ಅನುಷ್ಠಾನಗೊಳಿಸುವುದಕ್ಕೆ ವಿಶ್ವಾಸದಿಂದ ಬಳಸಿಕೊಂಡಾಗ ಮಾತ್ರ ತಳಮಟ್ಟದವರೆಗೆ ಯೋಜನೆಗಳು ತಲುಪಲು ಸಾಧ್ಯ ಎಂದರು.
ಎನ್‍ಆರ್‍ಎಲ್‍ಎಂ ಕೇಂದ್ರ-ರಾಜ್ಯ ಸರಕಾರದ ಅತ್ಯುತ್ತಮ ಯೋಜನೆಯಾಗಿದೆ;ಇದರಿಂದ ಅನೇಕ ಸ್ತ್ರೀಶಕ್ತಿ ಗುಂಪುಗಳು ಬದುಕುಕಟ್ಟಿಕೊಂಡಿವೆ. ಇವುಗಳ ಕುರಿತು ಹೆಚ್ಚಿನ ಪ್ರಚಾರದ ಮೂಲಕ ಅರಿವು ಮೂಡಿಸುವ ಕೆಲಸ ಮಡಬೇಕು ಎಂದರು.
*ಆಶ್ರಯ ವಸತಿ ಯೋಜನೆಗಳಿಗೆ ಜಾಗ ಅಗತ್ಯವಿದ್ದಲ್ಲಿ ಕೂಡಲೇ ಒದಗಿಸಿ: ವಿವಿಧ ಆಶ್ರಯ ವಸತಿ ಯೋಜನೆಗಳಿಗೆ ಜಾಗ ಅಗತ್ಯವಿದ್ದಲ್ಲಿ ಕೂಡಲೇ ಸರಕಾರ ಜಾಗ ಗುರುತಿಸಿ ಒದಗಿಸುವ ಕೆಲಸ ಮಾಡುವಂತೆ ತಹಸೀಲ್ದಾರರಿಗೆ ಡಿಸಿ ಅನಿರುದ್ಧ ಶ್ರವಣ್ ಅವರು ಸೂಚನೆ ನೀಡಿದರು.
ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಮೃತಪಟ್ಟಿದ್ದ 520 ಜನರ ಪಟ್ಟಿಯನ್ನು ಆರೋಗ್ಯ ಇಲಾಖೆಯಿಂದ ಪಡೆದುಕೊಂಡು ಅವುಗಳಲ್ಲಿ 496 ಮೃತ ಕೋವಿಡ್ ಕುಟುಂಬಸ್ಥರಿಗೆ ಪರಿಹಾರ ವಿತರಿಸಲಾಗಿದೆ.ಉಳಿದ 24 ಅನ್ಯರಾಜ್ಯ ಮತ್ತು ಅನ್ಯ ಜಿಲ್ಲೆಗಳಾಗಿದ್ದರಿಂದ ಆ ಕಡೆ ವರ್ಗಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಸಾಮಾಜಿಕ ಭದ್ರತಾ ಯೋಜನೆಯ ತಹಸೀಲ್ದಾರ್ ಅವರು ಸಭೆಗೆ ತಿಳಿಸಿದರು.
2021-22ನೇ ಸಾಲಿನಡಿ ಅಂಬೇಡ್ಕರ್‍ವಸತಿ ಯೋಜನೆ ಹಾಗೂ ಬಸವ ವಸತಿ ಯೋಜನೆ ಅಡಿ 5180 ಮನೆಗಳ ಗುರಿಯನ್ನು ಜಿಲ್ಲೆಗೆ ನೀಡಿದ್ದು,ಅದರಂತೆ ಜಿಲ್ಲೆಯಲ್ಲಿರುವ 137 ಗ್ರಾಪಂಗಳಲ್ಲಿ ಗ್ರಾಮಸಭೆ ನಡೆಸಿ ಫಲಾನುಭವಿಗಳನ್ನು ನಿಯಾಮನುಸಾರ ಆಯ್ಕೆ ಮಾಡಿ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ ಅವರು ತಿಳಿಸಿದರು.
