ಅಭಿವೃದ್ಧಿ ಕಾಣದ ಕೊಟ್ಟೂರು,ಶಾಸಕರ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿರುವ ರಸ್ತೆಗಳು..!

0
640

ವಿಜಯನಗರ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧಿಯನ್ನು ಹೊಂದಿರುವ ಕೊಟ್ಟೂರು ಹೇಳಿಕೊಳ್ಳಲು ಮಾತ್ರ ಶ್ರೀಕ್ಷೇತ್ರವಾಗಿ, ಹೊಸ ತಾಲ್ಲೂಕಾಗಿ ಉಳಿದಿದೆ ಎನ್ನುವುದನ್ನು ಬಿಟ್ಟರೆ ಇಲ್ಲಿಯ ರಸ್ತೆಗಳ ಪರಿಸ್ಥಿತಿ ನೋಡಿದರೆ ಜೀವಕ್ಕೆ ಸಂಚಕಾರ ತಂದು ಜನರ ಜೀವ ತೆಗೆಯಲು ಜೀವಭಕ್ಷಕವಾಗಿ ಮಾರ್ಪಾಟಾಗಿವೆ. ಪಟ್ಟಣದ ಮುಖ್ಯರಸ್ತೆ, ಹರಪನಹಳ್ಳಿ ರಸ್ತೆ, ಮಠದ ರಸ್ತೆ, ಇವುಗಳಷ್ಟೇ ಅಲ್ಲದೇ ಇತ್ತೀಚಿಗೆ ತೋರಣಗಲ್ಲು- ಹರಪನಹಳ್ಳಿ ರಾಷ್ಟ್ರೀಯ ಹೆದ್ದಾರಿ, ಅರಭಾವಿ-ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿಗಳೆಂದು ಗುರುತಿಸಿ ಅಕ್ಕಪಕ್ಕದ ಮನೆ, ಅಂಗಡಿ ಮುಗ್ಗಟ್ಟುಗಳೆಲ್ಲವನ್ನೂ ತೆರವುಗೊಳಿಸಿ, ಸುಮಾರು ಎರಡು ವರ್ಷಗಳು ಕಳೆದರೂ, ಯಾವುದೇ ರಸ್ತೆ ಕಾಮಗಾರಿ ಆರಂಭಿಸಿಲ್ಲ. ರಸ್ತೆಗಳು ಗುಂಡಿಬಿದ್ದಿವೆ. ಎಲ್ಲಿ ಹೋದರೂ ತಗ್ಗುಗಳು, ವಾಹನಗಳು ಓಡಾಡಿದರೆ ಏಳುವ ಧೂಳು ಎಲ್ಲವನ್ನೂ ಸಹಿಸಿಕೊಂಡು ಬದುಕಬೇಕಾದ ಪರಿಸ್ಥಿತಿ ಪಟ್ಟಣದ ಸಾರ್ವಜನಿಕರಿಗೆ ಬಂದೊದಗಿದೆ. ಹರಪನಹಳ್ಳಿ ರಸ್ತೆಯಲ್ಲಿ ಇತ್ತೀಚಿಗೆ ಅಪಘಾತವಾಗಿ ಬೈಕ್ ಸವಾರರಾದ ಬೇಲ್ದಾರ್ ಕೆಲಸ ಮಾಡುವ ರಫಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಯಾರು ಹೊಣೆ?

ದಿನವೂ ರಸ್ತೆಯಲ್ಲಿರುವ ಗುಂಡಿಗಳಿಗೆ ಬೈಕ್ ಸವಾರರು ಬಿದ್ದು ಅಪಘಾತವಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಇದನ್ನು ಕಂಡೂ ಕಾಣದಿರುವ ಶಾಸಕರು, ಲೋಕೋಪಯೋಗಿ ಅಧಿಕಾರಿಗಳು, ತಹಶೀಲ್ದಾರರು, ಸ್ಥಳೀಯ ಆಡಳಿತ. ಯಾರನ್ನು ದೂರಬೇಕು ಎನ್ನುವುದು ಪಟ್ಟಣದ ಸಾರ್ವಜನಿಕರಿಗೆ ತಿಳಿಯುತ್ತಲೇ ಇಲ್ಲ. ಹಗರಿಬೊಮ್ಮನಹಳ್ಳಿ ಮತ್ತು ಕೊಟ್ಟೂರು ಎರಡೂ ತಾಲ್ಲೂಕುಗಳಿಗೆ ಶಾಸಕರಾಗಿರುವ ಭೀಮಾನಾಯ್ಕರು ಬರೀ ಹಗರಿಬೊಮ್ಮನಹಳ್ಳಿಗೆ ಮಾತ್ರ ತಾವು ಶಾಸಕರೆಂದು ತಮ್ಮ ಕೆಲಸಗಳಲ್ಲಿ ಬಿಂಬಿಸುತ್ತಿದ್ದಾರೆ ಎಂದು ಕೊಟ್ಟೂರು ಸಾರ್ವಜನಿಕರು ಅಂದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶಾಸಕರು ವಿಧಾನಸಭೆಯಲ್ಲಿ ನೆಪಕ್ಕೆ ಮಾತ್ರ ಧ್ವನಿ ಎತ್ತಿದ್ದಾರೆ ಎಂದು ಪಟ್ಟಣದ ಸಾರ್ವಜನಿಕರು ರಸ್ತೆಗಳ ಬಗ್ಗೆ ಮಾತಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಸರ್ಕಾರ ಕೂಡಲೇ ರಸ್ತೆಗಳನ್ನು ಸರಿಪಡಿಸಬೇಕು ಇಲ್ಲವಾದರೆ, ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪಟ್ಟಣದ ಸಾರ್ವಜನಿಕರಾದ ಮಂಜುನಾಥ, ಕೊಟ್ರೇಶ್, ರಮೇಶ್, ಗುರುಸ್ವಾಮಿ, ಹನುಮಂತಪ್ಪ ಪತ್ರಿಕೆಗೆ ತಿಳಿಸಿದರು.

ಚಿರಿಬಿ ರಸ್ತೆ, ಅಯ್ಯನಹಳ್ಳಿ ರಸ್ತೆ, ಹಾಗೂ ಪಟ್ಟಣದ ಮುಖ್ಯ ರಸ್ತೆಗಳ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಅತೀ ಶೀಘ್ರದಲ್ಲಿ ಹೊಸ ರಸ್ತೆಗಳ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು
-ಖಾಜಾಸಾಬ್,
ಲೋಕೋಪಯೋಗಿ ಇಲಾಖೆ ಅಧಿಕಾರಿ

ಕೊಟ್ಟೂರು ಪಟ್ಟಣದ ರಸ್ತೆಗಳು ಅಕ್ಷರಶಃ ಜೀವ ತೆಗೆಯುವ ತಾಣಗಳಾಗಿ ಮಾರ್ಪಟ್ಟಿರುವುದು ದುರಂತ. ಸಾರ್ವಜನಿಕರು ಶಾಸಕರ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕ.ರ.ವೇ. ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು.
-ಎಂ.ಶ್ರೀನಿವಾಸ್,
ಕ.ರ.ವೇ ಕೊಟ್ಟೂರು ಅಧ್ಯಕ್ಷ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here