ಜ.15ರಂದು ಬಳ್ಳಾರಿಯಲ್ಲಿ ಬೃಹತ್ ಯೋಗಾಥಾನ್: ಜಿಪಂ ಸಿಇಒ ಜಿ.ಲಿಂಗಮೂರ್ತಿ

0
34

ಬಳ್ಳಾರಿ,ಜ.06: ಬಳ್ಳಾರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಜ.15ರಂದು ಬೆಳಗ್ಗೆ 6ಕ್ಕೆ ಬೃಹತ್ ಯೋಗಾಥಾನ್ ಕಾರ್ಯಕ್ರಮವನ್ನು ನಗರದ ಕೊಳಗಲ್ ಏರ್‍ಸ್ಟ್ರಿಪ್ ಬಳಿ ಆಯೋಜಿಸಲಾಗಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಲಿಂಗಮೂರ್ತಿ ಅವರು ಸೂಚನೆ ನೀಡಿದರು.
ನಗರದ ಜಿಪಂನ ನಜೀರ್‍ಸಾಬ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೃಹತ್ ಯೋಗಾಥಾನ್ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯೋಗ ತರಬೇತುದಾರರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಬೃಹತ್ ಯೋಗಥಾನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಪೂರ್ವಾಭ್ಯಾಸವನ್ನು ಕೈಗೊಳ್ಳಲಾಗುತ್ತಿದ್ದು, ಎಲ್ಲಾ ಶಾಲಾ-ಕಾಲೇಜುಗಳಲ್ಲಿನ ದೈಹಿಕ ಶಿಕ್ಷಕರು ಮತ್ತು ವಸತಿ ನಿಲಯಗಳಲ್ಲಿನ ಯೋಗಪಟುಗಳು ತರಬೇತಿ ಕೊಡಲು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯೋಗಾಥಾನ್ ಯಶಸ್ವಿಗೊಳಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಯವರು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿ ಯಶಸ್ವಿಗೆ ಕೈಜೋಡಿಸಬೇಕು ಎಂದರು.
ಯೋಗಾಥಾನ್‍ನಲ್ಲಿ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ಜನರು ಪಾಲ್ಗೊಳ್ಳುವರು, ಭಾಗವಹಿಸುವವರು ಮುಂಚಿತವಾಗಿ ನೊಂದಣಿ ಮಾಡಿಕೊಳ್ಳಬೇಕು. ಸಂಬಂಧಿಸಿದ ಶಾಲಾ-ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು ಇದರ ಪೂರಕ ಕ್ರಮಕೈಗೊಳ್ಳಬೇಕು. ಉದಾಸೀನತೆ ಮಾಡಬಾರದು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಯೋಗ ತರಬೇತಿ ಸಂಸ್ಥೆಗಳಿದ್ದು, ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಆಯುμï ವೈದ್ಯಕೀಯ ವಿದ್ಯಾರ್ಥಿಗಳು, ಎನ್.ಎಸ್.ಎಸ್ ಸ್ವಯಂ ಸೇವಕರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿನ್ನಿಸ್ ಹಾಗೂ ವಿಶ್ವದಾಖಲೆ ನಿರ್ಮಾಣದ ಬೃಹತ್ ಕಾರ್ಯದಲ್ಲಿ ನಾವೆಲ್ಲ ಪಾಲುದಾರರಾಗಬೇಕು ಎಂದು ತಿಳಿಸಿದರು.
ಪ್ರತಿ ಸಾವಿರ ಯೋಗಾಸಕ್ತರಿಗೆ ಒಂದು ವಿಭಾಗ ಮತ್ತು ಅದಕ್ಕೆ ಇಬ್ಬರು ತರಬೇತುದಾರರು ಇರಲಿದ್ದು, ಪ್ರತಿ 1 ಸಾವಿರ ಯೋಗಾಸಕ್ತರಿಗೆ ಒಂದು ವಿಭಾಗಗಳನ್ನು ಗುರುತಿಸಲಾಗುತ್ತಿದ್ದು, ಪ್ರತಿ ವಿಭಾಗಕ್ಕೆ ಇಬ್ಬರು ಯೋಗ ತರಬೇತುದಾರರು ಇರಲಿದ್ದಾರೆ. ಅವರು ಬೃಹತ್ ಯೋಗಾಥಾನ್‍ಗಾಗಿ ಸಿದ್ದಪಡಿಸಿದ ನಿಯಮಾನುಸಾರ ಯೋಗಾಸನಗಳನ್ನು 45 ನಿಮಿಷಗಳ ಕಾಲ ಕಲಿಸಿಕೊಡಲಿದ್ದಾರೆ. ಅದರಂತೆ ಯೋಗ ಮಾಡಬೇಕು.
ಯೋಗಾಭ್ಯಾಸದ ದಿನಗಳು ಹಾಗೂ ಯೋಗಾಥಾನ್ ದಿನದಂದು ಸಾರಿಗೆ ವ್ಯವಸ್ಥೆ, ಆಹಾರ ವ್ಯವಸ್ಥೆ, ಭದ್ರತಾ ವ್ಯವಸ್ಥೆ, ಏರ್‍ಸ್ಟ್ರಿಪ್ ಸ್ವಚ್ಛತೆ, ಕುಡಿಯುವ ನೀರು ಮತ್ತಿತರ ಸೌಲಭ್ಯಗಳು, ಸ್ವಯಂ ಸೇವಕರು ಮತ್ತಿತರ ಅಗತ್ಯಗಳ ಪೂರ್ವಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ಅವರು ನೀಡಿದರು.
ವಿವಿಧ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಬೃಹತ್ ಯೋಗಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರಿಗೆ ವ್ಯವಸ್ಥೆಯ ಬಗ್ಗೆ ನೋಡಿಕೊಳ್ಳುವಂತೆಯೂ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂನ ಉಪ ಕಾರ್ಯದರ್ಶಿ ಶರಣ ಬಸವರಾಜ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here