ಆಡದೇ ಉಳಿದ ಮಾತುಗಳು ಕಥಾಸಂಕಲನ

0
237

ವಿಮರ್ಶೆ

ಸಾಹಿತ್ಯ ಲೋಕದಲ್ಲಿ ಸಣ್ಣ ಕಥೆಗಳು ಅತ್ಯಂತ ಜನಪ್ರಿಯವಾದ ಸ್ಥಾನವನ್ನು ಪಡೆದುಕೊಂಡಿವೆ. ಪುರಾಣ ಕಾಲದಿಂದಲೂ ಮೆಚ್ಚುಗೆಯನ್ನು ಗಳಿಸಿಕೊಂಡಿರುವ ಕಥೆಗಳು ಮೌಖಿಕ ಪರಂಪರೆಯಲ್ಲಿ ಜನಪದರ ಮೂಲಕ ಸಾಮಾಜಿಕವಾಗಿ ಧಾರ್ಮಿಕವಾಗಿ ಮಾರ್ಗದರ್ಶನ ನೀಡುವಂತಿದ್ದವು. ಹಾಗೇ ಕನ್ನಡ ಶಿಷ್ಟ ಸಾಹಿತ್ಯ ರಂಗದಲ್ಲಿ ಕನ್ನಡ ಭಾಷೆಯಲ್ಲಿ ಮೊಟ್ಟಮೊದಲ ಬಾರಿಗೆ ಸಣ್ಣ ಕಥೆಯನ್ನು ಬರೆದು ಪ್ರಕಟಿಸಿದವರೆಂದರೆ ಪಂಜೆ ಮಂಗೇಶರಾಯರು. ಮುಂದೆ ಕೆಲವರು ಕಥೆಗಳನ್ನು ಬರೆದರಾದರೂ, ಸಣ್ಣ ಕಥೆಗಳನ್ನು ಬರೆಯುವುದರ ಮೂಲಕ, ಕಥೆಗಳೂ ಸಾಹಿತ್ಯ ಪ್ರಕಾರದ ಒಂದು ಭಾಗ ಎಂಬ ಪ್ರಜ್ಞೆಯನ್ನು ಮೂಡಿಸಿದವರೆಂದರೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು.

ಅಂದಿನಿಂದ ಸುಮಾರು ನೂರಾ ಇಪ್ಪತ್ತು ವರ್ಷಗಳಲ್ಲಿ ಕನ್ನಡದ ಸಣ್ಣ ಕಥೆಗಳು ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಾ ಬಂದಿರುವುದನ್ನು ಕಾಣುತ್ತೇವೆ. ನವ್ಯ ನವೋದಯ ದಲಿತ ಬಂಡಾಯ ಮೊದಲಾದ ಘಟ್ಟಗಳಲ್ಲಿ, ಸಾಮಾಜಿಕವಾದಂಥಾ ಮತ್ತು ಮಾನಸಿಕವಾದಂಥಾ ಸಂಘರ್ಷಗಳಿಗೆ ಸಂಬಂಧಿಸಿದಂತೆ ಕೆಲವು ಪಾತ್ರಗಳನ್ನು ಚಿತ್ರಿಸುವ ನಿರೂಪಣೆಯನ್ನು ಈ ಕಥೆಗಳು ಹೊಂದಿರುವುದನ್ನು ಕಾಣುತ್ತೇವೆ.

ಯಾವುದೇ ಒಂದು ಘಟನೆಯನ್ನು ಆಧರಿಸಿ ಕಾವ್ಯಾತ್ಮಕವಾಗಿ ಬರೆಯುವ ಚಿಕ್ಕ ಗದ್ಯವೇ ಕಥೆ ಎನ್ನಲಾಗುತ್ತಿದೆ. ಇಂತಹ ಕಥಾ ಪ್ರಕಾರದಲ್ಲಿ ಕೃಷಿ ಮಾಡುತ್ತಿರುವ ಉದಯೋನ್ಮುಖ ಸೃಜನಶೀಲ ಕಥೆಗಾರ್ತಿಯರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದ ನಂದಿನಿ ಸಿ. ಆರ್ ಕೂಡಾ ಒಬ್ಬರು.

ನಂದಿನಿ ಸಿ.ಆರ್ ಅವರ ಕಥಾ ಸಂಕಲನದ ಆಡದೇ ಉಳಿದ ಮಾತುಗಳು ಎಂಬ ಶೀರ್ಷಿಕೆ ಜನಪ್ರಿಯ ಸಿನಿಮಾ ಹಾಡೊಂದನ್ನು ನೆನಪಿಸುತ್ತದೆ. ನಂದಿನಿಯವರ ಚಿಕ್ಕದಾದ ಹಾಗೂ ಚೊಕ್ಕದಾದ ಕೆಲವು ಕಥೆಗಳು ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿವೆ.

