ಬಹುದಿನಗಳ ಸಾರ್ವಜನಿಕರ ಬೇಡಿಕೆ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಿಂದ ಶಂಕುಸ್ಥಾಪನೆ

0
83

ಹೊಸಪೇಟೆ(ವಿಜಯನಗರ),ಜ.12: ವಿಜಯನಗರ ಜಿಲ್ಲೆಯ ನೈರುತ್ಯ ರೈಲ್ವೆ ವಿಭಾಗದಿಂದ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 85 ರಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್‍ಸಿಂಗ್ ಅವರು ಸೋಮವಾರದಂದು ಶಂಕುಸ್ಥಾಪನೆ ಮಾಡಿ ಭೂಮಿ ಪೂಜೆ ನೇರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈಲುಗಳ ಸಂಚಾರ ಹೆಚ್ಚಿದ್ದರಿಂದ ಈ ಗೇಟ್‍ನಲ್ಲಿ ಬಹಳ ಸಮಯ ರೈಲ್ವೆ ಗೇಟ್ ಹಾಕಲಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ ತುರ್ತು ಸಂದರ್ಭದಲ್ಲಿ ತುಂಬ ಕಷ್ಟವಾಗುತ್ತಿತ್ತು. ಇಂದು ಕಾಮಗಾರಿ ಭೂಮಿಪೂಜೆಯಿಂದ ಮುಕ್ತಿ ಹೊಂದಿದೆ. ಈ ಕಾಮಗಾರಿಯು 9 ತಿಂಗಳಲ್ಲಿ ಪೂರ್ಣಗೊಳಿಸಲು ರೈಲ್ವೆ ಅಧಿಕಾರಿಗಳು ಗುತ್ತಿಗೆದಾರರಿಗೆ ಆದೇಶ ನೀಡಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.

ಮೇಲ್ಸೇತುವೆಯನ್ನು ಸುಮಾರು 32 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದ್ದು ಸಮಯ ಉಳಿತಾಯದ ಜೊತೆಗೆ ತುರ್ತು ಸಂದರ್ಭದಲ್ಲಿ ತುಂಬಾ ಅನುಕೂಲವಾಗಲಿದೆ. ಆದಷ್ಟು ಬೇಗನೇ ಕಾಮಗಾರಿಯನ್ನು ಮುಕ್ತಾಯ ಮಾಡಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಲು ರೈಲ್ವೆ ಇಲಾಖೆ ಕ್ರಮಕೊಳ್ಳಲಿದೆ ಎಂದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ, ನಗರಾಭಿವೃದ್ದಿ ಪ್ರಾಧಿಕಾರ ಅಶೋಕ ಜೀರೆ, ಸ್ಥಾಯಿ ಸಮಿತಿ ಸದಸ್ಯ ತಾರಿಹಳ್ಳಿ ಜಂಬೂನಾಥ್, ಬಾಬಾಲಾಲ್, ರೈಲ್ವೆ ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂತೋಷ್‍ಕುಮಾರ್ ವರ್ಮಾ, ಮುಖ್ಯ ಇಂಜಿನಿಯರ್ ಮುರಳಿಕೃಷ್ಣ, ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹರೀತಾ.ಎಸ್, ತಹಶೀಲ್ದಾರ್ ವಿಶ್ವಜೀತ್ ಮೆಹತಾ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here