ವಿಜಯನಗರ ಜಿಲ್ಲೆಯಾದ್ಯಂತ “ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ’’ ಯೋಜನೆಗೆ ಚಾಲನೆ, ಅಲೆದಾಟಕ್ಕೆ ಬ್ರೇಕ್; ಕಂದಾಯ ದಾಖಲೆಗಳೇ ರೈತರ ಮನೆಬಾಗಿಲಿಗೆ: ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್

0
138

ಹೊಸಪೇಟೆ(ವಿಜಯನಗರ ಜಿಲ್ಲೆ),ಮಾ.12:
“ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆ ಅಡಿ ರೈತರಿಗೆ ಉಚಿತವಾಗಿ ಅವರವರ ಮನೆಗೆ ಪಹಣಿಯ ದಾಖಲೆ ಪತ್ರಗಳು, ನಕ್ಷೆಗಳು ಹಾಗೂ ಜಾತಿ, ಆದಾಯ ಪ್ರಮಾಣ ಪತ್ರಗಳು ಹಾಗೂ ಪಡಿತರ ಚೀಟಿ ಸೇರಿದಂತೆ ದಾಖಲೆಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ತಿಳಿಸಿದರು.
ಹೊಸಪೇಟೆ ತಾಲೂಕಿನ ಹೊಸೂರ ಗ್ರಾಮದಲ್ಲಿ ಶನಿವಾರ ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ’’ ಯೋಜನೆಗೆ ಚಾಲನೆ ನೀಡಿ ಗ್ರಾಮದ ಬಾಣದ ಲಕ್ಷ್ಮವ್ವ, ಕನಕ ಗಿರೀಶ್, ದುರ್ಗಪ್ಪ, ಜಂಬಮ್ಮ, ಎಚ್.ದುರುಗಪ್ಪ, ಕುಮಾರೆಪ್ಪ, ಎಚ್.ಫರೀದ್,ಮರಾರಿ ಗೋವಿಂದಪ್ಪ ಅವರಿಗೆ ಪಹಣಿ,ಜಾತಿ ಆದಾಯ ಪ್ರಮಾಣ ಪತ್ರ, ನಕಾಶೆ, ವಿತರಿಸಿ ಮಾತನಾಡಿದರು.
ಹೊಸೂರು ಗ್ರಾಮದಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ನಡೆಯುತ್ತಿದ್ದು,ಅದೇ ರೀತಿ ಹಡಗಲಿ ತಾಲೂಕಿನ ನವಲಿ ಗ್ರಾಮ, ಕೊಟ್ಟೂರು ತಾಲೂಕಿನ ಹ್ಯಾಳ್ಯಾ, ಹರಪನಹಳ್ಳಿ ತಾಲೂಕಿನ ಶೃಂಗಾರತೋಟ/ ಕೋಡಿಹಳ್ಳಿ, ಕೂಡ್ಲಿಗಿ ತಾಲೂಕಿನ ಅಮಲಾಪುರ ಗ್ರಾಮ, ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಸ್ತಿಗೇರಿ ಗ್ರಾಮಗಳಲ್ಲಿ ತಾಲೂಕು ಮಟ್ಟದ ವಿತರಣೆಗೆ ಚಾಲನೆ ನೀಡಲಾಗಿದೆ. ಇಂದು ಜಿಲ್ಲೆಯಾದ್ಯಂತ ಈ ಕಾರ್ಯಕ್ರಮ ಏಕಕಾಲಕ್ಕೆ ನಡೆಯುತ್ತಿದೆ ಎಂದರು.
ರೈತರಿಗೆ ತಮ್ಮ ಕಂದಾಯ ದಾಖಲೆಗಳನ್ನು ಹೊಂದುವುದು ಅವರ ಹಕ್ಕಾಗಿದ್ದು, ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಈ ದಾಖಲೆಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ಇಂತಹ ದಾಖಲೆಗಳಿಗೆ ಗ್ರಾಮೀಣ ಭಾಗದ ರೈತರ ದಿನನಿತ್ಯ ದಾಖಲೆಗಳಿಗಾಗಿ ಕಛೇರಿಗಳಿಗೆ ಅಲೆದಾಡುವುದು ತುಂಬಾ ದುಸ್ತರವಾಗಿರುವುದರಿಂದ, ರೈತರುಗಳಿಗೆ ಅವರ ಮನೆಬಾಗಿಲಿಗೆ ಅವರ ಕಂದಾಯ ದಾಖಲೆಗಳನ್ನು ತಲುಪಿಸುವುದರಿಂದ ಈ ರೀತಿಯ ಅಲೆದಾಟ ತಪ್ಪಿಸಿದಂತಾಗುತ್ತದೆ ಎಂಬ ರಾಜ್ಯ ಸರಕಾರ ಈ ವಿನೂತನ ಯೋಜನೆ ರೂಪಿಸಿದೆ ಎಂದರು.
ವಿಜಯನಗರ ಜಿಲ್ಲೆಯ ಎಲ್ಲಾ ರೈತರಿಗೆ ಅವರ ಜಮೀನಿಗೆ ಸಂಬಂಧಿಸಿದ ಪಹಣಿ ಪತ್ರಿಕೆ ಹಾಗೂ ನಕಾಶೆ, ಇದರೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅವರ ಮನೆಯ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದರು.
ವಿಜಯನಗರ ಜಿಲ್ಲೆಯಲ್ಲಿ ಈಗಾಗಲೇ 205308 ಪಹಣಿ, 14557 ಅಟ್ಲಾಸ್/ನಕ್ಷೆಗಳು 105224 ಇಂಡೆಕ್ಸ್, 282692 ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ದಾಖಲೆಗಳನ್ನು ವಿತರಿಸಲಾಗುತ್ತಿದೆ ಎಂದರು.
ಸರ್ಕಾರದ “ಕಂದಾಯ ದಾಖಲೆ ಮನೆ ಬಾಗಿಲಿಗೆ” ಕಾರ್ಯಕ್ರಮದಿಂದ ರೈತರಿಗೆ ಒಂದು ಬಾರಿ ಉಚಿತವಾಗಿ ಕಂದಾಯ ದಾಖಲೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವುದರಿಂದ ಕಛೇರಿಗೆ ಅಲೆದಾಡುವುದು ತಪ್ಪಿಸಿದಂತಾಗುತ್ತದೆ. ಅಲ್ಲದೆ ಸದರಿ ಕಾರ್ಯಕ್ರಮದಿಂದ ರೈತರಿಗೆ ತಮ್ಮ ಜಮೀನಿನ ಪೂರ್ಣ ಮಾಹಿತಿ ಸ್ಥಳದಲ್ಲೇ ಲಭಿಸಿದಂತಾಗುತ್ತದೆ. ಉಚಿತ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಿಂದಾಗಿ ಅವರ ಹಾಗೂ ಅವರ ಮಕ್ಕಳಿಗೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಸಹಕಾರಿಯಾಗಿರುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಹೊಸಪೇಟೆ ತಹಸೀಲ್ದಾರ್ ಮೇಘ,ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.

LEAVE A REPLY

Please enter your comment!
Please enter your name here