ಹಸಿರು ಡೈರಿ ಕಥೆಯಲ್ಲಿ
ವೈದ್ಯೆಯಾಗಿದ್ದ ಪ್ರಿಯಾ ತನ್ನ ಗಂಡನೊಂದಿಗೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಯನ್ನು ಡೈರಿ ಪುಸ್ತಕದಲ್ಲಿ ಬರೆಯಬೇಕಿತ್ತಾ ಎನಿಸುವುದು ಸಹಜ. ಆದರೆ ಆಸಕ್ತಿ ಹುಟ್ಟುವುದೇ ಆಡದೇ ಉಳಿದಿಹ ಮಾತುಗಳನ್ನು ಆಡದೇ ಹೋದಾಗ ಎನ್ನುವುದನ್ನು ನಂದಿನಿಯವರು ಸುಂದರವಾಗಿ ಚಿತ್ರಿಸಿದ್ದಾರೆ. ಮೌನಕ್ಕೆ ಹೆಚ್ಚು ಮಹತ್ವ ದೊರೆಯುವುದನ್ನು ಯಾವುದೇ ಉತ್ಪ್ರೇಕ್ಷೆಯಿಲ್ಲದೇ ಚಿಕ್ಕ ಕಥೆಯ ಮೂಲಕ ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ಹಸಿರು ಡೈರಿ ಓದಿದ ರಘುವಿನ ಮನ ಪರಿವರ್ತನೆಯಾಗಿ ಹೆಂಡತಿಯನ್ನು ಹುಡುಕಿಕೊಂಡು ಹೋಗುವ ಆ ಸಂದರ್ಭ ಎರಡು ಕನಸು ಸಿನಿಮಾದ ಡಾ. ರಾಜ್ ರವರನ್ನು ನೆನಪು ಮಾಡಿಕೊಳ್ಳುವಂತೆ ಮಾಡಲಾಗಿದೆ.

ಬಿಳಿ ಬೂಟು ಕಥೆಯಲ್ಲಿ ವಿದ್ಯಾರ್ಥಿಯಾಗಿದ್ದ ಬಡ ಹುಡುಗ ರಮೇಶನ ಬ್ಯಾಂಡ್ ಬಾರಿಸುವ ಆಸೆ ಈಡೆರಿದ ಸಂದರ್ಭ ಸೊಗಸಾಗಿ ಮೂಡಿ ಬಂದಿದೆ. ಕೈ ತೋಟ ಮತ್ತು ಕಾಯ್ದಿರಿಸಿದ ಮುತ್ತು ಕಥೆಗಳಲ್ಲಿ ತಂದೆ ತಾಯಿಗಳ ಮಹತ್ವ, ಹಾಗೂ ಅವರು ಕಲಿಸಿದ ಜೀವನ ಪಾಠ ಮನ ಮಿಡಿಯುವಂತೆ ಮಾಡುತ್ತದೆ.

ಮಾನವ ಕುಲಂ ತಾವೊಂದೇ ವಲಂ ಎಂಬ ಕವಿವಾಣಿಯನ್ನು ಮೂಢನಂಬಿಕೆ ಎಂಬ ಕಥೆ ಪ್ರತಿಧ್ವನಿಸುತ್ತದೆ. ಹಾಗೇ ಯಾರನ್ನು ದೂರುವುದು? ಎಂಬ ಕಥೆ ಇಂದಿನ ಸಮಾಜದ ಕೈಗನ್ನಡಿಯಂತಿದೆ. ಮಾನವರೆಲ್ಲಾ ಒಂದೇ ಜಾತಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳುವಂಥಾ ಶಾಲೆಗಳಲ್ಲಿ, ವಿದ್ಯಾರ್ಥಿಗಳ ಜಾತಿವಾರು ಲೆಕ್ಕಾಚಾರ ಪಡೆಯಬೇಕಾದ ಕರ್ತವ್ಯ ಒದಗಿ ಬಂದಾಗ, ಶಿಕ್ಷಕರು ಯಾರನ್ನು ದೂರಬೇಕು? ಜಾತಿಯ ನಿರ್ಮೂಲನೆಗಾಗಿ ಕೆಲಸ ಮಾಡುವ ಬದಲು, ಮಕ್ಕಳ ಮನದಲ್ಲಿ ಜಾತಿಯ ವಿಷಬೀಜ ಬಿತ್ತುವ ಕಾರ್ಯ ಕ್ರಮಗಳನ್ನು ಹಾಕಿಕೊಳ್ಳುವ ಸರಕಾರವನ್ನು ಅದನ್ನು ಪ್ರಶ್ನಿಸದೇ ಇರುವ ಸಮಾಜವನ್ನು ಕುರಿತಾಗಿ ಯಾರನ್ನು ದೂರುವುದು ಎನ್ನುತ್ತಾರೆ ನಂದಿನಿಯವರು.

