ಕರ್ನಾಟಕ ರಾಜ್ಯ ಸಂಯುಕ್ತ ಗಣ ಕಾರ್ಮಿಕರ ಸಂಘ ಹಾಗೂ ಎಐಯುಟಿಯುಸಿ ನೇತೃತ್ವದಲ್ಲಿ ಪೂರ್ವಬಾವಿ ಸಭೆ

0
153

ಸಂಡೂರು:ಮಾ:06:- ಕರ್ನಾಟಕ ರಾಜ್ಯ ಸಂಯುಕ್ತ ಗಣ ಕಾರ್ಮಿಕರ ಸಂಘ, ಸಂಡೂರು ಘಟಕ ಹಾಗೂ ಎಐಯುಟಿಯುಸಿ ನೇತೃತ್ವದಲ್ಲಿ ಸಂಡೂರು ನಗರದ ಗುರುಭವನದಲ್ಲಿ ಕಾರ್ಮಿಕರ ಸಮಾವೇಶವನ್ನು ಮಾರ್ಚ್ 28, 29, 2022ರಂದು ನಡೆಯುವ ಅಖಿಲ ಭಾರತ ಕಾರ್ಮಿಕ ಮುಷ್ಕರದ ಪೂರ್ವಭಾವಿಯಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಎನ್‍ಎಮ್‍ಡಿಸಿ ಗುತ್ತಿಗೆ ಕಾರ್ಮಿಕರು, ಗಣ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು ಮುಂತಾದವರು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕಾ.ಸೋಮಶೇಖರ್.ಕೆ ಅವರು ಮಾತನಾಡುತ್ತಾ “ ಕೇಂದ್ರ ಬಿಜೆಪಿ ಸರ್ಕಾರ ಜನಗಳ ಹಿತಾಸಕ್ತಿಗೆ ವಿರುದ್ಧವಾಗಿ ಹಾಗೂ ವ್ಯವಹಾರ ಸುಗಮ ಗೊಳಿಸುವ ಹೆಸರಿನಲ್ಲಿ ದೈತ್ಯಕಾರ್ಪೊರೇಟ್ ಮನೆತನಗಳ ಪರವಾಗಿ ಸಂಸತ್ತಿನಲ್ಲಿ ಅವಸರ ಅವಸರವಾಗಿ ಮಂಡಿತವಾದ ಕಾರ್ಮಿಕ ವಿರೋಧಿ ಕಾರ್ಮಿಕ ಮಸೂದೆಗಳು, ಮಾಲೀಕರಿಗೆ ತಮಗೆ ಬೇಕಾದಾಗ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡು, ಬೇಡವಾದಾಗ ಅವರನ್ನು ಮನಬಂದಂತೆ ತೆಗೆದುಹಾಕುವ ಕುಮ್ಮಕ್ಕು-ಬಲವನ್ನು ನೀಡುತ್ತದೆ.
