ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ನೌಕರರಿಗೆ ಕರೆ : ಕೆ.ಎಸ್.ಈಶ್ವರಪ್ಪ

0
90

ಶಿವಮೊಗ್ಗ, ಫೆಬ್ರವರಿ 08 : ವ್ಯಕ್ತಿಯು ಸದಾ ಲವಲವಿಕೆಯಿಂದಿರಲು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ. ನೌಕರ ಆರೋಗ್ಯ ಕಾಪಾಡಿಕೊಂಡರೆ ಅವನ ಇಡೀ ಕುಟುಂಬವೇ ಆರೋಗ್ಯದಾಯಕವಾಗಿರುತ್ತದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಜನ ಸೇವಾ ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ವರ್ಷದ 365 ದಿನವೂ ಸರ್ಕಾರಿ ನೌಕರರು ಕಚೇರಿ ಕೆಲಸಗಳಲ್ಲಿ ತೊಡಗಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬ ನೌಕರನು ತನ್ನ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ವ್ಯಾಯಾಮ ಹಾಗೂ ಪ್ರಾಣಾಯಾಮದಂತಹ ಚಟುವಟಿಕೆಯಲ್ಲಿ ತೊಡಗಬೇಕೆಂದು ಸಲಹೆ ನೀಡಿದರು.
ನೆರೆ, ಕೋವಿಡ್‍ನಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಿ ನೌಕರರು ತಮ್ಮ ಜೀವದ ಹಂಗನ್ನು ತೊರೆದು, ಕರ್ತವ್ಯ ನಿರ್ವಹಿಸಿದ್ದಾರೆ. ಇದರ ಪರಿಣಾಮವಾಗಿ ನೆರೆಯಲ್ಲಿ ಸಿಲುಕಿದಂತಹ ಅನೇಕ ಕುಟುಂಬಗಳು ರಕ್ಷಣೆಯಾದವು. ಅಲ್ಲದೆ ಕೋವಿಡ್‍ನನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸರ್ಕಾರದ ಜೊತೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಸರ್ಕಾರಿ ನೌಕರರು ಯೋಜನೆಗಳನ್ನು ತಲುಪಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಉತ್ತಮ ರೀತಿಯಲ್ಲಿ ಕಾರ್ಯ ಮಾಡುವ ಮೂಲಕ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕ್ರೀಡಾ ಜ್ಯೋತಿ ಸ್ವೀಕರಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ವರ್ಷ ಪೂರ್ತಿ ನಾಡಿನ ಅಭಿವೃದ್ಧಿಯಲ್ಲಿ ತಮ್ಮ ಕೈ ಜೋಡಿಸುತ್ತಿರುವ ಸರ್ಕಾರಿ ನೌಕರರು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಮನಸ್ಸನ್ನು ಉಲ್ಲಾಸಗೊಳಿಸಿಕೊಳ್ಳುತ್ತಾರೆ. ಇದರಿಂದ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಮತ್ತಷ್ಟು ಹೆಚ್ಚಿನ ಉತ್ತೇಜನ ಸಿಕ್ಕಂತಾಗುತ್ತದೆ ಎಂದರು.
ಕೆಲವು ಮಾಡುವ ತಪ್ಪಿನಿಂದಾಗಿ ಇಡೀ ಸರ್ಕಾರಿ ನೌಕರರ ಸಮೂಹಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಇದು ಸರಿಯಲ್ಲ ಎಂದ ಅವರು, ಕೋವಿಡ್‍ನಂತಹ ಸಂಕಷ್ಟದ ಸಂದರ್ಭದಲ್ಲಿ ಇಡೀ ನೌಕರ ವರ್ಗ ವಾರಿಯರ್ಸ್‍ಗಳಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಪರಿಣಾಮವಾಗಿ ಇಂದು ನಮ್ಮಿಂದ ಕೊರೋನಾ ದೂರವಾಗಿದೆ. ಆದರೂ ಕೂಡಾ ಯಾರೊಬ್ಬರೂ ಮೈ ಮರೆಯುವಂತಿಲ್ಲ. ಅಂತರ ಕಾಪಾಡಿಕೊಳ್ಳಬೇಕು. ಸುರಕ್ಷತಾ ಕ್ರಮ ಅನುಸರಿಸಬೇಕೆಂದು ಸಲಹೆ ನೀಡಿದರು.
ಸರ್ಕಾರಿ ನೌಕರರ ದಿನಾಚರಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಅಲ್ಲದೆ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ನೀಡಿದ್ದಾರೆ ಎಂದ ಅವರು, ಸರ್ಕಾರ ಹಾಗೂ ನೌಕರರ ನಡುವೆ ಸೇತುವೆಯಾಗಿ ಸಿ.ಎಸ್.ಷಡಾಕ್ಷರಿ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಮಾರ್ಚ್ ತಿಂಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಡಾ ಬೀದರ್ ಅಥವಾ ಉತ್ತರ ಕರ್ನಾಟಕ ಭಾಗದಲ್ಲಿ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. ಪ್ರತೀ ವರ್ಷ ಮುಖ್ಯಮಂತ್ರಿಗಳು ಈ ಕ್ರೀಡಾಕೂಟಕ್ಕೆ 1 ಕೋಟಿ ರೂ. ಅನುದಾನ ನೀಡುತ್ತಿದ್ದರು. ಈ ಬಾರಿ 2 ಕೋಟಿ ರೂ. ಅನುದಾನ ನೀಡಿದ್ದಾರೆ. ಅಲ್ಲದೆ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಈ ಹಿಂದೆ ಕ್ರೀಡಾ ಮತ್ತು ಯುವಜನ ಖಾತೆ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪನವರು 50 ಸಾವಿರದಿಂದ ಒಂದೂವರೆ ಲಕ್ಷಕ್ಕೆ ಅನುದಾನ ಹೆಚ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸರ್ಕಾರಿ ನೌಕರರ ಸಂಘಕ್ಕೆ ನೂರು ವರ್ಷಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ಇದರ ನೆನಪಿನಲ್ಲಿ ಸಮುದಾಯ ಭವನವನ್ನು ನಿರ್ಮಿಸಲು 10 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶತದಿನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದ ಅವರು, 2022-23ರ ಸಾಲಿನಲ್ಲಿ ಕೇಂದ್ರ ಮಾದರಿಯ ವೇತನವನ್ನು ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪಡೆದೇ ಪಡೆಯುತ್ತೇವೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಮೇಯರ್ ಸುವರ್ಣಾಶಂಕರ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್. ಅರುಣ್, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here