ಕಥೆಗಾರ್ತಿ ಇಲ್ಲಿ ಸ್ತ್ರೀಯರ ಸಮಸ್ಯೆಗಳಿಗೆ ಮಾತ್ರ ತಮ್ಮ ಯೋಚನೆಗಳನ್ನು ಸೀಮಿತಗೊಳಿಸದೇ ಸಮಾಜವನ್ನು ವಿವಿಧ ಆಯಾಮಗಳ ಹಲವು ಅಂಶಗಳೊಂದಿಗೆ ಕಥೆಗೆ ಪೂರಕವಾದ ವಸ್ತು ವಿಷಯವನ್ನು ಸಂಗ್ರಹಿಸಿಕೊಂಡು ಕಥೆಗಳನ್ನು ಹೆಣೆದಿರುವುದು ಕಂಡು ಬರುತ್ತದೆ. ಅಪ್ಪ, ಅವ್ವ ದೇವರು, ಹಬ್ಬಗಳು, ಸರಕಾರದ ನೀತಿ, ಸಮಾಜದ ನಿರ್ಲಕ್ಷ್ಯತನ ಮೊದಲಾದವುಗಳನ್ನು ಒಳಗೊಂಡಂತೆ ಒಟ್ಟು ೧೮ ಕಥೆಗಳನ್ನು ಒಗ್ಗೂಡಿಸಿದ್ದಾರೆ.

ಇಲ್ಲಿಯ ಕಥೆಗಳನ್ನು ಓದುವಾಗ ಹಲವು ಪ್ರಶ್ನೆಗಳು ಉದ್ಭವಿಸುವುದು ಸಹಜ. ಪ್ರಶ್ನೆಗಳು ಟೀಕೆಗಳು ವಿಮರ್ಶೆಗಳು ಎದುರಾದಾಗಲೇ ಆಲೋಚನೆಗಳಿಗೆ, ಬರಹಗಳಿಗೆ ಪರಿಪೂರ್ಣವಾದ ಮೂರ್ತರೂಪ ಸಿಗಲು ಸಾಧ್ಯವಾಗುತ್ತದೆ. ಏಕೆಂದರೆ ಠೀಕೆಗಳು ನಮ್ಮ ವ್ಯಕ್ತಿತ್ವ ಬೆಳೆಸಲು ಸಹಕಾರಿಯಾಗುತ್ತದೆ.

ಆಡದೆ ಉಳಿದ ಮಾತುಗಳು ಕೃತಿಯಲ್ಲಿ,
ಕೆಲವೊಂದು ಕಥೆಗಳನ್ನು ಓದುವಾಗ, ಓದುಗರಲ್ಲಿ ಇನ್ನಷ್ಟು ಮತ್ತಷ್ಟು ಕುತೂಹಲ ಹುಟ್ಟಿಸುವಂಥಾ ಸನ್ನಿವೇಶಗಳನ್ನು ಸೃಷ್ಟಿಸುವ ಕೆಲಸವನ್ನು ನಂದಿನಿಯವರು ಮಾಡಬಹುದಿತ್ತು ಎನ್ನಿಸಿದರೂ ಕೆಲವೊಂದು ಪಾತ್ರಗಳು ವಿಮರ್ಶೆಗೆ ಒಳಪಟ್ಟು, ಕಥೆಯು ಖಂಡಿತಾ ಸಾರ್ಥಕತೆ ಪಡೆಯುತ್ತವೆ.

ಸಾಹಿತ್ಯ ಸೇವೆ ಮಾಡುವ ಹಂಬಲವುಳ್ಳ ನಂದಿನಿಯವರ ಕಥಾ ಸಂಕಲನ ಎಲ್ಲಾ ಓದುಗರಿಂದ ವಿಮರ್ಶೆಗೆ ಒಳಪಡುವಂತಾಗಲಿ. ಕಥೆಗಳ ಪಾತ್ರಗಳು ನಾವೇ ಎನ್ನುವಷ್ಟರ ಮಟ್ಟಿಗೆ ಕಲ್ಪನಾ ಲೋಕಕ್ಕೆ ನಮ್ಮನ್ನು ಕರೆದೊಯ್ಯಲಿ. ಅವರಿಂದ ಹೆಚ್ಚು ಹೆಚ್ಚು ಉತ್ತಮ ಸಾಹಿತ್ಯ ರಚನೆಯಾಗಲಿ ಎಂಬ ಆಶಯ ನನ್ನದು.

✍️ ವಿನೋದ ಕರಣಂ.
ಸಾಹಿತಿ ಹಾಗೂ ಉಪನ್ಯಾಸಕರು. ಬಳ್ಳಾರಿ.

LEAVE A REPLY

Please enter your comment!
Please enter your name here