ಶ್ರೀ.ತೆರಳಿ.ಎನ್.ಶೇಖರ್ ಅವರ ’ಮರೆತಿಟ್ಟ ವಸ್ತುಗಳು’ ಕವಿತೆ ಕುರಿತು ಒಂದು ಅನಿಸಿಕೆ

0
132

ಮರೆತಿಟ್ಟ ವಸ್ತುಗಳು….

ಇಷ್ಟುಕಾಲ ಮರೆತಿಟ್ಟಿದ್ದೆಲ್ಲವೂ
ಈಗ ಒಮ್ಮೆಲೇ ನೆನಪಾಗುತ್ತಿವೆ:
ಕೂಸುಮರಿ ಆಡುವಾಗ ಮಾಮರದ ಕೆಳಗೆ
ತರಗೆಲೆಗಳ ಅಡಿಯಲ್ಲಿ ಮರೆತಿಟ್ಟ ಬತ್ತಾಸು
ಹೆದರಿದ್ದ ಮಳೆ ಬಾರದಿದ್ದ ಒಂದು ದಿನ
ಅಪ್ಪುವಿನ ಅಂಗಡಿಯಲ್ಲಿ ಮರೆತಿಟ್ಟ ಛತ್ರಿ
ಪರೀಕ್ಷೆ ಮುಗಿಸಿ ಬರುವ ದಾರಿಯಲ್ಲಿ ಗೇರುಮರವನ್ನು ಏರಿದಾಗ
ಚೆಡ್ಡಿಜೇಬಿನಿಂದ ಕೆಳಗೆ ಬಿದ್ದುಹೋದ ಪೆನ್ನು
ರೀಗಾ’ ದಹೋಟೆಲ್ ಕೊಠಡಿಯ ವಾರ್ಡ್ ರೋಬಿನಲ್ಲಿ
ಮರೆತಿಟ್ಟ ನೀಲಿ ಅಂಗಿ
ಆಮೇಲೆ ಓದಲು ಎರವಲು ಕೊಟ್ಟು ಮರಳಿ ಸಿಗದಿದ್ದ
ಪುಸ್ತಕಗಳ ದೀರ್ಘ ಪಟ್ಟಿ
ತೀರಿಸಲು ಮರೆತ ಕೆಲ ಸಾಲಗಳು
ಹಿಂತಿರುಗಿಸಲು ಮರೆತ ಕೆಲ ಸ್ನೇಹಗಳು.

ಮರೆವು ಯಾವತ್ತೂ ಮರೆಯದೆ ಜೊತೆಯಲ್ಲೇ ಇತ್ತು
ಪ್ರೇಮಿಸತೊಡಗಿದಾಗ
ಹೃದಯವನ್ನು ಮರೆತಿಡಲು ಶುರುಮಾಡಿದೆ
ಬರೆಯತೊಡಗಿದಾಗ
ಉಪಮೆಗಳನ್ನೂ ರೂಪಕಗಳನ್ನೂ.

ಆಮೇಲೆ ಗುಡ್ಡಗಳನ್ನು ಕಾಣುವಾಗ
ಆಕಾಶ ಅವುಗಳನ್ನು ಮರೆತಿಟ್ಟಿದೆಯೆಂದು ಅನ್ನಿಸತೊಡಗಿತು
ಕಾಮನಬಿಲ್ಲನ್ನು ಮೇಘಗಳು ಮರೆತಿಟ್ಟದ್ದೆಂದೂ ಅನ್ನಿಸತೊಡಗಿತು

ಈಗ ಅನ್ನಿಸುತ್ತಿದೆ
ಈ ಭೂಮಿಯನ್ನೇ ದೇವರು ಮರೆತಿಟ್ಟಿದ್ದೆಂದು
ಅದರಲ್ಲಿ ನಮ್ಮನ್ನೂ ಸಹ
ನೆನಪು ಬಂದಂತೆಲ್ಲ
ಅವನು ವಾಪಸ್ಸು ತೆಗೆದುಕೊಳ್ಳುತ್ತಾನೆ
ನದಿಗಳನ್ನು,
ಕಾಡುಗಳನ್ನು,
ನಮ್ಮನ್ನೂ.