ನರೇಗಾ ಅಡಿ ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣ, ಮಿಷನ್ ಕಲ್ಯಾಣಿ ಅಡಿ 45 ದಿನಗಳಲ್ಲಿ 45 ಕಲ್ಯಾಣಿಗಳ ಪುನಶ್ಚೇತನ, ಸೋಕ್‍ಪಿಟ್ ಕಾಮಗಾರಿ, ನಾಲಾ ಪುನಶ್ಚೇತನ ಕಾಮಗಾರಿ, ಅಂಕಸಮುದ್ರ ಮತ್ತು ಇತರೇ ಕೆರೆಗಳ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಿರುವುದು,ಎಕೋಪಾರ್ಕ್, ಮಾದರಿ ಶಾಲೆಯ ಅನುಷ್ಠಾನ ಸೇರಿದಂತೆ ವಿವಿಧ ವಿನೂತನ ಕಾಮಗಾರಿಗಳನ್ನು ಕೈಗೊಂಡಿರುವುದನ್ನು ಸಚಿವರ ಗಮನಕ್ಕೆ ಜಿಪಂ ಸಿಇಒ ಭೋಯರ್ ಹರ್ಷಲ್ ನಾರಾಯಣರಾವ್ ಅವರು ತಂದರು.
*ಸರಿಯಾದ ಮಾಹಿತಿ ನೀಡದ ಅಧಿಕಾರಿಗಳ ತರಾಟೆಗೆ ತಗೆದುಕೊಂಡ ಸಚಿವರು: ಜಿಲ್ಲೆಯಲ್ಲಿ ವಿವಿಧ ನಿರ್ಮಾಣದ ಹಂತದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಟ್ಟಡಗಳ ಬಗ್ಗೆ ಸಭೆಗೆ ಸರಿಯಾದ ಮಾಹಿತಿಯನ್ನು ನೀಡಲು ವಿಫಲರಾದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪೂರ್ಣ ಮಾಹಿತಿ ನೀಡುವುದು ಸರಿಯಲ್ಲ. ಅಧಿಕಾರಿಗಳು ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿ ಯನ್ನು ತರಬೇಕು. ಇಲ್ಲದಿದ್ದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಶಿಕ್ಷಕರ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾಳೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸುತ್ತೇನೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಕೊರತೆ ನಿವಾರಿಸಲು ಡಿಡಿಪಿಐ ಗೆ ಸಚಿವರು ಸೂಚನೆ ನೀಡಿದರು.
*ತಾಲ್ಲೂಕು ಮಟ್ಟದಲ್ಲಿಯೂ ಪ್ರಗತಿ ಪರಿಶೀಲನಾ ಸಭೆ:ವಿಧಾನ ಮಂಡಲದ ಬಜೆಟ್ ಅಧಿವೇಶನದ ನಂತರ ಮತ್ತೊಮ್ಮೆ ಜಿಲ್ಲಾಮಟ್ಟದ ಸಭೆಯನ್ನು ನಡೆಸಲಾಗುವುದು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಅಂಶಗಳನ್ನು ತಿಳಿದುಕೊಳ್ಳಲು ತಾಲ್ಲೂಕು ಮಟ್ಟದಲ್ಲೂ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಇದರಿಂದ ಆಯಾ ತಾಲ್ಲೂಕಿನ ಸಮಸ್ಯೆಗಳು ಸಮರ್ಪಕವಾಗಿ ತಿಳಿದು ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಸಚಿವೆ ಜೊಲ್ಲೆ ಅವರು ಹೇಳಿದರು.
ಜಿಲ್ಲೆಯ ನಾಲ್ಕು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿರುವ ಮಾಹಿತಿ ಸಿಕ್ಕ ತಕ್ಷಣ ನಮ್ಮ ಜಿಲ್ಲಾಡಳಿತ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರುಗಳನ್ನು ಸುರಕ್ಷಿತ ಸ್ಥಳ ತಲುಪಲು ನೆರವಾಗುವಂತೆ ಉತ್ತಮ ಸಮನ್ವಯ ಕಾರ್ಯನಿರ್ವಹಿಸಿದೆ. ಅದಕ್ಕಾಗಿ ಜಿಲ್ಲಾಡಳಿತಕ್ಕೆ ನಾನು ಅಭಿನಂದನೆ ಸಲ್ಲಿಸಿದ್ದೇನೆ. ವಿಕಾಸ್, ಸಂಜಯ್ ಮತ್ತು ನಂದಿನಿ ಅವರು ಸುರಕ್ಷಿತವಾಗಿ ಹಂಗೇರಿ ದೇಶವನ್ನು ಮತ್ತು ಲಾವಣ್ಯ ಅವರು ರೋಮನಿಯಾ ದೇಶವನ್ನು ತಲುಪಿದ್ದಾರೆ. ಅಲ್ಲಿಂದ ಸದ್ಯದಲ್ಲೇ ಅಪರೇಶನ್ ಗಂಗಾ ವಿಶೇಷ ಕಾರ್ಯಾಚರಣೆ ಮೂಲಕ ರಾಜ್ಯಕ್ಕೆ ಸುರಕ್ಷಿತವಾಗಿ ಮರಳಲಿದ್ದಾರೆ ಎಂದರು.
