2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪೂರ್ವಸಿದ್ಧತೆ ಮತ ಯಂತ್ರಗಳ ಎಫ್‍ಎಲ್‍ಸಿ

0
39

ಬಳ್ಳಾರಿ,ಫೆ.1: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತ ಯಂತ್ರಗಳ ಮೊದಲ ಹಂತದ ಪರಿಶೀಲನಾ ಕಾರ್ಯವು ಜ.18ರಿಂದ ಜ.28ರವರೆಗೆ ನಡೆಯಿತು.

ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಕಂಪ್ಲಿ, ಸಂಡೂರು, ಸಿರುಗುಪ್ಪ ಒಟ್ಟು 5 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 1191 ಚುನಾವಣಾ ಮತಗಟ್ಟೆಗಳಿವೆ. ಮತಗಟ್ಟೆಗಳಿಗೆ ಅವಶ್ಯವಿರುವ 2445 (ಬ್ಯಾಲೆಟ್ ಯುನಿಟ್), 1716 (ಕಂಟ್ರೋಲ್ ಯುನಿಟ್) ಮತ್ತು 1857 (ವಿ.ವಿ.ಪ್ಯಾಟ್) ಗಳು ಸರಬರಾಜು ಆಗಿದ್ದು, ಅವುಗಳನ್ನು ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಿಲ್ಲಾಡಳಿತ ಕಚೇರಿಯ ಆವರಣದ ಪಕ್ಕದಲ್ಲಿರುವ ಚುನಾವಣಾ ಶಾಖೆಯ ಉಗ್ರಾಣದಲ್ಲಿ ಸಂಗ್ರಹಿಸಿಡಲಾಗಿದೆ. ಇ.ವಿ.ಎಂ.ಗಳನ್ನು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ 17 ತಂತ್ರಜ್ಞರುಗಳಿಂದ ಜ.18ರಿಂದ ಜ.28ರವರೆಗೆ 11 ದಿನಗಳ ಕಾಲ ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ಪಥಮ ಹಂತದ ಪರಿಶೀಲನಾ ಕಾರ್ಯವನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.

2023ರ ಸಾರ್ವತ್ರಿಕ ಕರ್ನಾಟಕ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆಯಲ್ಲಿರುವಂತೆ, ಭಾರತ ಚುನಾವಣಾ ಆಯೋಗವು ಸಹ ಹೊಸ ಮತಯಂತ್ರಗಳ ಬಳಕೆಗೆ ಸಜ್ಜಾಗಿದೆ. ಹೈದರಾಬಾದ್ ಮೂಲದ ಇಸಿಐಎಲ್ (ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್) ಹೊಸ ಮತ ಯಂತ್ರಗಳನ್ನು ತಯಾರಿಸಿದ್ದು, ಹೊಸ ಇ.ವಿ.ಎಂ.ಗಳ ವಿಶೇಷ ಎಂದರೆ, ಒಂದು ಮತ ಯಂತ್ರದಲ್ಲಿ 384 ಅಭ್ಯರ್ಥಿಗಳ ಹೆಸರು ದಾಖಲಿಸಲು ಅವಕಾಶ ಇರುತ್ತದೆ. ಜತೆಗೆ ವಿ.ವಿ. ಪ್ಯಾಟ್‍ಗಳು ಸಹ ತ್ವರಿತವಾಗಿ ಮಾಹಿತಿ ನೀಡುವ ತಂತ್ರಜ್ಞಾನ ಅಳವಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಇದರಲ್ಲಿ 2441 (ಬ್ಯಾಲೆಟ್ ಯುನಿಟ್), 1712 (ಕಂಟೋಲ್ ಯುನಿಟ್) ಮತ್ತು 1855 (ವಿ.ವಿ.ಪ್ಯಾಟ್)ಗಳು ಚುನಾವಣೆಗೆ ಸಿದ್ಧಗೊಂಡಿರುತ್ತವೆ. 04 (ಬ್ಯಾಲೆಟ್ ಯುನಿಟ್), 01 (ಕಂಟ್ರೋಲ್ ಯುನಿಟ್) ಮತ್ತು 02 (ವಿ.ವಿ.ಪ್ಯಾಟ್)ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಸದರಿ ಇ.ವಿ.ಎಂ ಗಳನ್ನು ಹೈದರಾಬಾದ್ ಮೂಲದ ಇಸಿಐಎಲ್ (ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್) ಸಂಸ್ಥೆಗೆ ಹಿಂದಿರುಗಿಸಲಾಗುವುದು. ಉಳಿದಂತೆ ಬಳ್ಳಾರಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಕುರಿತು ಮತದಾರರ ಜಾಗೃತಿಗಾಗಿ 120 ಮತಯಂತ್ರಗಳನ್ನು ಪ್ರತ್ಯೇಕವಾಗಿ ತೆಗೆದು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಅದೇರೀತಿಯಾಗಿ ಜ.28ರಂದು ಎಲ್ಲ ರಾಜಕೀಯ ಪಕ್ಷಗಳ ಸಮಕ್ಷಮ ಭಾರತ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಅಣುಕು ಮತದಾನ ಮಾಡಲಾಗಿದ್ದು, ಮತಯಂತ್ರಗಳ ಪ್ರಾತ್ಯಕ್ಷಿತೆ ಕುರಿತು ಸಂಪೂರ್ಣ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ಮನವರಿಕೆ ಮಾಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here