ಖ್ಯಾತ ಮಲೆಯಾಳದ ಕವಿ ಶ್ರೀ.ಕೆ.ಸಚ್ಚಿದಾನಂದನ್ ಅವರ ಸಾಹಿತ್ಯ ಅಕಾಡೆಮಿ ಪುರಸ್ಕೃತ ’ಮರನ್ನುವೆಚ್ಚ ವಸ್ತುಕಳ್’ ಕವನ ಸಂಕಲನವನ್ನು ಶ್ರೀ.ತೆರಳಿ.ಎನ್.ಶೇಖರ್ ’ಮರೆತಿಟ್ಟ ವಸ್ತುಗಳು’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಕವನ ಸಂಕಲನದ ಹೆಸರನ್ನೇ ಹೊಂದಿದ ಈ ಸಂಕಲನದ ಕವಿತೆಯೊಂದು ನನಗೆ ತುಂಬಾ ಪ್ರಭಾವವನ್ನು ಬೀರಿತು. ಒಂದು ಸಾಮಾನ್ಯ ವಿಷಯವನ್ನು ಹೇಗೆ ಕವಿತೆಯಾಗಿಸುವುದು ಹಾಗೂ ಅದನ್ನು ಹೇಗೆ ಮಹೋನ್ನತಿಯ ಮಟ್ಟಕ್ಕೆ ಕೊಂಡೊಯ್ಯುವುದು ಎಂದು ತಿಳಿಯಬೇಕಾದರೆ ಈ ಕವಿತೆಯನ್ನು ಓದಬೇಕು ಅಂತ ನನಗನಿಸಿತು.

ಇಲ್ಲಿ ಕವಿ ಎಲ್ಲರ ಬದುಕಿನಲ್ಲಿ ಕಂಡುಬರುವ ಸಾಮಾನ್ಯ ಸಂಗತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅದೆಂದರೆ ’ಮರೆವು’. ಮರೆವು ಇಲ್ಲದಿದ್ದರೆ ಬದುಕು ದುರ್ಭರವೆನಿಸುತ್ತಿತ್ತೇನೋ. ಪ್ರಕೃತಿ ನಮಗೆ ದಯಪಾಲಿಸಿದ ಅತ್ಯಮೋಘ ಕೊಡುಗೆಗಳಲ್ಲೊಂದು ಮರೆವು. ನಮ್ಮ ಬದುಕಿನ ಸುದೀರ್ಘ ದಿನಗಳ ಪ್ರತಿ ಕ್ಷಣಗಳನ್ನೂ ನಾವು ನೆನಪಿಟ್ಟುಕೊಂಡಿದ್ದೇ ಆದರೆ ಒಂದೋ ಅದನ್ನು ಸಹಿಸದೆ ಸಾವಿಗೀಡಾಗುತ್ತಿದ್ದೆವು ಇಲ್ಲವೇ ಖಂಡಿತ ಹುಚ್ಚರೇ ಆಗುತ್ತಿದ್ದೆವು.

ಆದರೆ ಕವಿ ಆರಂಭದಲ್ಲಿಯೇ ಒಂದು ಮಟ್ಟಕ್ಕೆ ಮುಟ್ಟಿದ ನಂತರ ಬದುಕಿನಲ್ಲಿ ನೆನಪಾಗುವ ವಿಷಯಗಳನ್ನು ನೆನೆಯುತ್ತಾರೆ. ಆದರೆ ಆ ನೆನಪಿನಲ್ಲಿಯೇ ’ಮರೆತ ಸಂಗತಿ’ಯನ್ನು ಬಚ್ಚಿಡುತ್ತಾರೆ. ಕವಿತೆ ಪರಿಣಾಮ ಬೀರುವುದೇ ಈ ’ಬಚ್ಚಿಡುವಿಕೆಯಲ್ಲಿ’. ಎಲ್ಲವೂ ಕವಿಗೆ ನೆನಪಾಗುತ್ತಿದೆ. ಮರೆತಿಟ್ಟ ಬತ್ತಾಸು, ಮರೆತಿಟ್ಟ ಛತ್ರಿ, ಬಿದ್ದುಹೋದ ಪೆನ್ನು, ಮರೆತಿಟ್ಟ ನೀಲಿ ಅಂಗಿ, ಪುಸ್ತಕಗಳ ದೀರ್ಘಪಟ್ಟಿ, ಮರೆತ ಸಾಲಗಳು, ಮರೆತ ಕೆಲ ಸ್ನೇಹಗಳು ಹೀಗೇ ಕವಿತೆಯ ಪೂರ್ವಾರ್ಧ ಎಲ್ಲರ ಬದುಕಿನ ಸಾಮಾನ್ಯ ಸಂಗತಿಗಳನ್ನೇ ಹೇಳುತ್ತಾ ಹೋಗುತ್ತದೆ. ಆದರೆ ಕವಿತೆಯ ಮೊದಲನೇ ಸಾಲಿನಲ್ಲಿಯೇ ’ಮರೆತದ್ದು ನೆನಪಾಗುತ್ತದೆ’ ಆದರೆ ಮುಂದೆ ’ಮರೆತದ್ದು’ ಎಂದು ಕಾವ್ಯದ ಸೊಗಸನ್ನು ಬಚ್ಚಿಟ್ಟು ಓದುಗರ ಆಳಕ್ಕಿಳಿಯುತ್ತಾರೆ. ಕವಿತೆ ಹೊಳೆಯುವುದೇ ಇಲ್ಲಿ.

