ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಕಾಲೇಜುಗಳಲ್ಲಿ ಯುವ ಮತದಾರರ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಲು ಜಿಲ್ಲಾಧಿಕಾರಿ ಆರ್.ಲತಾ ಸೂಚನೆ

0
46

ಬೆಂಗಳೂರು ಗ್ರಾಮಾಂತರ: ನ.25:
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದಲ್ಲಿ,ಮತದಾನ ತನ್ನದೇ ಆದ ಮಹತ್ವ ಹೊಂದಿದೆ. ಜಿಲ್ಲೆಯ ಎಲ್ಲಾ ಶಾಲಾ,ಕಾಲೇಜುಗಳಲ್ಲಿ 18 ವರ್ಷ ಪೂರೈಸಿದ ಎಲ್ಲಾ ಯುವ ಜನತೆಯನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು,ತಹಸೀಲ್ದಾರರು ಕ್ರಮವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು,ಕಾಲೇಜು ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು‌. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಹೆಸರು, ಸಹಿ ಮತ್ತು ಮೊಹರಿನೊಂದಿಗೆ ಭಾರತ ಚುನಾವಣಾ ಆಯೋಗದ ನಮೂನೆ-1ರಲ್ಲಿ ಮಾಹಿತಿಯನ್ನು ನೀಡಬೇಕು‌.ನಮೂನೆ- 2ರಲ್ಲಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ರವರು ಎಲ್ಲಾ ಕಾಲೇಜುಗಳ,ಸಂಸ್ಥೆಗಳ ಮಾಹಿತಿಯನ್ನು ಕ್ರೋಢೀಕರಿಸಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಎಲ್ಲಾ ತಾಲ್ಲೂಕುವಾರು ಮಾಹಿತಿಯನ್ನು ನಮೂನೆ-3 ರಲ್ಲಿ ಕ್ರೋಢೀಕರಿಸಿ ಅಗತ್ಯ ಕ್ರಮವಹಿಸಲಾಗುವುದು. ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು,ಕಾಲೇಜುಗಳ ಪ್ರಾಚಾರ್ಯರು,ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು,ತಹಸೀಲ್ದಾರರು,ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಗಳು ಈ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಡಿಸೆಂಬರ್ 3 ಹಾಗೂ 4 ರಂದು ಮನೆ ಮನೆ ಸಮೀಕ್ಷೆ

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2023 ರ ಅಂಗವಾಗಿ ಜಿಲ್ಲೆಯಾದ್ಯಂತ ಎಲ್ಲಾ 1137 ಮತಗಟ್ಟೆಗಳಲ್ಲಿ ಬರುವ ಡಿಸೆಂಬರ್ 3 ಶನಿವಾರ ಹಾಗೂ ಡಿಸೆಂಬರ್ 4 ಭಾನುವಾರದಂದು ಪುನಃ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮತದಾರರ ನೋಂದಣಿ ಅಧಿಕಾರಿಗಳು,ಸಹಾಯಕ ನೋಂದಣಿ ಅಧಿಕಾರಿಗಳು , ಮತಗಟ್ಟೆ ಮಟ್ಟದ ಅಧಿಕಾರಿಗಳು,ಸಿಬ್ಬಂದಿ ಮನೆ ಮನೆ ಸಮೀಕ್ಷೆ ಕಾರ್ಯ ಕೈಗೊಂಡು ಮತದಾರರ ನೋಂದಣಿ ಕಾರ್ಯ,ಆಧಾರ್ ಜೋಡಣೆ ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳುವರು.
18 ವರ್ಷ ತುಂಬಿದ ಹೊಸ ಮತದಾರರ ಸೇರ್ಪಡೆ,ವರ್ಗಾವಣೆ,ತೆಗೆದು ಹಾಕುವುದು ಆಧಾರ್ ಜೋಡಣೆ ಮತ್ತಿತರ ಕಾರ್ಯಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಾರ್ವಜನಿಕರು ಮಾಡಿಕೊಳ್ಳಬಹುದು‌.ವೋಟರ್ ಹೆಲ್ಪ್‌ಲೈನ್ ಮೊಬೈಲ್ ಆ್ಯಪ್ ಮೂಲಕವೂ ಈ ತಿದ್ದುಪಡಿಗಳನ್ನು ತ್ವರಿತವಾಗಿ ದಾಖಲಿಸಿಕೊಳ್ಳಲು ಮತದಾರರಿಗೆ ಮುಕ್ತ ಅವಕಾಶವಿದೆ ಎಂದು ತಿಳಿಸಿದ್ದಾರೆ.

ನವೆಂಬರ್ 9 ರಂದು ಸಮಗ್ರ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 8 ರವರೆಗೆ ಅವಕಾಶವಿದೆ.ಡಿಸೆಂಬರ್ 26 ರೊಳಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು.
2023 ರ ಜನೆವರಿ 3 ರೊಳಗೆ ಆರೋಗ್ಯ ಮಾನದಂಡಗಳನ್ನು ಪರಿಶೀಲಿಸಿ,ಅಂತಿಮ ಮತದಾರರ ಪಟ್ಟಿಗೆ ಚುನಾವಣಾ ಆಯುಕ್ತರ ಅನುಮೋದನೆ ಪಡೆದು,ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here