ಸ್ವಾತಂತ್ರ್ಯ ಉದ್ಯಾನ ಯೋಗದ ಪ್ರಯೋಗ ಶಾಲೆ:ಭವರ್‌ಲಾಲ್‌ ಆರ್ಯ

0
16

ಹೊಸಪೇಟೆ: ಪತಂಜಲಿ ಯೋಗ ಸಮಿತಿಯ ವತಿಯಿಂದ ರಾಜ್ಯದ ಎಲ್ಲೆಡೆ ಉಚಿತ ಯೋಗ ಶಿಬಿರಗಳು ನಡೆಯುತ್ತಿವೆ, ಹೊಸಪೇಟೆಯ ಜನರ ಉತ್ಸಾಹ, ಯೋಗದ ಕುರಿತಾದ ಕಾಳಜಿ, ಹೊಸ ಹೊಸ ಯೋಗ ಕೇಂದ್ರಗಳನ್ನು ತೆರೆಯುವ ಆಸಕ್ತಿ ನೋಡಿದರೆ ಹೊಸಪೇಟೆ ಯೋಗದ ಪ್ರಯೋಗಶಾಲೆಯಂತೆ ಕಾಣಿಸುತ್ತಿದೆ ಎಂದು ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತ ಉಸ್ತುವಾರಿ ಭವರ್‌ಲಾಲ್ ಆರ್ಯ ಹೇಳಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜನನಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದಲ್ಲಿ ಪತಂಜಲಿ ಯೋಗ ಶಿಬಿರ ಆರಂಭಗೊಂಡು ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಭಾನುವಾರ ನಡೆದ ವಿಶೇಷ ಯೋಗ ಶಿಬಿರದಲ್ಲಿ ಹರಿದ್ವಾರದಿಂದ ಅನ್‌ಲೈನ್‌ ಮೂಲಕ ಮಾತನಾಡಿದ ಅವರು, ಹೊಸಪೇಟೆಯ ಯೋಗೋತ್ಸಾಹ ಇತರ ನಗರ, ಗ್ರಾಮಾಂತರ ಪ್ರದೇಶಗಳಿಗೂ ಪ್ರೇರಣೆಯಾಗಿದೆ ಎಂದರು.

ಅಗ್ನಿಹೋತ್ರ ಮಾಡುವುದು ಬಹಳ ಮಹತ್ವದ ಕೆಲಸವಾಗಿದ್ದು, ಸಂಸ್ಕೃತ ಸಂಭಾಷಣೆ ಶಿಬಿರಗಳನ್ನೂ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ನಡೆಸಬೇಕಾಗಿದೆ ಎಂದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಯಶಸ್ವಿಯಾಗಿ ಯೋಗ ಶಿಬಿರ ಒಂದು ವರ್ಷ ಪೂರೈಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಯೋಗ ಕೇಂದ್ರದ ಉಸ್ತುವಾರಿಗಳಾದ ಅನಂತ ಜೋಷಿ ಮತ್ತು ಶ್ರಿರಾಮ ಅವರನ್ನು ವಿಶೇಷವಾಗಿ ಕೊಂಡಾಡಿದರು. ಅನೇಕ ಯೋಗ ಸಾಧಕರು ಇಲ್ಲಿಗೆ ಬಂದು ಯೋಗದ ಮಾರ್ಗದರ್ಶನ ಮಾಡುತ್ತಿರುವುದಕ್ಕೂ ಅಭಿನಂದನೆ ಸಲ್ಲಿಸಿದರು.

ಸೂರ್ಯಭೇದನ, ಚಂದ್ರಭೇದನ: ಸ್ವಾತಂತ್ರ್ಯ ಉದ್ಯಾನ ಪತಂಜಲಿ ಯೋಗ ಶಿಬಿರದ ವಾರ್ಷಿಕೋತ್ಸವ ಪ್ರಯುಕ್ತ ಬೆಳಿಗ್ಗೆ 5.30ರಿಂದ 6.50ರವರೆಗೆ ಪತಂಜಲಿ ಯೋಗ ಸಮಿತಿಯ ವಿಜಯನಗರ ಮತ್ತು ಗದಗ ಜಿಲ್ಲಾ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಅವರು ಆಲಸ್ಯ ದೂರ ಮಾಡುವ ಸೂರ್ಯಭೇದನ ಮತ್ತು ಚಂದ್ರಭೇದನ ಪ್ರಾಣಾಯಾಮಗಳ ಬಗ್ಗೆ ವಿಶೇಷ ತರಬೇತಿ ನಡೆಸಿಕೊಟ್ಟರು. ವಿಷ್ಣು ಮುದ್ರೆ, ಪ್ರಥ್ವಿ ಮುದ್ರೆಗಳನ್ನು ಹಾಕುವುದರ ಮೂಲಕ ಈ ಪ್ರಾಣಾಯಾಮಗಳನ್ನು ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು. ‘ವಿಠ್ಮಲ‘ ನಾಮಸ್ಮರಣೆಯನ್ನು ಗಟ್ಟಿಯಾಗಿ ಮಾಡುತ್ತ ಹೋದರೆ ಹೃದಯ ಸಮಸ್ಯೆಯೂ ದೂರವಾಗುವ ವೈಜ್ಞಾನಿಕ ಸತ್ಯವನ್ನೂ ಮೂರು ನಿಮಿಷ ವಿಠ್ಠಲ ನಾಮ ಸಂಕೀರ್ತನೆ ಮೂಲಕ ತೋರಿಸಿಕೊಟ್ಟರು. ರಾಜ್ಯ ಯುವ ಪ್ರಭಾರಿ ಕಿರಣ್‌ಕುಮಾರ್, ಬಳ್ಳಾರಿ ಜಿಲ್ಲಾ ಪ್ರಭಾರಿ ರಾಜೇಶ್‌ ಕಾರ್ವಾ, ವಿಜಯನಗರ ಜಿಲ್ಲಾ ಪ್ರಭಾರಿ ಪ್ರೊ.ಎಫ್‌.ಟಿ.ಹಳ್ಳಿಕೇರಿ ಸಹ ಮಾರ್ಗದರ್ಶನ ನೀಡಿದರು.
ಸಸ್ಯ ತಜ್ಣ ಮಾರುತಿ ಪೂಜಾರ್ ಅಗ್ನಿಹೋತ್ತ ನಡೆಸಿಕೊಟ್ಟರು.