ಯಾವಾಗಲೋ ಮರೆತದ್ದೆಲ್ಲವೂ ಕವಿಗೆ ಈಗ ನೆನಪಾಗುತ್ತಿದೆ. ಆದರೆ ಅವೇ ಸಂಗತಿಗಳೇ ಅವರಿಗೆ ಮುದ ನೀಡುತ್ತಿವೆ. ಮುಂದಿನ ಸಾಲುಗಳಲ್ಲಿ ’ಮರೆವು ಮಾತ್ರ ಯಾವತ್ತೂ ಮರೆಯದೇ ಜೊತೆಯಲ್ಲೇ ಇತ್ತು’ ಎನ್ನುವಲ್ಲಿ ಕವಿತೆ ಬೇರೆ ಆಯಾಮವನ್ನು ಪಡೆದುಕೊಳ್ಳುತ್ತದೆ. ಇದು ಮುಂದಿನ ಸಂಗತಿಗಳಿಗೆ ಪೀಠಿಕೆಯಾಗುತ್ತದೆ. ಮರೆವೂ ಸಹ ಮರೆಯದೇ ಇರೋದು ಕವಿಸಮಯದಲ್ಲಿ ಮಾತ್ರ. ಮರೆವು ಎನ್ನುವುದು ಒಂದು ಜೀವವಲ್ಲ, ಜೀವಿಯಲ್ಲಿನ ಒಂದು ಅಂಶ. ಆದರೆ ಅದಕ್ಕೂ ಒಂದು ಜೀವಂತಿಕೆಯನ್ನು ಕಲ್ಪಿಸಿರುವುದು ಕವಿಯ ಕಾವ್ಯಪ್ರತಿಭೆಯ ದ್ಯೋತಕ. ಪ್ರೇಮಿಸತೊಡಗಿದಾಗ ಹೃದಯವನ್ನೇ ಮರೆಯುವುದು, ಬರೆಯತೊಡಗಿದಾಗ ಉಪಮೆ ರೂಪಕಗಳನ್ನು ಮರೆಯುವುದು. ಪ್ರೇಮದಲ್ಲಿ ಹೃದಯವೇ ಪ್ರಧಾನ ಪಾತ್ರ ವಹಿಸುವುದಾದರೂ, ತಾದ್ಯಾತ್ಮತೆ ಅನ್ನೋದು ಹೇಗಿರುತ್ತದೆಂದರೆ ಹೃದಯವೇ ಇಲ್ಲವೇನೋ ’ನನ್ನತನ’ವೆಂಬ ಎಲ್ಲವನ್ನೂ ಅರ್ಪಿಸಿಬಿಟ್ಟಿದೀನೇನೋ ಎಂಬಷ್ಟರಮಟ್ಟಿಗೆ. ಇದು ’ಐಕ್ಯತೆ’ಯನ್ನೇ ಪ್ರತಿಪಾದಿಸುತ್ತದೆ. ಆಗ ಹೃದಯವೂ ಮರೆತುಹೋಗುತ್ತದೆ. ಅದು ದಿವ್ಯಪ್ರೇಮ. ಆದರೆ ಇಲ್ಲಿ ಮರೆವು ಅರ್ಥಪೂರ್ಣ. ಬರೆಯುವಾಗ ಉಪಮೆ, ರೂಪಕಗಳು ಪ್ರಧಾನವೆನಿಸುತ್ತವೆ. ಅವುಗಳಿರದ ಕವಿತೆ ವಾಚ್ಯವೆನಿಸುತ್ತದೆ. ಆದರೆ ಕವಿ ಹೊಸತನ್ನೇನಾದರೂ ಬರೆಯುವಾಗ ಮೊದಲೇ ಬಳಸಿರುವ ಉಪಮೆ, ರೂಪಕಗಳು ನೆನಪಾಗುವುದಿಲ್ಲ ಅಥವಾ ಒಂದು ವೇಳೆ ನೆನಪಾದರೂ ಕವಿ ಮನಸು ಒಪ್ಪುವುದಿಲ್ಲ. ಯಾಕೆಂದರೆ ಕವಿ ’ಹೊಸತನ್ನು’ ಸೃಷ್ಟಿಸಬೇಕಾಗುತ್ತದೆ. ಅವನೊಬ್ಬ ಬ್ರಹ್ಮ. ಯಾರೂ ಸೃಷ್ಟಿಸದಿದ್ದುನನ್ನು ಸೃಷ್ಟಿಸುವುದು ಕವಿ-ಬ್ರಹ್ಮನ ಸಂಕಲ್ಪ. ಹೀಗಾಗಿ ಹಳೆಯದನ್ನು ಮರೆಯಲೇಬೇಕಾಗುತ್ತದೆ ಹೊಸತನಕ್ಕಾಗಿ ತುಡಿಯುವ ಕವಿ ಉಪಮೆ, ರೂಪಕಗಳನ್ನು ಖಂಡಿತ ಮರೆಯುತ್ತಾನೆ. ಇದನ್ನು ಕವಿ ಬಹಳ ಸೂಕ್ಶ್ಮವಾಗಿ ಪ್ರತಿಪಾದಿಸಿದ್ದಾರೆ.