ವಿವಿಧ ನಿಗಮಗಳಡಿ ಗಂಗಾಕಲ್ಯಾಣ ಗುರಿ ಕಡಿಮೆ;ಸದನದಲ್ಲಿ ಪ್ರಸ್ತಾಪ: ಅಂಬೇಡ್ಕರ್ ಅಭಿವೃದ್ಧಿ ನಿಗಮ,ವಾಲ್ಮೀಕಿ ಅಭಿವೃದ್ಧಿ ನಿಗಮ,ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳಡಿ ಒದಗಿಸಲಾಗುತ್ತಿರುವ ಗಂಗಾಕಲ್ಯಾಣ ಗುರಿ ತೀರಾ ಕಡಿಮೆ ಇದೆ;ಅರ್ಜಿಗಳು ಸಾವಿರಾರುಗಟ್ಟಲೇ ಬಂದರೇ ಗುರಿ 20-30 ಇರುತ್ತದೆ ಎಂದು ಶಾಸಕ ಕರುಣಾಕರರೆಡ್ಡಿ,ಸಂಸದ ವೈ.ದೇವೇಂದ್ರಪ್ಪ ಅವರು ಬೇಸರ ವ್ಯಕ್ತಪಡಿಸಿದರು.
ಈ ರೀತಿಯ ಗುರಿ ಇದ್ದಾಗ ಯಾರಿಗೆ ಶಾಸಕರು ಶಿಫಾರಸ್ಸು ಮಾಡಬೇಕು ಎಂಬುದೇ ಗೊಂದಲವಾಗುತ್ತದೆ ಮತ್ತು ಈ ನಿಗಮಗಳಡಿಯ ಗಂಗಾಕಲ್ಯಾಣ ಯೋಜನೆಯ ಕಾಮಗಾರಿ ತೀರಾ ನಿಧಾನಗತಿಯಾಗಿದೆ ಎಂದು ಹೇಳಿದ ಶಾಸಕ ಕರುಣಾಕರರೆಡ್ಡಿ ಅವರು ಗಂಗಾಕಲ್ಯಾಣಗಳ ಗುರಿ ಮತ್ತು ಅವುಗಳ ಕ್ಷೀಪ್ರಗತಿಯಲ್ಲಿ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸದನದಲ್ಲಿ ವಿಷಯ ಪ್ರಸ್ತಾಪಿಸಲಾಗುವುದು ಎಂದರು.
ಇದಕ್ಕೆ ಸಚಿವೆ ಜೊಲ್ಲೆ ಹಾಗೂ ಸಂಸದ ವೈ.ದೇವೇಂದ್ರಪ್ಪ ಅವರು ಸಹಮತ ವ್ಯಕ್ತಪಡಿಸಿದರು.
ಕೃಷಿ,ತೋಟಗಾರಿಕೆ,ಕಂದಾಯ,ನೀರಾವರಿ, ಸಮಾಜಕಲ್ಯಾಣ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಯನ್ನು ಸಚಿವೆ ಶಶಿಕಲಾ ಜೊಲ್ಲೆ ಅವರು ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸಂಸದರಾದ ದೇವೇಂದ್ರಪ್ಪ, ಶಾಸಕರಾದ ಕರುಣಾಕರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಸತೀಶ್, ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೋಯರ್ ಹರ್ಷಲ್ ನಾರಾಯಣ,ಎಸ್ಪಿ ಡಾ.ಅರುಣ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here