ಈಗ ಪರಿಚಯಿಸುತ್ತಿರುವ ಸೀಮಿತ ಅವಧಿಯ ಉದ್ಯೋಗ (ಫಿಕ್ಸ್ಡ ಟರ್ಮ್ ಎಂಪ್ಲಾಯಮೆಂಟ್) ನೀತಿಯಿಂದಾಗಿ, ಖಾಯಂ ಉದ್ಯೋಗಗಳು ಮಾಯವಾಗಲಿವೆ. ಜೊತೆಗೆ ಈ ಮಸೂದೆಗಳು ಕಾರ್ಮಿಕರ ಪ್ರತಿಭಟನೆ ಮತ್ತು ಮುಷ್ಕರದ ಹಕ್ಕನ್ನು ಕಸಿದುಕೊಳ್ಳಲಿವೆ. ಇದರ ಜೊತೆಗೆ, 70 % ಗಿಂತಲೂ ಹೆಚ್ಚು ಕಾರ್ಮಿಕರು ಮತ್ತು ಸುಮಾರು 74 % ಕೈಗಾರಿಕೋದ್ಯಮಗಳು ಫ್ಯಾಕ್ಟರಿ ಕಾಯ್ದೆಯ ನಿಯಮಗಳ ವ್ಯಾಪ್ತಿಯಲ್ಲಿ ದೂರ ಉಳಿಯುತ್ತವೆ. ಇದರಿಂದ ಆ ಕಾರ್ಮಿಕರ ಹಕ್ಕುಗಳೇ ಇಲ್ಲದಂತಾಗುತ್ತದೆ. ಹಾಗಾಗಿ, ಸರಕಾರಗಳ ಜನ ವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿ ನಿಯಮಾವಳಿಗಳ ವಿರುದ್ಧ ಒಂದು ಒಗ್ಗಟ್ಟಿನ ಮತ್ತು ದೀರ್ಘಕಾಲೀನ ಚಳುವಳಿ ಬೆಳೆಸುವುದು ಇವತ್ತಿನ ಅವಶ್ಯಕತೆಯಾಗಿದೆ. ಹಲವಾರು ತ್ಯಾಗ ಬಲಿದಾನಗಳಿಂದ ಮತ್ತು ಧೀರೋದ್ಧಾತ ಹೋರಾಟಗಳಿಂದ ಗಳಿಸಿದ್ದ ಹಕ್ಕುಗಳ ರಕ್ಷಣೆಗಾಗಿ ಫ್ಯಾಸೀವಾದಿ ಬಿಜೆಪಿ ಸರ್ಕಾರದ ದಾಳಿಗಳನ್ನು ಎದೆಗುಂದದೆ ಎದುರಿಸುತ್ತ ಜನರು ಬೀದಿಗಿಳಿಯುತ್ತಿರುವುದು ಒಂದು ಸಂತೋಷದ ವಿಷಯ.
ಈ ಹಿನ್ನಲೆಯಲ್ಲಿ, ಬಂಡವಾಳಶಾಹಿ ವ್ಯವಸ್ಥೆಯನ್ನೇ ಕಿತ್ತೆಸೆದು, ಕಾರ್ಮಿಕರ ರಾಜ್ಯ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಅನೇಕ ರಾಜಿ ರಹಿತ ಕಾರ್ಮಿಕ ಹೋರಾಟಗಳಿಗೆ ನೇತೃತ್ವ ನೀಡುತ್ತಿರುವ ಎಐಯುಟಿಯುಸಿಯನ್ನು ಬಲಪಡಿಸಲು ಮುಂದೆ ಬರಬೇಕು. ಹಾಗೆಯೇ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸುವಂತೆ” ಕರೆ ನೀಡಿದರು.

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಕಾ.ಸೋಮಶೇಖರ ಗೌಡ ಅವರು ಮಾತನಾಡುತ್ತಾ “1991 ರಲ್ಲಿ ಕೇಂದ್ರ ಕಾಂಗ್ರೆಸ್ ಸರ್ಕಾರ, 25 ವರ್ಷಗಳ ಹಿಂದೆ ಆರಂಭಿಸಿದ್ದ ಭೌಗೋಳಿಕರಣ, ಉದಾರೀಕರಣ, ಖಾಸಗೀಕರಣ ನೀತಿಯ ಪ್ರಕ್ರಿಯೆಯನ್ನು, ನಂತರ ಬಂದ ಎಲ್ಲಾ ಸರ್ಕಾರಗಳೂ ಮುಂದುವರೆಸಿಕೊಂಡು ಬಂದಿವೆ. ಈಗಿನ ಕೇಂದ್ರ ಬಿಜೆಪಿ ಸರ್ಕಾರವಂತೂ, ಸಂಸತ್ತಿನಲ್ಲಿ ತನಗಿರುವ ಭಾರೀ ಬಹುಮತದ ದುರ್ಲಾಭ ಪಡೆದುಕೊಂಡು, ಇನ್ನಷ್ಟು ವೇಗವಾಗಿ ಸಾರ್ವಜನಿಕ ವಲಯದ ಮತ್ತು ಸರ್ಕಾರಿ ವಲಯದ ಉದ್ದಿಮೆಗಳ ಖಾಸಗೀಕರಣ ಮಾಡುತ್ತಿದೆ. ರೈಲ್ವೇ, ಭದ್ರತಾ ವಲಯ, ವಿದ್ಯುತ್, ಬ್ಯಾಂಕಿಂಗ್, ಕಲ್ಲಿದ್ದಲು, ಪೆಟ್ರೋಲಿಯಂ, ಉಕ್ಕು, ಬಿ ಎಸ್ ಎನ್ ಎಲ್, ವಿಮಾನ ನಿಲ್ದಾಣ, ರಸ್ತೆ ಸಾರಿಗೆ, ಇತ್ಯಾದಿ ವಲಯಗಳು ಇದರಲ್ಲಿ ಸೇರಿವೆ. ಖಾಸಗೀಕರಣದಿಂದಾಗಿ ದುಡಿಯುವ ಜನರ ಶೋಷಣೆ ಇನ್ನೂ ಹಲವು ಪಟ್ಟು ಹೆಚ್ಚಾಗಲಿದೆ ಮತ್ತು ಅವರ ಕುಟುಂಬಗಳು ದುಸ್ಥಿತಿಗೆ ತಳ್ಳಲ್ಪಡುತ್ತಿವೆ” ಎಂದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಕಾ.ದೇವದಾಸ್ ಮಾತನಾಡುತ್ತಾ “ಕೋವಿಡ್ 19 ಮಹಾಮಾರಿಯು, ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರ ಕುರಿತು ಎಂತಹ ಹೀನ ಧೋರಣೆಯನ್ನು ಹೊಂದಿದೆ, ಈ ಅಸಹಾಯಕ ಬಡಜನರ ಬಗ್ಗೆ ಎಷ್ಟು ತಾತ್ಸಾರ ತೋರಿಸುತ್ತಿದೆ ಎಂಬುದನ್ನು ಬಯಲಿಗೆಳೆಯಿತು. ಇದರ ಜೊತೆಗೆ, ಸುಮಾರು ಒಂದು ಕೋಟಿಗೂ ಹೆಚ್ಚಿರುವ ಆಶಾ, ಅಂಗನವಾಡಿ, ಬಿಸಿ ಊಟ ಕಾರ್ಮಿಕರರು ಹಾಗೂ ಅಸಂಘಟಿತ ವಲಯದ ನೌಕರರು ಮತ್ತು ಸ್ಕೀಮ್ ವರ್ಕರ್ ಗಳ ಹಾಗೂ ದಿನಗೂಲಿ ನೌಕರರ ಜೀವನ ತೀವ್ರ ಸಂಕಷ್ಟದಲ್ಲಿದೆ. ಆದ್ದರಿಂದ ಕಾರ್ಮಿಕರ ಐಕ್ಯ ಹೋರಾಟಗಳನ್ನು ತೀವ್ರಗೊಳಿಸಿ, ಬಂಡವಾಳಶಾಹಿ ವ್ಯವಸ್ಥೆಯನ್ನೇ ಕಿತ್ತೆಸೆಯುವ ಸಂದರ್ಭ ಇದಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕರು ಸಜ್ಜಾಗಲು” ಕರೆ ನೀಡಿದರು.

ಈ ಸಂಧರ್ಭದಲ್ಲಿ ಎಐಯುಟಿಯುಸಿ ಬಳ್ಳಾರಿ ಜಿಲ್ಲಾ ಮುಖಂಡರಾದ ಡಾ.ಪ್ರಮೋದ್, ಸುರೇಶ್.ಜಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಎನ್‍ಎಂಡಿಸಿ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷರಾದ ಹುಲಿಗೇಶ್ ವಹಿಸಿದ್ದರು. ಮಂಜುನಾಥ್, ಸಂತೋಷ್ ಕುಮಾರ್, ಮುಂತಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here