ಮುಂದಿನ ಸಾಲುಗಳು ಥಟ್ಟನೆ ಪ್ರಕೃತಿಯತ್ತ ಹೊರಳಿಬಿಡುತ್ತದೆ. ಗುಡ್ಡಗಳನ್ನು ಆಕಾಶ ಮರೆತಿದೆ, ಕಾಮನಬಿಲ್ಲನ್ನು ಮೇಘಗಳು ಮರೆತಿವೆ ಎಂದು. ಇಡೀ ಪ್ರಕೃತಿಯೇ ಆಕಾಶದ ಕೊಡುಗೆ. ಆಕಾಶವಿರದೆ ಏನೂ ಇಲ್ಲ. ಆಕಾಶವೆನ್ನುವುದೇ ಒಂದು ಅನೂಹ್ಯವಾದ, ಯಾವುದಕ್ಕೂ ನಿಲುಕದ ಒಂದು ಚೈತನ್ಯ. ಅದನ್ನೊಂದು ಸಂಗತಿ ಎನ್ನುವಂತೆ ಕವಿ ಹೇಳುತ್ತಾರೆ. ಆಕಾಶ ಸುಮ್ಮನೆ ತನಗೆ ಬೇಕಾದಾಗ ಬಂದು ಗುಡ್ಡಗಳನ್ನು ಮಾಡಿ ಎಲ್ಲೋ ಮರೆತುಹೋಗಿರಬೇಕು ಎಂಬಂತೆ. ಎಷ್ಟು ಚಂದದ ಕಲ್ಪನೆ. ಅದ್ಭುತ ಅನಿಸಿಬಿಟ್ಟಿತು. ಕಾಮನಬಿಲ್ಲೂ ಸಹ ಮೇಘಗಳು ಆಟವಾಡಿ ಮರೆತುಹೋದ ಹಾಗೇ ಎಂಬಂತೆ. ಮೇಘಗಳೊಳಗಿನ ಒಂದು ಹನಿಯೊಳಗಿನ ಸಪ್ತವರ್ಣಗಳು ಬದುಕಿನ ಎಲ್ಲ ರಂಗುಗಳ ಪ್ರತೀಕ. ಅದನ್ನೂ ಸಹ ಕವಿ ಓದುಗನ ಕಲ್ಪನೆ ಓಡಲು ಬಿಡುತ್ತಾರೆ. ಸಹೃದಯರು ಈ ಮೇಲಿನ ಸಾಲುಗಳನ್ನು ಎಷ್ಟು ಬಗೆಯಲ್ಲಿ ಬೇಕಾದರೂ ಆಕಾಶದ ವಿಸ್ತಾರದಂತೆಯೆ ವಿಸ್ತರಿಸುತ್ತಾ ಆನಂದಿಸಬಹುದು. ಕವಿ ತನ್ನೊಂದಿಗೇ ಆ ಅದ್ಭುತ ಲೋಕದೊಳಗೆ ಕರೆದೊಯ್ಯುವ ರೀತಿ ಇದೆಯಲ್ಲ ಕೆಲವೇ ಕವಿಗಳಿಗೆ ಮಾತ್ರ ಸಿದ್ಧಿಸಿರುತ್ತದೆ. ಇಲ್ಲಿ ಕವಿ ’ಅನಿಸತೊಡಗಿತು’ ಎನ್ನುವಲ್ಲಿ ’ಮರೆವಿನ ಕುರಿತು’ ತಮ್ಮ ಆಲೋಚನಾ ಲಹರಿಯನ್ನು ವಿಸ್ತರಿಸುತ್ತ ಹೋಗುವುದನ್ನು ಓದುಗರ ಮುಂದೆ ಹರಡಿಬಿಡುತ್ತಾರೆ. ಕವಿ ತಮಗನಿಸಿದ್ದನ್ನು ಹೇಳುವುದರ ಜೊತೆಯಲ್ಲೇ ಓದುಗರನ್ನೂ ಚಿಂತನೆಗೆ ಹಚ್ಚುವಂತೆ ಮಾಡುತ್ತಾರೆ. ಇದು ’ಕಾಂತಾಸಮ್ಮಿತ’. ಪ್ರೇಯಸಿ ಏನೇ ಹೇಳಿದರೂ ಪ್ರಿಯಕರನಿಗೆ ಅದು ಪ್ರಿಯವೇ. ಕವಿ ಒಬ್ಬ ಪ್ರೇಯಸಿಯಂತೆಯೇ ಓದುಗರ ಮುಂದೆ ತಮ್ಮ ಅನಿಸಿಕೆಗಳನ್ನಿರಿಸಿದಾಗ ಸಹೃದಯ ಅದನ್ನು ಚಂದದಿಂದ ಹೃದಯದಾಳಕ್ಕೆ ಇಳಿಸಿಕೊಂಡುಬಿಡುವಷ್ಟು ಆಪ್ತತೆ ಈ ಸಾಲುಗಳಲ್ಲಿ ನನಗೆ ಕಂಡುಬಂತು.

