ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿರುವ ಬಸ್ ನಿಲ್ದಾಣದ ಶೌಚಾಲಯ..!!

0
168

ಕೊಟ್ಟೂರು:ಸೆ:೧೫:-ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಳೆ ಬಂದರೆ ಹೊಳೆಯ ರೀತಿ ನೀರು ತುಂಬುತ್ತದೆ. ಇದಕ್ಕೆ ಕಾರಣ, ಮುಖ್ಯರಸ್ತೆಯಿಂದ ಬಸ್ ನಿಲ್ದಾಣ ನಾಲ್ಕು ಅಡಿ ಕೆಳಗಿದೆ. ಬಸ್ ನಿಲ್ದಾಣದ ಮುಂದೆಯೇ ರಾಜಕಾಲುವೆ ಇರುವುದರಿಂದ ಮಳೆ ಬಂದರೆ ರಾಜಕಾಲುವೆಯ ಸಂಪೂರ್ಣ ನೀರು ಬಸ್ ನಿಲ್ದಾಣದೊಳಕ್ಕೇ ನುಗ್ಗುತ್ತದೆ.

ಈ ಬಗ್ಗೆ ಹಲವಾರು ಬಾರಿ ಇಲಾಖಾ ಅಧಿಕಾರಿಗಳಿಗೆ ಪ್ರಯಾಣಿಕರು ದೂರಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಬಸ್ ನಿಲ್ದಾಣ ಈಗ ಕೊಳಚೆ ನೀರು ತುಂಬಿಕೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ದಿನವೂ ಸಾವಿರಾರು ಜನರು ಓಡಾಡುವ ಬಸ್ ನಿಲ್ದಾಣದಲ್ಲಿ ಜನರು ನಿಲ್ಲಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಕದಲ್ಲಿಯೇ ಶೌಚಾಲಯವೂ ಸಹ ಇದ್ದೂ ಇಲ್ಲದಂತಾಗಿದೆ. ಪ್ರತಿದಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಗಬ್ಬು ವಾಸನೆ ತಡೆಯಲಾಗದೆ, ಮೂಗು ಮುಚ್ಚಿಕೊಳ್ಳುತ್ತಿದ್ದಾರೆ. ಪಕ್ಕದಲ್ಲಿರುವ ಶೌಚಾಲಯದ ಡ್ರೈನೇಜ್ ಸ್ವಚ್ಛತೆ ಇಲ್ಲದೇ ಇರುವುದರಿಂದ ಪ್ರಯಾಣಿಕರು, ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ಸರ್ಕಾರಿ ಬಸ್ ನಿಲ್ದಾಣದ ಮೇಲಾಧಿಕಾರಿಗಳು ಈ ಕೂಡಲೇ ಪಟ್ಟಣದ ಬಸ್ ನಿಲ್ದಾಣದ ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

“ದಿನವೂ ಕಾಲೇಜಿಗೆ ಬಸ್ಸಿನಲ್ಲಿ ಓಡಾಡುವ ನಾವುಗಳು ಬಸ್ ನಿಲ್ದಾಣ ಬಂದರೆ ಗಬ್ಬು ನಾರುತ್ತಿರುವ ವಾಸನೆ ತಡೆಯಲಾರದೆ ಮೂಗು ಮುಚ್ಚಿಕೊಂಡು ನಿಲ್ಲುವ ಪರಿಸ್ಥಿತಿ ಇದೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬಸ್ ನಿಲ್ದಾಣದ ಮುಂದೆಯೇ ಪ್ರತಿಭಟನೆ ಮಾಡಲಾಗುವುದು”.

-ಶರತ್, ವಿದ್ಯಾರ್ಥಿ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here