ಸಾಂಸ್ಕೃತಿಕ ನಾಯಕರಾದ ಶ್ರೀ ಬಸವೇಶ್ವರರ ಭಾವಚಿತ್ರ ಅನಾವರಣ ಕಾರ್ಯಕ್ರಮ ಮಾದರಿಯಾಗಿ ನಡೆಯಲಿ

0
29

ಹೊಸಪೇಟೆ (ವಿಜಯನಗರ) ಫೆಬ್ರವರಿ 16: ಸಾಂಸ್ಕೃತಿಕ ನಾಯಕರಾದ, ಜಗಜ್ಯೋತಿ ಶ್ರೀ ಬಸವೇಶ್ವರರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲು ಅಗತ್ಯ ಏರ್ಪಾಡು ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ಧಲಿಂಗಣ್ಣ ರಂಗಣ್ಣವರ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಫೆ.16ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರದ ಮಾರ್ಗಸೂಚಿಯನುಸಾರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಏರ್ಪಾಡು ಮಾಡಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಚನ ಗಾಯನ ಸೇರಿದಂತೆ ನಾನಾ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರಾದ ಜಿ.ತಮ್ಮನಾಳಪ್ಪ, ನಿಮಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ಮಾವಿನಹಳ್ಳಿ ಬಸವರಾಜ, ಶರಣಸ್ವಾಮಿ, ಇಟಗಿ ಸಂಗಪ್ಪ, ಈಶ್ವರಪ್ಪ ಎಂಜಿನಿಯರ್, ಸಂಗಪ್ಪ ಧರ್ಮಸಾಗರ, ಗುಜ್ಜಲ ಗಣೇಶ ಸೇರಿದಂತೆ ಇತರರು ಮಾತನಾಡಿ, ಶ್ರೀ ಬಸವೇಶ್ವರರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಕಪ್ಪು ಚುಕ್ಕೆ ಬಾರದ ಹಾಗೆ ನಡೆಸಬೇಕು. ವಿಜಯನಗರ ಜಿಲ್ಲೆಯ ಕಾರ್ಯಕ್ರಮವು ಇತರರಿಗೆ ಮಾದರಿಯಾಗುವ ಹಾಗೆ ನಡೆಯಬೇಕು. ಈ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರೌಢಶಾಲೆ ಮತ್ತ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ವಚನ ಸಂಪುಟಗಳು ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂಪುಟಗಳನ್ನು ಪ್ರತಿಯೊಂದು ಗ್ರಂಥಾಲಯಗಳಲ್ಲಿ ಇಟ್ಟು ಓದಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಅವರು ಮಾತನಾಡಿ, ಸಂಘ ಸಂಸ್ಥೆಗಳು ನೀಡಿದ ಸಲಹೆಯಂತೆ ಜಗಜ್ಯೋತಿ ಬಸವೇಶ್ವರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಶಿಸ್ತು ಬದ್ಧವಾಗಿ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಹರಿಕಾರರಾಗಿದ್ದಾರೆ. ಸಮಸಮಾಜ ನಿರ್ಮಾಣದ ಕನಸನ್ನು ಬಿತ್ತಿದ ಮಹಾತ್ಮರಾಗಿದ್ದಾರೆ. ಅಂತಹ ಮಹನಿಯರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬಸವ ಬಳಗದ ಮುಖಂಡರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ರೈತ ನಾಯಕರು ಸೇರಿದಂತೆ ಇನ್ನೀತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

LEAVE A REPLY

Please enter your comment!
Please enter your name here