ಕೊನೆಯ ಸಾಲುಗಳು ಇಡೀ ಕವಿತೆಯನ್ನು ಮೇರುಮಟ್ಟಕ್ಕೆ ಒಯ್ಯುವಲ್ಲಿ ಸಾರ್ಥಕ್ಯವನ್ನು ಪಡೆದುಕೊಂಡಿವೆ. ಭೂಮಿಯನ್ನೇ ದೇವರು ಮರೆತಿರಬಹುದು ಎಂಬುದು ಎಂಥ ಅದ್ಭುತ ಕಲ್ಪನೆ. ಕಲ್ಪನೆಯಿದ್ದರೂ ಅದು ವಾಸ್ತವವೂ ಹೌದು. ದೇವರೆಂಬ ಚೈತನ್ಯ ಭೂಮಿಯನ್ನು ಸಷ್ಟಿಸಿ ಮರೆತಿರಬಹುದು. ಬೇಕಾದಾಗ ತೆಗೆದುಕೊಳ್ಳಲೂಬಹುದು ’ಸೃಷ್ಟಿ-ಸ್ಥಿತಿ-ಲಯ’ಕ್ಕೆ ಸಂವಾದಿಯಾಗಿದೆ ಈ ಸಾಲು ಅನಿಸಿತು. ಎಲ್ಲವನ್ನು ಆತ ಮತ್ತೆ ವಾಪಸ್ಸು ಖಂಡಿತ ತೆಗೆದುಕೊಳ್ಳುತ್ತಾನೆ. ಭೂಮಿ ಎಂದರೆ ಬಹು ಮುಖ್ಯವಾಗಿ ಅರಣ್ಯ, ಜೀವಜಲವಾದ ನದಿ, ಮತ್ತು ನಾವು ಎಂದರೆ ಇಲ್ಲಿ ಮನುಕುಲವಷ್ಟೇ ಅಲ್ಲ ಇಡೀ ಜೀವಸಂಕುಲ ಅಂತ. ಇಲ್ಲಿ ಕವಿತೆ ಮಹೋನ್ನತಿಯನ್ನು ಪಡೆದಿದೆ.

ನೋಡಿ ಬಾಲ್ಯ, ಪ್ರೌಢಾವಸ್ಥೆ ದಾಟಿದ ನಂತರ ’ಮರೆವು’ ಒಂದು ಆಧ್ಯಾತ್ಮದ ಮಟ್ಟಕ್ಕೆ ಹೋಗಿಬಿಡುತ್ತದೆ. ಈ ರೀತಿಯಲ್ಲಿ ಒಂದು ಸಣ್ಣ ಸಂಗತಿಯನ್ನೂ ಒಂದು ಅದ್ಭುತವಾದ ಕವಿತೆಯನ್ನಾಗಿಸಿದ್ದನ್ನು ಓದಿದ್ದು ನಿಜಕ್ಕೂ ನನಗೆ ತುಂಬ ಪರಿಣಾಮ ಬೀರಿತು.

ಒಂದು ಭಾಷೆಯಲ್ಲಿನ ಅಂತ:ಸತ್ವವನ್ನು, ಭಾವವನ್ನು ಮತ್ತೊಂದು ಭಾಷೆಗೆ ತರುವುದು ಅಷ್ಟು ಸುಲಭವಲ್ಲ. ಮೂಲ ಭಾಷೆಯ ಕವಿಯ ಮನಸಿನ ಒಳಹೊಕ್ಕು ಅಲ್ಲಿಯ ಭಾವಗಳನ್ನೆಲ್ಲ ಹೆಕ್ಕಿ ನಮ್ಮ ಭಾಷೆಗೆ ತರಬೇಕಾಗುವುದು. ಇಲ್ಲಿ ಶ್ರೀ.ತೇರಳಿ.ಎನ್.ಶೇಖರ ಅವರು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಅವರು ಅನುವಾದಿಸಿದ ಈ ಕವಿತೆ ಮೂಲ ಕವಿತೆಯನ್ನೇ ಓದಿದಂಥ ಖುಷಿಯನ್ನು ಕೊಡುತ್ತದೆ. ಮೂಲಕ್ಕೆ ಅಪಚಾರವಾಗದಂತೆ ಅದರ ಸೊಗಸನ್ನು ತಂದಿದ್ದಾರೆ. ಇದು ಒಬ್ಬ ಸಮರ್ಥ ಅನುವಾದಕನಿಗೆ ಮಾತ್ರ ಸಾಧ್ಯ