ಸನ್ಮಾನ:
ಹೊಸಪೇಟೆಯ ಹಿರಿಯ ಯೋಗಸಾಧಕರು ಮತ್ತು ಪತಂಜಲಿ ಯೋಗ ಸಮಿತಿಯ ಅಜೀವ ಸದಸ್ಯರಾದ  ಭೂಪಾಳ ರಾಘವೇಂದ್ರ ಶೆಟ್ಟಿ, ಉಮಾ ವಿಶ್ವನಾಥ್‌, ಡಾ.ಪಿ.ಡಿ.ವಿನಾಯಕ್‌, ಅನಂತ ಪೈ, ಸುಬ್ರಾಯ ಹೆಗಡೆ, ಸತ್ಯಪ್ಪ, ಉದಯಶಂಕರ, ಶಿವಕುಮಾರ್‌ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. 
ಸ್ವಾತಂತ್ರ್ಯ ಉದ್ಯಾನದಲ್ಲಿ ಯೋಗ ಮಾರ್ಗದರ್ಶನ ನೀಡಿದ ಗುರುಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಪತಂಜಲಿ ರಾಜ್ಯ ಸಮಿತಿಯ ವತಿಯಿಂದ ಅನಂತ ಜೋಷಿ ಮತ್ತು ಶ್ರೀರಾಮ್‌ ಅವರನ್ನು ಸನ್ಮಾನಿಸಲಾಯಿತು.

ಸುಜಾತಾ ಕರ್ಣಂ ಪ್ರಾರ್ಥನೆ ಹಾಡಿದರು. ಶೈಲಜಾ ಕಳಕಪ್ಪ ಅವರು ವರದಿ ವಾಚಿಸಿದರು. ವೀರಣ್ಣ ನಿರೂಪಿಸಿದರು.

■ವರ್ಷದುದ್ದಕ್ಕೂ ಕಾರ್ಯಕ್ರಮ

ಫ್ರೀಡಂ ಪಾರ್ಕ್‌ ಎಂದೇ ಖ್ಯಾತವಾಗಿರುವ ಸ್ವಾತಂತ್ರ್ಯ ಉದ್ಯಾನ 2023ರ ಜನವರಿ 26ರಂದು ಉದ್ಘಾಟನೆಗೊಂಡಿತ್ತು ಮತ್ತು ಜನವರಿ 30ರಂದು ಸಾರ್ವಜನಿಕರಿಗೆ ತೆರೆದಿತ್ತು. ಫೆಬ್ರುವರಿ 14ರಂದು ಪತಂಜಲಿ ಯೋಗ ಶಿಬಿರ ಆರಂಭವಾಗಿತ್ತು. ಅಲ್ಲಿಂದೀಚೆಗೆ ಒಂದು ದಿನವೂ ಬಿಡದಂತೆ ನಿರಂತರವಾಗಿ ಬೆಳಿಗ್ಗೆ 5.30ರಿಂದ 7ರವರೆಗೆ ಯೋಗ ಶಿಬಿರ ನಡೆಯುತ್ತಲೇ ಇದ್ದು, ಪ್ರತಿದಿನ ಸರಾಸರಿ 45ಕ್ಕಿಂತಲೂ ಅಧಿಕ ಮಂದಿ ಯೋಗ ಶಿಕ್ಷಣ ಪಡೆಯುತ್ತಿದ್ದಾರೆ. ಯೋಗದ ಜತೆಗೆ ವರ್ಷದ ಉದ್ದಕ್ಕೂ ರಾಷ್ಟ್ರೀಯ  ಉತ್ಸವಗಳು, ವಿವಿಧ ಗಣ್ಯರ ಜಯಂತಿಗಳನ್ನು ಇಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗಿದೆ. ಅನಂತ  ಜೋಷಿ, ಶ್ರೀರಾಮ್‌, ಚಂದ್ರಿಕಾ ಶ್ರಿರಾಮ್‌, ವೆಂಕಟೇಶ್‌ ಸಹಿತ ಹತ್ತಾರು ಮಂದಿಯ ಪರಿಶ್ರಮದ ಫಲವಾಗಿ ಯೋಗ ಶಿಬಿರ ಯಶಸ್ವಿಯಾಗಿ ಎರಡನೇ ವರ್ಷದತ್ತ ಹೆಜ್ಜೆ ಇಟ್ಟಿದೆ.

LEAVE A REPLY

Please enter your comment!
Please enter your name here