ಇದೇ ಕವಿತೆಯನ್ನು ಗಮನಿಸಿದ ಕನ್ನಡದಲ್ಲಿ ಮೊದಲ ಗಜಲ ಕೃತಿಯನ್ನು ಹೊರತಂದ ಕವಿಯತ್ರಿ ಎಚ್.ಎಸ್.ಮುಕ್ತಾಯಕ್ಕನವರೂ ಸಹ ಈ ಕವಿತೆಯಿಂದ ಎಷ್ಟೊಂದು ಪ್ರಭಾವಿತರಾಗಿದ್ದಾರೆಂದರೆ, ಅವರ ಈ ಸಾಲುಗಳನ್ನು ನೋಡಿ :

ಶ್ರೀ ಸಚ್ಚಿದಾನಂದನ್ ಮತ್ತು ಶ್ರೀ ತೇರಳಿ ಶೇಖರ
ಇವರ ಕ್ಷಮೆಕೋರುತ್ತ,
‘ಬದುಕು ಮರೆತಿಟ್ಟ ವಸ್ತುಗಳಲ್ಲಿ,
ಪ್ರೀತಿ ಮರೆತಿಟ್ಟ ವಸ್ತುಗಳಲ್ಲಿ,
ನಾನೂ ಒಂದು
ಅಯ್ಯೋ ದೇವರೆ,
ಅವಕೆಂದು ನನ್ನ ನೆನಪಾಗಲಿಲ್ಲ.
ಇನ್ನು
ಆಶಿಸುತ್ತೇನೆ,
ಸಾವು ಮರೆತಿಟ್ಟ ವಸ್ತುಗಳಲ್ಲಿ,
ನಾನು ಇಲ್ಲವೆಂದು
ನಾನು ಇಲ್ಲವೆಂದು’

ಒಂದು ಕವಿತೆ ವಿವಿಧ ಆಯಾಮಗಳನ್ನು ಪಡೆಯುತ್ತ ಕವಿಗಳಲ್ಲಿ ವಿಭಿನ್ನ ಆಲೋಚನೆ, ಚಿಂತನೆಗಳಿಗೆ ತೊಡಗಿಸುತ್ತದೆ ಎನ್ನುವುದಕ್ಕೆ ಮುಕ್ತಾಯಕ್ಕನವರ ಈ ಸಾಲುಗಳು ಉದಾಹರಣೆಯಾಗಿವೆ. ಸಾವೂ ನಮ್ಮನ್ನು ಮರೆತುಬಿಟ್ಟರೆ ಅದು ಭೀಕರ ಎಂಬುದನ್ನು ಈ ಸಾಲುಗಳು ಸೂಚ್ಯವಾಗಿ ತಿಳಿಸುತ್ತವೆ.

ಕನ್ನಡಕ್ಕೊಂದು ಚಂದದ ಕೃತಿಯನ್ನು ತಂದಿರುವ ಶ್ರೀ.ತೆರಳಿ.ಎನ್.ಶೇಖರ್ ಅವರಿಗೆ ಕೃತಜ್ಞತೆಗಳು ಮತ್ತು ಅಭಿನಂದನೆಗಳು.

ಸಿದ್ಧರಾಮ ಕೂಡ್ಲಿಗಿ

LEAVE A REPLY

Please enter your comment!
Please enter your name here